ನಾನು ಜೀವ ಉಳಿಸುವ ದೇವತೆ, ನನ್ನನ್ನೇ ಕೊಲ್ಲಲೆತ್ನಿಸಿದ ನೀವು ಧರ್ಮ ಪಾಲಕರೇ..?

ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಎರಡು ಧರ್ಮಗಳ ನಡುವೆ ಪೈಪೋಟಿ ನಡೆಯುತ್ತಿದೆ. ಮಂದಿರಗಳನ್ನು ಒಡೆದು ಹಾಕಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಎರಡೂ ಸಮುದಾಯಗಳ ನಡುವೆ ಬೇಗುದಿ ಶುರುವಾಗಿದೆ. ಇದರ ನಡುವೆ ಧರ್ಮ ರಕ್ಷಣೆ ಹೆಸರಲ್ಲಿ ಜೀವ ನೀಡುವ ದೇವರಿಗೆ ಬೆಂಕಿ ಹಾಕಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಅರಳಿ ಮರಕ್ಕೆ ಬೆಂಕಿ ಹಚ್ಚಿದ್ದು, ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲೇ ಈ ದುರ್ಘಟನೆ ನಡೆದಿದೆ. ಹಿಂದೂಗಳು ಭಕ್ತಿ ಭಾವದಿಂದ ಪೂಜೆ ಮಾಡುವ ಅರಳಿ ಮರಕ್ಕೆ ಬೆಂಕಿ ಹಚ್ಚಿರುವುದು ಕೂಡ ಹಿಂದೂಗಳು ಎಂದು ಹೇಳಿಕೊಂಡು ತಿರುಗುವ ಧರ್ಮಾಂದರು ಎನ್ನಲಾಗ್ತಿದೆ. ಇದಕ್ಕೂ ಕಾರಣ ಮುಸ್ಲಿಂ ಸಮುದಾಯದ ಮೇಲಿನ ದ್ವೇಷ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ..

ಚಿಕ್ಕಮಗಳೂರು ಎಸ್​ಪಿ ಅಕ್ಷಯ್​ ಭೇಟಿ

ಅರಳಿ ಮರ ಮಾನವನ ಜೀವವಾಯುವಿಗೆ ಎಷ್ಟು ಮುಖ್ಯ..?

ಪರಿಸರದಲ್ಲಿ ಇರುವ ಸಸ್ಯಗಳಿಂದಲೇ ಮಾನವ ಬದುಕಿದ್ದಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮನುಷ್ಯ ತನ್ನ ಅತಿಯಾದ ಆಸೆಯಿಂದ ವಾಯುಮಾಲಿನ್ಯ ಮಾಡಿದರೂ ಸಸ್ಯಗಳು ಕಾರ್ಬನ್​ ಡೈ ಆಕ್ಸೈಡ್​ ಸೇವಿಸಿ ಮಾನವನಿಗೆ ಬೇಕಿರುವ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತವೆ. ಅದೇ ರೀತಿ ಅರಳಿ ಮರ ಕೂಡ ಆಮ್ಲಜನಕ ಉತ್ಪತ್ತಿ ಮಾಡುತ್ತದೆ. ಆದರೆ ಸಣ್ಣ ಒಂದು ವ್ಯಾತ್ಯಾಸ ಎಂದರೆ ಅರಳೀ ಮರ ದಿನದ ಪ್ರತಿ ನಿಮಿಷವೂ ಆಮ್ಲಜನವನ್ನು ಉತ್ಪತ್ತಿ ಮಾಡುತ್ತದೆ ಜೊತೆಗೆ ಎಲ್ಲಾ ಗಿಡಗಳಿಗೂ ಹೋಲಿಕೆ ಮಾಡಿದಾಗ ಅರಳಿ ಮರದಲ್ಲಿ ಉತ್ಪತ್ತಿ ಆಗುವ ಆಮ್ಲಜನಕ ತುಂಬಾ ವಿಶೇಷವಾದ್ದದ್ದು. ರೋಗನಿರೋಧಕ ಶಕ್ತಿ ಜೊತೆಗೆ ರೊಗನಿವಾರಕ ಶಕ್ತಿಯೂ ಅಡಗಿದೆ ಎನ್ನುವುದು ಬಲ್ಲವರ ಮಾತು. ಇದೇ ಕಾರಣಕ್ಕೆ ಊರಿಗೊಂದು ಅರಳಿ ಕಟ್ಟೆ ನಿರ್ಮಾಣ ಮಾಡುವ ಪದ್ದತಿಯೂ ಇತ್ತು. ಆ ಕಟ್ಟೆ ಮೇಲೆ ಊರಿನ ಜನರು ಕುಳಿತು ಮಾತನಾಡುವ ಸಂಪ್ರದಾಯವೂ ಇತ್ತು. ಇದೀಗ ಆ ಅರಳೀ ಮರವನ್ನು ಧರ್ಮದ ಚೌಕಟ್ಟಿನಲ್ಲಿ ದ್ವೇಷಕ್ಕೆ ಬಳಸಲಾಗಿದೆ.

ಅರಳೀ ಮರವನ್ನು ಮುಸ್ಲಿಮರು ಪೂಜಿಸಬಾರದೇ..?

ಅರಳೀ ಮರವನ್ನು ಅಶ್ವತ್ಥ ಮರ ಎಂದೂ ಕೂಡ ಕರೆಯುತ್ತವೆ. ಈ ಅಶ್ವತ್ಥ ಮರವನ್ನು ಚಿಕ್ಕಮಗಳೂರಲ್ಲಿ ಮುಸ್ಲಿಂ ಸಮುದಾಯದವರು ಪೂಜಿಸುವ ವಾಡಿಕೆ ಈ ಹಿಂದಿನಿಂದಲೂ ಬೆಳೆದು ಬಂದಿತ್ತು. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಆದಿಶಕ್ತಿನಗರದಲ್ಲಿ ಅರಳೀ ಮರದ (ಅಶ್ವತ್ಥ ಕಟ್ಟೆ) ಬಳಿ ವರ್ಷಕ್ಕೆ ಒಮ್ಮೆ ನಡೆಯುತಿದ್ದ ಉರುಸ್ ವೇಳೆ ಪೂಜೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಮಸೀದಿಯ ಕೂಗಳತೆ ದೂರದಲ್ಲಿದ್ದ ಅರಳಿಮರಕ್ಕೆ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ ಎನ್ನುವ ಬಗ್ಗೆ ಹಿಂದೂಗಳಾದವರು ಹೆಮ್ಮೆ ಪಡುತ್ತ ಪೂಜೆಗೆ ಉತ್ತೇಜನ ನೀಡಬೇಕಿತ್ತು. ಆದರೆ ಮುಸ್ಲಿಮರು ಪೂಜಿಸುತ್ತಾರೆ ಎನ್ನುವ ಕಾರಣಕ್ಕೆ ರಾತ್ರೋರಾತ್ರಿ ದೇವರ ಕಟ್ಟೆಗೆ ಬೆಂಕಿ ಹಚ್ಚಲಾಗಿದೆ. ಕುರಾನ್, ಕಿಟ್ಟ, ಪೂಜಾ ಸಾಮಗ್ರಿ ಸೇರಿದಂತೆ ಧ್ವಜಗಳಿಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ.

ಅರಳೀ ಮರ ದೇವರು ಆಗಿದ್ದಕ್ಕೆ ವೈಜ್ಞಾನಿಕ ಕಾರಣವಿದೆ..!

ಅಶ್ವತ್ಥ ಮರ, ಅರಳಿ ಮರವನ್ನು ಮತ್ತೊಂದು ಹೆಸರಿನಿಂದಲೂ ಗುರುತಿಸುತ್ತಾರೆ. ಮಹಾನ್​ ತಪಸ್ವಿ ಬುದ್ಧನಿಗೆ ಜ್ಞಾನೋದಯ ಆಗಿದ್ದು ಬೋದಿ ವೃಕ್ಷದ ಕೆಳಗೆ ಎನ್ನುವುದು ಎಲ್ಲರೂ ಓದಿರುವ ವಿಚಾರ. ಆ ಬೋದಿ ವೃಕ್ಷ ಎನ್ನುವುದು ಕೂಡ ಅರಳಿ ಮರವನ್ನೇ ಎನ್ನುವುದು ವಿಶೇಷ. ಇನ್ನೂ ಹೆಣ್ಣು ಮಕ್ಕಳು ಮುಂಜಾನೆ ಎದ್ದು ಅರಳಿ ಮರಕ್ಕೆ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತವೆ ಎನ್ನುವುದಕ್ಕೂ ವೈಜ್ಞಾನಿಕ ಕಾರಣವಿದೆ. ಮಕ್ಕಳಾಗದೆ ಇರುವುದಕ್ಕೆ ಪ್ರಮುಖ ಕಾರಣ ದೇಹದಲ್ಲಿ ಆಗಿರಬಹುದಾದ ಸಮಸ್ಯೆಗಳು. ಬೆಳಗ್ಗೆ ಮುಂಜಾನೆ ಸೂರ್ಯ ಉದಯಿಸುವ ವೇಳೆಯಲ್ಲಿ ಸ್ವಚ್ಛ ಮತ್ತು ಔಷಧಿ ಗುಣವುಳ್ಳ ಗಾಳಿ ಸೇವಿಸಿದರೆ ದೇಹದ ಸಮಸ್ಯೆಗಳು ದೂರ ಆಗುತ್ತದೆ. ಸಮಸ್ಯೆಗಳು ದೂರ ಆದ ಬಳಿಕ ಮಕ್ಕಳಾಗುವ ಸಂಭವ ಇರುತ್ತದೆ ಎನ್ನುವುದು ನಂಬಿಕೆಯಾಗಿ ಬದಲಾಗಿದೆ. ಪರಿಸ್ಥಿತಿ ಹೀಗಿರುವಾಗ ಧರ್ಮದ ಹೆಸರಲ್ಲಿ ಅರಳಿ ಮರದ ಬುಡಕ್ಕೆ ಒಣ ಮರದ ತುಂಡನ್ನು ಹಾಕಿ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಬಂಧಿಸಿ 500 ಗಿಡಗಳನ್ನು 10 ವರ್ಷ ಸಾಕುವ ಶಿಕ್ಷೆ ನೀಡಬೇಕಿದೆ. ಏನಂತೀರಿ..?

Related Posts

Don't Miss it !