ನೋಟಿಗೆ ಬೆಲೆ ಕೊಡಲ್ಲ ಎಂದ ಮತದಾರ..! ಒಳ್ಳೆತನಕ್ಕೆ ಮಾತ್ರ ಮತ..!

ರಾಜ್ಯದಲ್ಲಿ ನಡೆದಿದ್ದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಆದರೆ ಜೆಡಿಎಸ್​ ಮಾತ್ರ ಗೆಲುವು ಸಾಧಿಸುವ ಮಾತು ಆಗಿರಲಿ, ಪೈಪೋಟಿಯಿಂದಲೂ ದೂರ ಉಳಿದಿದೆ. ಅಧಿಕಾರದಲ್ಲಿ ಇರುವ ಸರ್ಕಾರ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತದೆ ಎನ್ನುವುದು ಇಲ್ಲೀವರೆಗೂ ನಡೆದುಕೊಂಡು ಬಂದಿರುವ ಪದ್ಧತಿ. ಯಾವುದೇ ಸರ್ಕಾರ ಇದ್ದಾಗಲೂ ಉಪಚುನಾವಣೆಗಳಲ್ಲಿ ಕೋಟಿ ಕೋಟಿ ಹಣ ಸುರಿದು ಗೆದ್ದು ಬಿಡುತ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಆದರೆ ಈ ಬಾರಿ ವಿರೋಧ ಪಕ್ಷವೂ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಆಡಳಿತ ನಡೆಸುತ್ತಿರುವ ಬಿಜೆಪಿ ಏನೆಲ್ಲಾ ಕಸರತ್ತು ಮಾಡಿದರೂ ಜನರು ಅದನ್ನು ಮೀರಿ ಮತ ಚಲಾಯಿಸಿದ್ದಾರೆ ಎನ್ನುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ.

ಹಾನಗಲ್​ನಲ್ಲಿ ಕೆಲಸಗಾರನಿಗೆ ಜನರ ಮನ್ನಣೆ..!

ಹಾವೇರಿಯ ಹಾನಗಲ್​ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಬಿಜೆಪಿ ನಾಯಕ ಸಿಎಂ ಉದಾಸಿ ಕುಟುಂಬ ಹಿಡಿತ ಸಾಧಿಸಿತ್ತು. ಹಿರಿಯ ನಾಯಕರಾಗಿದ್ದ ಉದಾಸಿ ಅವರು ಗೆಲುವು ಸಾಧಿಸಿಕೊಂಡು ಬರುತ್ತಿದ್ದರು. ಅವರ ಎದುರಾಳಿಯಾಗಿ ಕಾಂಗ್ರೆಸ್​ನ ಶ್ರೀನಿವಾಸ ಮಾನೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲುಂಡಿದ್ದರು. ಆದರೆ ಸೋತರೂ ಕ್ಷೇತ್ರದ ಮೇಲಿನ ಆಸಕ್ತಿ ಕಡಿಮೆ ಮಾಡಿಕೊಳ್ಳದ ಮಾನೆ, ಕೊರೊನಾ ಸಮಯದಲ್ಲೂ ಸಾಕಷ್ಟು ಕಡೆಗಳಲ್ಲಿ ಸಹಾಯದ ಹಸ್ತ ಚಾಚಿದ್ದರು. ಕೊರೊನಾ ಭೀತಿಯ ನಡುವೆಯೂ ಬಡಜನರ ಕಷ್ಟಕ್ಕೆ ಸ್ಪಂದಿಸಿದ್ದರು. ಸಿಎಂ ಉದಾಸಿ ಅವರ ಅವರ ನಿಧನದ ಬಳಿಕ ಉಪಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರವನ್ನು ಸುತ್ತಾಡಿ ಜನರ ಮನಸ್ಸು ಗೆದ್ದಿದ್ದರು. ಕಳೆದ ಬಾರಿ ಸೋಲಿಸಿದ್ದೀರಿ. ಈ ಬಾರಿ ನನಗೆ ಅವಕಾಶ ಕೊಟ್ಟರೆ ನಿಮ್ಮ ಸೇವೆ ಮಾಡ್ತೇವೆ ಎನ್ನುವ ಮಾತನ್ನಾಡಿದ್ದರು. ಜನರು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ನಮ್ಮ ಜಿಲ್ಲೆಯವರು ಯಾವುದನ್ನೂ ನೋಡದೆ ಶ್ರೀನಿವಾಸ ಮಾನೆಯವ ಕೈ ಹಿಡಿದಿದ್ದಾರೆ. ಕಷ್ಟಕ್ಕೆ ಆದವನಿಗೆ ಮತ ನೀಡಿದ್ದಾರೆ.

ಸಿಂದಗಿಯಲ್ಲೂ ಕಾಂಗ್ರೆಸ್​ ಲೆಕ್ಕಾಚಾರ ಉಲ್ಟಾ..!

ವಿಜಯಪುರದ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್​​ಗೆ ಯಾವುದೇ ಕಾರ್ಯಕರ್ತ ಪಡೆ ಇರಲಿಲ್ಲ. ಇದೇ ಕಾರಣದಿಂದ ಜೆಡಿಎಸ್​ನಿಂದ ಶಾಸಕರಾಗಿದ್ದ ದಿವಂಗತ ಎಂ.ಸಿ ಮನಗೂಳಿ ಅವರ ಪುತ್ರ ಅಶೋಕ್​ ಮನಗೂಳಿ ಅವರನ್ನು ಸೆಳೆದಿತ್ತು. ಜೆಡಿಎಸ್​ ಕಾರ್ಯಕರ್ತರ ಬಲದ ಜೊತೆಗೆ ಕಾಂಗ್ರೆಸ್​ ಪಕ್ಷದ ಮತಗಳು ಒಟ್ಟುಗೂಡಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಜೆಡಿಎಸ್​ ಮುಸ್ಲಿಂ ಅಭ್ಯರ್ಥಿ ಹಾಕಿದ್ದರಿಂದ ಭಯಗೊಂಡ ಕಾಂಗ್ರೆಸ್​ ಜೆಡಿಎಸ್​ ವಿರುದ್ಧ ಟೀಕಾಸ್ತ್ರವನ್ನೇ ನಡೆಸಿತ್ತು. ಅಂತಿಮವಾಗಿ ಬಿಜೆಪಿಯ ರಮೇಶ್​ ಭೂಸನೂರ 30 ಸಾವಿರಕ್ಕೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಂದರೆ ಜನರು ಪಕ್ಷ ಬಿಟ್ಟು ಪಕ್ಷಕ್ಕೆ ಹೋಗಿರುವ ಅಶೋಕ್​ ಮನಗೂಳಿ ಅವರನ್ನು ತಿರಸ್ಕರಿಸಿದ್ದಾರೆ. ಎಂ.ಸಿ ಮನಗೂಳಿ ಅವರ ವಿರುದ್ಧ ಸೋಲುಂಡರೂ ಕ್ಷೇತ್ರದಲ್ಲೇ ಜನರ ಸೇವೆ ಮಾಡುತ್ತಿದ್ದ ರಮೇಶ್​ ಭೂಸನೂರು ಅವರನ್ನು ಆಯ್ಕೆ ಮಾಡಿದ್ದಾರೆ.

ಉಪಚುನಾವಣೆಯಲ್ಲಿ ಹಣ ಕೊಟ್ಟವರು ಗೆದ್ದಿದ್ದಾರಾ..? ಇಲ್ವಾ..?

The Public Spot ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮೂರೂ ಪಕ್ಷದಿಂದಲೂ ಹಣ ಕೊಟ್ಟಿದ್ದಾರೆ. ಆದರೆ ಎಷ್ಟು ಕೊಟ್ಟರು ಎನ್ನುವುದರಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅತಿಹೆಚ್ಚು ಅಂದರೆ 1 ಮತಕ್ಕೆ 1 ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆ ಎನ್ನುವುದು ಕ್ಷೇತ್ರದಲ್ಲೇ ಕೇಳಿ ಬರುತ್ತಿರುವ ಮಾತು. ಅದೇ ರೀತಿ ಕಾಂಗ್ರೆಸ್​ ಕೂಡ ತಲಾ ಒಂದು ಮತಕ್ಕೆ 500 ರೂಪಾಯಿ ಕೊಟ್ಟಿದ್ದಾರೆ ಎನ್ನುವುದನ್ನು ಸ್ವತಃ ಮತದಾರರೇ ಒಪ್ಪಿಕೊಳ್ತಾರೆ. ಇನ್ನೂ ಜೆಡಿಎಸ್​ ಅಭ್ಯರ್ಥಿಗಳ ಪರವಾಗಿ ನೂರಿನ್ನೂರು ರೂಪಾಯಿ ಮಾತ್ರ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದರೆ ಹಾವೇರಿಯ ಹಾನಗಲ್​ ಕ್ಷೇತ್ರದಲ್ಲಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಹಣ ಚೆಲ್ಲಿದರೂ ಜನರು ಮತವನ್ನು ಕೆಲಸ ಮಾಡುವ ಭರವಸೆ ಮೂಡಿಸಿರುವ ಶ್ರೀನಿವಾಸ ಮಾನೆ ಅವರನ್ನು ಆಯ್ಕೆ ಮಾಡಿದ್ದಾರೆ. ಅತ್ತ ಸಿಂದಗಿಯಲ್ಲಿ ಹಣ ಕೊಟ್ಟಿದ್ದರೂ ಕೆಲಗಾರ ಎನ್ನುವ ಕಾರಣಕ್ಕೆ ಆಯ್ಕೆ ಮಾಡಿದ್ದಾರೆ. ಹಣ ಕೊಡದಿದ್ದರೂ ಉತ್ತಮ ಕೆಲಸ ಮಾಡುವ ಆಶಯದಿಂದ ಗೆಲ್ಲಿಸಿದ್ದಾರೆ ಎನ್ನಬಹುದು. ಹಣ ಕೊಟ್ಟರೂ ಕೊಡದಿದ್ದರೂ ಉತ್ತಮ ಕೆಲಸಗಾರರನ್ನು ಆಯ್ಕೆ ಮಾಡುವ ದಿಟ್ಟತನದ ಜಾಗೃತಿ ಮೂಡುತ್ತಿದೆ ಎನ್ನಬಹುದಾಗಿದೆ.

Related Posts

Don't Miss it !