ಬೆಂಗಳೂರಿಗೆ ಬೆಂಕಿ ಬಿದ್ದರೆ ಮಾತ್ರ ಸರ್ಕಾರಕ್ಕೆ ಎಚ್ಚರ.. ಆ ಬಳಿಕ ಗಾಢ ನಿದ್ರೆ..

ಗುರುವಾರ, ಶುಕ್ರವಾರ ಸತತವಾಗಿ ಸುರಿದ ಮಳೆ ಬೆಂಗಳೂರು ಜನರು ಜಾಗರಣೆ ಮಾಡುವಂತೆ ಮಾಡಿತ್ತು. ಚಾಮರಾಜಪೇಟೆ, ಜಯನಗರ, ಜೆಸಿ ರಸ್ತೆ, ಗುಡ್ಡದಹಳ್ಳಿ, ಕಸ್ತೂರ ಬಾ ನಗರ ಸೇರಿದಂತೆ ಬಹುತೇಕ ಪ್ರದೇಶಗಳು ಜಲಾವೃತ ಆಗಿದ್ದವು. ತಗ್ಗು ಪ್ರದೇಶದ ಮನೆಗಳು ಕೊಳಚೆ ನೀರಿನಲ್ಲಿ ಮುಳುಗಿದ್ರೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕೆರೆಯಂತಾಗಿದ್ದ ನೀರಿನಲ್ಲಿ ತೇಲುತ್ತಿದ್ದವು. ಜನರು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ರು. ಬಿಬಿಎಂಪಿ ಕಾಲ್ ಸೆಂಟರ್‌ಗೆ ಕರೆ ಮಾಡಿದ್ರು ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಜನರ ಕೋಪ ಹೆಚ್ಚಾಗುವುದನ್ನು ಕಂಡ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸೂಕ್ತ ಮಾಹಿತಿ ನೀಡದ ಅಧಿಕಾರಿಗಳು, ಸಿಎಂ ಕೆಂಡಾಮಂಡಲ..!

ನಗರದಲ್ಲಿ ಪದೇ ಪದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟುವ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಅಲ್ಪಾವಧಿ ಹಾಗೂ ದೀರ್ಘಕಾಲದ ಕ್ರಮಕೈಗೊಳ್ಳಲು ವರದಿ ಕೇಳಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಹಣಕಾಸು ನೆರವು ನೀಡಲಾಗುವುದು ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಮಳೆ ಬರುತ್ತೆ ಅಂತ ಹವಾಮಾನ ಇಲಾಖೆ ತಿಳಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಕಮೀಷನರ್ ಮತ್ತು ಎಂಜಿನಿಯರ್‌ಗೆ ಸಿಎಂ ಕ್ಲಾಸ್ ತೆಗೆದುಕೊಂಡಿರುವ ಘಟನೆಯೂ ನಡೆದಿದೆ. ತಡೆಗೋಡೆ ನಿರ್ಮಾಣದ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದಿದ್ದಾಗ ಸಿಎಂ ಬಿಬಿಎಂಪಿ ಕಮಿಷನರ್ ಕಡೆಗೆ ನೋಡಿದ್ರೆ, ಕಮಿಷನರ್ ಎಂಜಿನಿಯರ್ ಕಡೆಗೆ ನೋಡಿದ್ದಾರೆ. ಸ್ಪಷ್ಟ ಮಾಹಿತಿ ಕೊಡದ ಅಧಿಕಾರಿಗಳ ನಡೆಗೆ ಸಿಡಿಮಿಡಿಯಾದ ಸಿಎಂ, ಹೀಗಾದ್ರೆ ಹ್ಯಾಂಗ್ ರ್ರೀ..? ಇನ್ಮುಂದೆ ಇದೇ ರೀತಿ ಆದ್ರೆ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ. ಕೂಡಲೆ ತಡೆಗೋಡೆ ಕಾಮಗಾರಿ ವಿಳಂಬ ಮಾಡದೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದಾರೆ.

ಬೆಂಗಳೂರು ನಗರಕ್ಕೆ ರೆಸ್ಕ್ಯೂ ಟೀಂ ರಚನೆಗೆ ಸಿಎಂ ಸೂಚನೆ..!

ಬೆಂಗಳೂರು ನಗರದಲ್ಲಿ ಮಳೆಗಾಲದಲ್ಲಿ ನಾನಾ ಸಂಕಷ್ಟಗಳು ತಲೆದೋರುತ್ತಿರುವ ಕಾರಣಕ್ಕೆ ನಗರದಲ್ಲಿ ರೆಸ್ಕ್ಯೂ ಟೀಂನಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಳ ಮಾಡಬೇಕು, ಪ್ರತಿ ಟೀಮ್‌ನಲ್ಲೂ ಮೂವತ್ತು ಜನರಿರುವಂತೆ ಮಾಡಬೇಕು. ಇದಕ್ಕೆ SDRF ನಿಂದ ಹಣ ಒದಗಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿಗೆ ನಾಲ್ಕು SDRF ಟೀಮ್ ಇರಬೇಕು, ಇವರಿಗೆ ಬೇಕಾದ ಅಗತ್ಯ ಸಲಕರಣೆ ಖರೀದಿಸಲು ಹಣ ಬಿಡುಗಡೆ ಮಾಡ್ತೀವಿ. ಮುಂದಿನ ವರ್ಷದ ಒಳಗೆ ನಾಲ್ಕು ಟೀಮ್ ರಚನೆ ಆಗಬೇಕು ಎಂದು ಪರ್ಮಾನು ಹೊರಡಿಸಿದ್ದಾರೆ. ಮಳೆಗಾಲದಲ್ಲಿ ಅಷ್ಟೇ ಅಲ್ಲ, ಬೇಸಿಗೆಯಲ್ಲೂ ರಾಜಕಾಲುವೆಯಲ್ಲಿ ತುಂಬಿರುವ ಕಸ ತೆಗೆಯುವ ಕೆಲಸ ಮಾಡಬೇಕು. ವಿಶೇಷವಾಗಿ ಈ ಕೆಲಸ ಆಗಬೇಕು ಎಂದು ಸೂಚನೆ ನೀಡಿದ್ದಾರೆ.

ಉಸ್ತುವಾರಿ ಮೇಲೆ ಕಣ್ಣು.. ಸಮಸ್ಯೆ ಬೇಕಿಲ್ಲ..!

ಕೆಲವೇ ದಿನಗಳ ಹಿಂದೆ ಬೆಂಗಳೂರು ಉಸ್ತುವಾರಿಗಾಗಿ ಸಚಿವ ಆರ್. ಅಶೋಕ್ ಹಾಗೂ ಸಚಿವ ವಿ ಸೋಮಣ್ಣ ನಡುವೆ ಜಟಾಪಟಿ ನಡೆದಿತ್ತು. ಆದರೆ ಗುರುವಾರ ರಾತ್ರಿ ಮಳೆಯಿಂದ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾಗ ಯಾವೊಬ್ಬ ಸಚಿವರು, ಶಾಸಕರು ಬಂದು ನೋಡಲಿಲ್ಲ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಕರೆದಿದ್ದ ಸಭೆಯಿಂದಲೂ ದೂರ ಉಳಿದಿದ್ದು ವಿಶೇಷವಾಗಿತ್ತು. ಬೆಂಗಳೂರು ಸಚಿವರು ಗೈರಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಸಿಎಂ ಇದನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದು, ನಾನು ಬೆಂಗಳೂರಿಗೆ ಬಂದ ತಕ್ಷಣ ತುರ್ತು ಸಭೆ ಮಾಡಿದ್ದೇನೆ. ಹಾಗಾಗಿ ಇಂದಿನ ಸಭೆಗೆ ಯಾರು ಬಂದಿಲ್ಲ ಎಂದಿದ್ದಾರೆ. ಎಲ್ಲಾ ಸಚಿವರು ಆ್ಯಕ್ಟಿವ್ ಇದ್ದಾರೆ ಎಂದು ತಮ್ಮ ಸಚಿವರಿಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.

ಸಮಸ್ಯೆಗಳು ಕಾಣಿಸಿದಾಗ ಪರಿಹಾರದ ಮಾತನಾಡುವ ಸರ್ಕಾರಗಳು, ಯಥಾಸ್ಥಿತಿ ಕಾಯ್ದುಕೊಳ್ರಾತ್ತವೆ ಕೆಲಸ ಮಾಡುತ್ತವೆ. ಯಾವುದೇ ಸರ್ಕಾರ ಬರಲಿ, ಯಾವುದೇ ಸರ್ಕಾರ ಹೋಗಲಿ, ಬೆಂಗಳೂರಿನ ತಗ್ಗು ಪ್ರದೇಶದ ಜನರ ಗೋಳು ಮಾತ್ರ ನಿವಾರಣೆ ಆಗ್ತಿಲ್ಲ. ಮಳೆ ಬಂದಾಗ ಪರಿಹಾರದ ಮಾತನಾಡ್ತಾರೆ, ಆ ಬಳಿಕ ಆ ಕಡೆಗೆ ತಿರುಗಿಯೂ ನೋಡಲ್ಲ, ಪ್ರತಿವರ್ಷ ಚರಂಡಿ ಹೂಳು ಎತ್ತುವ ಚರ್ಚೆ ಮಾಡುತ್ತಾರೆ, ಆದ್ರೆ ಕಾರ್ಯಗತ ಮಾಡೋದಿಲ್ಲ. ಬೇಸಿಗೆ ಶುರುವಾಗುತ್ತಿದ್ದ ಹಾಗೆ ರಾಜಕಾಲುವೆ ಕಡೆಗೆ ತಿರುಗಿಯೂ ನೋಡಲ್ಲ. ಇದು ನಮ್ಮ ಸರ್ಕಾರಗಳ ಸ್ಥಿತಿಗತಿ.

Related Posts

Don't Miss it !