ಮದುವೆ ಆರತಕ್ಷತೆಯಲ್ಲಿ ನಿಂತಿದ್ದ ಮಧುಮಗಳು ಸ್ಮಶಾನ ಸೇರಿದ್ಯಾಕೆ..?

ಮದುವೆ ಎನ್ನುವುದು ಜೀವನದ ಹೊಸ ಅಧ್ಯಾಯ ಆರಂಭಕ್ಕೆ ಮುನ್ನುಡಿ. ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಬಳಿಕ ಮದುವೆ ಎನ್ನುವ ಸಂಪ್ರದಾಯದ ಮೂಲಕ ಒಪ್ಪಿಗೆ ಮುದ್ರೆ ಬೀಳುತ್ತದೆ. ಅಂದು ಎರಡೂ ಕುಟುಂಬಸ್ಥರು ಸೇರಿದಂತೆ ಬಂಧು ಬಳಗದ ಜನರಿಗೆ ಸಂಭ್ರಮವೋ ಸಂಭ್ರಮ. ಆದರೆ ಈ ರೀತಿಯ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಮದುವೆ ಆರತಕ್ಷತೆಯಲ್ಲಿ ನಿಂತಿದ್ದ ಮಧುಮಗಳು ಕುಸಿದು ಬಿದ್ದಿದ್ದು, ಆತಂಕದ ಛಾಯೆ ಸೃಷ್ಟಿಯಾಗಿತ್ತು. ಕುಟುಂಬಸ್ಥರು ಆಕೆಯನ್ನು ಕೂಡಲೇ ಆಸ್ಪತ್ರೆ ಸೇರಿಸಿದ್ದರು. ಮದುವೆಗೆ ಬಂದಿದ್ದ ಸಂಬಂಧಿಕರು ಆತಂಕದಿಂದಲೇ ಮನೆ ಕಡೆಗೆ ವಾಪಸ್​ ಆಗಿದ್ದರು. ಒಂದು ವಾರದ ಕಾಲ ಸಾವು ಬದುಕಿನ ಜೊತೆಗೆ ಹೋರಾಟ ನಡೆಸಿದ್ದ ಯುವತಿ ಸಾವಿನ ಮನೆ ಸೇರಿದ್ದಾಳೆ. ಈ ಸಾವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.

ಕನಸು ಕಟ್ಟಿಕೊಂಡವಳ ಕನ್ಯೆ ಬದುಕು ಮದುಡಿತು..!

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೊಡಿಚೆರುವು ಗ್ರಾಮದ ಕೃಷಿಕ ರಾಮಪ್ಪ ಮತ್ತು ಆಕ್ಕಮ್ಮ ದಂಪತಿಯ ಒಬ್ಬಳೇ ಪುತ್ರಿ ಆಗಿದ್ದ ಚೈತ್ರಾ, ಎಂಎ​ಸ್ಸಿ ಬಯೋಕೆಮಿಸ್ಟ್ರಿ ಓದಿದ ಬಳಿಕ ಕೈವಾರ ಬಳಿ ಕಾಲೇಜು ಒಂದರಲ್ಲಿ, ಉಪನ್ಯಾಸಕಿಯಾಗಿ ವೃತ್ತಿ ಮಾಡುತ್ತಿದ್ದರು. ಇತ್ತೀಚಿಗೆ ಮಗಳಿಗೆ ಮದುವೆ ಮಾಡುವ ಮನಸ್ಸು ಮಾಡಿದ್ದ ಅಪ್ಪ, ಅಪ್ಪ, ಹೊಸಕೋಟೆ ಮೂಲದ ಕಾರ್ತಿಕ್​ ಎಂಬಾತನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಫೆಬ್ರವರಿ 6 ಮತ್ತು 7 ರಂದು ಶ್ರೀನಿವಾಸಪುರದ ಬಾಲಾಂಜನೇಯ ದೇವಸ್ಥಾನ ಬಳಿಯ ಮಾರುತಿ ಸಭಾ ಭವನದಲ್ಲಿ ಮದುವೆ ಹಮ್ಮಿಕೊಳ್ಳಲಾಗಿತ್ತು. ಫೆಬ್ರವರಿ 6ರ ಸಂಜೆ 7 ರಿಂದ ಆರತಕ್ಷತೆ ನಡೆಸಲಾಗ್ತಿತ್ತು. ಅಂದು ಎಲ್ಲರ ಜೊತೆಗೂ ನಗುನಗುತ್ತಲೇ ಇದ್ದ ಚೈತ್ರಾ ರಾತ್ರಿ 10 ಗಂಟೆ ವೇಳೆಗೆ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಪ್ರಾಣ ಉಳಿಯಲಿಲ್ಲ.

ಇದನ್ನೂ ಓದಿ: ಬ್ಯಾಂಕ್​ ಅಕೌಂಟ್‌ನಲ್ಲಿ ಹಣ ಕಟ್​ ಆಗ್ತಿದ್ಯಾ..? ಇನ್ಮುಂದೆ ಈ ಕಾರಣಕ್ಕೂ ಕಟ್​ ಆಗ್ಬಹುದು..!

ಮಗಳನ್ನು ಕಳೆದುಕೊಂಡ ನೋವಿನ ನಡುವೆ ಸಾರ್ಥಕತೆ..!

ಮಗಳನ್ನು ಮದುವೆ ಮಾಡಿ ಮೊಮ್ಮಕ್ಕಳನ್ನು ಆಡಿಸುವ ಕನಸು ಕಂಡಿದ್ದ ಕೃಷಿಕ ರಾಮಪ್ಪ ಮತ್ತು ಆಕ್ಕಮ್ಮ ದಂಪತಿ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬಯೋ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮುಗಿಸಿದ್ದ ಚೈತ್ರಾ ಕುಸಿದು ಬಿದ್ದ ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎನ್ನುವ ಕಾರಣಕ್ಕೆ ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಮಗಳಿಗೆ ಎದುರಾಗಿರುವ ಸಂಕಷ್ಟ ಶೀಘ್ರದಲ್ಲೇ ನಿವಾರಣೆ ಆಗಲಿದೆ ಎಂದುಕೊಂಡಿದ್ದ ಕುಟುಂಬಸ್ಥರಿಗೆ ಶನಿವಾರ ಆಘಾತಕಾರಿ ವಿಚಾರ ದಿಗ್ಭ್ರಮೆ ಮೂಡಿಸಿತ್ತು. ಮಗಳು ಮೆದುಳು ನಿಷ್ಕ್ರಿಯವಾಗಿದ್ದು, ಇನ್ನೂ ಮೊದಲಿನ ಜೀವನ ಇರಲಾರದು ಎಂದು ಖಚಿತವಾಗಿ ಹೇಳಿದ್ದರು. ಆದರೆ ಮಗಳ ಸಾವನ್ನು ಸಾರ್ಥಕ ಮಾಡಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದರು. ಆ ಕೂಡಲೇ ಒಪ್ಪಿಕೊಂಡ ಪೋಷಕರು ತಮ್ಮ ಮಗಳ ದೇಹದ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಒಪ್ಪಿಕೊಂಡಿದ್ದರು.

ಮಗಳ ಸಾವಿಗೆ ಕಾರಣ ಏನು..? ಇನ್ನೂ ಸಿಗದ ಉತ್ತರ..

ಎಂಎಸ್ಸಿ ಓದಿಕೊಂಡು ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿದ್ದ ಚೈತ್ರಾ ಬುದ್ಧಿವಂತೆ. ಯಾವುದೇ ಅನಾರೋಗ್ಯವೂ ಇರಲಿಲ್ಲ. ಮದುವೆ ಕೆಲಸದಲ್ಲೂ ತುಂಬಾ ಚುರುಕಿನಿಂದ ಭಾಗಿಯಾಗಿದ್ದ ಚೈತ್ರಾ ಸಾವಿಗೆ ಇಲ್ಲೀವರೆಗೂ ಸಾವಿನ ರಹಸ್ಯ ಬಹಿರಂಗ ಆಗಿಲ್ಲ. ಮೆದುಳು ನಿಷ್ಕ್ರಿಯ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್​ ಕೂಡ ಟ್ವೀಟ್​ ಮಾಡಿ ಚೈತ್ರಾಳ ಮೆದುಳು ನಿಷ್ಕ್ರಿಯದ ಬಗ್ಗೆ ಟ್ವೀಟ್​ ಮಾಡಿದ್ದರು. ಆದರೆ ಮೆದುಳು ನಿಷ್ಕ್ರಿಯ ಆಗುವುದಕ್ಕೆ ಚೈತ್ರಾಳಿಗೆ ಯಾವುದೇ ಅಪಘಾತ ಆಗಿರಲಿಲ್ಲ. ಮೆದುಳಿಗೆ ಪೆಟ್ಟು ಬಿದ್ದಿರಲಿಲ್ಲ. ಆದರೂ ಮೆದುಳು ನಿಷ್ಕ್ರಿಯ ಆಗಿದ್ದು ಯಾಕೆ ಎನ್ನುವುದು ಇನ್ನೂ ನಿಗೂಢವಾಗಿದೆ. ವೈದ್ಯರು ಈ ಬಗ್ಗೆ ಸ್ಪಷ್ಟತೆ ಕೊಡಬೇಕಿದೆ. ಇಲ್ಲದಿದ್ದರೆ ಸಾಕಷ್ಟು ಊಹಾಪೋಹಗಳು ಶುರುವಾಗಲಿವೆ. ಒಂದು ವೇಳೆ ಮೆದುಳಿಗೆ ಪೆಟ್ಟು ಬೀಳದಿದ್ದರೂ ಮೆದುಳು ನಿಷ್ಕ್ರಿಯ ಆಗಿದೆ ಎಂದರೆ ವೈದ್ಯಲೋಕಕ್ಕೆ ಸವಾಲಿನ ಸಂಗತಿ ಎನ್ನಬಹುದು.

Related Posts

Don't Miss it !