ಕೇಂದ್ರ ಸರ್ಕಾರದಿಂದ ಲಸಿಕೆ ಬರ್ತಿಲ್ಲ..! ಅಂಕಿಸಂಖ್ಯೆಗಳೇ ಹೇಳ್ತಿವೆ ಸತ್ಯ..

ಕೊರೊನಾ ಲಾಕ್​ಡೌನ್​ ಸಮಯದಲ್ಲಿ ವ್ಯಾಕ್ಸಿನ್​ ವಿಚಾರ ಭರ್ಜರಿಯಾಗಿ ಚರ್ಚೆಯಾಗ್ತಿತ್ತು. ಕೊರೊನಾ ಅನ್​ಲಾಕ್​ ಘೋಷಣೆ ಆದ ಬಳಿಕ ವ್ಯಾಕ್ಸಿನ್​ ಬಗ್ಗೆ ಎಲ್ಲಿಯೂ ಚರ್ಚೆ ಆಗ್ತಿಲ್ಲ. ಲಸಿಕೆ ಪಡೆಯುವುದಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಜನರು ಕ್ಯೂ ನಿಲ್ಲುವುದು ಕಾಣಿಸುತ್ತಿದೆ. ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮಾತ್ರ ವ್ಯಾಕ್ಸಿನ್​ ಕೊರತೆ ಇಲ್ಲ ಎನ್ನುವ ರೆಡಿಮೇಡ್ ಉತ್ತರ ಕೊಡುವುದು ಇದೆ. ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಕೂಡ ದೇಶದಲ್ಲಿ 37 ಕೋಟಿ ಲಸಿಕೆ ಅಭಿಯಾನ ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಕೆ.ಸಿ ಜನರಲ್​ ಆಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ದಿನನಿತ್ಯ ನೂರಾರು ಜನರು ಲಸಿಕೆ ಸಿಗದೆ ಪರದಾಡುವ ದೃಶ್ಯಗಳು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೆ 100 ಜನರಿಗೆ ಲಸಿಕೆ ಆಗುವಂತಿದ್ದರೆ 500 ಜನರು ಸೇರುತ್ತಿರುವ ದೃಶ್ಯಗಳೂ ರಾಜ್ಯದಲ್ಲಿ ಕಾಣಸಿಗುತ್ತಿವೆ.

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ..!

ರಾಜ್ಯಕ್ಕೆ ಕೊರೊನಾ ಸೋಂಕು ಬಂದು 1 ವರ್ಷ 4 ತಿಂಗಳು ಆಗಿದೆ. ಕೊರೊನಾ ಸೋಂಕಿಗೆ ವ್ಯಾಕ್ಸಿನೇಷನ್ ಮದ್ದು ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಬ್ಬರೂ ಎರಡು ಬಾರಿ ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. 136 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ 100 ಕೋಟಿ ಜನರಿಗೆ ಲಸಿಕೆ ಕೊಟ್ಟರೆ ಕೊರೊನಾಗೆ ತಡೆ ಹಾಕಿದಂತೆ ಆಗುತ್ತದೆ. ಭಾರತದ ಜನರಿಗೆ ಲಸಿಕೆ ನೀಡುವ ಬದಲು ಪ್ರಧಾನಿ ಬೇರೆ ದೇಶದ ಜನರಿಗೆ ಕಳುಹಿಸಿದ್ದರು ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ನಿದ್ದೆ ಮಾಡ್ತಿದ್ದಾರೆ. ವ್ಯಾಕ್ಸಿನ್ ಕೊಡೋ ಕೆಲಸ ಮಾಡ್ತಿಲ್ಲ. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ವ್ಯಾಕ್ಸಿನ್ ಸಿಕ್ಕಿಲ್ಲ. ವ್ಯಾಕ್ಸಿನ್ ಪಡೆಯಲು ಬಂದವರನ್ನ ವಾಪಸ್ ಕಳುಹಿಸಿದ್ದಾರೆ‌ ಎಂದು ಟೀಕಿಸಿದ್ದಾರೆ. ನರೇಂದ್ರ ಮೋದಿ ಸುಳ್ಳುಗಾರ, ನರೇಂದ್ರ ಮೋದಿಯಷ್ಟು ಸುಳ್ಳು ಹೇಳೋ ಪ್ರಧಾನಿ ಬೇರೆ ಯಾರೂ ಇಲ್ಲ. ಅಚ್ಚೇ ದಿನ್ ಬರುತ್ತೆ ಎಂದಿದ್ರು, ಎಲ್ಲಿ ಬಂತು..? ಪೆಟ್ರೋಲ್, ಡೀಸೆಲ್‌, ಗ್ಯಾಸ್, ಆಡುಗೆ ಎಣ್ಣೆ ದರ ಎಷ್ಟಾಗಿದೆ ಎಂದು ಕೇಂದ್ರವನ್ನು ಕುಟುಕಿದ್ದಾರೆ.

ಲಸಿಕೆ ಪೂರೈಕೆ ಅಧಿಕಾರಿಗಳು ಏನಂತಾರೆ..?

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಲಸಿಕೆ ಕೊರತೆ ಇರುವುದನ್ನು ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತ ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ನಮ್ಮ ರಾಜ್ಯಕ್ಕೆ ಬರುತ್ತಿಲ್ಲ ಎಂದಿದ್ದಾರೆ ಪಾಲಿಕೆ ಮುಖ್ಯ ಆಯುಕ್ತರು. ಕೇಂದ್ರ ಸರ್ಕಾರ ಲಸಿಕೆ ಕೊಟ್ಟರೆ ರಾಜ್ಯ ಸರ್ಕಾರಕ್ಕೆ ಸಿಗಲಿದೆ. ರಾಜ್ಯಕ್ಕೆ ಬಂದ ಲಸಿಕೆಯನ್ನು ರಾಜ್ಯ ಸರ್ಕಾರ ನಮಗೆ‌ ಕೊಡಲಿದೆ. ಸಮರ್ಪಕ ರೀತಿಯಲ್ಲಿ ಕೇಂದ್ರದಿಂದ ಲಸಿಕೆ ಪೂರೈಕೆ ಆಗದ ಹಿನ್ನೆಲೆ, ಬೆಂಗಳೂರು ನಗರದಲ್ಲಿ ಲಸಿಕೆ ಅಭಾವ ಕಾಡುತ್ತಿದೆ ಎಂದಿದ್ದಾರೆ. 18 ರಿಂದ 44 ವರ್ಷದೊಳಗಿನ ಅರ್ಹರಿಗೆ ವಿಶೇಷ ಕ್ಯಾಂಪ್ ಮೂಲಕ ಲಸಿಕೆ ಕೊಡಲು ಪಾಲಿಕೆ ಸಿದ್ಧವಿದೆ. ಆದರೆ ಲಸಿಕೆ ಪೂರೈಕೆ ಆಗದ ಹಿನ್ನೆಲೆಯಲ್ಲಿ ಈ ಯೋಜನೆ ಸದ್ಯಕ್ಕೆ ನಿಂತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕಾಲೇಜು ವಿದ್ಯಾರ್ಥಿಗಳಿಗೂ ಲಸಿಕೆ ಕೊರತೆ..!

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಎಲ್ಲಾ ವಿದ್ಯಾರ್ಥಿಗಳಿಗೂ ಲಸಿಕೆ ಕೊಡುತ್ತೇವೆ. ಅದಕ್ಕಾಗಿ ಲಸಿಕೆಯನ್ನು ಕಾಯ್ದಿರಿಸಲಾಗಿದೆ ಎಂದಿದ್ದರು. ಆದರೆ ಬಿಬಿಎಂಪಿ ಮುಖ್ಯ ಆಯುಕ್ತರು ಕಾಲೇಜು ವಿದ್ಯಾರ್ಥಿಗಳಿಗೂ ಲಸಿಕೆ ಇಲ್ಲ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಕಾಲೇಜು ಕೂಡ ಆರಂಭ ಆಗಲಿದೆ. ಕಾಲೇಜು ಆರಂಭದ ಹೊತ್ತಿಗೆ ವಿದ್ಯಾರ್ಥಿಗಳಿಗೆ ಲಸಿಕೆ ಪೂರೈಕೆ ಆಗಬೇಕು. 1 ಲಕ್ಷದ 80 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ ಕೈಗೊಂಡಿದ್ದೆವು, ಕೇಂದ್ರದಿಂದ ಲಸಿಕೆ ಬಾರದ ಹಿನ್ನೆಲೆಯಲ್ಲಿ ಅದಕ್ಕೂ ಹಿನ್ನಡೆಯಾಗಿದೆ. ನಮ್ಮ ಲಸಿಕೆ ಅಭಿಯಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ಬೆಂಗಳೂರು ನಗರದ ಶೇಕಡ 56ರಷ್ಟು ಅರ್ಹ ಮಂದಿಗೆ ಮೊದಲ ಡೋಸ್ ಲಸಿಕೆ ಮಾತ್ರ ಈವರೆಗೆ ಕೊಡಲಾಗಿದೆ. 18 ವರ್ಷ ಮೇಲ್ಪಟ್ಟವರೂ ಇದರಲ್ಲಿ ಸೇರಿದ್ದಾರೆ ಎಂದಿದ್ದಾರೆ. ಜುಲೈ ಕೊನೆಯ ವಾರದ ಹೊತ್ತಿಗೆ ಶೇಕಡ 70ರಷ್ಟು ಜನರಿಗೆ ಲಸಿಕೆ ಹಂಚುವ ಗುರಿ ಪಾಲಿಕೆಯದ್ದಾಗಿದೆ. ಆದರೆ ಸಮರ್ಪಕವಾಗಿ ಲಸಿಕೆ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟಾರ್ಗೆಟ್ ರೀಚ್ ಆಗುವುದು ಅನುಮಾನ ಎಂದಿದ್ದಾರೆ.

ಕೇಂದ್ರದ ಮೇಲೆ ಹಾಕಬೇಕಿದೆ ಒತ್ತಡ..!

ರಾಜ್ಯಕ್ಕೆ ಲಸಿಕೆ ಬರುತ್ತಿಲ್ಲ ಎನ್ನುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದಾಗಿದೆ. ಈ ಮಾತನ್ನು ರಾಜ್ಯ ಸರ್ಕಾರದಲ್ಲಿ ಮಂತ್ರಿಗಳಾಗಿ ಇರುವವರು ಅಲ್ಲಗಳೆಯಬಹುದು. ಆದರೆ ಅಧಿಕಾರಿಗಳು ಇರುವುದನ್ನು ನೇರವಾಗಿ ಹೇಳಿದ್ದಾರೆ. ಈಗಲಾದರೂ ಮೂರನೇ ಅಲೆ ಬರುತ್ತೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳ್ಳಿ, ಮಾಸ್ಕ್​ ಧರಿಸಿ ಎಂದು ಒಳ ಭಾಷಣ ಮಾಡುತ್ತಾ, ತಾವೇ ಸಾಮಾಜಿಕ ಅಂತರ ಮರೆತು ಕಾರ್ಯಕರ್ತರ ಜೊತೆ ಗುಂಪುಗೂಡುವ ಸಚಿವರೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಲಸಿಕೆ ಲಭ್ಯವಾಗುವಂತೆ ಮಾಡಿ. ಇಲ್ಲದಿದ್ದರೆ ಕೇಂದ್ರ ಬಿಜೆಪಿ ನಾಯಕರಿಗೆ ಹೆದರಿಕೊಂಡು ಕೆಲಸ ಮಾಡುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಅವರ ಆರೋಪವನ್ನು ನೀವೇ ಒಪ್ಪಿಕೊಂಡಂತಾಗುತ್ತದೆ.

Related Posts

Don't Miss it !