ವರ್ಷದಲ್ಲಿ 2ನೇ ಬಾರಿಗೆ ಅಖಾಡಕ್ಕೆ ಪಂಚಮಸಾಲಿ ಸಮುದಾಯ..! ಈ ಬಾರಿ ಸಕ್ಸಸ್​ ಆಗುತ್ತಾ..?

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಕಳೆದ ಜನವರಿಯಲ್ಲಿ ಪಾದಯಾತ್ರೆ ಮಾಡಲಾಗಿತ್ತು. ಕೂಡಲ ಸಂಗಮದಿಂದ ಆರಂಭವಾಗಿದ್ದ ಪಾದಯಾತ್ರೆ ಬೆಂಗಳೂರು ತಲುಪಿತ್ತು. ಬೃಹತ್​ ಸಮಾವೇಶ ನಡೆಸಿ ಸರ್ಕಾರಕ್ಕೆ ಮನವಿ ಕೊಡಲಾಗಿತ್ತು. ಆದ್ರೆ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಪಂಚಮಸಾಲಿ ಸಮುದಾಯದ ಕೋರಿಕೆಗೆ ಮನ್ನಣೆ ಕೊಟ್ಟಿರಲಿಲ್ಲ. ಆದರೆ ಇದೀಗ 2ನೇ ಹಂತದ ಹೋರಾಟ ಶುರುವಾಗಿದೆ. ಮಲೆಮಹದೇಶ್ವರ ಬೆಟ್ಟದಿಂದ ಪಾದಯಾತ್ರೆ ಶುರುವಾಗಿದೆ. ಈ ಬಾರಿ ಹೋರಾಟಕ್ಕೆ ಯಶಸ್ಸು ಸಿಗುವ ಎಲ್ಲಾ ಲಕ್ಷಗಳು ಕಾಣಿಸುತ್ತಿದೆ. ಇದಕ್ಕೆ ಕಾರಣ ಮಾತ್ರ ಪ್ರಬಲವಾಗಿದೆ.

ಆಗಸ್ಟ್​ 26 ರಿಂದ ಸೆಪ್ಟೆಂಬರ್​ 30ರ ತನಕ ಅಭಿಯಾನ..!

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮತ್ತೆ ಹೋರಾಟದ ಕಹಳೆ ಮೊಳಗಿಸಲಾಗಿದೆ. ಈ ಬಾರಿ ಗೌಡ ಲಿಂಗಾಯತ, ಮಲೆ ಗೌಡ ಲಿಂಗಾಯತ, ದೀಕ್ಷಾ ಲಿಂಗಾಯತ ಒಳಗೊಂಡ ಪಂಚಮಸಾಲಿ ಸಮಾಜ ಮಹದೇಶ್ವರ ಬೆಟ್ಟದಲ್ಲಿ ಪ್ರತಿಜ್ಞಾ ಪಂಚಾಯತ್ ಘೋಷ ವಾಕ್ಯದೊಂದಿಗೆ ಬೃಹತ್ ಅಭಿಯಾನ ಶುರು ಮಾಡಲಾಗಿದೆ. ಆಗಸ್ಟ್​ 26 ರಿಂದ ಸೆಪ್ಟೆಂಬರ್​ 30 ರವರೆಗೆ ರಾಜ್ಯಾದ್ಯಂತ ಅಭಿಯಾನ ಮಾಡಲಾಗ್ತಿದೆ. ಮಹದೇಶ್ವರ ಬೆಟ್ಟದಲ್ಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಹರಿಹರ ಜೆಡಿಎಸ್ ಮಾಜಿ ಶಾಸಕ ಶಿವಶಂಕರ್ ಸಾಥ್ ಕೊಟ್ಟಿದ್ದಾರೆ. ಸರ್ಕಾರಕ್ಕೆ ಕೊಟ್ಟ ಗಡುವು ಮುಗಿಯುತ್ತಿದೆ. ಹಾಗಾಗಿ ಸರ್ಕಾರಕ್ಕೆ ಎಚ್ಚರಿಸಲು ರಾಜ್ಯಾದ್ಯಂತ ಬೃಹತ್ ಅಭಿಯಾನ ಮಾಡುತ್ತಿದ್ದೇವೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯ ಬಾರದು ಎಂಬುದು ಪ್ರತಿಜ್ಞೆಯ ಉದ್ದೇಶ ಎಂದಿದ್ದಾರೆ.

ಇದನ್ನೂ ಓದಿ;

ಈಗಾಗಲೇ ಬೆಂಗಳೂರಲ್ಲಿ ಬೃಹತ್ ಹೋರಾಟ ಮಾಡಿದ್ದೇವೆ. ಈ ಹಿಂದೆ ಕಾನೂನು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಈಗ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದಾರೆ. ಅವರು ನಮಗೆ 2A ಮೀಸಲಾತಿ ಕೊಡುವ ವಿಶ್ವಾಸ ಇದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮೀಸಲಾತಿ ಶೇಕಡ 50 ಮೀರಬಾರದು. ನಾವೂ ಕೂಡ ಶೇಕಡ 50 ರೊಳಗೆ ನಮಗೆ ಮೀಸಲಾತಿ ಕಲ್ಪಿಸಿ ಎಂದಷ್ಟೇ ನಾವು ಕೇಳುತ್ತಿದ್ದೇವೆ ಎಂದಿದ್ದಾರೆ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಚುನಾವಣೆ ಬಹಳ ದೂರವಿಲ್ಲ. ಸರ್ಕಾರ ಮೀನಾ ಮೇಷ ಎಣಿಸಿದರೆ ಲಿಂಗಾಯತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ವಂತ ಪಕ್ಷಕ್ಕೆ ಎಚ್ಚರಿಸಿದ್ದಾರೆ. ಒಂದೂವರೆ ಕೋಟಿ ಪಂಚಮಸಾಲಿ ಸಮುದಾಯದ ಜನರಿದ್ದೇವೆ. ನಮ್ಮ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ;

ವಿಜಯೇಂದ್ರ ಮೇಲೆ ಗಂಭೀರ ಆರೋಪ..!

ಪಂಚಮಸಾಲಿ ಮಠದ ಜಯಮೃತ್ಯಂಜಯ ಸ್ವಾಮೀಜಿ ಬಿ.ಎಸ್​ ಯಡಿಯೂರಪ್ಪ ಅವರ ಪುತ್ರನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಬಿ.ವೈ ವಿಜಯೇಂದ್ರ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದರು. ನಮ್ಮ ಹೋರಾಟದ ಬಗ್ಗೆ ವಿಜಯೇಂದ್ರಗೆ ತಪ್ಪು ಮಾಹಿತಿ ಇತ್ತು. ವಿಜಯೇಂದ್ರ ಅವರಿಗೆ ಮೀಸಲಾತಿ ಹೋರಾಟದ ಅರಿವಿರಲಿಲ್ಲ. B.S ಯಡಿಯೂರಪ್ಪ ಸರ್ಕಾರದಿಂದ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಆಗಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಅಕ್ಟೋಬರ್​ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್​ ಸಮಾವೇಶ ನಡೆಸಿ ಮತ್ತಷ್ಟು ಕಿಚ್ಚು ಹೊತ್ತಿಸಲಾಗುವುದು ಎಂದಿದ್ದಾರೆ.

ಪಂಚಮಸಾಲಿ ಹೋರಾಟಕ್ಕೆ ಕುಲಕರ್ಣಿ ಎಂಟ್ರಿ..!

ಕಳೆದ ವಾರ ಅಷ್ಟೇ ಜೈಲಿನಿಂದ ರಿಲೀಸ್ ಆಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ಸಾಥ್​ ನೀಡಿದ್ದಾರೆ. ಹಿಂದುಳಿದ ವರ್ಗದ ನಾಯಕರ ಜೊತೆ ಮಾತಾಡುತ್ತೇನೆ. ಎಲ್ಲರ ಜೊತೆ ಸಭೆ ನಡೆಸಿ ನಾನು ಹೋರಾಟಕ್ಕೆ ಧುಮುಕುತ್ತೇನೆ ಎಂದಿದ್ದಾರೆ. ಪಂಚಮಸಾಲಿ ಹೋರಾಟಕ್ಕೆ ನನ್ನ ಬೆಂಬಲ ಇದೆ. ಶ್ರೀಗಳು ಹೋರಾಟ ಪ್ರಾರಂಭ ಮಾಡಿದ್ದಾರೆ, ಅವರ ಜೊತೆ ಸದಾ ಇರ್ತೀವಿ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗಲಿದೆ. ಕೋರ್ಟ್ ಹೇಳಿರುವ ಇತಿಮಿತಿಯಲ್ಲೇ ನಾನು ನಡೆದುಕೊಳ್ಳುತ್ತೀನಿ ಎಂದಿದ್ದಾರೆ. ಒಟ್ಟಾರೆ, ಕಳೆದ ಬಾರಿಗಿಂತಾ ಈ ಬಾರಿ ಹೋರಾಟದ ಕಿಚ್ಚು ಜೋರಾಗಿದ್ದು, 2ಎ ಮೀಸಲಾತಿ ಸಿಕ್ಕೇ ಸಿಗುವ ನಂಬಿಕೆ ಮೇಲೆ ಹೋರಾಟ ನಡೆಯುತ್ತಿದೆ.

Related Posts

Don't Miss it !