ಹಿಂದೂ – ಮುಸಲ್ಮಾರ ನಡುವಿನ ಕೊಂಡಿಯಾಗಿದ್ದ ಇಬ್ರಾಹಿಂ ಇನ್ನಿಲ್ಲ..!

ಭಾರತದಲ್ಲಿ ಸದಾ ಕಾಲ ಹಿಂದೂ ಮುಸ್ಲಿಂ ನಡುವೆ ರಾಜಕೀಯ ಕಾಳಗವೇ ಏರ್ಪಡುತ್ತದೆ. ಮತಬ್ಯಾಂಕ್​ಗಾಗಿ ಧರ್ಮಗಳನ್ನು ಓಲೈಸುವ ಪರಿ ಅಸಹ್ಯ ಮೂಡಿಸುತ್ತದೆ. ಆದರೆ ಈ ರೀತಿಯ ವ್ಯವಸ್ಥೆಯ ನಡುವೆ ಎರಡೂ ಧರ್ಮಗಳ ನಡುವೆ ಸಾಮರಸ್ಯ ಬೆಸೆಯುವ ಕೆಲಸ ಮಾಡುವ ಸಾಕಷ್ಟು ಜನರು ನಮ್ಮ ನಡುವೆ ಇರುತ್ತಾರೆ. ಈ ರೀತಿಯ ವ್ಯಕ್ತಿತ್ವ ರೂಪಿಸಿಕೊಂಡು ಎರಡೂ ಸಮುದಾಯಗಳ ನಡುವೆ ನಡುವೆ ಸಾಮರಸ್ಯ ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಕಾಲವಾಗಿದ್ದಾರೆ. 81 ವರ್ಷ ವಯಸ್ಸಿನ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ನಿಧನರಾಗಿರುವುದು ಕರ್ನಾಟಕದ ಪಾಲಿಗೆ ತುಂಬಲಾರದ ನಷ್ಟವಾಗಿದೆ.

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ವಾಸವಾಗಿದ್ದ ಇಬ್ರಾಹಿಂ ಸುತಾರ್, ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. 2018ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರಿಂದ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಬೇನೆಯಿಂದ ಬಳಲುತ್ತಿದ್ದ ಇಬ್ರಾಹಿಂ ಸುತಾರ್​, ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸ್​ ಆಗಿದ್ದರು. ಇಂದು ಮತ್ತೆ ಹೃದಯಾಘಾತಕ್ಕೆ ಒಳಗಾದ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಚಿಕಿತ್ಸೆ ನೀಡುವ ಮೊದಲೇ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್​​ ಉಸಿರು ನಿಲ್ಲಿಸಿದ್ದರು.

ಹಿಂದೂ ಮುಸಲ್ಮಾನ ಎರಡೂ ಧರ್ಮದ ಬಗ್ಗೆ ಅಪಾರ ಜ್ಞಾನ ಸಂಪಾದಿಸಿದ್ದ ಇಬ್ರಾಹಿಂ ಸುತಾರ್​ ಅವರು, ದೇಶದ ಬಹುತೇಕ ಭಾಗಗಳಲ್ಲಿ ಪ್ರವಚನ ನೀಡಿದ್ದರು. ಈ ಮೂಲಕ ಭಾವೈಕ್ಯತೆ ಸಂದೇಶ ಸಾರುವ ಮೂಲಕ ಹೆಸರು ವಾಸಿಯಾಗಿದ್ದರು. ಹಿಂದೂ – ಮುಸ್ಲಿಮರು ಹೇಗೆ ಭಾವೈಕ್ಯತೆಯಿಂದ ಬದುಕಬೇಕು ಎನ್ನುವ ಬಗ್ಗೆ ಮಾತನಾಡುತ್ತಿದ್ದರು. ಎರಡೂ ಧರ್ಮಗಳು ಹೇಗೆ ಒಂದೇ ಉದ್ದೇಶ ಹೊಂದಿವೆ, ಧರ್ಮ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವ ಬಗ್ಗೆಯೂ ಮಾತನಾಡುತ್ತಿದ್ದ ಇಬ್ರಾಹಿಂ ಸುತಾರ್​, ಸೂಜಿಗಲ್ಲಿನ ಹಾಗೆ ಜನರನ್ನು ಸೆಳೆಯುತ್ತಿದ್ದರು. ಕನ್ನಡವನ್ನು ಅರಳು ಉರಿದಂತೆ ಮಾತನಾಡುತ್ತಿದ್ದ ಇಬ್ರಾಹಿಂ ಸುತಾರ್​, ಕನ್ನಡದ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದರು. ಬಸವಣ್ಣನ ವಚನಗಳನ್ನು ಲೀಲಾಜಾಲವಾಗಿ ಹೇಳುತ್ತಿದ್ದದ್ದು ಇಬ್ರಾಹಿಂ ಸುತಾರ್​ ಅವರ ವಿಶೇಷ ಎನ್ನಬಹುದು.

ಸೂಫಿಸಂತ ಎಂದೇ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ್ ಅವರ ಅಂತ್ಯಕ್ರಿಯೆಯನ್ನು ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯ್ತು. ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಇಬ್ರಾಹಿಂ ಸುತಾರ್​ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆದಿದೆ. ಬಾಗಲಕೋಟೆ

ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಹೊರವಲಯದ ಸುತಾರ್ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಅಂತ್ಯಕ್ರಿಯೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ಹಲವಾರು ಜನರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ಇಬ್ರಾಹಿಂ ಸುತಾರ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಮಹಲಿಂಗಪುರ ಕಾಲೇಜು ಮೈದಾನದಲ್ಲಿ ಗೌರವವಂದನೆ ಸಲ್ಲಿಸಲಾಯ್ತು. ಸುಮಾರು 3 ಕಿಲೋಮೀಟರ್ ಮೆರವಣಿಗೆ ಮೂಲಕ ಸುತಾರ್​ ಅವರ ತೋಟಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಾಯ್ತು.

Related Posts

Don't Miss it !