ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೇ ವಿಪಕ್ಷಗಳನ್ನು ಕಟ್ಟಿ ಹಾಕಿದ ಮೋದಿ..!

ಭಾರತದ ಪ್ರಥಮ ಪ್ರಜೆ ಆಗಿದ್ದ ರಾಮನಾಥ್​ ಕೋವಿಂದ್​ ಅವಧಿ ಅಂತ್ಯವಾಗ್ತಿದ್ದು, ಜುಲೈನಲ್ಲಿ ನೂತನ ರಾಷ್ಟ್ರಪತಿ ಆಯ್ಕೆಗೆ ದಿನಾಂಕ ಘೋಷಣೆ ಆಗಿದೆ. ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ NDA ಹಾಗೂ ಕಾಂಗ್ರೆಸ್​ ಸೇರಿದಂತೆ ವಿಪಕ್ಷಗಳ ಒಕ್ಕೂ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ನೇತೃತ್ವದ NDA ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ಆದರೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಆಗಿ ಯಶವಂತ್​ ಸಿನ್ಹಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ವಿರೋಧ ಪಕ್ಷಗಳ ಒಗ್ಗಟ್ಟು ಮುರಿಯುವುದು ಹಾಗೂ ತನ್ನದೇ ಆದ ವಿಭಿನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ದೇಶಾದ್ಯಂತ ಮತಬ್ಯಾಂಕ್​ ಗಟ್ಟಿ ಮಾಡುವ ಕೆಲಸವನ್ನು ಕೇಸರಿ ಪಡೆ ಮಾಡಿದೆ.

ಆದಿವಾಸಿ ಮಹಿಳೆಯನ್ನು ಆಯ್ಕೆ ಮಾಡಿದ ಬಿಜೆಪಿ..!

ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿ ಆಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ. ಒಡಿಶಾ ಮೂಲದ 64 ವರ್ಷದ ದ್ರೌಪದಿ ಮುರ್ಮು, ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ. BA ಪದವಿ ಪೂರೈಸಿರುವ ದ್ರೌಪದಿ ಮುರ್ಮ, ದುರ್ಗಮ ಕಾಡಿನಲ್ಲಿ ಜನಿಸಿದರೂ ಕಷ್ಟ ಕಾರ್ಪಣ್ಯಗಳ ನಡುವೆ ಶಿಕ್ಷಣ ಪಡೆದಿದ್ದಾರೆ. ಒಡಿಶಾ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿದ್ದು, ನೀರಾವರಿ, ವಿದ್ಯುತ್ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕಿಯಾಗಿಯೂ ವೇತನವಿಲ್ಲದೆ ಸೇವೆ ಸಲ್ಲಿಸಿದ ಖ್ಯಾತಿ ದ್ರೌಪದಿ ಮುರ್ಮು ಅವರಿಗೆ ಸಲ್ಲುತ್ತದೆ. 2004 ಹಾಗೂ 2009ರಲ್ಲಿ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿದ್ದ ಮುರ್ಮು, ಒಡಿಶಾ ಸರ್ಕಾರದ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಹೈನುಗಾರಿಕೆ, ಮೀನುಗಾರಿಕೆ, ಸಾರಿಗೆ, ವಾಣಿಜ್ಯ ಖಾತೆಯನ್ನು ನಿರ್ವಹಿಸಿದ್ದರು. 2015 ರಿಂದ 2021ರ ತನಕ ಜಾರ್ಖಂಡ್ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ್ದಾರೆ.

ಭಾರತದ 2ನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು..!

ವಿರೋಧ ಪಕ್ಷಗಳ ಒಗ್ಗಟ್ಟಿನ ಆಯ್ಕೆಯಾಗಿ ಯಶವಂತ್ ಸಿನ್ಹಾರನ್ನು ಆಯ್ಕೆ ಮಾಡಿದರೂ ಮತದಾನದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುವುದು ಸಾಧ್ಯವಿಲ್ಲ. ಈಗಾಗಲೇ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಬಿಜೆಡಿ ಪಕ್ಷ ಸ್ವಾಗತ ಮಾಡಿದೆ. ಅಂದರೆ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವುದು ಶತಸಿದ್ಧ ಎನ್ನಲಾಗ್ತಿದೆ. ಇನ್ನೂ ಇದಕ್ಕೂ ಮೊದಲು ಯುಪಿಎ ಅವಧಿಯಲ್ಲಿ ಪ್ರತಿಭಾ ಪಾಟೀಲ್​ ಮೊದಲ ಮಹಿಳಾ ರಾಷ್ಟ್ರಪತಿ ಆಗಿ ಅಧಿಕಾರಕ್ಕೇರಿದ್ದರು. ಇದೀಗ 2ನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆ ಎನ್ನುವ ಖ್ಯಾತಿ ಮುರ್ಮು ಅವರ ಪಾಲಾಗಿದೆ. ಒಂದು ವೇಳೆ ದ್ರೌಪದಿ ಮುರ್ಮು ಆಯ್ಕೆ ಆಗದಿದ್ರೆ ಕಮಲ ಪಾಳಯಕ್ಕೆ ಕಠಿಣ ಸವಾಲು ಎದುರಾಗುತ್ತಿತ್ತು. ಇದೀಗ ಆಯ್ಕೆ ಸುಲಭ ಎನ್ನಲಾಗ್ತಿದೆ.

ದಕ್ಷಿಣ ಭಾರತದಲ್ಲಿ ಯಾರೊಬ್ಬರೂ ಅಭ್ಯರ್ಥಿ ಇರಲಿಲ್ಲವೇ..?

ರಾಷ್ಟ್ರಪತಿ ಅಭ್ಯರ್ಥಿ ಸೇರಿದಂತೆ ದೇಶದ ಪ್ರಮುಖ ಹುದ್ದೆಗಳಿಗೆ ನೇಮಕ ಆಗುವಾಗ ಉತ್ತರ ಭಾರತದ ನಾಯಕರ ಕಡೆಗೆ ಕಣ್ಣು ಹೊರಳುತ್ತದೆ. ಆದರೆ ದಕ್ಷಿಣ ಭಾರತ ಯಾವುದೇ ನಾಯಕರ ಕಡೆಗೆ ಕಣ್ಣು ಹೊರಳುವುದೇ ಇದೆ. ಇದೀಗ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಉತ್ತಮ ಆಯ್ಕೆ ಆಗಿದ್ದರೂ, ದಕ್ಷಿಣ ಭಾರತದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳ ಕಣ್ಣಿಗೆ ಕಾಣುವುದಿಲ್ಲ ಎನ್ನುವುದು ವಿಪರ್ಯಾಸ. ಆದರೂ ರಾಷ್ಟ್ರಪತಿ ಚುನಾವಣೆ ಇಬ್ಬರೂ ಅಭ್ಯರ್ಥಿಗಳ ಸ್ಪರ್ಧೆಯಿಂದ ಚುನಾವಣೆ ರಂಗೇರುತ್ತಿದೆ. ಈಗಾಗಲೇ ಯಶವಂತ್​ ಸಿನ್ಹಾ, ತೃಣಮೂಲ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನನ್ನನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ವಿರೋಧ ಪಕ್ಷಗಳಿಗೆ ಧನ್ಯವಾದ ಎಂದಿದ್ದಾರೆ. ಮಾಜಿ IAS ಅಧಿಕಾರಿ ಆಗಿರುವ ಯಶವಂತ್​ ಸಿನ್ಹಾ ಅಥವಾ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಇಬ್ಬರಲ್ಲಿ ರಾಷ್ಟ್ರಪತಿ ಆಗುವುದು ಯಾರು ಅನ್ನೋ ಪ್ರಶ್ನೆಗೆ ಮುಂದಿನ ತಿಂಗಳು ಉತ್ತರ ಸಿಗಲಿದೆ.

Related Posts

Don't Miss it !