ಕರ್ನಾಟಕದ ಮೆಡಿಕಲ್​ ವಿದ್ಯಾರ್ಥಿ ನವೀನ್​ ಶೇಖರಪ್ಪ ಯುದ್ಧಭೂಮಿಯಲ್ಲಿ ಸಾವು..! ಇದು ಕೊಲೆ..

ರಷ್ಯಾ ನಡೆಸುತ್ತಿರುವ ಭೀಕರ ಯುದ್ಧದಿಂದ ಉಕ್ರೇನ್​​ನಲ್ಲಿ ರಕ್ತ ಪ್ರವಾಹ ಹರಿಯುತ್ತಿದೆ. ಇದರಲ್ಲಿ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್​​ ಮೃತಪಟ್ಟಿದ್ದಾನೆ. ಖಾರ್ಕೀವ್​​ನ ಬಂಕರ್​ನಲ್ಲಿದ್ದ ನವೀನ್​​ ಶೇಖರಪ್ಪ ಬೆಳಗ್ಗೆ ಆಹಾರ ಪದಾರ್ಥ ತರುವ ಉದ್ದೇಶದಿಂದ ಬಂಕರ್‌ನಿಂದ ಹೊರಕ್ಕೆ ಬಂದಿದ್ದರು. ಉಳಿದ ಸ್ನೇಹಿತರು ಹೊರಕ್ಕೆ ಬರುವುದು ಬೇಡ, ನಾನೊಬ್ಬನೇ ಹೋಗಿ ಆಹಾರ ತರುತ್ತೇನೆ ಎಂದಿದ್ದ ನವೀನ್, ರಷ್ಯಾ ಸೇನೆ ಸಿಡಿಸಿದ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ವಿದೇಶಾಂಗ ಇಲಾಖೆ ಅಧಿಕಾರಿಗಳು, ನವೀನ್ ಶೇಖರಪ್ಪ ಸಂಬಂಧಿಕರಿಗೆ ಈ ಬಗ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ನವೀನ್ ಸಾವಿಗೆ ಇಡೀ ಭಾರತೀಯರ ಕಂಬನಿ..!

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಆದರೆ ನನ್ನ ಮಗನನ್ನು ಬದುಕಿಸಿ, ಭಾರತಕ್ಕೆ ವಾಪಸ್ ಕರೆದುಕೊಂಡು ಬರುವಂತೆ ಪರಿಪರಿಯಾಗಿ ಬೇಡಿಕೊಂಡರೂ ಯಾರೊಬ್ಬರೂ ಸ್ಪಂದಿಸಲಿಲ್ಲ. ಈಗ ಎಲ್ಲರೂ ಫೋನ್ ಮಾಡಿ ಸಾಂತ್ವನ ಹೇಳಲು ಬಂದಿದ್ದಾರೆ ಎಂದು ಮೃತ ವಿದ್ಯಾರ್ಥಿ ನವೀನ್ ತಂದೆ ಶೇಖರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ನವೀನ್ ಓದಿನಲ್ಲಿ ತುಂಬಾ ಮುಂದಿದ್ದನು, ಕೇವಲ ಮೂರು ತಿಂಗಳ ಹಿಂದಷ್ಟೇ ಹುಟ್ಟೂರು ಕರ್ನಾಟಕದ ಹಾವೇರಿ ಜಿಲ್ಲೆಗೆ ಬಂದು ವಾಪಸ್ ಆಗಿದ್ದನು. ಬೆಳಗ್ಗೆ 7 ಗಂಟೆ ಸುಮಾರಿಗೆ ಕರೆ ಮಾಡಿದ್ದ ನವೀನ್ ಅಲ್ಲಿನ ದುಸ್ಥಿತಿಯ ಬಗ್ಗೆ ವಿವರಿಸಿದ್ದನು.

ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಎಡವಿತೇ..!?

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುವ ವಿಚಾರ ಭಾರತ ಸರ್ಕಾರಕ್ಕೆ ಮಾಹಿತಿ ಇತ್ತು. ಆದರೂ ಸರ್ಕಾರ ತನ್ನ ದೇಶವಾಸಿಗಳನ್ನು ವಾಪಸ್ ಕರೆಸಿಕೊಳ್ಳುವಲ್ಲಿ ವಿಫಲವಾಯ್ತು ಎನ್ನುವುದು ವಿರೋಧ ಪಕ್ಷಗಳ ನೇರ ಆರೋಪ. ಕೇಂದ್ರ ಸರ್ಕಾರ ಮಾತ್ರ ನಾಲ್ವರು ಸಚಿವರನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜನೆ ಮಾಡಿದ್ದೇವೆ ಎನ್ನುವ ಸಬೂಬು ಹೇಳುತ್ತಲೇ ಇದೆ. ಎಲ್ಲರನ್ನೂ ರಕ್ಷಣೆ ಮಾಡುವ ಭರವಸೆಯನ್ನು ನೀಡುತ್ತಿದೆ. ಆದರೆ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವ ಭೂಭಾಗದಲ್ಲಿ ಇರುವ ಜನರಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶವೇ ಸಾಕ್ಷಿಯಾಗಿದೆ. ಇದೀಗ ದಿನವೊಂದಕ್ಕೆ ನಾಲ್ಕು ವಿಮಾನಗಳು ಹಾರಾಟ ನಡೆಸುತ್ತಿವೆ. ಅದರಲ್ಲಿ ಪ್ರತಿದಿನ ಸುಮಾರು ಒಂದು ಸಾವಿರ ಜನರು ಬರುತ್ತಿದ್ದಾರೆ. ಒಟ್ಟು 20 ಸಾವಿರ ಭಾರತೀಯರು ಉಕ್ರೇನ್‌ನಲ್ಲಿ ಸಿಲುಕಿದ್ದು, ಅವರನ್ನು ಕರೆತರುವ ವೇಳೆಗೆ ಯುದ್ಧವೇ ಮುಗಿದು ಹೋಗುತ್ತಾ..? ಎನ್ನುವ ಆಕ್ರೋಶವೂ ವ್ಯಕ್ತವಾಗುತ್ತಿದೆ.

ರಷ್ಯಾ ಕೂಡ ನಾಗರಿಕರು ಯುದ್ಧ ಭೂಮಿ ಬಿಡುವಂತೆ ಹೇಳ್ತಿದೆ..!

ಯಾವುದೇ ಎರಡು ದೇಶದಲ್ಲಿ ಯುದ್ಧ ನಡೆದಾಗ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಬಾರದು ಎನ್ನುವುದು ನಿಯಮ ಇರುತ್ತದೆ. ಇದೇ ಕಾರಣದಿಂದ ಖಾರ್ಕೀವ್ ನಗರದ ಸುತ್ತಮುತ್ತ ದಾಳಿ‌ ನಡೆಸುತ್ತಿರುವ ರಷ್ಯಾ, ಖಾರ್ಕೀವ್‌ನಲ್ಲಿ ವಾಸವಾಗಿರುವ ನಾಗರಿಕರು ಶೀಘ್ರವೇ ಜಾಗ ಖಾಲಿ ಮಾಡಿ ಎಂದು ಆಗ್ರಹ ಮಾಡುತ್ತಿದ್ದೆ. ನಾಗರಿಕರನ್ನು ಬಳಸಿಕೊಂಡು ಯುದ್ಧ ನಿಲ್ಲಿಸುವ ತಂತ್ರಗಾರಿಕೆ ಬೇಡ ಎಂದು ಉಕ್ರೇನ್ ಸರ್ಕಾರಕ್ಕೆ ಎಚ್ಚರಿಸಿದೆ. ಇನ್ನೂ ಉಕ್ರೇನ್ ಸರ್ಕಾರ ಮಾತ್ರ ಯೂರೋಪಿಯನ್ ರಾಷ್ಟ್ರಗಳ ಒಕ್ಕೂಟದ ಜೊತೆಗೆ ಸೇರಿಕೊಂಡು ರಷ್ಯಾವನ್ನು ಮಣಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ಈ ಯುದ್ಧ ಮೂರನೇ ಮಹಾಯುದ್ಧಕ್ಕೆ ಕಾರಣವಾದರೂ ಅಚ್ಚರಿಯೇನಿಲ್ಲ ಎನ್ನುತ್ತಿದ್ದಾರೆ ಅಂತಾರಾಷ್ಟ್ರೀಯ ವಿದ್ಯಮಾನ ವಿಶ್ಲೇಷಕರು.

ಭಾರತಕ್ಕೆ ಬಾರದಿರುವುದು ವಿದ್ಯಾರ್ಥಿಗಳ ತಪ್ಪಲ್ಲವೇ..?

ಫೆಬ್ರವರಿ 14 ರಂದು‌ ಭಾರತೀಯ ರಾಯಭಾರ ಕಚೇರಿಯಿಂದ ಉಕ್ರೇನ್ ತೊರೆಯುವಂತೆ ಸೂಚನೆ ಹೋಗಿತ್ತು. ಆದರೂ ಉಕ್ರೇನ್ ತೊರೆದು‌ ತಾಯ್ನಾಡಿಗೆ ಮರಳದ ವಿದ್ಯಾರ್ಥಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ವಾದವೂ ಚರ್ಚೆಯಲ್ಲಿದೆ. ಆದರೆ ತುಂಬಾ ವರ್ಷಗಳಿಂದಲೂ ಯುದ್ಧದ ಕಾರ್ಮೋಡ ಕವಿದಿತ್ತು. ಯುದ್ಧ ಸಂಭವಿಸಿರಲಿಲ್ಲ. ಇದೇ ಕಾರಣದಿಂದ ಯೂನಿವರ್ಸಿಟಿ ಕಾಲೇಜುಗಳ ಆಡಳಿತ ಮಂಡಳಿ, ಈ ರೀತಿ ಎಚ್ಚರಿಕೆ, ವಾಗ್ವಾದಗಳು ಸರ್ವೇ ಸಾಮಾನ್ಯ. ಯುದ್ಧ ಸಂಭವಿಸುವ ವೇಳೆಗೆ ಮಾತುಕತೆಗಳು ನಡೆದು ಪರಿಸ್ಥಿತಿ ತಿಳಿಯಾಗಲಿದೆ ಎಂದಿದ್ದರು. ಯೂನಿವರ್ಸಿಟಿ ಮಾತು ಕೇಳಿ ಅಲ್ಲೇ ಉಳಿದುಕೊಂಡ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳು ಈ ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಾರೆ ಎನ್ನುವ ಮುನ್ಸೂಚನೆ ಸರ್ಕಾರಕ್ಕೆ ಸಿಕ್ಕ ಕೂಡಲೇ ಕುಟುಂಬಸ್ಥರನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತು. ರಾಜ್ಯ ಸರ್ಕಾರಗಳು ಬೇರೆ ಬೇರೆ ವಿಚಾರಕ್ಕೆ ಪ್ರಚಾರ ಮಾಡುತ್ತಾರೆ. ಈ ರೀತಿಯ ಸಮಸ್ಯೆ ಇದೆ. ನಿಮ್ಮ ಮಕ್ಕಳಿಗೆ ತಿಳಿ ಹೇಳಿ ಎನ್ನುವ ಜಾಹಿರಾತು ನೀಡಬೇಕಿತ್ತು ಎಂದು ಪೋಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ ವಾದ ಪ್ರತಿವಾದ ಮಾಡುವ ಸಮಯ ಇದಲ್ಲ. ಅಲ್ಲಿ ಸಿಲುಕಿರುವ ನಮ್ಮವರನ್ನು ಕರೆತರಬೇಕು ಎನ್ನುವುಷ್ಟೇ ನಮ್ಮ ಆಗ್ರಹ.

Related Posts

Don't Miss it !