ಗಗನದತ್ತ ಟೊಮ್ಯಾಟೋ ಬೆಲೆ; ಟೊಮ್ಯಾಟೋ ಹೊಲದಲ್ಲಿ ಒಂದು ಸಾವು, ಮತ್ತೊಂದು ಕೊಲೆ..!

ಟೊಮ್ಯಾಟೋ ರೇಟ್​ ಗಗನಕ್ಕೆ ಏರಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರೋ ಸಂಗತಿ. ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆ ಟೊಮ್ಯಾಟೋ ಬೆಲೆಯನ್ನು ನೂರು ರೂಪಾಯಿ ಗಡಿ ದಾಟಿಸಿದೆ. ಈ ದುಬಾರಿ ದರ ಟೊಮ್ಯಾಟೋ ಕಳ್ಳರನ್ನು ಸೃಷ್ಟಿಸಿದೆ ಎಂದರೆ ತಪ್ಪೇನು ಇಲ್ಲ. ಕಳ್ಳ ಖದೀಮರಿಂದ ತಮ್ಮ ಟೊಮ್ಯಾಟೊ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವ ಮಾಡಿದ್ದ ಪ್ರಯತ್ನ ಒಂದು ಎರಡು ಜೀವಗಳ ಅಂತ್ಯಕ್ಕೆ ಕಾರಣವಾಗಿದೆ. ಒಂದು ಆಕಸ್ಮಿಕ ಸಾವು ನಡೆದು ಹೋಗಿದ್ದರೆ, ಮತ್ತೊಬ್ಬರನ್ನು ಕೊಲೆ ಮಾಡಲಾಗಿದೆ.

ಟೊಮ್ಯಾಟೊ ದರ ಏರಿಕೆ ಆಗುತ್ತಿದ್ದ ಹಾಗೆ ಬೆಳೆ ರಕ್ಷಣೆಗೆ ಮುಂದಾಗಿದ್ದ ಟೊಮ್ಯಾಟೊ ತೋಟದ ಮಾಲೀಕ, ಹಣ್ಣನ್ನು ಸುಲಭವಾಗಿ ಕದ್ದು ಕೀಳಬಾರದು ಎಂದು ತೋಟದ‌ ಸುತ್ತ‌ಲೂ ವಿದ್ಯುತ್ ತಂತಿ ಕಟ್ಟಿದ್ದಾರೆ. ತೋಟದ ಮಾಲೀಕ ಅಶ್ವಥ್ ರಾವ್ ಹಾಕಿದ್ದ ವಿದ್ಯುತ್ ಸಂಪರ್ಕದ ಬಗ್ಗೆ ಅರಿವಿಲ್ಲದೆ ಆಕಸ್ಮಿಕವಾಗಿ ತುಳಿದು‌ ಯುವಕ ಸಾವನ್ನಪ್ಪಿದ್ದಾನೆ. ತೋಟದ ಮಾಲೀಕ ಮಾಡಿದ್ದ ಖತರ್ನಾಕ್ ಕೆಲಸದಿಂದಲೇ 20 ವರ್ಷದ ವಸಂತ್ ರಾವ್ ಸಾವು ಸಂಭವಿಸಿದೆ ಎಂಬುದನ್ನು ಅರಿತ ಕುಟುಂಬಸ್ಥರು, ಅಶ್ವಥ್ ರಾವ್ ಅವರನ್ನು ಬಡಿದು ಕೊಂದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಚರಕಮಟ್ಟನಹಳ್ಳಿ‌ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಟೊಮ್ಯಾಟೋ ತೋಟದ ಕಡೆಗೆ ಮೇಕೆ ಹೋಗಿತ್ತು. ಅದನ್ನು ಓಡಿಸಲು ಹೋಗಿದ್ದಾಗ ಈ ಘಟನೆ ಸಂಭವಿಸಿದ್ದು, ತೋಟದ ಮಾಲೀಕನಿಂದಲೇ ನನ್ನ ಸಹೋದರ ಹತನಾದ ಎಂದು ಮೃತ ವಸಂತ್ ರಾವ್ ಸಹೋದರಿ ಗಂಗೂಬಾಯಿ ಆರೋಪಿಸುತ್ತಾರೆ. ಇನ್ನೂ ಟೊಮ್ಯಾಟೊ ಬೆಳೆದಿದ್ದ ತೋಟದ ಮಾಲೀಕ 53 ವರ್ಷದ ಅಶ್ವಥ್ ರಾವ್ ತಾಯಿ ಕೂಡ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದು, ನನ್ನ ಮಗ ತಪ್ಪು ಮಾಡಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಹೊಡೆದು ಸಾಯಿಸಿದ್ದು ಅನ್ಯಾಯ ಎಂದು ಗೋಳಾಡುತ್ತಿದ್ದಾರೆ.

ಟೊಮ್ಯಾಟೊ ತೋಟದಲ್ಲಿ ವಸಂತ್ ಹಾಗೂ ಅಶ್ವಥ್ ಕುಟುಂಬಸ್ಥರ ನಡುವೆ ಜೋರಾಗಿ ಗಲಾಟೆಯಾಗಿದೆ. ದೊಣ್ಣೆಗಳಿಂದ ಹೊಡೆದ ಪರಿಣಾಮ ಅಶ್ವಥ್ ಸಾವನ್ನಪ್ಪಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಆದರೆ ಟೊಮ್ಯಾಟೊ ರಕ್ಷಣೆ ಮಾಡಲು ಅಶ್ವಥ್ ರಾವ್ ಮಾಡಿದ್ದು ಸರಿಯಾದ ಕ್ರಮವಾದರೂ ವಿದ್ಯುತ್ ಬೇಲಿ ಅಳವಡಿಸುವುದು ಅಕ್ರಮವಾಗಿದೆ. ಇನ್ನೂ ಮೇಕೆ ಓಡಿಸಲು ಹೋಗಿದ್ದ, ಅಚಾನಕ್ ಆಗಿ ವಿದ್ಯುತ್ ಬೇಲಿ ಸ್ಪರ್ಶವಾಗಿದೆ, ಹಾಗೆಂದ ಮಾತ್ರಕ್ಕೆ ಮತ್ತೊಂದು ಜೀವ ಬಲಿ ಪಡೆಯುವುದು ಮಾನವೀಯತೆಯ ಆಧಾರದಲ್ಲಿ ಒಪ್ಪಲಾಗದ ವಿಚಾರ. ಟೊಮ್ಯಾಟೊ ದರ ಎರಡು ಜೀವಗಳನ್ನು ಬಲಿ ಪಡೆದಿರುವುದು ಮಾತ್ರ ಇತಿಹಾಸ ಪುಟ ಸೇರಲಿದೆ.

Related Posts

Don't Miss it !