ಒಂದೇ ಒಂದು ‘ಫೇಸ್​ಬುಕ್​ ಪೋಸ್ಟ್​’ ಇಷ್ಟಕ್ಕೆಲ್ಲಾ ಕಾರಣ..!

ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದು ಯಾರೋ..? ಇದೀಗ ಪೊಲೀಸರಿಂದ ಒದೆ ತಿಂದಿದ್ದು ಇನ್ಯಾರೋ..? ಈಗ ಕಾಂಗ್ರೆಸ್​ - ಬಿಜೆಪಿ ನಡುವೆ ಕೆಸರೆರಚಾಟ - ನೊಂದ ವ್ಯಕ್ತಿಗೆ ಸಿಗುತ್ತಾ ನ್ಯಾಯ..?

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಫೇಸ್​ಬುಕ್​ ಅಕೌಂಟ್​ನಲ್ಲಿ ಒಂದು ವರ್ಷದ ಹಿಂದೆ ದೇಶದ ಯೋಧರ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್​ ಹಾಕಿದ್ದಾರೆ ಎನ್ನುವ ವಿಚಾರದಲ್ಲಿ ದೂರು ದಾಖಲಾಗಿತ್ತು. ಬಿಜೆಪಿ ಬೆಂಬಲಿತ ಹಿಂದೂ ಸಂಘಟನೆಗಳು ನೀಡಿದ ದೂರಿನ ಅನ್ವಯ ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡಿದ್ದ ಎಸ್​ಐ, ​ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೇಶದ್ರೋಹದ ದೂರಿನಡಿ ಪ್ರಕರಣ ದಾಖಲಾಗಿತ್ತು. ಕಾರ್ಕಳ‌‌ ನಗರ ಠಾಣೆ ಸಬ್​ ಇನ್ಸ್​ಪೆಕ್ಟರ್​​ ಮಧು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ಹಲ್ಲೆ ನಡೆಸಿರುವ ಘಟನೆಗೆ ವ್ಯಾಪಕ ಆಕ್ರೋಶ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾ ಸದ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವರ್ಷ ಫೇಸ್​ಬುಕ್​ನಲ್ಲಿ ಹಾಕಿದ್ದ ಸೈನಿಕರ ವಿರುದ್ಧದ ಅವಹೇಳನಕಾರಿ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಯೋಧರ ವಿರುದ್ಧ ರಾಧಾಕೃಷ್ಣ ನಾಯಕ್ ಪೋಸ್ಟ್ ಹಾಕಿದ್ದಾಗಿ ಆರೋಪಿಸಲಾಗಿತ್ತು. ಆದರೆ ತನ್ನ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ನಕಲಿ ಅಕೌಂಟ್ ಕ್ರಿಯೇಟ್​ ಮಾಡಿ ಈ ಪೋಸ್ಟ್ ಹಾಕಿದ್ದಾರೆ ನಾನು ದೇಶದ್ರೋಹದ ಪೋಸ್ಟ್​ ಹಾಕಿಲ್ಲ ಎಂದು ರಾಧಾಕೃಷ್ಣ ವಾದಿಸುತ್ತಲೇ ಬಂದಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ನಕಲಿ ಫೇಸ್​ಬುಕ್ ‌ಖಾತೆ ತೆರೆದಿರುವ ಬಗ್ಗೆ ದೂರು ಕೂಡ ದಾಖಲಿಸಿದ್ದರು. ಆದರೀಗ ನ್ಯಾಯ ಕೊಡಿಸಬೇಕಿದ್ದ ಪೊಲೀಸರೇ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಬೆಂಗಳೂರಿನ‌ ಖಾಸಗಿ‌ ಕಂಪನಿಯಲ್ಲಿ‌ ಉದ್ಯೋಗದಲ್ಲಿದ್ದ ರಾಧಾಕೃಷ್ಣ, ಇತ್ತೀಚೆಗೆ ಬೆಂಗಳೂರಿನಿಂದ ಹುಟ್ಟೂರಿಗೆ ವಾಪಸಾಗಿ ಕಾರ್ಕಳದಲ್ಲಿ ನೆಲೆಸಿದ್ದರು. ‌ಕ್ಯಾಬ್ ಚಾಲಕನಾಗಿ ಕೆಲಸವನ್ನೂ ಮಾಡುತ್ತಿದ್ದರು. ಹೃದಯಾಘಾತ ಆಗಿದ್ದರಿಂದ ಸದ್ಯಕ್ಕೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಬಿಜೆಪಿ‌ ಬೆಂಬಲಿಗರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ದೂರು ದಾಖಲಿಸಿದ್ದರು. ದೂರಿನ ಅನ್ವಯ ಕಾರ್ಕಳ ಪೊಲೀಸರು ರಾಧಾಕೃಷ್ಣ ಅವರನ್ನು ತನಿಖೆಗೆ ಬರುವಂತೆ ಸೂಚನೆ ನೀಡಿದ್ದರು. ತನಿಖೆಗೆ ಹಾಜರಾದ ವೇಳೆ ಎಸ್ಐ ಮಧು ಹಲ್ಲೆ ನಡೆಸಿದ್ದಾಗಿ ದೂರಿದ್ದಾರೆ.

ವರ್ಷದ ಹಿಂದಿನ ಪೋಸ್ಟ್​ ಮೇಲಿನ ದೂರಿನ ಮೇರೆಗೆ ಠಾಣೆಗೆ ಕರೆಸಿಕೊಂಡು, ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ಆರೋಪಿಸಿದ್ದಾರೆ. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರಾಧಾಕೃಷ್ಣ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಮಂಡ್ಯದ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿಯಲ್ಲಿ ಮಾತನಾಡಿರುವ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್, ಉಡುಪಿ ಕಾರ್ಯಕರ್ತರ ಮೇಲೆ ಹಲ್ಲೆ ಆಗಿದ್ದು ತಿಳಿದು ಬಂದಿದೆ. ಸಂಪೂರ್ಣ ಮಾಹಿತಿ ಪಡೆದುಕೊಳ್ತಿದ್ದೇನೆ. ರಾಜ್ಯದಲ್ಲಿ ಬಿಜೆಪಿ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಹದಗೆಟ್ಟಿದೆ ಎಂದಿದ್ದಾರೆ. ಇನ್ನೂ ಪೊಲೀಸರು ಕೂಡ ರಾಜಕಾರಣಿಗಳು ಹೇಳಿದಾಗೆ ಕೆಲಸ ಮಾಡ್ತಿದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಶಾಸಕ ಸಿಡಿಮಿಡಿ..!

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿರುವ ವಿಚಾರಕ್ಕೆ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಿಡಿಮಿಡಿಕೊಂಡಿದ್ದಾರೆ. ನಮ್ಮ ಸೈನಿಕರ ವಿರುದ್ಧ ಕಾರ್ಕಳದ ವ್ಯಕ್ತಿ ಅಪಮಾನಕರ ಹೇಳಿಕೆ ಪೋಸ್ಟ್​ ಹಾಕುತ್ತಿದ್ದಾರೆ. ಹಿಂದು ಜಾಗರಣ ವೇದಿಕೆ ಇದನ್ನು ಖಂಡಿಸಿ ದೂರು ನೀಡಿತ್ತು. ದೇಶದ್ರೋಹದ ಮಾನಸಿಕತೆಯ ಬರಹದ ಪರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಸಮರ್ಥನೆ ನೋಡಿ ನನಗೆ ಆಶ್ಚರ್ಯವಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ಮಾನಸಿಕತೆ ಮತ್ತು ಬದ್ಧತೆ ನನಗೆ ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ದೇಶ ದ್ರೋಹವನ್ನು ಸಮರ್ಥಿಸುವುದು ಇದು ಮೊದಲ ಬಾರಿಯಲ್ಲ. ಹಿಂದು ಕಾರ್ಯಕರ್ತರ ಕೊಲೆಯಾದರೆ SDPI ಸಮರ್ಥನೆ ಮಾಡುತ್ತಾರೆ. ಕೆ.ಜಿ ಹಳ್ಳಿ ಘಟನೆಯಲ್ಲೂ ಗಲಭೆಕೋರರ ಪರ ನಿಲ್ಲುತ್ತಾರೆ. ಮಂಗಳೂರು ಸಿಎಎ ವಿರುದ್ಧದ ಗಲಭೆಯನ್ನು ವಿಧಾನಸೌಧದಲ್ಲಿ ಸಮರ್ಥಿಸಿಕೊಂಡರು. ನಿಮ್ಮ ರಾಜಕೀಯ ಚಟಕ್ಕೆ ದೇಶದ್ರೋಹಿಗಳನ್ನು ಬೆಂಬಲಿಸಬೇಡಿ ಎಂದು ಕಟುವಾಗಿ ಟೀಕಿಸಿದ್ದಾರೆ. ರಾಧಾಕೃಷ್ಣ ಪಾಕಿಸ್ತಾನ ಬೆಂಬಲಿಸಿ, ಸೈನಿಕರ ವಿರುದ್ಧ ಪೋಸ್ಟ್ ಹಾಕಿದ್ದಾನೆ. ಆತನ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಿ ಎಂದಿರುವ ಶಾಸಕರು, ನಿಮ್ಮ ನಿಷ್ಠೆ ಯಾರ ಪರ ಎಂಬುದನ್ನು ಹೇಳಿ ಎಂದು ಕುಟುಕಿದ್ದಾರೆ.

ಫೇಸ್​ಬುಕ್​ ಪೋಸ್ಟ್​​ ಹಾಕಿದ್ಯಾರು..?

ಫೇಸ್​ಬುಕ್​ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿಕೊಂಡು ಸಾಕಷ್ಟು ಜನರ ಬಳಿ ಹಣ ವಸೂಲಿ ಮಾಡಿರುವ ಘಟನೆಗಳು ಈ ರಾಜ್ಯದಲ್ಲಿ ನಡೆದಿವೆ. ಅದರಲ್ಲೂ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲೇ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿರೋದನ್ನು ನೋಡಿದ್ದೇವೆ. ಹೀಗಿರುವಾಗ ನಾನು ಪೋಸ್ಟ್​ ಹಾಕಿಲ್ಲ. ಯಾರೋ ಕಿಡಿಗೇಡಿಗಳ ಕೆಲಸ ಎಂದು ದೂರು ನೀಡಿದ ಮೇಲೆ ತನಿಖೆ ಮಾಡಿ ಎಲ್ಲಿಂದ ಹಾಕಿದ್ದಾರೆ..? ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಮಾಡಬೇಕಾದ ಜವಾಬ್ದಾರಿ ಪೊಲೀಸ್​ ಇಲಾಖೆ ಮೇಲಿತ್ತು. ಆದರೆ ಹಿಂದುಪರ ಸಂಘಟನೆಗಳು ಕೊಟ್ಟ ದೂರಿನ ಮೇಲೆ ಠಾಣೆಗೆ ಕರೆಸಿ ಹಲ್ಲೆ ಮಾಡುವ ಅವಶ್ಯಕತೆ ಆದರೂ ಏನಿತ್ತು..? ಬೆಂಗಳೂರಿನಲ್ಲಿ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡಿದ ಬಗ್ಗೆ ಬೆಂಗಳೂರಿನಲ್ಲಿ ದೂರು ಕೊಟ್ಟಿದ್ದೇನೆ ಎಂದ ಮೇಲೆ ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸಿ ದೂರಿನ ಸ್ಥಿತಿಗತಿ ತಿಳಿಯಬೇಕಿತ್ತು. ಅದನ್ನು ಬಿಟ್ಟು ಓರ್ವ ಹೃದ್ರೋಗಿ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧವೇ ಸರಿ.

Related Posts

Don't Miss it !