ನಟ ಪುನೀತ್​ ಸಾವಿನ ವಿಚಾರವಾಗಿ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಗಳು..!

ನಟ ಪುನೀತ್​ ರಾಜ್​ಕುಮಾರ್​ ಸಾವನ್ನಪ್ಪಿದ್ದಾರೆ. ಆದರೆ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಕಾಡುವುದಕ್ಕೆ ಶುರುವಾಗಿದೆ. ಪುನೀತ್​ ಕೊನೆಕ್ಷಣದಲ್ಲಿ ಜೊತೆಯಲ್ಲಿ ಇದ್ದವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಪುನೀತ್​ ರಾಜ್​ಕುಮಾರ್​ ಸಾವು ಸಂಭವಿಸಿದ್ದು ಯಾಕೆ..? ಎನ್ನುವ ಪ್ರಶ್ನೆ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದವರಿಗೆ ಎದುರಾಗ್ತಿದೆ. ಮನೆಯಿಂದ ಹೊರಟ ಪುನೀತ್ ರಾಜ್‍ಕುಮಾರ್ ಬಳಲಿಕೆ ಇಲ್ಲದೆ ನಡೆದುಕೊಂಡು ಹೋಗಿರುವ ದೃಶ್ಯ ಬಿಡುಗಡೆ ಆಗಿದೆ. ಇನ್ನೂ ಪಕ್ಕದ ರಸ್ತೆಯ ರಮಶ್ರೀ ಕ್ಲೀನಿಕ್ ತಲುಪಲು ಕೆಲವೇ ನಿಮಿಷಗಳು ಸಾಕಿತ್ತು. ಆದರೂ ಸಾವಿನ ಮನೆ ಸೇರಿದ್ದು ಯಾಕೆ..? ಎನ್ನುವ ಪ್ರಶ್ನೆ ಅಭಿಮಾನಿಗಳು ಚಡಪಡಿಸುವಂತೆ ಮಾಡಿದೆ.

ಡಾ ರಮಣರಾವ್​ ಕ್ಲಿನಿಕ್​ನಲ್ಲಿ ದಾರಿ ತಪ್ಪಿದ್ಯಾಕೆ..?

ಡಾ ರಾಜ್​ಕುಮಾರ್​ ಕಾಲದಿಂದಲೂ ಡಾ ರಮಣರಾವ್​ ಕುಟುಂಬ ವೈದ್ಯರಾಗಿ ಆರೋಗ್ಯ ನೋಡಿಕೊಳ್ತಿದ್ದಾರೆ. ಆದರೆ ರಮಣಶ್ರೀ ಕ್ಲೀನಿಕ್​ನಲ್ಲಿ ಏನಾಯ್ತು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬಂದಿಲ್ಲ. ಅಲ್ಲಿನ ಸಿಸಿಟಿವಿ ದೃಶ್ಯಗಳೂ ಸಹ ಇಲ್ಲೀವರೆಗೂ ಹೊರಗೆ ಬಂದಿಲ್ಲ. ಆದರೆ ಡಾ ರಮಣರಾವ್​ ಹೇಳುವ ಪ್ರಕಾರ, ಪುನೀತ್​ ರಾಜ್​ ಕುಮಾರ್​ ಅವರ ಆರೋಗ್ಯ ತಪಾಸಣೆ ಮಾಡಿದಾಗ ಹೃದಯ ಸಮಸ್ಯೆ ಇರುವುದು ಪತ್ತೆಯಾಯ್ತು. ಕೂಡಲೇ ನಾವು ವಿಕ್ರಂ ಆಸ್ಪತ್ರೆಗೆ ಪುನೀತ್​ ಅವರ ಕಾರಿನಲ್ಲೇ ಹೊರೆಟೆವು ಎಂದಿದ್ದಾರೆ. ಆದರೆ ಹೃದಯ ಸಮಸ್ಯೆ ಎಂದು ಗೊತ್ತಾದ ಬಳಿಕ ಆಂಬ್ಯುಲೆನ್ಸ್​ ಇಲ್ಲದೆ ವಿಕ್ರಂ ಆಸ್ಪತ್ರೆಗೆ ಹೋಗಿದ್ದು ಯಾಕೆ..? ಪಕ್ಕದಲ್ಲೇ ಸುಮಾರು 2 ಕಿಲೋ ಮೀಟರ್​ ದೂರದಲ್ಲಿ ಎಂ.ಎಸ್​ ರಾಮಯ್ಯ ಆಸ್ಪತ್ರೆ ಇತ್ತಲ್ಲವೇ..? 6 ಕಿಲೋ ಮೀಟರ್​ ದೂರದ ವಿಕ್ರಂ ಆಸ್ಪತ್ರೆ ಆಯ್ಕೆ ಮಾಡಿದ್ದು ಯಾಕೆ..? ಹೃದಯ ಸಮಸ್ಯೆ ಕಾಣಿಸಿಕೊಂಡಾಗ ಹತ್ತಿರದ ಆಸ್ಪತ್ರೆಗೆ ಹೋಗುವುದು ಸೂಕ್ತ ಎಂದು ವೈದ್ಯರೇ ದಾರಿತಪ್ಪಿದ್ದು ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದಾಗಿದೆ.

ಜಿಮ್​ಗೆ ಹೋಗಿರಲಿಲ್ಲ ಎಂದಿದ್ದಾರೆ ಗನ್​ ಮ್ಯಾನ್​..!

ಡಾ ರಮಣರಾವ್​ ಮಾಧ್ಯಮದೊಂದಿಗೆ ಮಾತನಾಡುವಾಗ ಪುನೀತ್​ಗೆ ಮಾಡಿದ್ದ ಇಸಿಜಿಯಲ್ಲಿ ಸಮಸ್ಯೆ ಇತ್ತು. ಹೆಚ್ಚಾಗಿ ಬೆವರುತ್ತಿದ್ದರು, ನಾನು ಕೇಳಿದಾಗ ಜಿಮ್​ನಿಂದ ಬಂದಾಗ ನಾನು ಸಾಮಾನ್ಯವಾಗಿ ಬೆವರುತ್ತೇನೆ ನಾರ್ಮಲ್​ ಎಂದರು ಎಂದಿದ್ದಾರೆ. ಆದರೆ ಪುನೀತ್​ ರಾಜ್​ಕುಮಾರ್​ ಜೊತೆಗೆ ಕಳೆದ 9 ವರ್ಷಗಳಿಂದ ಗನ್​ಮ್ಯಾನ್​ ಆಗಿದ್ದ ಛಲಪತಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಯಜಮಾನರು ಸುಸ್ತು ಎನ್ನುವ ಕಾರಣಕ್ಕೆ ಜಿಮ್​ಗೂ ಹೋಗಿರಲಿಲ್ಲ. ನಾನು 10 ಗಂಟೆಗೆ ಬಂದ ಕೆಲವು ಸಮಯಕ್ಕೆ ಕಾರಿನಲ್ಲಿ ಹೊರಟರು. ನೀವಿಲ್ಲೇ ಇರಿ ಬರ್ಈವಿ ಎಂದಿದ್ದು ಅಷ್ಟೆ. ಮತ್ತೆ ಬರಲೇ ಇಲ್ಲ ಎಂದು ಕಣ್ಣೀರು ಹಾಕುತ್ತಾರೆ. ಇನ್ನೊಂದು ವಿಚಾರವನ್ನು ಛಲಪತಿ ಹೇಳಿದ್ದು, ರಮಣಶ್ರೀ ಕ್ಲಿನಿಕ್​ನಲ್ಲಿ ಪುನೀತ್​ ಬಿದ್ದು ಬಿಟ್ಟಿದ್ದು, ಕೂಡಲೇ ಬರುವಂತೆ ನಮಗೆ ತಿಳಿಸಲಾಯ್ತು. ನಾನು ಎಲ್ಲಾ ಕಡೆ ಟ್ರಾಫಿಕ್​ ಕ್ಲಿಯರ್​ ಮಾಡ್ಕೊಂಡು ವಿಕ್ರಂ ಆಸ್ಪತ್ರೆಗೆ ಹೋಗುವ ಹೊತ್ತಿಗೆ ಅಶ್ವಿನಿ ಮೇಡಂ ಅವರ ಮಡಿಲಲ್ಲಿ ಯಜಮಾನರು ಮಲಗಿದ್ರು. ಅಲ್ಲೀವರೆಗೂ ಅನಾರೋಗ್ಯದ ಬಗ್ಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಸಿಗುವುದು ಎಂದು..?

ಇನ್ನೂ ವಿಕ್ರಂ ಆಸ್ಪತ್ರೆ ವೈದ್ಯರು ಪುನೀತ್​ ನಿಧನದ ವಿಚಾರ ಘೋಷಣೆ ಮಾಡುವ ವೇಳೆ 3 ಗಂಟೆಗಳ ಕಾಲ ಸತತ ಪ್ರಯತ್ನ ಮಾಡಿದೆವು. ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು. ಆದರೆ ಛಲಪತಿ ಅವರ ಪ್ರಕಾರ ಆಸ್ಪತ್ರೆ ತಲುಪುವ 15 ನಿಮಿಷಗಳ ಮುಂಚೆಯೇ ಯಜಮಾನರ ಪ್ರಾಣ ಹೊರಟು ಹೋಗಿತ್ತು ಎಂದು ವೈದ್ಯರು ತಿಳಿಸಿದ್ರು ಎಂದಿದ್ದಾರೆ. ಕಾರ್ಡಿಯಾಕ್​ ಅರೆಸ್ಟ್​ ಆದ ಬಳಿಕ ಯಾರೊಬ್ಬರೂ ಉಳಿಸಿಕೊಳ್ಳುವುದು ಕಷ್ಟ ಎಂದು ವೈದ್ಯರೇ ಹೇಳುತ್ತಾರೆ. ಅದರ ನಡುವೆ ನಡೆದಿರುವ ಕೆಲವೊಂದು ಸಂಗತಿಗಳು ಅಭಿಮಾನಿಗಳ ಮನಸ್ಸಿನಲ್ಲಿ ಕೊರೆಯುತ್ತಿದೆ. ಆದರೆ ಇದಕ್ಕೆಲ್ಲಾ ಉತ್ತರವಾಗಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​ ಕಾಣಿಸುತ್ತಾರೆ. ಎಲ್ಲಾ ಸತ್ಯವನ್ನು ಬಲ್ಲವರಾಗಿದ್ದಾರೆ ಅಶ್ವಿನಿ. ಮುಂದೊಂದು ದಿನ ತನ್ನೆಲ್ಲಾ ನೋವುಗಳನ್ನು ಅಭಿಮಾನಿಗಳ ಎದುರು ಹಂಚಿಕೊಳ್ಳುವ ಸಾಧ್ಯತೆ ಇದೆ. ಅಲ್ಲೀವರೆಗೂ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಸಿಗಲಾರದು.

Related Posts

Don't Miss it !