ರಾತ್ರೋರಾತ್ರಿ ದೇಶಕ್ಕೆ ಪ್ರಧಾನಿ ಮೋದಿ ಕೊಟ್ಟ ‘ಓಮೈಕ್ರಾನ್​’ ಸಂದೇಶ ಏನು..?

ದೇಶದಲ್ಲಿ ಓಮೈಕ್ರಾನ್​ ಸೋಂಕು ಹೆಚ್ಚಾಗ್ತಿದ್ದು, ಕೇವಲ ಮೂರು ದಿನಗಳಲ್ಲಿ ದುಪ್ಪಟ್ಟು ಆಗುತ್ತಾ ಸಾಗುತ್ತದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಇದರ ಜೊತೆಗೆ ಓಮೈಕ್ರಾನ್​ ಸೋಂಕು ಹೆಚ್ಚಳ ಆಗಿರುವ, ಕರ್ನಾಟಕ ಸೇರಿದಂತೆ 10 ರಾಜ್ಯಗಳಿಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಕಳುಹಿಸಲು ನಿರ್ಧಾರ ಮಾಡಿದೆ. ಇಷ್ಟು ಸಾಲದು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ 9.45ರ ಸುಮಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ಓಮಕ್ರಾನ್​ ಎಂಬ ಪೆಡಂಭೂತದ ಹೊಡೆತಕ್ಕೆ ಸಿಲುಕುವ ಸಾಧ್ಯತೆ ಬಗ್ಗೆ ಪರೋಕ್ಷವಾಗಿ ಜನರನ್ನು ಎಚ್ಚರಿಸಿದ್ರು. ಭಾರತ ಸೇರಿದಂತೆ ವಿಶ್ವಾದ್ಯಂತ ಕೊರೊನಾ ಸೋಂಕು ನಿವಾರಣೆ ಆಗಿಲ್ಲ. ಕೊರೊನಾ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳುವುದೇ ನಮಗಿರುವ ಮೊದಲ ಅಸ್ತ್ರ ಎಂಬ ಸಂದೇಶವನ್ನು ನೀಡಿದ್ದಾರೆ. ಜೊತೆಗೆ ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ದಾಟಿದ ಅಥವಾ ರೋಗ ಪೀಡಿತ ಆಗಿರುವ ಜನರಿಗೂ ಮತ್ತೊಂದು ಡೋಸ್​ ಲಸಿಕೆ ಘೋಷಣೆ ಮಾಡಿದ್ದಾರೆ.

ಮಕ್ಕಳಿಗೆ, ಫ್ರಂಟ್​ಲೈನ್​ ವಾರಿಯರ್ಸ್​, ವೃದ್ಧರಿಗೂ ಲಸಿಕೆ..!

ಫೆಬ್ರವರಿ ಮೊದಲ ವಾರದಲ್ಲಿ 3ನೇ ಅಲೆಯ ರೂಪದಲ್ಲಿ ಓಮೈಕ್ರಾನ್​ ಸೋಂಕಿನ ಅಬ್ಬರ ಶುರುವಾಗಲಿದೆ ಅನ್ನೋದು ತಜ್ಞರ ಮಾತು. ಕರ್ನಾಟಕದಲ್ಲಿ ಇದೂವರೆಗೂ 39 ಜನರಲ್ಲಿ ಓಮೈಕ್ರಾನ್​ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಸೋಂಕು ತನ್ನ ಆರ್ಭಟವನ್ನು ಜೋರು ಮಾಡ್ತಿದೆ. ದೇಶದ ನಾನಾ ರಾಜ್ಯಗಳು ಓಮೈಕ್ರಾನ್​ ಸೋಂಕಿನಿಂದ ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಕೈಗೊಂಡಿದ್ದು, ರಾತ್ರಿ ಕರ್ಫ್ಯೂ ಕೂಡ ಒಂದು. ಇನ್ನೂ ಮಹಾರಾಷ್ಟ್ರದ ಸಿನಿಮಾ ಥಿಯೇಟರ್​ಗಳಲ್ಲಿ ಶೇಕಡ 50 ರಷ್ಟು ಸೀಟಿಂಗ್​ ಭರ್ತಿಗೆ ಆದೇಶ ಹೊರಡಿಸಲಾಗಿದೆ. ಇನ್ನೂ ಕರ್ನಾಟಕದಲ್ಲೂ ಇಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಕರೆದಿದ್ದು, ಅಧಿಕಾರಿಗಳು, ತಜ್ಞರ ಜೊತೆಗೆ ಚರ್ಚೆ ನಡೆಸಿದ ಬಳಿಕ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ ಮಾಡುವ ಸಾಧ್ಯತೆಯಿದೆ. ಇನ್ನೂ ಮದುವೆ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಿಗೆ ಕೆಲವೊಂದು ನಿಯಮಗಳನ್ನು ಜಾರಿ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಇದೆ.‌ ಓಮೈಕ್ರಾನ್ ಸೋಂಕಿನ ತೀವ್ರತೆ ಅರಿತಿರುವ ಕೇಂದ್ರ ಸರ್ಕಾರ 15 ರಿಂದ 18 ವರ್ಷದ ಮಕ್ಕಳಿಗೆ ಜನವರಿ 3 ರಿಂದ ಶಾಲಾ ಕಾಲೇಜುಗಳಲ್ಲಿ ಲಸಿಕೆ ನೀಡುವುದು, ಆರೋಗ್ಯ ಕಾರ್ಯಕರ್ತರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟ ವಯೋವೃದ್ಧರು ಮತ್ತು ಕಾಯಿಲೆ ಪೀಡಿತರಿಗೆ ಪ್ರಿಕಾಷನ್ ಡೋಸ್ ನೀಡುವ ಬಗ್ಗೆಯೂ ಘೋಷಣೆ ಮಾಡಿದ್ದಾರೆ.‌

DNA ಆಧಾರಿತ ಲಸಿಕೆ ಭಾರತದಲ್ಲಿ ತಯಾರಿ..!

ಭಾರತ್​ ಬಯೋಟೆಕ್​​ ಸಂಸ್ಥೆಯ ಕೊವ್ಯಾಕ್ಸಿನ್​ ಲಸಿಕೆಯನ್ನು 12 ವರ್ಷದಿಂದ 18 ವರ್ಷದ ಒಳಗಿನ ಮಕ್ಕಳ ತುರ್ತು ಬಳಕೆಗೆ DCGI (Drug controller general of India) ಅನುಮತಿ ನೀಡಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ 15 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಮೊದಲು ಲಸಿಕೆ ನೀಡಿ ತದನಂತರ ಉಳಿದವರ ಕಡೆಗೆ ಗಮನ ಹರಿಸುವ ನಿರ್ಧಾರ ಮಾಡಿದೆ. ಇನ್ನೂ ನೋಸಲ್​ ವ್ಯಾಕ್ಸಿನ್​ ತಯಾರಿ ಬಗ್ಗೆ ಸಾಕಷ್ಟು ಚರ್ಚೆಗಳು ಬಂದಿದ್ದವು. ಮಕ್ಕಳಿಗೆ ಸೂಜಿಯಲ್ಲಿ ವ್ಯಾಕ್ಸಿನ್​ ಹಾಕುವ ಬದಲು ಮೂಗಿನಲ್ಲಿ ಹನಿಯನ್ನು ಹಾಕುವ ವಿಧಾನ ಜಾರಿಗೆ ಬರಲಿದೆ ಎನ್ನಲಾಗಿತ್ತು. ಇದಿಗ ಪ್ರಧಾನಿ ನರೇಂದ್ರ ಮೋದಿ ಅದರ ಬಗ್ಗೆಯೂ ಭರವಸೆ ನೀಡಿದ್ದು, ಅದರ ಜೊತೆಗೆ ವಿಶ್ವದಲ್ಲೇ ಮೊದಲ ಬಾರಿಗೆ DNA ಆಧಾರಿತ ವ್ಯಾಕ್ಸಿನ್ ಭಾರತದಲ್ಲಿ ತಯಾರಿ ಆಗಲಿದೆ ಎನ್ನುವ ಘೋಷಣೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಓಮೈಕ್ರಾನ್​ ಸೋಂಕಿತರು ಉಲ್ಬಣ..!

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಓಮೈಕ್ರಾನ್ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ರಾಜ್ಯದಲ್ಲಿ ಬರೋಬ್ಬರಿ 39 ಓಮೈಕ್ರಾನ್​ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಕೊರೊನಾ ಪಾಸಿಟಿವ್​ ಬಂದ ಬಳಿಕ ಓಮೈಕ್ರಾನ್​ ಸೋಂಕನ್ನು ಪತ್ತೆ ಹಚ್ಚುವುದು ಒಂದು ವಾರ ಸಮಯ ಹಿಡಿಯುತ್ತಿದೆ. ಅಷ್ಟರಲ್ಲಿ ಸೋಂಕಿತರು ಗುಣವಾಗುತ್ತಿದ್ದಾರೆ. ಈ ಮೊದಲೂ ಕೂಡ ಕೊರೊನಾ ತಪಾಸಣೆ ಸಾಕಷ್ಟು ತಡವಾಗುತ್ತಿದ್ದ ಕಾರಣದಿಂದ ಸೋಂಕಿತರನ್ನು ಪತ್ತೆ ಹಚ್ಚುವುದು, ಕ್ವಾರಂಟೈನ್​ ಮಾಡುವುದು, ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವುದು ತಡವಾಗುತ್ತಿತ್ತು. ಅದೇ ಕಾರಣದಿಂದ ಕೊರೊನಾ ಮೊದಲು ಹಾಗೂ 2ನೇ ಅಲೆ ವೇಳೆ ಸಾಕಷ್ಟು ಸಾವು ನೋವು ಸಂಭವಿಸಿದ್ದವು. ಇದೀಗ ಮತ್ತೆ ಓಮೈಕ್ರಾನ್​ ಟೆಸ್ಟಿಂಗ್​ ಕೂಡ ತಡವಾಗುತ್ತಿದ್ದು, ಇದಕ್ಕೂ ಸರ್ಕಾರ ತಕ್ಕ ಬೆಲೆ ತೆರುವ ಸಾಧ್ಯತೆ ದಟ್ಟವಾಗಿದೆ. ಹೈರಿಸ್ಕ್​ ದೇಶದಿಂದ ಬಂದವರನ್ನ ಟೆಸ್ಟ್​ ಮಾಡಿ ಪಾಸಿಟಿವ್​ ಬಂದ ಕೂಡಲೇ ಹೋಂ ಕ್ವಾರಂಟೈನ್​ಗೆ ಅವಕಾಶ ನೀಡದೆ ಸರ್ಕಾರಿ ಕ್ವಾರಂಟೈನ್​ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎನ್ನಬಹುದು.

ಪ್ರಧಾನಿ ದೇಶವನ್ನು ಉದ್ದೇಶಿಸುವ ಪ್ರಮೇಯ ಇತ್ತಾ..? ಚರ್ಚೆ..!

ಕೊರೊನಾ 2ನೇ ಅಲೆ ಬಳಿಕ ನಾವು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದು, 18 ಲಕ್ಷ ಬೆಡ್​ ವ್ಯವಸ್ಥೆ ಹೊಂದಿದ್ದೇವೆ, 5 ಲಕ್ಷ ಬೆಡ್​ಗಳಿಗೆ ಆಕ್ಸಿಜನ್​ ಪೂರೈಸುವ ವ್ಯವಸ್ಥೆ ಇದೆ. ಅದರ ಜೊತೆಗೆ 1.4 ಲಕ್ಷ ಐಸಿಯು ಬೆಡ್​ ವ್ಯವಸ್ಥೆ ಇದೆ. ಮಕ್ಕಳಿಗಾಗಿಯೇ ವಿಶೇಷವಾಗಿ 90 ಸಾವಿರ ಬೆಡ್​ ಸೌಲಭ್ಯ ಮಾಡಿಕೊಳ್ಳಲಾಗಿದೆ. ಆಕ್ಸಿಜನ್​ ಪೂರೈಕೆಗೆ ಅಡ್ಡಿಯಾಗದಂತೆ 3 ಸಾವಿರ ಆಕ್ಸಿಜನ್​ ಫ್ಲಾಂಟ್ಸ್​​ ಸಿದ್ಧ ಮಾಡಿಕೊಳ್ಳಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಗೆ 4 ಲಕ್ಷ ಆಕ್ಸಿಜನ್​ ಸಿಲಿಂಡರ್​ ವಿತರಣೆ ಮಾಡಲಾಗಿದೆ. ದೇಶದ 90 ರಷ್ಟು ಜನತೆ ಮೊದಲ ಡೋಸ್​ ಲೆಸಿಕೆ ಪಡೆದಿದ್ರೆ, ಶೇಕಡ 61ರಷ್ಟು ಜನ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಇದೊಂದು ಸಾಮಾನ್ಯ ಸಂಗತಿ. ಇದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡುವ ಅವಶ್ಯಕತೆ ಇರಲಿಲ್ಲ. ಅದೂ ಕೂಡ ರಾತ್ರೋರಾತ್ರಿ ಘೋಷಣೆ ಮಾಡುವ ಅವಶ್ಯಕತೆ ಏನಿತ್ತು. ಜನರ ಗಮನ ಸೆಳೆಯಲು ಮೋದಿ ಮಾಡುವ ತಂತ್ರವಿದು ಎನ್ನುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆದಿವೆ. ಇನ್ನೂ ಗಂಟೆ ಬಾರಿಸಿದ್ದು, ದೀಪ ಹಚ್ಚಿಟ್ಟ ಬಗ್ಗೆಯೂ ಲೇವಡಿಗಳು ಬಂದಿವೆ. ಆದರೂ ಓಮೈಕ್ರಾನ್​ ಭೀತಿ ಹೆಚ್ಚಾಗಿದೆ ಎನ್ನುವುದಂತೂ ಸತ್ಯ.

Related Posts

Don't Miss it !