ರಾಜಕಾರಣಿಗಳಿಗೆ ರೈತರ ಬಗ್ಗೆ ಕಾಳಜಿ ಇಷ್ಟೆನಾ..? ಒಬ್ಬರೂ ಈ ಬಗ್ಗೆ ಮಾತನಾಡ್ತಿಲ್ಲ ಯಾಕೆ..?

ರಾಜ್ಯ ಹಾಗೂ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ ನಾವು ರೈತರ ಪರವಾಗಿ ಆಡಳಿತ ನಡೆಸುತ್ತೇವೆ. ರೈತರಿಗೆ ಅನ್ಯಾಯವಾಗಲು ಬಿಡೋದಿಲ್ಲ ಎನ್ನುತ್ತಾರೆ. ರೈತರಿಗಾಗಿ ಕೆಲವೊಂದು ತೋರಿಕೆ ಕೆಲಸ ಮಾಡ್ತಾರೆ. ಆದರೆ ರೈತರ ಮೇಲಿನ ದಬ್ಬಾಳಿಕೆಗಳೇ ಹೆಚ್ಚಾಗಿರುತ್ತವೆ. ಇಲ್ಲೊಂದು ಪ್ರಕರಣ ಬೆಳಕಿಗೆ ಬಂದು 30 ದಿನಗಳೇ ಕಳೆದು ಹೋಗುತ್ತಿವೆ. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದರೂ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷದ ಯಾರೊಬ್ಬ ನಾಯಕರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ರೈತರ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಲಂಪಟಕೋರರ ಬಗ್ಗೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಕೃಷಿ ಅಧಿಕಾರಿಗಳು, ತಹಶೀಲ್ದಾರ್​ ತನಕ ರೈತರು ದೂರು ಕೊಟ್ಟರೂ ಎಲ್ಲವೂ ಒಳಗೊಳಗೆ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ.

ರೈತರಿಗೆ ದೋಖಾ ನಡೆದಿರೋದು ಎಲ್ಲಿ..? ಗೊತ್ತಾಗಿದ್ದು ಹೇಗೆ..?

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಡೋಣಿ ಗ್ರಾಮದ ರೈತನ ಹೆಸರಿನಲ್ಲಿ ನಕಲಿ ವಿಮೆ ಕಂತು ಜಮೆಯಾಗಿತ್ತು. ರೈತ ಬಸಯ್ಯ ಗ್ವಾಲಗೇರಿಮಠ ಈ ಬಾರಿಯ ಮುಂಗಾರಿನಲ್ಲಿ ವಿಮೆ ಮಾಡಿಸುವ ಗೋಜಿಗೆ ಹೋಗಿರಲಿಲ್ಲ. ಗೋವಿನ ಜೋಳ ಬೆಳೆದಿದ್ದ ರೈತನಿಗೆ ವಿಮೆ ಸೌಲಭ್ಯ ರೈತರಿಗೆ ಸಹಕಾರಿ ಆಗುತ್ತದೆ ಎಂದು ಸಂಬಂಧಿಕರು ಹೇಳಿದ್ದರು. ಸಂಬಂಧಿಕರ ಮಾತಿನಿಂದ ಪ್ರೇರೇಪಣೆಗೊಂಡ ರೈತ ಬಸಯ್ಯ ವಿಮೆ ಮಾಡಿಸುವ ಉದ್ದೇಶದಿಂದ ಏಜೆಂಟ್​ ಬಳಿ ಹೋಗಿ ವಿಚಾರಿಸಿದ್ದಾರೆ. ಆದರೆ ಅಷ್ಟರಲ್ಲಿ ಈಗಾಗಲೇ ಬೆಳೆ ವಿಮೆ ಕಂತನ್ನು ಕಟ್ಟಲಾಗಿದೆ. ಅಪ್ರೂವಲ್​ ಕೂಡ ಆಗಿದೆ ಎನ್ನುವ ಉತ್ತರ ಬಂದಿದೆ. ಆದರೆ ಬೆಳೆದಿರುವ ಬೆಳೆ ಕಾಲಂನಲ್ಲಿ ಕೆಂಪು ಮೆಣಸಿನಕಾಯಿ ಎಂದು ಬರೆಯಲಾಗಿದೆ. ಆದರೆ ನಿಜವಾಗಿಯೂ ಬಸಯ್ಯ ಗ್ವಾಲಗೇರಿಮಠ ಗೋವಿನ ಜೋಳ ಬೆಳೆದಿದ್ದರು. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಡಿಸೆಂಬರ್​ 9 ರಂದು ಲಿಖಿತವಾಗಿ ದೂರು ಸಲ್ಲಿಸಿದ್ದರು.

Read This;

ಕೃಷಿ ಸಚಿವರು ಉ.ಕರ್ನಾಟಕ, ಕೇಂದ್ರ ಕೃಷಿ ಸಚಿವೆ ಕರ್ನಾಟಕ..!

ಬೆಳೆ ನಷ್ಟ ತುಂಬಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಫಸಲ್​ ಭೀಮಾ ಯೋಜನೆಯನ್ನು ಜಾರಿ ಮಾಡಿದೆ. ರೈತರು ಬೆಳೆದ ಬೆಳೆ ಪ್ರಕೃತಿ ವಿಕೋಪ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ನಷ್ಟವಾದಾಗ ರೈತನಿಗೆ ನಷ್ಟ ಆಗಬಾರದು ಎನ್ನುವ ಸದುದ್ದೇಶ ಈ ಯೋಜನೆಯ ಹಿಂದಿನ ಪ್ರಮುಖ ಉದ್ದೇಶ. ಆದರೆ ಈ ಯೋಜನೆಯಲ್ಲಿ ಹಣ ಕಟ್ಟಿದ ಎಲ್ಲಾ ರೈತರಿಗೂ ವಿಮೆ ಹಣ ಪರಿಹಾರ ರೂಪದಲ್ಲಿ ತುಂಬಿಕೊಡುತ್ತಿದೆಯಾ ಎನ್ನುವುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ಕಳೆದ ಮೂರ್ನಾಲ್ಕು ವರ್ಷದಿಂದ ಯಾರಿಗೂ ವಿಮೆ ಹಣ ಬಂದಿಲ್ಲ. ಹತ್ತಾರು ಬಾರಿ ಮನವಿ ಕೊಟ್ಟರೂ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಪರಿಸ್ಥಿತಿ ಹೀಗಿದ್ದರೂ ಬೇರೊಬ್ಬರ ಹೆಸರಲ್ಲಿ ವಿಮೆ ಕಂತನ್ನು ಹೇಗೆ ಕಟ್ಟಲು ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ ಜನರಲ್ಲೂ ಸೃಷ್ಟಿಯಾಗುತ್ತದೆ. ಅದಕ್ಕೆ ಉತ್ತರ ಬೇಕಾದ ವ್ಯಕ್ತಿಗಳ ಖಾತೆಗೆ ಹಣ ಸರಳವಾಗಿ ಜಮೆಯಾಗುತ್ತದೆ. ಅದಕ್ಕಾಗಿ ಕೆಳಗಿನಿಂದ ಮೇಲಿನ ತನಕ ಇರುವ ಎಲ್ಲರಿಗೂ ಸಲ್ಲಬೇಕಾದ ಹಣ ಸಂದಾಯ ಆಗುತ್ತದೆ ಎನ್ನುವುದು ಇದರ ಹಿಂದಿನ ಮರ್ಮ.

Also Read;

ಅಧಿಕಾರಿಗಳೇ ಕುಮ್ಮಕ್ಕು ಕೊಡುವ ಅವ್ಯವಹಾರದ ರೂವಾರಿಗಳು..!

ACB ದಾಳಿಯಲ್ಲಿ ಸಿಕ್ಕಿಬಿದ್ದ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಟಿಎಸ್ ರುದ್ರೇಶಪ್ಪ ಅವರು ಗದಗ ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ. ಇನ್ನೂ ಬಸಯ್ಯ ಗ್ವಾಲಗೇರಿಮಠ ಅವರ ಜಮೀನಿಗೆ ವಿಮೆ ಹಣ ಕಟ್ಟಿದ್ದ ಹೆಸರು ಉಮಾ ಮಂಜುನಾಥ್​ ಜಗಟಗೇರಿ ಎಂಬುವರ ಹೆಸರಿನಲ್ಲಿ ಸಲ್ಲಿಕೆಯಾಗಿದೆ. 15, 831.36 ರೂಪಾಯಿ ವಿಮೆ ಜಮಾ ಆಗಿದ್ದು, ಇದರ ಹಿಂದಿನ ರೂವಾರಿ ವಿರೇಶ ಹಿರೇಮಠ ಎನ್ನಲಾಗ್ತಿದೆ. ಫೋಟೋ ಸ್ಟುಡಿಯೋ ಹಾಗೂ ಸೈಬರ್​ ಸೆಂಟರ್​ ನಡೆಸುವ ಈತ ತನ್ನ ಅಕ್ಕನ ಹೆಸರಿನಲ್ಲಿ ವಿಮೆ ಪಾವತಿ ಮಾಡಿದ್ದಾನೆ ಎನ್ನಲಾಗಿದೆ. ಇದನ್ನು ಇಲ್ಲಿಗೆ ಮುಗಿಸೋಣ, ಏನೋ ಹುಡುಗ ತಪ್ಪು ಮಾಡಿದ್ದಾನೆ ಎಂದು ರೈತನ ಮನವೊಲಿಸಿ ಕೇಸ್​ ವಾಪಸ್​ ಪಡೆಯುವಂತೆ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಪ್ರಕರಣ ಅಷ್ಟೊಂದು ಸಣ್ಣದಾಗಿಲ್ಲ ಎನ್ನುವುದನ್ನು ಹಿರಿಯ ಅಧಿಕಾರಿಗಳು ಗಮನಿಸಬೇಕಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು GPS ಮಾಡುವ ಗ್ರಾಮ ಲೆಕ್ಕಿಗ ಕೂಡ ಇದರಲ್ಲಿ ಪಾಲುದಾರ ಆಗಿರುತ್ತಾನೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದರ ನಡುವೆ ವಿಮಾ ಕಂಪನಿಗಳೂ ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾಜಕಾರಣಿಗಳಿಗೆ ಈ ಬಗ್ಗೆ ಯಾವುದೇ ಗಮನವಿಲ್ಲ, ಅದರಲ್ಲೂ ರಾಜ್ಯ ಹಾಗೂ ಕೇಂದ್ರದ ಕೃಷಿ ಸಚಿವರಿಗೆ ಈ ಬಗ್ಗೆ ಗಮನಹರಿಸಲು ಸಮಯವಿಲ್ಲ ಎನ್ನುವುದಕ್ಕಿಂತ ಮನಸ್ಸಿಲ್ಲ ಎನ್ನಬಹುದು.

Related Posts

Don't Miss it !