ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ, ಪೊಲೀಸಪ್ಪನಿಗೆ 20 ವರ್ಷ ಜೈಲು ಶಿಕ್ಷೆ..!

ಬೇಲಿಯೇ ಎದ್ದು ಹೊಲ ಮೇಯ್ದ ರೀತಿ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ ಪೊಲೀಸ್​​ಗೆ ತುಮಕೂರು 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಪಾರಾಧ ತಡೆಯಬೇಕಿದ್ದ ಎಎಸ್​ಐ ಒಬ್ಬರು ಅಪರಾಧ ಮಾಡಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸತತ 5 ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಜನವರಿ 29ರಂದು ಎಎಸ್​ಐ ಉಮೇಶಯ್ಯ ಅಪರಾಧಿ ಎಂದು ಆದೇಶ ಹೊರಡಿಸಲಾಗಿತ್ತು.ಜನವರಿ 31 ರಂದು ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದು, ಬರೋಬ್ಬರಿ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಹಾಗು 1 ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ಕೋರ್ಟ್​ ಆದೇಶ ಹೊರಡಿಸಿದೆ. ಈ ಪರಿಹಾರದ ಹಣವನ್ನು ಮೇಲ್ಮನವಿ ವಾಯಿದೆ ಮುಗಿದ ಬಳಿಕ ಸಂತ್ರಸ್ತೆಗೆ ಹಸ್ತಾಂತರ ಮಾಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖ ಮಾಡಿದ್ದಾರೆ. ಕಾನೂನು ಪಾಲಕನೇ ಕಾರಾಗೃಹ ಸೇರುವಂತಾಗಿದೆ.

ಇದನ್ನೂ ಓದಿ: ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇರಲು ನಾಲ್ಕು ಕಾರಣಗಳು.. ಇಲ್ಲಿವೆ ನೋಡಿ..!!

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಮಾಡಿದ್ಹೇಗೆ..?

2017ರ ಜನವರಿ 15 ರಂದು ತುಮಕೂರಿನ ಬುದ್ಧಿಮಾಂದ್ಯ ಯುವತಿ ತಮ್ಮ ಮನೆಯಿಂದ ಕೋಡಿ ಸರ್ಕಲ್​ನ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲೇ ಕುಸಿದು ಬಿದ್ದಿದ್ದ ಯುವತಿ ಪ್ರಜ್ಞೆತಪ್ಪಿದ್ದಳು. ಆ ಬಳಿಕ ಆಕೆ ಮಧ್ಯರಾತ್ರಿ ಎಚ್ಚರಗೊಂಡು, ತಮ್ಮ ಮನೆಗೆ ಹೋಗುವ ರಸ್ತೆಯನ್ನು ಬಿಟ್ಟು ಬೇರೊಂದು ಮಾರ್ಗದಲ್ಲಿ ನಡೆದುಕೊಂಡು ಹೋಗ್ತಿದ್ದಳು. ರಾತ್ರಿಪಾಳಿ ಕರ್ತವ್ಯದಲ್ಲಿದ್ದ ತುಮಕೂರು ಗ್ರಾಮಾಂತರ ಠಾಣೆಯ ಎಎಸ್ಐ ಉಮೇಶಯ್ಯ, ಒಬ್ಬಂಟಿಯಾಗಿ ನಡೆದುಕೊಂಡು ಹೋಗ್ತಿದ್ದ ಯುವತಿಯನ್ನ ಮನೆಗೆ ಡ್ರಾಪ್ ಕೊಡುವುದಾಗಿ ಹೇಳಿ ಬೊಲೇರೋ ಜೀಪ್​ಗೆ ಹತ್ತಿಸಿಕೊಂಡಿದ್ದರು. ಯುವತಿಯನ್ನ ಬೆಳಗಿನ ಜಾವದ ತನಕ ತುಮಕೂರಿನಲ್ಲಿ ಸುತ್ತಾಡಿಸಿ, ಅತ್ಯಾಚಾರ ನಡೆಸಿ ಬೆಳಗಿನ ಜಾವ ನೃಪತುಂಗ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಮನೆಗೆ ಹೋಗಿದ್ದ ಯುವತಿ ರಾತ್ರಿ ನಡೆದ ಸಂಪೂರ್ಣ ಘಟನೆಯನ್ನು ಕುಟುಂಬಸ್ಥರ ಜೊತೆಗೆ ವಿವರಿಸಿದ್ದಳು. ಕೂಡಲೇ ಮಹಿಳಾ ಠಾಣೆಗೆ ದೂರು ದಾಖಲು ಮಾಡಲಾಗಿತ್ತು.

ಅತ್ಯಾಚಾರಕ್ಕೆ ಸಾಥ್​ ಕೊಟ್ಟಿದ್ದ ಚಾಲಕ ನಿರಪರಾಧಿ..!

ಜನವರಿ 15, 2017ರಂದು ರಾತ್ರಿ ಪಾಳಿಯಲ್ಲಿ ಎಎಸ್​ಐ ಜೊತೆಗಿದ್ದ ಚಾಲಕನನ್ನೂ ಅರೆಸ್ಟ್​ ಮಾಡಲಾಗಿತ್ತು. ಅತ್ಯಾಚಾರ ನಡೆದ ವೇಳೆ ಜೀಪ್​ ಚಾಲನೆ ಮಾಡುತ್ತಿದ್ದು, ಘಟನೆ ಬಳಿಕ ಮೇಲಾಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ ಎಂದು ಚಾಲಕನ ಮೇಲೆ ಆರೋಪಿಸಲಾಗಿತ್ತು. ಆದರೆ ಕಳೆದ 5 ವರ್ಷದಿಂದ ಜೈಲಿನಲ್ಲೇ ಇದ್ದ ಪೊಲೀಸ್​ ಜೀಪ್​ ಚಾಲಕನಿಗೆ ಜನವರಿ 21ರಂದು ಬಿಡುಗಡೆ ಭಾಗ್ಯ ದೊರಕಿದೆ. ಒಂದು ವೇಳೆ ನೀನು ಘಟನೆ ಬಗ್ಗೆ ಬಾಯ್ಬಿಟ್ಟರೆ, ನಿನ್ನ ಮೇಲೆ ರಿಪೋರ್ಟ್​ ಹಾಕಿ ಕೆಲಸ ಕಳೆದುಕೊಳ್ಳುವಂತೆ ಮಾಡ್ತೇನೆ ಎಂದು ಎಎಸ್​ಐ ಉಮೇಶಯ್ಯ ಹೆದರಿಸಿದ್ದರು ಎನ್ನಲಾಗಿದೆ. ಮೇಲಾಧಿಕಾರಿ ಆಗಿದ್ದ ಉಮೇಶಯ್ಯನ ಮಾತಿನಿಂದ ಹೆದರಿದ್ದ ಚಾಲಕ ಯಾರಿಗೂ ಮಾಹಿತಿ ನೀಡಿರಲಿಲ್ಲ ಎನ್ನುವುದು ಸಾಬೀತಾಗಿದೆ. ಹೀಗಾಗಿ 5 ವರ್ಷದ ವಿಚಾರಣೆ ಬಳಿಕ ನಿರಪರಾಧಿ ಎಂದು ಸಾಬೀತಾಗಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಸರ್ಕಾರಿ ಅಭಿಯೋಜಕಿ ಕವಿತಾ

ಸರ್ಕಾರಿ ಅಭಿಯೋಜಕಿ ಸಾಕ್ಷ್ಯ ಸಂಗ್ರಹ ಸಾಹಸ..!

ಈ ರೀತಿಯ ಪ್ರಕರಣಗಳಲ್ಲಿ ಪೊಲೀಸರು ಶಿಕ್ಷೆ ಒಳಗಾಗುವುದು ಬಹುತೇಕ ಕಡಿಮೆ. ಪೊಲೀಸರ ವಿರುದ್ಧ ದೂರುಗಳು ಬಂದಾಗ ಕೇಸ್ ಮುಚ್ಚಿ ಹೋಗುವ ಸಾಧ್ಯತೆ ಹೆಚ್ಚು. ಆದರೆ ಅಂದು ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಅಂದಿನ ಎಸ್​ಪಿ ಆಗಿದ್ದ ಇಷಾ ಪಂತ್​, ಸೂಕ್ತ ತನಿಖೆಗೆ ಆದೇಶ ನೀಡಿದ್ದರು. ಆ ಬಳಿಕ ಸರ್ಕಾರಿ ಅಭಿಯೋಜಕಿ ಆಗಿದ್ದ ವಿ.ಎ ಕವಿತಾ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿ ಸೂಕ್ತ ವಾದ ಮಂಡನೆ ಮಾಡಿದ್ದರು. ಸಮಾಜದಲ್ಲಿ ರಕ್ಷಕನಾಗಬೇಕಿದ್ದ ಆರಕ್ಷನೇ ಭಕ್ಷಕನಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ H.S ಮಲ್ಲಿಕಾರ್ಜುನ ಸ್ವಾಮಿ ಕಠಿಣ ಶಿಕ್ಷೆಯನ್ನೇ ನೀಡಿದ್ದಾರೆ. ಈಗಾಗಲೇ 5 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಎಎಸ್​ಐ ಉಮೇಶಯ್ಯ, ಇನ್ನೂ 15 ವರ್ಷಗಳ ಕಾಲ ಕಂಬಿ ಹಿಂದೆ ಕಳೆಯಬೇಕಿದೆ. ಆದರೆ ಈಗಾಗಲೇ 60 ವರ್ಷ ಪೂರೈಸಿರುವ ಉಮೇಶಯ್ಯ ಹೈಕೋರ್ಟ್​ ಮೆಟ್ಟಿಲೇರಿದ್ರೆ ಶಿಕ್ಷೆ ಪ್ರಮಾಣ ಕಡಿಮೆ ಆಗಬಹುದು ಅಥವಾ ಮತ್ತಷ್ಟು ಕಠಿಣ ಶಿಕ್ಷೆ ಕೊಟ್ಟರೂ ಅಚ್ಚರಿಯಿಲ್ಲ. ಇನ್ನೂ ಉಮೇಶಯ್ಯ ಮಕ್ಕಳು ಹಾಗೂ ಪತ್ನಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ಜೀವನ ಕಗ್ಗತ್ತಲೆಗೆ ತಳ್ಳಿದಂತಾಗಿದೆ.

Related Posts

Don't Miss it !