ಉಸ್ತುವಾರಿ ಸ್ಥಾನಕ್ಕಾಗಿ ಬೆಂಗಳೂರು ಇಬ್ಭಾಗಕ್ಕೆ ಯತ್ನ..! ಯಾಕಿಷ್ಟು ಫೈಟಿಂಗ್..

ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸ್ಥಾನ ಪಡೆಯುವುದು ಸಚಿವ ಸ್ಥಾನ ಸಿಕ್ಕ ಮೇಲೆ ಪಡೆಯುವ ಗೌರವ ಎಂದೇ ಬೆಂಗಳೂರು ಸಚಿವರ ಭಾವಿಸಿರುತ್ತಾರೆ. ಇದೀಗ ಬೆಂಗಳೂರು ನಗರದ ಮೇಲೆ ಆಧಿಪತ್ಯ ಸ್ಥಾಪಿಸಲು ಪೈಪೋಟಿ ನಡೆಯುತ್ತಿದೆ. ಹಿರಿಯ ಸದಸ್ಯ ಆಗಿರುವ ವಿ. ಸೋಮಣ್ಣ ಹಾಗೂ ಆರ್​ ಅಶೋಕ್​ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾದಿ ಬೀದಿ ರಂಪಾಟ ಕೂಡ ಮಾಡಿಕೊಂಡಿದ್ದಾರೆ. ಆರ್​. ಅಶೋಕ್​ ಬಗ್ಗೆ ನೇರ ವಾಗ್ದಾಳಿ ನಡೆಸಿರುವ ಸೋಮಣ್ಣ, ನಾನು ಸಚಿವನಾದಾಗ ಸಾಮ್ರಾಟ್​​ ಆರ್​ ಅಶೋಕ್​ ಇನ್ನೂ ಶಾಸಕನಾಗಿ ಇರಲಿಲ್ಲ. ಹಿರಿಯನಿದ್ದೇನೆ, ಬೆಂಗಳೂರು ಉಸ್ತುವಾರಿ ಕೊಟ್ಟರೆ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದಿದ್ದಾರೆ. ಕೆ.ಎಸ್​ ಈಶ್ವರಪ್ಪ ಪೈಪೋಟಿ ಇರಬೇಕು ಎಂದು ಸಮರ್ಥನೆ ಮಾಡಿಕೊಂಡಿದ್ದರೆ, ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಮಾತ್ರ ನೋ ಕಾಮೆಂಟ್ಸ್​ ಎಂದು ಮೌನಕ್ಕೆ ಶರಣಾಗಿದ್ದಾರೆ.

ಮೌನವಾಗಿಯೇ ಸೋಮಣ್ಣಗೆ ಅಶೋಕ್​ ಟಾಂಗ್​..!

ಹಿರಿಯ ಸಚಿವರೂ ಆಗಿರುವ ವಿ. ಸೋಮಣ್ಣರ ಹೇಳಿಕೆಗೆ ಸಾವಧಾನದಿಂದಲೇ ಉತ್ತರ ಕೊಟ್ಟಿರುವ ಆರ್. ಅಶೋಕ್, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ನಾನು ಯಾವುದೇ ಜಿಲ್ಲಾ ಉಸ್ತುವಾರಿ ಸ್ಥಾನಬೇಕೆಂದು ಕೇಳಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಿಕ್ಕಿತ್ತು. ಅಲ್ಲಿ ಕೆಲಸ ಮಾಡಿದ್ದೆ. ಅದನ್ನು ಎಂಟಿಬಿ ನಾಗರಾಜ್ ಕೇಳಿದ ಕಾರಣಕ್ಕೆ ಬಿಟ್ಟುಕೊಟ್ಟಿದ್ದೆ. ನಾನು ಉಸ್ತುವಾರಿ ಮಂತ್ರಿ ಆಗದಿದ್ದರೂ ಕೆಲಸ ಮಾಡಿದ್ದೇನೆ ಎಂದಿದ್ದರು. ಆದರೆ ಇನ್ನೊಂದು ದಿಕ್ಕಿನಿಂದ ತಮ್ಮ ಪರವಾಗಿ ಬ್ಯಾಟಿಂಗ್​ ಮಾಡಿಸುವ ಕೆಲಸ ಮಾಡಿದ್ದಾರೆ. ಯಶವಂತಪುರ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್​.ಟಿ ಸೋಮಶೇಖರ್​ ಸೋಮಣ್ಣ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ವಲಸಿಗ, ಮೂಲ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಆರ್​. ಅಶೋಕ್​ ಮೂಲ ಬಿಜೆಪಿ, ನಾವು ವಲಸಿಗರು..!

ಆರ್​. ಅಶೋಕ್​ ಮೂಲ ಬಿಜೆಪಿ ನಾಯಕರಾಗಿದ್ದು, ನಾವೆಲ್ಲಾ ಬಿಜೆಪಿಗೆ ವಲಸೆ ಬಂದವರು ಎನ್ನುವ ಮೂಲಕ ವಿ.ಸೋಮಣ್ಣ ಕೂಡ ಮೂಲ ಬಿಜೆಪಿ ಪಕ್ಷದ ನಾಯಕನಲ್ಲ ಎನ್ನುವುದನ್ನು ನೆನಪು ಮಾಡಿಕೊಟ್ಟಿದ್ದಾರೆ. ಆರ್​.ಅಶೋಕ್​ ಬಗ್ಗೆ ಯಾರೊಬ್ಬರೂ ಮಾತಾಡಬಾರದು. ಸಚಿವ ಆರ್.ಅಶೋಕ್ ಬಿಜೆಪಿ ಹಿರಿಯ ಶಾಸಕರು ಇದ್ದಾರೆ. ನಾವೆಲ್ಲರೂ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದವರು. ಆರ್​. ಅಶೋಕ್​ಗೆ ಉಸ್ತುವಾರಿ ಕೊಟ್ಟರೆ ತಪ್ಪೇನಿಲ್ಲ. ಅದೂ ಅಲ್ಲದೆ ಬೆಂಗಳೂರು ಉಸ್ತುವಾರಿ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಯಾವ ಜಿಲ್ಲೆಗೆ ಯಾರನ್ನು ಉಸ್ತುವಾರಿ ಮಾಡಬೇಕು ಎನ್ನುವುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದಿದ್ದಾರೆ. ಇದೇ ಬೇರೆ ವಿಚಾರದಲ್ಲಿ ವಲಸಿಗರು ಮೂಲ ಎನ್ನುವ ವಿಚಾರವನ್ನು ಒಪ್ಪಿಕೊಳ್ಳದ ಸಚಿವರು ನಾವೆಲ್ಲಾ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಯಾವುದೇ ಬೇಧಭಾವವಿಲ್ಲ. ನಾವೆಲ್ಲಾ ಬಿಜೆಪಿ ನಾಯಕರು ಮಾತ್ರ. ಮೂಲ, ವಲಸಿಗ ಎನ್ನುವ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಇದೀಗ ತನ್ನ ಮೆಚ್ಚಿನ ನಾಯಕನ್ನ ಮೆಚ್ಚಿಸಲು ಮೂಲ – ವಲಸಿಗ ಎನ್ನುವ ಮಾತನ್ನು ನೆನಪಿಸಿದ್ದಾರೆ.

Read this also;

ಬೆಂಗಳೂರು ಇಬ್ಭಾಗ ಮಾಡೋಣ ಸೋಮಣ್ಣ ಸಲಹೆ..!

ಬೆಂಗಳೂರು ಉಸ್ತುವಾರಿ ಪಡೆದೇ ತೀರಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಸಚಿವ ವಿ. ಸೋಮಣ್ಣ ಹೊಸ ಪ್ರಸ್ತಾಪ ಮುಂದಿಟ್ಟಿದ್ದಾರೆ. ನನಗೆ ಅರ್ಧ ಬೆಂಗಳೂರು, ಅಶೋಕ್​ಗೆ ಅರ್ಧ ಬೆಂಗಳೂರು ರೀತಿಯಲ್ಲಿ ಉಸ್ತುವಾರಿ ಕೊಡಲಿ ಎಂದಿದ್ದಾರೆ. ನಾನು ಸಚಿವ ಸಂಪುಟ ಸೇರಿದ್ದಾಗ ಅಶೋಕ್ ಇನ್ನೂ MLA ಕೂಡ ಆಗಿರಲಿಲ್ಲ. ಅಶೋಕ್​ಗೆ ಸಾಮ್ರಾಟ್ ಅಂತಾ ಯಾಕೆ ಕರೀತಾರೋ ಗೊತ್ತಿಲ್ಲ. ಅವರು ಸಾಮ್ರಾಟ್ ರೀತಿಯೇ ಆಡ್ತಿದ್ದಾರೆ ಎಂದು ಕೌಂಟರ್​ ಕೊಟ್ಟಿದ್ದಾರೆ. ಆದರೆ ಆರ್​ ಅಶೋಕ್​ ಮಾತ್ರ ಬಿಬಿಎಂಪಿ ಚುನಾವಣೆ ಗೆಲ್ಲುವುದು ಮುಖ್ಯ. ಬೆಂಗಳೂರು ಉಸ್ತುವಾರಿ ಯಾರಿಗೆ ಕೊಟ್ಟರೂ ನನಗೆ ಸಮಸ್ಯೆ ಇಲ್ಲ ಎಂದು ಚುನಾವಣೆ ಗುಮ್ಮನನ್ನು ಮುಂದಿಟ್ಟಿದ್ದಾರೆ. ಆದರೆ ಅಧಿಕಾರದ ಲಾಲಸೆಗೆ ಬೆಂಗಳೂರನ್ನು ಇಬ್ಭಾಗ ಮಾಡುವ ಮನಸ್ಸು ಮಾಡಿದ್ದಾರೆ ಎಂದರೆ ಮೆಚ್ಚಲೇ ಬೇಕಿದೆ.

ಬೆಂಗಳೂರು ಉಸ್ತುವಾರಿ ಫೈಟ್​ಗೆ ನಿಖರ ಕಾರಣ..!

ಇನ್ನೂ ಒಂದೂವರೆ ವರ್ಷದಲ್ಲಿ ಚುನಾವಣೆ ಎದುರಾಗಲಿದೆ. ಮುಂದಿನ ಚುನಾವಣೆಗೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಬಹಳ ಮುಖ್ಯ. ಬೆಂಗಳೂರು ಉಸ್ತುವಾರಿ ಸ್ಥಾನ ಸಿಕ್ಕರೆ ವಜ್ರದ ಗಣಿ ಸಿಕ್ಕಂತೆ ಎನ್ನುವುದು ಇಬ್ಬರೂ ಸಚಿವರಿಗೂ ಗೊತ್ತಿರುವ ಸಂಗತಿ. ಇನ್ನೂ ಕೆಲವೇ ತಿಂಗಳುಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಉಸ್ತುವಾರಿ ಸಚಿವರಿಗೆ ಹೆಚ್ಚಿನ ಶಕ್ತಿ ಇರಲಿದೆ ಎನ್ನುವ ಲೆಕ್ಕಾಚಾರಗಳೂ ಅಡಗಿವೆ. ಆದರೆ ಆರ್​.ಅಶೋಕ್​ ಹೇಳುವ ಮತ್ತೊಂದು ಕಾರಣ ಎಂದರೆ, ಈಗಾಗಲೇ ನಿಗಮ ಮಂಡಳಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಪೂರೈಸಿರುವ ಶಾಸಕರಲ್ಲ ಅಧ್ಯಕ್ಷರನ್ನು ತೆಗೆಯಲು ಸಮಿತಿ ರಚನೆ ಆಗಿದೆ. ಆ ಸಮಿತಿಯಲ್ಲಿ ನಾನೂ ಕೂಡ ಸದಸ್ಯನಾಗಿದ್ದೇನೆ. ಇದೇ ಕಾರಣಕ್ಕೆ ಗೊಂದಲ ಸೃಷ್ಟಿ ಎಂದಿದ್ದಾರೆ. ಕೆಂಪೇಗೌಡರು ಕಟ್ಟಿದ ಈ ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನುವುದನ್ನು ಎಲ್ಲರೂ ಬಲ್ಲರು. ಶಾಸಕನ ಅಧಿಕಾರ ಸಿಗುವ ತನಕ ಅಧಿಕಾರ, ಆ ಮೇಲೆ ಸಚಿವ ಸ್ಥಾನ, ಆ ಮೇಲೆ ಉಸ್ತುವಾರಿ ಪೈಪೋಟಿ, ಅಭಿವೃದ್ಧಿಗಾಗಿ ಪೈಪೋಟಿ ಯಾವಾಗ ಎನ್ನುವುದು ಜನಸಾಮಾನ್ಯನ ಪ್ರಶ್ನೆ ಎನ್ನಬಹುದು.

Related Posts

Don't Miss it !