ಸಚಿವ ಸ್ಥಾನ ಕೊಡದಿದ್ದರೂ ಪರವಾಗಿಲ್ಲ, ಗೌಡರ ಮನೆಗೆ ಹೋಗಿದ್ದು ಸರಿಯಲ್ಲ..!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಹೆಚ್​. ಡಿ ದೇವೇಗೌಡರ ಮನೆಗೆ ತೆರಳಿ ಆಶೀರ್ವಾದ ಪಡೆದಿದ್ದರು. ಇದೇ ವೇಳೆ ದೇವೇಗೌಡರನ್ನು ಮುಖ್ಯಮಂತ್ರಿ ಸನ್ಮಾನಿಸಿದ್ದರು. ಬಳಿಕ ಮಾತನಾಡಿ ಬಸವರಾಜ ಬೊಮ್ಮಾಯಿ ದೇವೇಗೌಡರು ಕರ್ನಾಟಕದ ಹಿತ ಬಯಸುವ ವ್ಯಕ್ತಿ ಹಾಗಾಗಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿ, ಬಸಬರಾಜ ಬೊಮ್ಮಾಯಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಏನಾದರೂ ಸಮಸ್ಯೆ ಎದುರಾದರೆ ನಾನು ಬೆಂಬಲಿಸುತ್ತೇನೆ ಎನ್ನುವ ಮೂಲಕ ಬಿಜೆಪಿಗೆ ಬಹಿರಂಗ ಬೆಂಬಲ ಘೋಷಣೆ ಮಾಡಿದ್ದರು. ಈ ಬಗ್ಗೆ ಬಿಜೆಪಿ ಹಾಸನ ಶಾಸಕ ಪ್ರೀತಂಗೌಡ ಅಸಮಾಧಾನ ಹೊರಹಾಕಿದ್ದಾರೆ.

ಮ್ಯಾರಥಾನ ಓಡಲು ರಾಜಕೀಯಕ್ಕೆ ಬಂದಿದ್ದೇನೆ..!

ಹಾಸನದಲ್ಲಿ ಈ ಬಗ್ಗೆ ಮಾತನಾಡಿರುವ ಪ್ರೀತಂಗೌಡ, ಬಿ.ಎಸ್​ ಯಡಿಯೂರಪ್ಪ ಅವರು ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ನಾನು ನೂರು ಮೀಟರ್ ಓಟ ಓಡಲಿಕ್ಕೆ ಬಂದಿಲ್ಲ, ಮ್ಯಾರಥಾನ್‌ ಓಡಲು ಬಂದಿದ್ದೇನೆ. ಆದರೆ ಯಾರ ಹತ್ತಿರವೂ ಮಂತ್ರಿ ಮಾಡಿ ಎಂದು ಕೇಳಿಲ್ಲ. ಮಂತ್ರಿ ಮಾಡಿಲ್ಲ ಎನ್ನುವುದಕ್ಕಿಂತ ನಾನು ಕೇಳಿಲ್ಲ. ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಹಳೇ ಮೈಸೂರು ಭಾಗಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎನ್ನುವ ನೋವು ಕಾರ್ಯಕರ್ತರಿಗೆ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಬೇಸರವನ್ನು ಹೊರ ಹಾಕಿದ್ದಾರೆ.

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ

ಮಠಕ್ಕೆ ಹೋಗ್ತಾರೆ ಎಂದರೆ ಗೌಡರ ಮನೆಗೆ ಹೋದ್ರು..!

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ಧಗಂಗಾ, ಆದಿಚುಂಚನಗಿರಿ ಮಠಗಳಿಗೆ ಹೋಗ್ತಾರೆ ಎಂದುಕೊಂಡಿದ್ದೆವು. ಆದರೆ ಹೆಚ್​.ಡಿ ದೇವೇಗೌಡರ ಮನೆಗೆ ಹೋಗಿರುವುದು ಕಾರ್ಯಕರ್ತರಿಗೆ ನೋವಾಗಿದೆ. ದಿನ ಬೆಳಗ್ಗೆ ಜಿಲ್ಲೆಯಲ್ಲಿ ಗುದ್ದಾಡೋದು ನಾವು. ನಿಮ್ಮ ಮನೆಗೆ ಕಲ್ಲು ಹೊಡೆದವರ ಮನೆಗೆ ಕ್ಯಾಬಿನೆಟ್ ವಿಸ್ತರಣೆಗೂ ಮುನ್ನ ಹೋದರೆ ಹೇಗೆ..? ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದೀನಿ. ನಾನೇನು ಮಂತ್ರಿ ಮಾಡಿ ಎಂದು ಕೇಳಿಲ್ಲ, ತಪ್ಪಿಸಿದರು ಎಂಬ ಪ್ರಶ್ನೆಯೇ ಬರಲ್ಲ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಗುದ್ದಾಡುತ್ತಿರುವುದು ನಾವು. ಅಂತಹ ಪರಿಸ್ಥಿತಿಯಲ್ಲಿ ಸಿಎಂ ದೇವೇಗೌಡರ ಮನೆಗೆ ಹೋಗಿದ್ದು ಸರಿಯಲ್ಲ ಎಂದಿದ್ದಾರೆ.

ಇಲ್ಲಿ ಹೋರಾಟ, ಅಲ್ಲಿ ಅಡ್ಜೆಸ್ಟ್​ಮೆಂಟ್ ರಾಜಕಾರಣ..!

ಮುಖ್ಯಮಂತ್ರಿಗಳು ದೇವೇಗೌಡರ ಮನೆಗೆ ಹೋದ ಬಗ್ಗೆ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದಿರುವ ಪ್ರೀತಂಗೌಡ, ನಾನು ಅಡ್ಜಸ್ಟ್​ಮೆಂಟ್ ರಾಜಕಾರಣ ‌ಮಾಡಲ್ಲ. ಮುಂದೆ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಇದೆ. ಮುಖ್ಯಮಂತ್ರಿಗಳೇ ನಮ್ಮ ಜೇಬಿನಲ್ಲಿ ಇದ್ದಾರೆ ಎಂದು ಫಸ್ಟ್ ಫ್ಯಾಮಿಲಿ ಆಫ್ ಹಾಸನ್ ಅವರು ಸ್ಟೇಟ್ ಮೆಂಟ್ ಕೊಡ್ತಿದ್ದಾರೆ ಎನ್ನುವ ಮೂಲಕ ರೇವಣ್ಣಗೆ ಟಾಂಗ್​ ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರ ಬೀಳಿಸಿದವರ ಮನೆಗೆ ಹೋಗಬಾರದಿತ್ತು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ನಮ್ಮದು ಜೆಡಿಎಸ್​ ಜೊತೆಗಿನ ಹೋರಾಟ, ಇನ್ನೊಬ್ಬರದ್ದು ಅಡ್ಜಸ್ಟ್​ಮೆಂಟ್ ರಾಜಕಾರಣ ಆಗಬಾರದು ಎನ್ನುವ ಮೂಲಕ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಶಾಸಕರ ಮನೆಗೆ ಊಟಕ್ಕೂ ಹೋಗಬಾರದು..!

ಹಾಸನ ಜಿಲ್ಲೆಗೆ ಬರುವ ಯಾವುದೇ ಶಾಸಕರು ಮುಂದಿನ ದಿನಗಳಲ್ಲಿ ಜೆಡಿಎಸ್ ಶಾಸಕರ‌ ಮನೆಗೆ ಹೋಗಿ ಊಟ ಕೂಡ ಮಾಡಬಾರದು ಎಂದಿದ್ದಾರೆ ಪ್ರೀತಂಗೌಡ. ಬಿಜೆಪಿ ಕಾರ್ಯಕರ್ತರಿಗೆ ಸಾಕಷ್ಟು ನೋವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ನೇರವಾಗಿ ಮಾತನಾಡ್ತಿನಿ. ಕಾರ್ಯಕರ್ತರಿಗೆ ಅವರೇ ಹೇಳಲಿ ಅಡ್ಜಸ್ಟ್​ಮೆಂಟ್ ಮಾಡಿಕೊಳ್ಳಿ ಎಂದು, ಆಗ ನಾನು ಅಡ್ಜಸ್ಟ್ ಮಾಡ್ಕೊತಿನಿ. ಆದರೆ ಸಿಎಂ ಬ್ಯುಸಿ ಇರುವ ಕಾರಣ ಭೇಟಿಗೆ ಟೈಂ ಕೊಟ್ಟಿಲ್ಲ. ಕಳೆದ ಕ್ಯಾಬಿನೆಟ್​ನಲ್ಲಿ 10 ಜನ ಒಕ್ಕಲಿಗ ಮಂತ್ರಿಗಳಿದ್ದರು. ಆದರೆ ಇದೀಗ ಕೆಲವೇ ಕೆಲವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಟೀಕಿಸಿದ್ದಾರೆ.

ನಮ್ಮ ಮಾತನ್ನು ಕೇಳೋರು ಯಾರಿದ್ದಾರೆ..?

ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಹೆಚ್​.ಡಿ ರೇವಣ್ಣ ಮಂತ್ರಿ ಸ್ಥಾನ ತಪ್ಪಿಸಿದರು ಎನ್ನುವ ಬೇಸರ ಎದ್ದು ಕಾಣುತ್ತಿದೆ. ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಮನೆಗೆ ತೆರಳಿದ್ದ ವೇಳೆ ಹಾಸನ ಜಿಲ್ಲೆಯಿಂದ ಪ್ರೀತಂಗೌಡರನ್ನು ಮಂತ್ರಿ ಮಾಡಬೇಡಿ ಎಂದಿದ್ದಾರೆ ಎನ್ನುವುದು ಪ್ರೀತಂಗೌಡ ಬೆಂಬಲಿಗರ ಆರೋಪ. ಈ ಬಗ್ಗೆ ಶುಕ್ರವಾರವೇ ಉತ್ತರ ಕೊಟ್ಟಿರುವ ಹೆಚ್​.ಡಿ ರೇವಣ್ಣ, ಸಿಎಂ ಜನತಾದಳದಿಂದ ಬಂದವರು ಎನ್ನುವ ಕಾರಣಕ್ಕೆ ದೇವೇಗೌಡರ ಆಶೀರ್ವಾದ ಪಡೆಯಲು ಬಂದಿದ್ದರು. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅದೂ ಅಲ್ಲದೆ ನಮ್ಮ ಮಾತನ್ನು ಕೇಳುವ ಬಿಜೆಪಿ ನಾಯಕರು ಯಾರಿದ್ದಾರೆ..? ಅದು ಸಾಧ್ಯವಾಗದ ಮಾತು ಎಂದು ನಿರಾಕರಿಸಿದ್ದರು. ಇದೀಗ ಪ್ರೀತಂಗೌಡ ವಾಗ್ದಾಳಿ ಬಳಿಕ ಮುಖ್ಯಮಂತ್ರಿ ಕರೆದು ಮಾತನಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Related Posts

Don't Miss it !