ಕೇಂದ್ರ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ..! ಉತ್ತರದ ಜ್ವಾಲೆಗೆ ಬೆಚ್ಚಿದ ಸರ್ಕಾರ..

ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಉದ್ಯೋಗ ಅವಕಾಶ ಕೊಡುವ ಮೂಲಕ ಯುವ ಜನತೆಯನ್ನು ಸೆಳೆಯಬೇಕು ಎನ್ನುವ ನಿರ್ಧಾರದಿಂದ ಅಗ್ನಿಪಥ್​ ಯೋಜನೆ ಘೋಷಣೆ ಮಾಡಿತ್ತು. ಆದರೆ ಅಗ್ನಿಪಥ್​ ಯೋಜನೆಯನ್ನು ಕೇಂದ್ರ ಹಾಕಿದ್ದ ಷರತ್ತು ಹಾಗೂ ನಿಯಮಗಳನ್ನು ಕಂಡು ಕಂಗಾಲಾದ ಯುವಕರು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದರಲ್ಲೂ ಉತ್ತರ ಭಾರತದಲ್ಲಿ ಸೇನೆ ಸೇರುವ ಆಸೆಯೊಂದಿಗೆ ತಯಾರಿ ನಡೆಸಿದ ಸಾವಿರಾರು ಜನರು ಏಕಾಏಕಿ ರಸ್ತೆಗೆ ಇಳಿದು ಕೇಂದ್ರದ ಧೋರಣೆ ವಿರುದ್ಧ ಕಿಡಿಕಾರಿದ್ದಾರೆ. ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚಿದ್ದಾರೆ. ರೈಲುಗಳಿಗೂ ಅಗ್ನಿಯ ಜ್ವಾಲೆ ತಾಕಿದೆ. 46 ಸಾವಿರ ಅಗ್ನಿ ವೀರರನ್ನು ನೇಮಿಸಿಕೊಳ್ಳುವ ಕೇಂದ್ರ ನಿರ್ಧಾರ ಮತ್ತೊಮ್ಮೆ ಪರಿಶೀಲಿಸುವಂತಾಗಿದೆ.

ಕೇಂದ್ರ ಸರ್ಕಾರ ಮಾಡಿದ ಎಡವಟ್ಟೇನು ಗೊತ್ತಾ..?

ಕೇಂದ್ರ ಸರ್ಕಾರ 17.5 ವರ್ಷಕ್ಕೆ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿತ್ತು. ಅಂದರೆ ಕೇವಲ SSLC ಮುಗಿಸಿ ಪಿಯು ಕಾಲೇಜು ಸೇರಿದವರಿಗೆ ಉದ್ಯೋಗ ಎನ್ನುವಂತಾಗಿತ್ತು. ಇನ್ನೂ ನಾಲ್ಕು ವರ್ಷ ಕೆಲಸ ಮಾಡಿ ಮತ್ತೆ ಊರಿಗೆ ವಾಪಸ್​ ಬಂದವರಿಗೆ ಉದ್ಯೋಗ ಭದ್ರತೆ ಏನು..? ಮೆಟ್ರೋ ಸಿಟಿಗಳಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡಬೇಕಾ..? ಕೇವಲ 4 ವರ್ಷ ಉದ್ಯೋಗ ಕೊಟ್ಟು ಮನೆಗೆ ಕಳುಹಿಸುವುದು ಯಾಕೆ..? ಎನ್ನುವುದು ಯುವಕರ ಕಿಚ್ಚಿಗೆ ಕಾರಣ ಎನ್ನಲಾಗ್ತಿದೆ. ಅತ್ತ ವಿದ್ಯಾಭ್ಯಾಸವೂ ಕುಂಠಿತವಾಯ್ತು. ಇತ್ತ ಉದ್ಯೋಗವೂ ಇಲ್ಲದಂತಾಯ್ತು ಎನ್ನುವ ಅತಂತ್ರ ಪರಿಸ್ಥಿಗೆ ಯಾಕೆ ದೂಡುತ್ತೀರಿ ಎನ್ನುವುದು ಹೋರಾಟದ ಪ್ರಮುಖ ವಿಷಯ. ಇನ್ನೂ 17.5 ವರ್ಷಕ್ಕೆ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವುದು ಸರಿಯಲ್ಲ, ಮಕ್ಕಳ ಮನಸ್ಸಿನಲ್ಲಿ ಪ್ರಬುದ್ಧತೆ ಇರುವುದಿಲ್ಲ ಎನ್ನುವ ಒತ್ತಾಯವೂ ಕೇಳಿ ಬಂದಿತ್ತು. ಇದೀಗ ಕೇಂದ್ರ 21 ವರ್ಷಕ್ಕೆ ಏರಿಕೆ ಮಾಡುವ ಚಿಂತನೆಯಲ್ಲಿದೆ.

ಗುರುವಾರದ ಪ್ರತಿಭಟನೆ ವೇಳೆ ಎಲ್ಲೆಲ್ಲಿ ಏನೇನು ಆಗಿದೆ..?

ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ್​​​, ಮಧ್ಯಪ್ರದೇಶ, ಹರ್ಯಾಣದಲ್ಲಿ ಹೋರಾಟದ ಕಿಚ್ಚು ಜೋರಾಗಿತ್ತು. ಸೇನೆ ಸೇರಬೇಕೆನ್ನುವ ಆಕಾಂಕ್ಷಿಗಳು ರೈಲುಗಳನ್ನು ಗುರಿಯಾಗಿಸಿ ದಾಳಿ ಮಾಡಿ ಧ್ವಂಸ ಮಾಡಿದ್ರು. ಬಿಹಾರದಲ್ಲಿ ಛಪ್ರಾ, ಅರಾ, ಕೈಮುರಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ರೈಲು ನಿಲ್ದಾಣಗಳೂ ಜಖಂ ಆಗಿವೆ. ಹರ್ಯಾಣ ಪಿತೋರ್​​ಗರ್​​​ನಲ್ಲಿ ಕಲ್ಲು ತೂರಾಟ ನಡೆಸಿ, ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಲಾಯ್ತು. ಪಲ್ವಾಲ್​​ನಲ್ಲೂ ಹಿಂಸಾಚಾರ ಹೆಚ್ಚಾಗಿತ್ತು. ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ​ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಭೋಗಿಗಳ ಕಿಟಕಿಗಳನ್ನು ಪುಡಿ ಪುಡಿ ಮಾಡಲಾಯ್ತು. ಜಮ್ಮು ಕಾಶ್ಮೀರ, ಉತ್ತರಾಖಂಡ್, ಉತ್ತರಪ್ರದೇಶದಲ್ಲೂ ಸಾವಿರಾರು ಸೇನಾ ಆಕಾಂಕ್ಷಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ರು. ಇಷ್ಟೆಲ್ಲಾ ಪ್ರತಿಭಟನೆಗೆ ಕಾರಣವಾಗಿದ್ದು ರಾಹುಲ್​ ಗಾಂಧಿ ಟ್ವೀಟ್​ ಹಾಗೂ ಮಾಜಿ ಸೇನಾ ನಾಯಕರ ಆತಂಕ.

ಸೇನೆಯಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಆತಂಕ ಯಾಕೆ..?

ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಅಗ್ನಿಪಥ್ ಉದ್ಯೋಗದ ಬಗ್ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಘೋಷಣೆ ದಿನವೇ ಟೀಕೆ ಮಾಡಿದ್ದರು. ಅಗ್ನಿವೀರರ ನೇಮಕದಿಂದ ಭಾರತೀಯ ಸೇನೆಯು ಮೌಲ್ಯ ಕಳೆದುಕೊಳ್ಳುತ್ತದೆ ಎಂದಿದ್ದರು. ಅಗ್ನಿವೀರ್ ನೇಮಕಾತಿ ಆದೇಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ರು. ಇನ್ನೂ ಕೇಂದ್ರದ ಯೋಜನೆಗೆ ನಿವೃತ್ತ ಸೇನಾ ನಾಯಕರೇ ಅಪಸ್ವರ ಎತ್ತಿದ್ದರು. 4 ವರ್ಷ ಮಾತ್ರ ಕೆಲಸ ಕೊಟ್ಟು ಮನೆಗೆ ವಾಪಸ್​ ಕಳುಹಿಸಿದ್ರೆ, ಮುಂದೆ ಅವರು ಏನು ಮಾಡಬೇಕು. ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತಿಳುವಳಿಕೆ ಉಳ್ಳ, ತರಬೇತಿ ಪಡೆದ ಯೋಧರು, ಮುಂದಿನ ದಿನಗಳಲ್ಲಿ ಉಗ್ರರ ಜೊತೆಗೆ ಕೈಜೋಡಿಸಬೇಕು ಅಥವಾ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ, ನಕ್ಸಲ್​ ಪಡೆಯನ್ನೂ ಸೇರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಉದ್ಯೂಗ ಸೃಷ್ಟಿ ಬಗ್ಗೆ ಕೊಟ್ಟ ಭರವಸೆ ಪೂರೈಸಲು ಈ ಸರ್ಕಸ್​ ಮಾಡ್ತಿದೆ ಎನ್ನುವ ಆರೋಪ ಜೋರಾಗಿದೆ.

Related Posts

Don't Miss it !