ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಮೋದಿ ಮಾಸ್ಟರ್ ಪ್ಲ್ಯಾನ್..! ಬಿಜೆಪಿ ನಾಯಕರಿಗೆ ಹೇಳಿದ ಕಿವಿಮಾತು..

ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇನ್ಮುಂದೆ ಪ್ರತೀ ತಿಂಗಳು ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರಾದೇಶಿಕವಾಗಿ ಮತ್ತು ಆಯಕಟ್ಟಿನ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಎಂದು ಮೋದಿ ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಸಭೆಗಳಲ್ಲಿ ಈ ರೀತಿಯ ಜೋಷ್ ಇರುತ್ತದೆ. ಆದರೆ ಇಲ್ಲಿ ಸರ್ಕಾರದ ಕಾರ್ಯಕ್ರಮದಲ್ಲಿ ಆ ಜೋಷ್ ಕಾಣಿಸಿದೆ. ಈ ಕ್ಷಣಕ್ಕೂ ನಾನು ಹೇಳುತ್ತೇನೆ ಕರ್ನಾಟಕದಲ್ಲಿ ಬಿಜೆಪಿ ಪರ ಒಲವು ಇದೆ. ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ರೀತಿ ರಿವಾಜುಗಳನ್ನು ಜೆಪಿ ನಡ್ಡಾ ನೋಡಿಕೊಳ್ಳುತ್ತಾರೆ. ನೀವು ಜನರನ್ನು ತಲುಪ ಬೇಕಿರುವ ಕೆಲಸ ಮಾಡಿ ಎಂದಿದ್ದಾರೆ.

ನಾನು ಬರ್ತೇನೆ, ನಿಮ್ಮ ಗೆಲುವಿಗೆ ನನ್ನ ಸಂಪೂರ್ಣ ಸಹಕಾರ..!

ನಾನು ಪ್ರತಿ ತಿಂಗಳು ರಾಜ್ಯಕ್ಕೆ ಬರುತ್ತೇನೆ. ನನ್ನ ಸಹಕಾರ ನಿಮಗೆ ಇದ್ದೇ ಇರುತ್ತದೆ ಎಂದು ನಾಯಕರ ಸಭೆಯಲ್ಲಿ ರಾಜ್ಯದ ನಾಯಕರಿಗೆ ಪ್ರಧಾನಿ ಮೋದಿ ಕಿವಿ ಮಾತು ಹೇಳಿದ್ದಾರೆ. ಪ್ರಧಾನಿ ನಮೋ ಈ ಮೂಲಕ ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸುವ ಎಲ್ಲಾ ಮುನ್ಸೂಚನೆಗಳನ್ನೂ ನೀಡಿದ್ದಾರೆ. ಆದರೆ ಮಂಗಳೂರಿನ ಕಾರ್ಯಕ್ರಮದಲ್ಲಿ ಮೀನುಗಾರರ ಸಾಲಾ ಮನ್ನಾ ಆಗುವ ಬಗ್ಗೆ ಸಾಕಷ್ಟು ನಿರೀಕ್ಷಗಳು ಇದ್ದವು. ಪ್ರಧಾನಿ ನರೇಂದ್ರ ಮೋದಿ ಮೀನುಗಾರರ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಮಂಗಳೂರಿನ ಮೀನುಗಾರರ ಆದಾಯ ಹೆಚ್ಚಿಸಲು ಯೋಜನೆ ಮಾಡುತ್ತೇನೆ ಎಂದಿದ್ದಾರೆ. ಸಾಲ ಮನ್ನಾ ಮಾಡುವ ಬಗ್ಗೆ ಚಕಾರ ಎತ್ತಿಲ್ಲ.

ಕರ್ನಾಟಕದಲ್ಲಿ ಕರಾವಳಿ ಆಯ್ಕೆ ಮಾಡಿದ್ಯಾಕೆ ಮೋದಿ..!?

ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳೂ ರಾಜ್ಯಕ್ಕೆ ಬರ್ತಾರೆ ಎಂದು ಬಿ.ಎಸ್​ ಯಡಿಯೂರಪ್ಪ ದೆಹಲಿ ಪ್ರವಾಸ ಮುಗಿಸಿ ವಾಪಸ್​ ಬಂದಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದರು. ಅದರಲ್ಲೂ ಕೇಸರಿ ಭದ್ರಕೋಟೆ ಆಗಿರುವ ಪ್ರದೇಶಗಳಲ್ಲಿ ಮೊದಲಿಗೆ ಸ್ಥಾನ ಭದ್ರ ಮಾಡಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಭದ್ರಕೋಟೆಯಲ್ಲಿ ಮೊದಲು ಅಬ್ಬರದ ಪ್ರಚಾರದ ಮೂಲಕ ಅಕ್ಕಪಕ್ಕದ ಕ್ಷೇತ್ರಗಳ ಮೇಲೆ ಕಣ್ಣು ಹಾಯಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳೂ ರಾಜ್ಯಕ್ಕೆ ಬಂದು ಅಬ್ಬರಿಸಿದರೂ ಬಿಜೆಪಿಗೆ ಬಹುಮತ ಬರುವುದು ಕಷ್ಟ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು. ಈಗಾಗಲೇ ಬಡವರ ಬದುಕು ಬೀದಿಯಲ್ಲಿ ಬಂದು ನಿಂತಿದ್ದು, ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಿಗಿ ನಿಗಿ ಕಾಯುತ್ತಿದ್ದಾರೆ ಎನ್ನಲಾಗ್ತಿದೆ.

8 ತಿಂಗಳು, 8 ಬಾರಿ ಪ್ರವಾಸ, ಮೋದಿಗೆ ಬಹುಪರಾಕ್​..!?

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಬಾಕಿ ಉಳಿದಿರುವುದು ಕೇವಲ 8 ತಿಂಗಳು ಮಾತ್ರ. ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಕೊಟ್ಟಿರುವ ಹಾಗೆ 8 ಬಾರಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಚುನಾವಣೆ ತಿಂಗಳಲ್ಲಿ ಸಾಕಷ್ಟು ಬಾರಿ ಪ್ರಚಾರ ಮಾಡಬಹುದು. ಆದರೆ ಬಿಜೆಪಿ ವಿರೋಧಿ ಅಲೆಯನ್ನು ನರೇಂದ್ರ ಮೋದಿ ಮೋಡಿ ಮಾಡಿ ಕೇಸರಿ ಅಲೆಯನ್ನಾಗಿ ಬದಲಾಯಿಸಲು ಸಾಧ್ಯವೇ ಎನ್ನುವುದು ಈಗಿರುವ ಬಹುಮುಖ್ಯ ಪ್ರಶ್ನೆಯಾಗಿದೆ. ಭಾರತದ ಅಭಿವೃದ್ಧಿಯ ಬಗ್ಗೆ ಕನಸನ್ನು ಬಿತ್ತುವ ಕನಸುಗಾರ ಪ್ರಧಾನಿ ಮೋದಿ, ಆದರೆ ಆ ಕನಸುಗಳು ನನಸಾಗಿದ್ದಾವೆಯೇ..? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರಧಾನಿ ಮೋದಿಯನ್ನು ಇಷ್ಟಪಡುವ ಮಂದಿ ಈಗಲೂ ಇದ್ದಾರೆ. ಆದರೆ ತಳ ಮಟ್ಟದ ಜನರಿಗೆ ಅನುಕೂಲ ಆಗುವಂತಹ ಕೆಲಸವನ್ನ ಪ್ರಧಾನಿಯಾಗಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಗ್ಯಾಸ್​ ಬೆಲೆ ಕಣ್ಣಿಗೆ ಕಟ್ಟುವಂತಿದೆ. ಪೆಟ್ರೋಲ್ ಬೆಲೆ ಗಗನ ಮುಟ್ಟಿ ಮುಂದೆ ಹೋಗುತ್ತಿದೆ. ಜನಸಾಮಾನ್ಯರ ಬಳಕೆಯ ವಸ್ತುಗಳು ಗಗನ ಕುಸುಮ ಆಗಿವೆ. ಇದೆಲ್ಲವನ್ನೂ ಮೀರಿ ಮೋದಿ ಜಾದು ಮಾಡ್ತಾರಾ..? ಗೊತ್ತಿಲ್ಲ.

Related Posts

Don't Miss it !