ಒಂದು ರೂಪಾಯಿ ಕಾಯಿನ್ ಇದ್ರೆ 1 ಕೋಟಿ ಗಳಿಸಬಹುದು..! ಈ ಸುದ್ದಿ ನಂಬಿ..

ಈ ರೀತಿಯ ಹೆಡ್‌ಲೈನ್ ಹಾಕಿಕೊಂಡು ಸಾಕಷ್ಟು ವೆಬ್‌ಸೈಟ್‌ಗಳಲ್ಲೇ ಸುದ್ದಿ‌ ಮಾಡಿರ್ತಾರೆ. ಆ ರೀತಿಯ ಸುದ್ದಿಗಳಿಗೆ ಅಪ್ಪ ಅಮ್ಮ ಯಾರೂ ಇರೋದಿಲ್ಲ. ಯಾರು ಒಂದು ರೂಪಾಯಿ‌ ಖರೀದಿ‌ ಮಾಡ್ತಾರೆ..? ಒಂದು ರೂಪಾಯಿ‌ ಕಾಯಿನ್ ಯಾರಿಗೆ ತಲುಪಿಸಬೇಕು..? ಅನ್ನೋ ಬಗ್ಗೆಯೂ ಒಳಗೆ ಮಾಹಿತಿ‌ ಇರೋದಿಲ್ಲ. ಆದರೆ ಜನರು‌ ಕುತೂಹಲದಿಂದ ಓದಲಿ‌ ಎನ್ನುವ ಕಾರಣಕ್ಕೋ ಅಥವಾ ಯಾವುದೋ ಸುಳ್ಳು ವೆಬ್‌ಸೈಟ್‌ ಮಾಹಿತಿ ನಂಬಿಯೋ ವರದಿ ಮಾಡಿರುತ್ತಾರೆ. ಆದರೆ ಇದೇ ರೀತಿಯ ಮಾಹಿತಿ ನಂಬಿದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.‌ ಅದೂ‌ ಕೂಡ ಲಕ್ಷ ಲಕ್ಷ ಹಣ ಕಳೆದುಕೊಂಡ ಬಳಿಕ ಅನ್ನೋದು ವಿಶೇಷ.

ಹಳೆಯ ಕಾಯಿನ್ ಮಾರಾಟ ಜಾಲಕ್ಕೆ ಸಿಲುಕಿ ವಂಚನೆ..!

ಹಳೆಯ ಕಾಯಿನ್​ ಮಾರಾಟದ ಬಗ್ಗೆ ನಂಬಿಸಿದ್ದ ಕೆಲವರು ಫೋನ್ ಮ‌ೂಲಕ ಸಂಪರ್ಕ ಮಾಡಿದ್ದರು. ಹಳೇ ಕಾಯಿನ್​ಇದ್ದರೆ ಲಕ್ಷ ಲಕ್ಷ ಸಂಪಾದನೆ ಮಾಡಬಹುದು. ಈ ರೀತಿಯ ಕಾಯಿನ್ ಇದ್ದರೆ ಕೊಡಿ ಎಂದು ಮಾತುಕತೆ ನಡೆಸಿದ್ದರು. ಅವರು ಹೇಳಿದ ರೀತಿಯ ಹಳೇ ಕಾಯಿನ್ ಹುಡುಕಾಡಿ, ಒಂದು ರೂಪಾಯಿ ಕಾಯಿನ್ ಕೊಟ್ಟಿದ್ದರು. ಹಳೆ ಕಾಯಿನ್ ಕೊಟ್ಟ ಬಳಿಕ ದುಡ್ಡು ಬರುತ್ತೆ ಎಂದು ಕಾಯುತ್ತಿದ್ದ ವ್ಯಕ್ತಿಗೆ ಎದುರಾಳಿ ವ್ಯಕ್ತಿಗಳು ಉಂಡೇ ನಾಮ ತಿಕ್ಕುವುದಕ್ಕೆ ಶುರು ಮಾಡಿದ್ದರು. ಲಕ್ಷ ಲಕ್ಷ ಹಣ ಬರುವ ಆಸೆಯಲ್ಲಿ ಇದ್ದವರನ್ನೇ ಲಕ್ಷ ಲಕ್ಷ ಹಣ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಹೀಗೆ ದುಡ್ಡು ಮಾಡಲು ಹೋದವನೇ ಅಂತಿಮವಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಂದು ರೂಪಾಯಿಗೆ ಕೋಟಿ ಕೊಡ್ತೀವಿ.. ನಂಬಿದ ಮುಗ್ದ..

ಚಿಕ್ಕಬಳ್ಳಾಪುರ‌ ನಗರದ ಗೌರಿಬಿದನೂರು ರಸ್ತೆಯಲ್ಲಿ ಕಣಿವೆ ಪ್ರದೇಶದಲ್ಲಿ ಅರವಿಂದ್​ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರದ ಶಂಕರಮಠದ ನಿವಾಸಿ ಅರವಿಂದ್, ಗಿಫ್ಟ್​ ಸೆಂಟರ್ ನಡೆಸುತ್ತಿದ್ದರು. ​ ಆರ್ಥಿಕವಾಗಿ ಸಬಲರಾಗಿದ್ದ ಅರವಿಂದ್ ಅವರನ್ನು ಸಂಪರ್ಕಿಸಿದ ವಂಚಕರ ಟೀಂ, ₹1 ಹಳೇ ಕಾಯಿನ್ ಕೊಟ್ಟರೆ ಒಂದು ಕೋಟಿ ಕೊಡ್ತೀವಿ ಎಂಬ ಆಮಿಷ ತೋರಿಸಿದ್ದರು. ಒಂದು ರೂಪಾಯಿ‌ ಕಾಯಿನ್ ಕೊಟ್ಟ ಬಳಿಕ ಒಂದು ಕೋಟಿ‌ ಹಣ ಕೊಡುವುದಕ್ಕೆ ಟ್ಯಾಕ್ಸ್ ಹಾಗೂ‌ ಪ್ರೋಸೆಸ್ಸಿಂಗ್ ಫೀಸ್ ಅಂತಾ ಹತ್ತಾರು ಕಾರಣಗಳನ್ನು ನೀಡಿ ಬರೋಬ್ಬರಿ ₹26 ಲಕ್ಷ ರೂಪಾಯಿ ಟ್ರಾನ್ಸ್​ಫರ್​ ಮಾಡಿಸಿಕೊಂಡಿದ್ದಾರೆ. ಒಂದು ಕೋಟಿ ಬರುತ್ತೆ ಎನ್ನುವ ಕಾರಣಕ್ಕೆ ಒಡವೆ ಅಡವಿಟ್ಟು, ಅಲ್ಪಸ್ವಲ್ಪ ಕೈ ಸಾಲ ಮಾಡಿ ಹಣ ಕಟ್ಟಿದ್ದ ಅರವಿಂದ್​, ಅಂತಿಮವಾಗಿ‌ ವಂಚನೆಯ ಜಾಲಕ್ಕೆ ಸಿಲುಕಿರುವುದು ಅರ್ಥವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ.

ಈ ರೀತಿ ಸುದ್ದಿ ನಿಜವೇ..? ಯಾರು ಕೊಡ್ತಾರೆ ಕೋಟಿ..?

ಆನ್​ಲೈನ್​ನಲ್ಲಿ ಈ ರೀತಿಯ ಆಫರ್ ಬಿಡೋದು‌ ಕಾಮನ್. ಇದನ್ನು ನೋಡಿ ಯಾಮಾರಿದ್ರೆ ಈ ರೀತಿ ಸಾವಿನ ಮನೆ ಸೇರುವುದೂ ಖಂಡಿತ. ಯಾಕಂದ್ರೆ ಒಂದು ರೂಪಾಯಿ ಕಾಯಿನ್‌ ತೆಗೆದುಕೊಂಡು ಒಂದು ಕೋಟಿ ಕೊಡುವುದಕ್ಕೆ ಕಾರಣ ಏನು..? ಒಂದು ರೂಪಾಯಿ‌ ಕಾಯಿನ್ ವಜ್ರದ್ದೇ ಆದರೂ ಒಂದು ಕೋಟಿ ಬೆಲೆ ಬಾಳುವುದಿಲ್ಲ. ಆಗಿದ್ದರೂ ಒಂದು ಕೋಟಿ ಕೊಡ್ತಾರೆ ಎನ್ನುವುದರಲ್ಲಿ ಏನೋ ಗೋಲ್ಮಾಲ್ ಇದೆ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು. ಯಾರೇ ಒಬ್ಬ ವ್ಯಕ್ತಿ‌ ಇರುವುದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ ಎಂದರೆ ಆತ ಕಳವು ಮಾಡಿದ್ದಾನೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಆಥವಾ ಒಬ್ಬ ಸಾಲಗಾರ ಹೆಚ್ಚು ಬಡ್ಡಿ ನೀಡ್ತೇನೆ ಎಂದು ಹೇಳಿದರೂ ಆತ ಕೊನೆಗೆ ಅಸಲನ್ನೂ ಕೊಡಲಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಈ ರೀತಿ ಆತ್ಮಹತ್ಯೆ ಮಾರ್ಗವೇ ಅಂತಿಮವಾಗಲಿದೆ

Related Posts

Don't Miss it !