Exam scam: 545 ಜನರ ಬದುಕಲ್ಲಿ ಬಿಜೆಪಿ ನಾಯಕಿ ಚೆಲ್ಲಾಟ..! ದೊಡ್ದ ದೊಡ್ಡವರ ಕೈವಾಡ..

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಬಂದು 2 ವರ್ಷಗಳು ಕಳೆದು ಹೋಗಿವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಿಂದೂ ಮುಸಲ್ಮಾನ, ಹಿಂದೂ ಕ್ರೈಸ್ತ ಸೇರಿದಂತೆ ಸಾಕಷ್ಟು ಸಂಗತಿಗಳು ಬಂದು ಹೋಗಿವೆ. ಇದರ ನಡುವೆ ಬಿಜೆಪಿ ನಾಯಕರು ಸಾಕಷ್ಟು ಭ್ರಷ್ಟಾಚಾರದ ವಿಚಾರದಲ್ಲೂ ಸಿಲುಕಿಕೊಂಡಿದ್ದಾರೆ. ಅದರಲ್ಲೂ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಗೋಲ್​ಮಾಲ್​ ಮಾಡಿದ್ದಾರೆ ಎನ್ನುವುದು ಬಯಲಾಗಿತ್ತು. ಆದರೆ ಇದೀಗ ಬಿಜೆಪಿ ನಾಯಕರು ಪ್ರಮುಖವಾಗಿ ಭಾಗಿಯಾಗಿದ್ದಾರೆ ಎನ್ನುವುದನ್ನು ಸ್ವತಃ ಬಿಜೆಪಿ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ವಿಶೇಷ ಅಂದ್ರೆ ಈ ಗೋಲ್​​ಮಾಲ್​ ನಡೆದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಮಂತ್ರಿ ಆಗಿದ್ದರು ಎನ್ನುವುದು ಪ್ರಮುಖ ಅಂಶ. ಅಂದಿನ ಮುಖ್ಯಮಂತ್ರಿ ಅವರಿಗೂ ಈ ವಿಚಾರ ಗೊತ್ತಿತ್ತಾ..? ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

ಎಬಿವಿಪಿ ನಾಯಕ ಅರುಣ್​ ಆಯ್ಕೆ..! ಈಗ ಅರೆಸ್ಟ್​..!

PSI ಪರೀಕ್ಷೆಗೆ ಹಾಜರಾಗಿ ಆಯ್ಕೆಯಾಗಿದ್ದ ಎಬಿವಿಪಿ ಮುಖಂಡ ಅರುಣ್​ ಪಾಟೀಲ್​ನನ್ನು ಬಂಧಿಸಿದ್ದಾರೆ. ಎಬಿವಿಪಿ ಸಕ್ರಿಯ ಕಾರ್ಯಕರ್ತನಾಗಿದ್ದ ಅರುಣ್​ ಪಾಟೀಲ್​ ಬಿಜೆಪಿಯಲ್ಲೂ ಗುರುತಿಸಿಕೊಂಡಿದ್ದರು. ಇತ್ತೀಚಿಗೆ ನಡೆದ ಪರೀಕ್ಷೆಯಲ್ಲಿ ಹಾಜರಾಗಿ ಆಯ್ಕೆ ಕೂಡ ಆಗಿದ್ದರು. ಇಷ್ಟಕ್ಕೂ ಪಿಎಸ್​ಐ ಪರೀಕ್ಷೆ ನಡೆದಾಗ ಗೃಹ ಸಚಿವರಾಗಿದ್ದು, ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಸೂಚನೆಯಂತೆಯೇ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವುದು ಮಾತ್ರ ತದ್ವಿರುದ್ಧ. ನಮ್ಮ ಪಕ್ಷದ ನಾಯಕರು ಭಾಗಿಯಾಗಿದ್ದಾರೆ ಎನ್ನಲಾಗ್ತಿದ್ದರೂ ಮುಚ್ಚಿಟ್ಟುಕೊಳ್ಳದೆ ತನಿಖೆ ನಡೆಸುತ್ತಿದ್ದೇವೆ. ಯಾರನ್ನೂ ಬಚಾವ್​ ಮಾಡುವ ಉದ್ದೇಶ ನಮಗೆ ಇಲ್ಲ ಎಂದಿದ್ದಾರೆ. ಆದರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮಾತ್ರ ಬಿ.ಎಸ್​ ಯಡಿಯೂರಪ್ಪ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ.

ಕಲಬುರಗಿಯಲ್ಲಿ ದಿವ್ಯಾ ಹಾಗರಗಿ ಪ್ರಭಾವಿ ಬಿಜೆಪಿ ನಾಯಕಿ..!

ಕಳೆದ 9 ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ದಿವ್ಯಾ ಹಾಗರಗಿ ಅವರ ಶಾಲೆಯಲ್ಲೇ ಪ್ರಮುಖವಾಗಿ ಅಕ್ರಮ ನಡೆದಿದೆ ಎನ್ನುವುದು ಬಹಿರಂಗ ಆಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ರಾಜ್ಯಾದ್ಯಂತ ಅಕ್ರಮದ ವಾಸನೆ ಜೋರಾಗುತ್ತದೆ ಎನ್ನುವ ಕಾರಣದಿಂದಲೇ ಉದ್ದೇಶ ಪೂರ್ವಕವಾಗಿ ಪ್ರಶ್ನೆಪತ್ರಿಕೆ ಲೀಕ್​ ಆಗದಂತೆ ನೋಡಿಕೊಂಡು ಒಂದೇ ಶಾಲೆಯಲ್ಲಿ ಅಕ್ರಮವಾಗಿ ಉತ್ತರ ಪತ್ರಿಕೆಗಳನ್ನು ತುಂಬಿ, ಅಷ್ಟೂ ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಲಾಗಿದೆ ಎನ್ನುವ ಮಾಹಿತಿಗಳು ಸಿಗುತ್ತಿವೆ. ಒಂದೊಂದು ಪೋಸ್ಟ್​ 85 ಲಕ್ಷ ರೂಪಾಯಿ ಮಾರಾಟವಾಗಿದ್ದು, ಇನ್​​​ಸ್ಟಾಲ್​ಮೆಂಟ್​​ ರೀತಿಯಲ್ಲಿ ಪರೀಕ್ಷೆ ಬಳಿಕ ಕೆಲಸಗಳು ನಡೆದಂತೆ ಹಣ ಸಂದಾಯ ಆಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ತಲೆಗಳು ಇದ್ದಾವೆ. ನಿಕಟಪೂರ್ವ ಮುಖ್ಯಮಂತ್ರಿಗಳ ಪಾತ್ರ ಇದೆ. ಪ್ರಮುಖ ಆರೋಪಿ‌ ದಿವ್ಯಾ ಹಾಗರಗಿ‌ ಯಡಿಯೂರಪ್ಪ ಅವರ ಪರಮಾಪ್ತೆ ಎನ್ನುವ ಮೂಲಕ ಬಿಎಸ್​ ಯಡಿಯೂರಪ್ಪ ಅವರೇ ಭಾಗಿದಾರರು ಎನ್ನುವುದನ್ನು ಪರೋಕ್ಷವಾಗಿ ಬಹಿರಂಗ ಮಾಡಿದ್ದಾರೆ.

9 ಜನರ ಬಂಧನ ಬಳಿಕ ದಿವ್ಯಾ ಜಾಮೀನು ಅರ್ಜಿ..!

ಪಿಎಸ್​ಐ ಪರಿಕ್ಷೆ ಅಕ್ರಮದ ಪ್ರಮುಖ ರುವಾರಿ ಎಂದೇ ಹೇಳಲಾಗ್ತಿರುವ ದಿವ್ಯಾ ಹಾಗರಗಿ ಇಲ್ಲೀವರೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿಲ್ಲ. ಎಲ್ಲಾ ಆರೋಪಿಗಳ ಜೊತೆಗೆ ದಿವ್ಯಾ ಪತಿ ರಾಜೇಶ್‌ನನ್ನೂ ಪೊಲೀಸ್ರು ಬಂಧಿಸಿದ್ದಾರೆ. ಆದರೂ ದಿವ್ಯಾ ಮಾತ್ರ ನಾಪತ್ತೆ. ಆದ್ರೆ ಬುಧವಾರ ಎಬಿವಿಪಿ ಮುಖಂಡ ಅರುಣ್​ ಪಾಟೀಲ್​ ಬಂಧನ ಆಗುತ್ತಿದ್ದ ಹಾಗೆ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಕೋಟಿ ಅರ್ಜಿ ಸಲ್ಲಿಸಿದ್ದಾರೆ. ಕಲಬುರಗಿಯ ಜ್ಞಾನ ಜ್ಯೋತಿ ಶಾಲೆ ಕಾರ್ಯದರ್ಶಿ ಆಗಿರುವ ದಿವ್ಯಾ ಹಾಗರಗಿ ಹಾಗೂ ಶಾಲಾ ಮುಖ್ಯೋಪಧ್ಯಾಯ ಕಾಶಿನಾಥ್ ಹಾಗೂ ಸಹ ಶಿಕ್ಷಕಿ ಅರ್ಚನಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಲಬುರಗಿ JMFC ಕೋರ್ಟ್​​ಗೆ ಅರ್ಜಿ ಸಲ್ಲಿಕೆ ಆಗಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಒಂದು ವೇಳೆ JMFC ಜಾಮೀನು ಅರ್ಜಿ ತಿರಸ್ಕಾರ ಮಾಡಿದರೆ, ಹೈಕೋರ್ಟ್​ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ದೊಡ್ಡ ದೊಡ್ಡ ನಾಯಕರ ಕೃಪಾಪೋಷಿತ ಅಕ್ರಮ ಮಂಡಳಿಯಲ್ಲಿ ನ್ಯಾಯ ಸಿಗುತ್ತಾ..? ಇಂತಹ ನಾಯಕರು ನಮ್ಮ ಸಮಾಜವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದ್ದಾರೆ ಎನ್ನುವ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ.

Related Posts

Don't Miss it !