ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭದ್ರತಾ ವೈಫಲ್ಯ ಆಗಿದ್ಯಾಕೆ..?

ಪಂಜಾಬ್​ ಚುನಾವಣೆ ಘೋಷಣೆ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರು. ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಘೋಷಣೆ ಮಾಡುವುದಿತ್ತು. ಆದರೆ ಭದ್ರತಾ ವೈಫಲ್ಯ ಆದ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆ ರದ್ದು ಮಾಡಿ ವಾಪಸ್​ ಆಗಿದ್ದಾರೆ. ಈ ನಡುವೆ ಪಂಜಾಬ್​ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್​ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಭದ್ರತೆ ನೀಡುವಲ್ಲಿ ವಿಫಲವಾಗಿದೆ. ಇದು ಕಾಂಗ್ರೆಸ್​​ನ ಆಡಳಿತ ವೈಖರಿ ಎಂದು ಟೀಕೆ ನಡೆಸಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿ.ಟಿ ರವಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಕಿಡಿಕಾರಿದ್ದಾರೆ. ಆದರೆ ಕಾಂಗ್ರೆಸ್​ ನಾಯಕರು ತಿರುಗೇಟು ಕೊಡುವ ಕೆಲಸ ಮಾಡಿದ್ದು, ಸಮಾವೇಶದಲ್ಲಿ 70 ಸಾವಿರ ಜನ ಸೇರುವ ನಿರೀಕ್ಷೆಯಲ್ಲಿ ಕುರ್ಚಿ ಹಾಕಿಸಲಾಗಿತ್ತು. ಆದರೆ ಬಂದಿದ್ದು 700 ಜನರು ಮಾತ್ರ. ಇದರಿಂದ ಪ್ರಧಾನಿ ನರೇಂದ್ರ ಮೋದಿ ವಾಪಸ್​ ಹೋಗುವ ನಿರ್ಧಾರ ಮಾಡಿದ್ರು ಎನ್ನುವುದು ಕಾಂಗ್ರೆಸ್​ ಹಾಗೂ ಪಂಜಾಬ್​ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಆರೋಪ. ಆದರೆ ಪಂಜಾಬ್​​​ನಲ್ಲಿ ಆಗಿರುವ ಎಡವಟ್ಟು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆ ಕೇಳಿದೆ.

ರಾಜಕೀಯ ದಾಳಕ್ಕೆ ತುತ್ತಾದ್ರಾ ಪ್ರಧಾನಿ ಮೋದಿ..!

ಪ್ರಧಾನಿ ಅಥವಾ ಮುಖ್ಯಮಂತ್ರಿ ಯಾವುದೇ ಪಕ್ಷದಿಂದ ಆಯ್ಕೆ ಆಗಿದ್ದರೂ ಆ ಹುದ್ದೆಗೆ ತನ್ನದೇ ಆದ ಘನತೆ ಇರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಬಗ್ಗೆ ಭಟಿಂಡಾ ಏರ್​ಪೋರ್ಟ್​ನಲ್ಲಿ ಅಧಿಕಾರಿಗಳ ಜೊತೆಗೆ ಮಾತನಾಡಿದ್ದು, ಜೀವಂತವಾಗಿ ವಾಪಸ್​​ ಬಂದಿದ್ದೇನೆ. ನಾನು ಪಂಜಾಬ್​ನಿಂದ ಬದುಕಿ ವಾಪಸ್​ ಬರಲು ನನ್ನನ್ನು ಬಿಟ್ಟಿದ್ದಕ್ಕೆ ಪಂಜಾಬ್​ ಸಿಎಂಗೆ ಧನ್ಯವಾದ ಎಂದು ಅಧಿಕಾರಿಗಳ ಬಳಿ ವ್ಯಂಗ್ಯವಾಗಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಮೂಲಕ ಪಂಜಾಬ್ ಸಿಎಂಗೆ ಮೋದಿ ಸಂದೇಶವನ್ನೂ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಸತ್ಯವೇ ಆಗಿದ್ದರೆ..!! ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮಾಡುವ ಉದ್ದೇಶದಿಂದಲೇ ಪಂಜಾಬ್​ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್​ ಬಂದಿದ್ದಾರಾ..? ಎನ್ನುವ ಅಂಶ ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಗೆ ಪ್ರಮುಖ ಕಾರಣ ಎಂದರೆ ಪ್ರಧಾನಿ ನರೇಂದ್ರ ಮೋದಿಗೆ ಇರುವ ಎಸ್​ಪಿಜಿ (Special Protection Group) ಭದ್ರತೆ.

SPG ಭದ್ರತೆಯಲ್ಲಿ ಮಾರ್ಗ ಬದಲಾವಣೆ ತುಂಬಾ ಕಷ್ಟ..!

ದೇಶದ ಗಣ್ಯ ವ್ಯಕ್ತಿಗಳಿಗೆ ಮಾತ್ರವೇ Special Protection Group ನಿಂದ ಭದ್ರತೆ ನೀಡಲಾಗುತ್ತದೆ. ಎಸ್​ಪಿಜಿ ಭದ್ರತೆ ನೀಡುವ ಗಣ್ಯ ವ್ಯಕ್ತಿಗಳು ಭೇಟಿ ನೀಡುವ ಸ್ಥಳವನ್ನು ತಿಂಗಳ ಮುಂಚೆಯೇ ನಿಗಾ ವಹಿಸಲಾಗುತ್ತದೆ. ಗಣ್ಯ ವ್ಯಕ್ತಿಗಳ ಸಂಚಾರ, ಆಸುಪಾಸಿನಲ್ಲಿರುವ ಅಂಗಡಿಗಳು, ಅದರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿರುತ್ತಾರೆ. ರಾಜ್ಯ ಪೊಲೀಸರು ಎಸ್​​ಪಿಜಿ ನಿರ್ದೇಶನಗಳನ್ನು ಪಾಲಿಸುವುದಷ್ಟೇ ಕೆಲಸ ಆಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಯಾವುದೇ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರೂ ಎಸ್​ಪಿಜಿ ಟೀಂ ಗ್ರೀನ್​ ಸಿಗ್ನಲ್​ ನೀಡಬೇಕಿರುತ್ತದೆ. ಎಸ್​​ಪಿಜಿ ಕ್ಲಿಯರೆನ್ಸ್​ ಕೊಟ್ಟ ಬಳಿಕವಷ್ಟೇ ಎಸ್​ಪಿಜಿ ಭದ್ರತೆ ಹೊಂದಿರುವ ನಾಯಕರ ಪ್ರವಾಸ ನಿಗದಿಯಾಗುತ್ತದೆ. ಆಗಿದ್ದ ಮೇಲೆ ಈ ಕಾರ್ಯಕ್ರಮಕ್ಕೆ ಎಸ್​ಪಿಜಿ ಅನುಮತಿ ನೀಡಿತ್ತು. ಆ ಬಳಿಕವಷ್ಟೇ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹವಾಮಾನ ವೈಫರಿತ್ಯದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್​​ ಮೂಲಕ ತೆರಳಬೇಕಿದ್ದ ಪ್ರವಾಸ ರದ್ದಾಯ್ತು. ಭಟಿಂಡಾ ಏರ್​​​ಪೋರ್ಟ್​ನಿಂದ ಕಾರ್ಯಕ್ರಮ ನಿಗದಿಯಾಗಿದ್ದ ಹುಸೇನಿವಾಲಾಗೆ ರಸ್ತೆ ಮಾರ್ಗದಲ್ಲಿ ಹೋಗುವುದಕ್ಕೆ ನಿರ್ಧಾರ ಕೈಗೊಳ್ಳಲಾಯ್ತು. ಇದೊಂದೇ ಅಂಶ ಇಷ್ಟೆಲ್ಲಾ ಅವಾಂತರಕ್ಕೂ ಕಾರಣವಾಯ್ತು.

150 ಕಿಲೋ ಮೀಟರ್​ ರಸ್ತೆ ಪ್ರಯಾಣ ಸಾಧ್ಯವೇ..?

ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗದ ಮೂಲಕ 141 ಕಿಲೋ ಮೀಟರ್​ ದೂರ ಪ್ರಯಾಣಕ್ಕೆ ಎಸ್​ಪಿಜಿ ಅನುಮತಿ ಸಿಕ್ಕಿತ್ತೋ ಇಲ್ಲವೋ ಎನ್ನುವುದು ಬಹಿರಂಗವಾಗಿಲ್ಲ. ವಾತಾವರಣ ತಿಳಿಯಾಗುವ ನಿರೀಕ್ಷೆಯಲ್ಲಿ ಭಟಿಂಡಾ ಏರ್​ಪೋರ್ಟ್​ನಲ್ಲಿ ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಕಾದು ಕುಳಿತಿದ್ದರು. ಕೊನೆಗೂ ಹವಾಮಾನ ತಿಳಿಯಾಗದ ಕಾರಣಕ್ಕೆ ರಸ್ತೆ ಮಾರ್ಗದಲ್ಲೇ 141 ಕಿಲೋ ಮೀಟರ್​ ಪ್ರವಾಸ ಮಾಡುವ ನಿರ್ಧಾರ ಪ್ರಕಟ ಮಾಡಲಾಯ್ತು. ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುವ ಮುನ್ನವೇ ಪ್ರಧಾನಿ ರಸ್ತೆ ಸಂಚಾರ ಶುರುವಾಗಿತ್ತು. ಈ ಮೊದಲೇ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಜಾಗ ಖಾಲಿ ಮಾಡಿಸುವ ಮುನ್ನವೇ ಪ್ರಧಾನಿ ಕಾರು ಮೇಲ್ಸೇತುವೆ ಮೇಲೆ ಬಂದಿತ್ತು. ಅಲ್ಲಿ 20 ನಿಮಿಷಗಳ ಕಾಲ ಪ್ರಧಾನಿ ಕಾಯುವಂತಾಯ್ತು. ಅಲ್ಲಿಂದ ವಾಪಸ್​ ಆಗಿದ್ದು, ಇಷ್ಟೆಲ್ಲಾ ರಾಜಕೀಯ ರಂಪಾಟಕ್ಕೆ ಕಾರಣವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಭಟನೆ ಅಡ್ಡಿಯಾಗದೆ ಸುಗಮ ಸಂಚಾರ ಆಗಿದ್ದರೂ ಮುಂದಿನ ರಸ್ತೆಯಲ್ಲಿ ಭದ್ರತೆ ಹೇಗೆ ಸಿಗುತ್ತಿತ್ತು. 141 ಕಿಲೋ ಮೀಟರ್​ ದೂರಕ್ಕೂ ಪೊಲೀಸರು ಝೀರೋ ಟ್ರಾಫಿಕ್ ಮಾಡುವುದಕ್ಕೆ ಸಾಧ್ಯವಿತ್ತೇ..? ಒಂದು ಮಾರ್ಗದಲ್ಲಿ ಮಾತ್ರ ಝೀರೋ ಟ್ರಾಫಿಕ್ಸ್​ ಮಾಡಿದ್ದರೂ ಪಕ್ಕದ ರಸ್ತೆಯನ್ನು ಖಾಲಿ ಮಾಡಿಸುವುದು ಸಾಧ್ಯವಿತ್ತೆ..? ಎನ್ನುವುದನ್ನು ಅರಿತು ಮಾತನಾಡಬೇಕಿದೆ.

ರಾಜಕೀಯ ಮಾಡುವ ಉದ್ದೇಶದಿಂದಲೇ ಇಷ್ಟೆಲ್ಲಾ ಆಯ್ತಾ..?

ಪ್ರಧಾನಿ ಸಂಚರಿಸುವ ಮಾರ್ಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳದ ಹೊರತು ಎಸ್​ಪಿಜಿ ಅನುಮತಿ ನೀಡುವುದಿಲ್ಲ. ಹಾಗಿದ್ದರೆ ಮೋದಿ ರಸ್ತೆ ಸಂಚಾರಕ್ಕೆ ನಿರ್ಧಾರ ಮಾಡುತ್ತಿದ್ದ ಹಾಗೆ ಎಸ್​ಪಿಜಿ ಅನುಮತಿ ಕೊಟ್ಟಿರಲು ಸಾಧ್ಯವಿಲ್ಲ. ಆದರೂ ರಸ್ತೆ ಸಂಚಾರ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರದ್ದೇ ತಪ್ಪು ಎನ್ನುವ ವಾದವೂ ಕೇಳಿ ಬರುತ್ತಿದೆ. ಇನ್ನೂ ಹೆದ್ದಾರಿ ತಡೆ ಇದೆ ಎನ್ನುವ ಮಾಹಿತಿ ಮೊದಲೇ ಗೊತ್ತಿದಾಗಲೂ ಆ ದಾರಿಯಲ್ಲೇ ಪ್ರಧಾನಿ ನರೇಂದ್ರ ಮೋದ ಅವರನ್ನು ಕರೆದುಕೊಂಡು ಹೋಗಿದ್ದು ಎಸ್​ಪಿಜಿ ಅಧಿಕಾರಿಗಳ ವೈಫಲ್ಯ ಅಲ್ಲವೇ..? ಅಥವಾ ರಾಜ್ಯ ಪೊಲೀಸರು ಎಸ್​ಪಿಜಿ ಅಧಿಕಾರಿಗಳಿಗೆ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿರಲಿಲ್ಲವೇ..? ಎನ್ನುವ ಪ್ರಶ್ನೆಯೂ ಮೂಡುತ್ತದೆ. 2017ರ ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಬಿಜೆಪಿ ಕಾರ್ಯಕರ್ತರ ಏಕಾಏಕಿ ರಸ್ತೆಯ ನಡುವೆ ಓಡಿ ಬಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅಂದಿನ ಮಂಡ್ಯ ಎಸ್​ಪಿ ಸುಧೀರ್​ ಕುಮಾರ್​ ರೆಡ್ಡಿ ಅವರನ್ನು ವೇದಿಕೆ ಮೇಲೆ ಕರೆದು ನಿನಗೆ ಐಪಿಎಸ್​ ಕೊಟ್ಟಿದ್ಯಾರು..? ಎಂದು ಪ್ರಶ್ನಿಸಿದ್ದರು. ಆದರೆ 141 ಕಿಲೋ ಮೀಟರ್​ ಪ್ರಧಾನಿ ರಸ್ತೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಅಷ್ಟು ಸುಲಭವೇ..? ಎನ್ನುವುದನ್ನು ಆರೋಪ ಮಾಡುವ ಜನರು ಅರಿತುಕೊಳ್ಳುವುದು ಒಳಿತು. ಇನ್ನೂ ಪ್ರತಿಭಟನೆ ನಡೆಯುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಬೇಕಿತ್ತು ಅಲ್ಲವೇ..? ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಬಗ್ಗೆಯೇ ಗುಪ್ತಚರ ಇಲಾಖೆ ಕಾಳಜಿ ವಹಿಸದೆ ಇರುವುದು ವೈಫಲ್ಯ ಅಲ್ಲವೇ..?

Related Posts

Don't Miss it !