ಕತ್ತೆಗಳನ್ನು ಹುಡುಕಲು ವಿಶೇಷ ತನಿಖಾ ತಂಡ (SIT) ರಚಿಸಿದ ರಾಜಸ್ಥಾನ ಸರ್ಕಾರ..!

‘ದಿನವೂ ನನ್ನನ್ನು ನೋಡು ಅದೃಷ್ಟ ಬರುತ್ತೆ’ ಎನ್ನುವ ಫೋಟೋ ಕೆಲವೊಂದು ಕಡೆ ನೋಡಲು ಕಾಣಸಿಗುತ್ತದೆ. ಆದರೆ ರಾಜಸ್ಥಾನ ಪೊಲೀಸರಿಗೆ ಕತ್ತೆಗಳು ದೊಡ್ಡ ತಲೆನೋವು ತರಿಸಿವೆ. ಹನುಮಾನ್​ಘರ್​ ಜಿಲ್ಲೆಯ ಕೌಯಿಯಾನ್ ಪೊಲೀಸರು ಕತ್ತೆಗಳನ್ನು ಹುಡುಕಲು ಹರಸಾಹಸ ಮಾಡುತ್ತಿದ್ದಾರೆ. ಕಾಲುವೆ ಪ್ರದೇಶದಲ್ಲಿ ಕತ್ತೆಗಳ ಮೇಲೆ ಸಾಮಾನು, ಮರಳು ಮೂಟೆಗಳನ್ನು ಕೊಂಡೊಯ್ಯಲು ಕತ್ತೆಗಳನ್ನು ಬಳಸಲಾಗುತ್ತದೆ. ಕತ್ತೆಗಳ ಮೇಲೆ ವಸ್ತಗಳನ್ನು ಹೊರಿಸಿದ ಬಳಿಕ ಬಯಲು ಪ್ರದೇಶದಲ್ಲಿ ಮೇಯುವುದಕ್ಕೆ ಬಿಟ್ಟು ಬಿಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಕತ್ತೆಗಳು ಕಣ್ಮರೆ ಆಗಿದ್ದವು. ಕತ್ತೆ ಮಾಲೀಕರು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡುವಾಗ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿ, ಕತ್ತೆಗಳನ್ನು ಹುಡುಕಲು ಪೊಲೀಸರ ಸಹಾಯ ಪಡೆಯುವಂತೆ ಸೂಚಿಸಿದ್ದರು. ಅಂದಿನಿಂದ ಪೊಲೀಸರು ಕತ್ತೆ ಮಾಲೀಕರಿಂದ ಹಿಂಸೆಗೆ ಒಳಗಾಗಿದ್ದಾರೆ.

ದೂರನ್ನು ಅಲಕ್ಷ್ಯ ಮಾಡಿದ ಖಾಕಿಗೆ ಪ್ರತಿಭಟನೆ ಬಿಸಿ..!

ಕಳೆದ ಕೆಲವು ದಿನಗಳಿಂದ ಈಚೆಗೆ ಸರಿ ಸುಮಾರು 40 ಕತ್ತೆಗಳು ಕಣ್ಮರೆ ಆಗಿವೆ. ಕತ್ತೆಗಳನ್ನು ಕದ್ದಿದ್ದಾರೋ ಅಥವಾ ಕತ್ತೆಗಳು ಹಾದಿ ತಪ್ಪಿ ಎಲ್ಲಿಯಾದರೂ ಹೋಗಿವಿಯೋ ಅದೂ ಗೊತ್ತಿಲ್ಲ. ಆದರೆ ಕತ್ತೆಗಳ ಮಾಲೀಕರು ದೂರು ನೀಡಿದ ವೇಳೆ ಪೊಲೀಸರು ಆ ಬಗ್ಗೆ ಅಷ್ಟೊಂದು ಸರಿಯಾಗಿ ಗಮನ ಕೊಡದೆ ನಿರ್ಲಕ್ಷ್ಯ ಮಾಡಿದ್ದರು. ಇದರಿಂದ ಬೇಸತ್ತ ಕತ್ತೆ ಮಾಲೀಕರು ಸ್ಥಳೀಯ CPI( M ) ಕಾರ್ಯಕರ್ತರ ಜೊತೆಗೂಡಿ ಹೋರಾಟ ನಡೆಸಿದ್ದರು. ಪೊಲೀಸ್​ ಠಾಣೆಯ ಎದುರು ಮೊಕ್ಕಾಂ ಧರಣಿ ಕುಳಿತರು. ಆ ಬಳಿಕ ಎಚ್ಚೆತ್ತ ಖಾಕಿಪಡೆ ಕತ್ತೆಗಳನ್ನು ಹುಡುಕಲು ಶುರು ಮಾಡಿತ್ತು. ಆ ಬಳಿಕ ಸುಮಾರು 15 ಕತ್ತೆಗಳನ್ನು ಹಿಡಿದು ತಂದ ಪೊಲೀಸರು, ಕತ್ತೆ ಮಾಲೀಕರಿಗೆ ಒಪ್ಪಿಸಿದ್ದರು. ಮಾಲೀಕರು ಮನೆಗಳಿಗೆ ವಾಪಸ್​ ಹೋದ ಕೆಲವೇ ಸಮಯದಲ್ಲಿ ಮತ್ತೊಂದು ಸಮಸ್ಯೆ ತಲೆದೋರಿತ್ತು. ಮಾಲೀಕರು ತಮ್ಮ ಮಾತುಗಳಿಗೆ ಕತ್ತೆಗಳು ಸ್ಪಂದಿಸುತ್ತಿಲ್ಲ ಎಂದು ಮತ್ತೆ ವಾಪಸ್​ ಬಂದರು.

Read This:

ಕತ್ತೆಗಳಿಗೆ ನಾಮಕರಣ ಮಾಡಿದ್ದೇ ಇಕ್ಕಟ್ಟಿಗೆ ಕಾರಣ..!

15 ಕತ್ತೆಗಳನ್ನು ಪೊಲೀಸರು ಕೊಟ್ಟಾಗ ಮನೆಗೆ ಕರೆದೊಯ್ದ ಕತ್ತೆ ಮಾಲೀಕರು ತಮ್ಮ ಕತ್ತೆಗಳನ್ನು ಅವುಗಳ ಹೆಸರಿನಿಂದ ಕರೆದಿದ್ದಾರೆ. ಆದರೆ ಕತ್ತೆಗಳು ಮಾಲೀಕನ ಮಾತಿಗೆ ಸ್ಪಂದಿಸದ ಕಾರಣ ಕತ್ತೆ ಮಾಲೀಕರು ಇವು ನಮ್ಮ ಕತ್ತೆಗಳಲ್ಲ. ನಾವು ಕೂಗಿದಾಗ ನಮಗೆ ಸ್ಪಂದಿಸುತ್ತಿದ್ದವು. ಚಿಂಟು, ಬಬ್ಲು, ಪಿಂಟು, ಕಲ್ಲು ಎಂದು ಹೆಸರಿಟ್ಟಿದ್ದು, ಅವುಗಳನ್ನು ಅವುಗಳ ಹೆಸರಿನಿಂದ ಕರೆದಾಗ ಓಡಿ ಬರುತ್ತಿದ್ದವು ಎನ್ನುವುದು ಮಾಲೀಕರ ವಾದ. ಆದರೆ ಕತ್ತೆಗಳಿಗೆ ಯಾವುದೇ ಗುರುತು ಇಲ್ಲದಿರುವುದು ಹುಡುಕುವುದು ಕಠಿಣವಾಗಿದೆ ಎನ್ನುವುದು ಪೊಲೀಸರ ಅಳಲು. ಇನ್ನೂ ಈಗ ಕೊಟ್ಟಿರುವ ಕತ್ತೆಗಳನ್ನು ಬಳಸಿಕೊಂಡು ನಮ್ಮ ಕೆಲಸ ಮಾಡುವುದು ಕಠಿಣ. ಹೀಗಾಗಿ ಈ ಕತ್ತೆಗಳು ನಮಗೆ ಬೇಡ, ನಮ್ಮ ಕತ್ತೆಗಳನ್ನೇ ನಮಗೆ ಹುಡುಕಿಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಕತ್ತೆ ಮಾಲೀಕರು. ಆದರೆ ಚುನಾವಣೆ ನಿರೀಕ್ಷೆಯಲ್ಲಿರುವ ರಾಜಸ್ಥಾನ ಸರ್ಕಾರ ಕತ್ತೆ ಮಾಲೀಕರನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ ಎನ್ನಲಾಗ್ತಿದೆ.

Also Read:

ಖಾಕಿ ಕೆಲಸ ಬಿಟ್ಟು ಕತ್ತೆಗಳನ್ನೇ ಹುಡುಕುತ್ತಿದೆ..!

ರಾಜಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಲಿದ್ದು, ರಾಜಕೀಯ ಲಾಭಕ್ಕಾಗಿ ಕೆಲವು ರಾಜಕಾರಣಿಗಳೂ ಸಹ ಪೊಲೀಸರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಪೊಲೀಸರ ಆರೋಪ. ಇನ್ನೂ ನಮ್ಮ ಕತ್ತೆಗಳನ್ನು ಹುಡುಕಿ ಕೊಡದಿದ್ದರೆ ನಾವು ಉಪವಾಸ ಸತ್ಯಾಗ್ರಹ ಮಾಡ್ತೇವೆ ಎನ್ನುವುದು CPI (M) ಕಾರ್ಯಕರ್ತರು ಹಾಗೂ ಕತ್ತೆ ಮಾಲೀಕರ ಎಚ್ಚರಿಕೆ. ಈಗಾಗಲೇ ನಾಲ್ಕೈದು ಪೊಲೀಸರನ್ನು ಒಳಗೊಂಡಂತೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಆ ತಂಡ ಒಂದೊಂದೇ ಹಳ್ಳಿಗಳಿಗೂ ತೆರಳಿ ಕತ್ತೆಗಳನ್ನು ಹುಡುಕುವ ಕೆಲಸ ಮಾಡುತ್ತಿದೆ. ಎಲ್ಲೂ ಕೂಗಿದ ತಕ್ಷಣ ಓಡಿ ಬರುವ ಕತ್ತೆಗಳು ಪತ್ತೆಯಾಗಿಲ್ಲ. ಮುಂದೇನು ಮಾಡುವುದು ಎನ್ನುವ ಆತಂಕದಲ್ಲಿ ಖಾಕಿಪಡೆ ಚಿಂತೆಯಲ್ಲಿದೆ. ಅದೇನೇ ಇರಲಿ, ಕರ್ನಾಟಕದಲ್ಲಿ ಕಳೆದು ಹೋದ ಮನುಷ್ಯರನ್ನೇ ಪೊಲೀಸರು ಹುಡುಕುವುದು ಕಷ್ಟವಾಗಿರುವಾಗ ರಾಜಸ್ಥಾನ ಪೊಲೀಸರು ಕತ್ತೆಗಳನ್ನು ಹುಡುಕುತ್ತಿರುವುದು ವಿಶೇಷವೇ ಸರಿ.

Related Posts

Don't Miss it !