ಸಮುದ್ರದಲ್ಲಿ ತೇಲಿ ಬಂದ ‘ಚಿನ್ನದ ರಥ’ ಯಾವ ದೇಶದ್ದು ಗೊತ್ತಾ..? ಅಸಲಿ ಮಾಹಿತಿ..

ಆಂಧ್ರಪ್ರದೇಶದ ಕಡಲ ಕಿನಾರೆಗೆ ಚಿನ್ನದ ರಥವೊಂದು ತೇಲಿ ಬಂದಿತ್ತು. ಆಸಾನಿ ಚಂಡ ಮಾರುತದ ವೇಳೆ ಸಮುದ್ರ ತೀರದ ದೇವಸ್ಥಾನದಿಂದ ಹೀಗೆ ಸಮುದ್ರದ ಪಾಲಾಗಿ, ಇಲ್ಲಿಗೆ ಬಂದಿರಬಹುದು ಎಂದು ಆಂಧ್ರಪ್ರದೇಶದ ಅಧಿಕಾರಿಗಳು ಶಂಕಿಸಿದ್ದರು. ಆದರೆ ಚಿನ್ನದ ರಥ ನಮ್ಮ ದೇಶದ್ದೇ ಅಲ್ಲ ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಸಮುದ್ರದ ನಡುವೆ ಕಾಣಿಸಿಕೊಂಡ ದೇವಸ್ಥಾನ ಮಾದರಿಯ ‘ಗೋಲ್ಡನ್​ ಚಾರಿಯೇಟ್​’ ನ್ನು ದಡಕ್ಕೆ ತಂದು ತಪಾಸಣೆ ಮಾಡಲಾಗಿದೆ. ಆದರೆ ಅದರ ಮೇಲೆ ನಮ್ಮ ಭಾರತದ ಯಾವುದೇ ಭಾಷೆ ಕೂಡ ಸಿಕ್ಕಿಲ್ಲ. ಹೀಗಾಗಿ ಇದು ನಮ್ಮ ದೇಶದ ಚಿನ್ನದ ರಥ ಅಲ್ಲ ಎನ್ನುವ ನಿರ್ಧಾರ ಬರಲಾಗಿದೆ. ಅಷ್ಟೇ ಅಲ್ಲದೆ ನಮ್ಮ ದೇಶದ ರಥಗಳು ಈ ಮಾದರಿಯಲ್ಲಿ ಇರುವುದಿಲ್ಲ ಎನ್ನುವುದು ಮತ್ತೊಂದು ಕಾರಣ.

ಭಾಷಾ ತಜ್ಞರಿಗೆ ಸಹಾಯವಾದ ‘ಗೂಗಲ್​ ಭಾಷಾಂತರ’

ಚಿನ್ನದ ರಥದ ಮೇಲೆ ಕೆಲವೊಂದು ಹೆಸರುಗಳನ್ನು ಕೆತ್ತಲಾಗಿತ್ತು. ನಮ್ಮ ದೇಶದ ಭಾಷೆ ಅಲ್ಲ ಎನ್ನುವುದನ್ನು ಅರಿತಿದ್ದ ಪೊಲೀಸರು ಹಾಗೂ ಜಿಲ್ಲಾಡಳಿತ ಭಾಷಾ ತಜ್ಞರ ಮೊರೆ ಹೋಗಿತ್ತು. ಈ ವೇಳೆ Google Translator ಸಹಾಯದಿಂದ ಇದು ಮಯನ್ಮಾರ್ ದೇಶದ ರಥ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಆದರ ಜೊತೆಗೆ ಚಿನ್ನದ ರಥ ಎನ್ನುವ ಗುಮಾನಿಗೂ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಇದು ದೇವಾಲಯದ ಆಕಾರದಲ್ಲಿ ಕೆತ್ತನೆ ಮಾಡಿ, ಅದರ ಮೇಲೆ ಚಿನ್ನದ ಬಣ್ಣದ ಶೀಟ್​ ಹೊದಿಸಲಾಗಿದೆ. ಇದರಲ್ಲಿ ಚಿನ್ನ ಇಲ್ಲ. ಇದು ಕೇವಲ ಮರದಿಂದ ಮಾಡಿರುವುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.

ಸಾಗರದಲ್ಲಿ ನೌಕಾಸೇನೆಯ ಭದ್ರತಾ ವೈಫಲ್ಯ ಅಲ್ಲವೇ..?

ಭಾರತದ ಶ್ರೀಕಾಕುಳಂಗೂ ಮಯನ್ಮಾರ್​ಗೂ ಸುಮಾರು 2 ಸಾವಿರ ಕಿಲೋ ಮೀಟರ್​ ಅಂತರವಿದೆ. ಅಷ್ಟು ದೂರದಿಂದ ಚಿನ್ನದ ಬಣ್ಣದ ಶೀಟ್​ ಹೊದ್ದ ಮರದ ರಥವೊಂದು ತೇಲಿಕೊಂಡು ಬಂದಿದೆ. ಆದರೂ ಯಾವುದೇ ಸೇನಾಪಡೆಯ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಮೀನುಗಾರರು ಸಾಗರದಲ್ಲಿ ಇದ್ದಿದ್ದರೆ, ಇಷ್ಟು ದಡಕ್ಕೆ ಬರುವ ಮೊದಲೇ ಮಾಹಿತಿ ಬಹಿರಂಗ ಆಗುತ್ತಿತ್ತು. ಆದರೆ ಆಸಾನಿ ಎಫೆಕ್ಟ್​ನಿಂದ ಸಮುದ್ರಕ್ಕೆ ಹೋಗಿರಲಿಲ್ಲ. ಆದರೆ ನಮ್ಮ ದೇಶದ ರಕ್ಷಣೆಯ ಹೊಣೆ ಹೊತ್ತಿರುವ ನೌಕಾಪಡೆ, ಕರಾವಳಿ ಕಾವಲು ಪಡೆ ಸೇರಿದಂತೆ ನೌಕಾಸೇನೆ ಏನು ಮಾಡುತ್ತಿತ್ತು..? ಸಮುದ್ರ ಮೇಲೆ ತೇಲಿಕೊಂಡು ಬರುವ ಬೃಹತ್​ ರಥವನ್ನೇ ಪತ್ತೆ ಮಾಡದ ಇವರು ಉಗ್ರರು ಸಮುದ್ರ ಮಾರ್ಗದಲ್ಲಿ ಬಂದರೆ ಪತ್ತೆ ಮಾಡುತ್ತಾರಾ..? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದೇ ರೀತಿ ಅಲ್ಲವೇ ಹಿಂದೊಮ್ಮೆ 250 ಕೆಜಿ ಸ್ಫೋಟಕ ತುಂಬಿದ್ದ ಕಾರು ಭಾರತದ ಒಳಕ್ಕೆ ಪ್ರವೇಶ ಪಡೆದು 40 ಸೈನಿಕರನ್ನು ಬಲಿ ಪಡೆದಿದ್ದು..!? ಯೋಚಿಸಬೇಕಾದ ಸಂಗತಿ.

Related Posts

Don't Miss it !