ರಾಜಕೀಯ ದಾಳ ಉರುಳಿಸಿ ಗೆಲ್ಲೋದ್ಯಾರು..? ರಾಜ್ಯಸಭೆ ಪಕ್ಕಾ ಲೆಕ್ಕಾಚಾರ..!!

ನಾಳೆ ವಿಧಾನಸಭಾ ಸದಸ್ಯರು ರಾಜ್ಯಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಇರುವ ನಾಲ್ಕು ಸ್ಥಾನಗಳಿಗೆ ಆರು ಮಂದಿ ಅಖಾಡದಲ್ಲಿ ಇದ್ದಾರೆ. ಈ ಬಾರಿ ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಮೂವರೂ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನಾಲ್ಕನೇ ಸ್ಥಾನಕ್ಕೆ ಬೇಕಾದ ಸೂಕ್ತ ಮತಗಳು ಯಾರ ಬಳಿಯಲ್ಲೂ ಇಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಸರಳವಾಗಿ ಎರಡು ಸ್ಥಾನ ಹಾಗೂ ಕಾಂಗ್ರೆಸ್​ ಒಂದು ಸ್ಥಾನವನ್ನು ಗೆಲ್ಲಲಿವೆ. ಉಳಿದ ಮತ್ತೊಂದು ಸ್ಥಾನಕ್ಕೆ ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್​ನಿಂದ ಮನ್ಸೂರ್​ ಅಲಿ ಖಾನ್​ ಹಾಗು ಬಿಜೆಪಿಯಿಂದ ಲೆಹರ್​ ಸಿಂಗ್​ ಅಭ್ಯರ್ಥಿ ಆಗಿದ್ದಾರೆ. ಆದರೆ ಗೆಲ್ಲೋದ್ಯಾರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯ ದಾಳ ಉರುಳಿಸುವ ಪ್ರಭಾವಿ ಈ ಚುನಾವಣೆಯಲ್ಲಿ ಗೆದ್ದು ಮೀಸೆ ತಿರುವಲು ವೇದಿಕೆ ಸಜ್ಜಾಗಿದೆ. ಇಲ್ಲಿ ಪಕ್ಕಾ ಲೆಕ್ಕಾಚಾರ ಬಿಡಿಸಿಡಲಾಗಿದೆ.

ಹೆಚ್ಚು ಮತ ಇರೋದು ಜೆಡಿಎಸ್​ನಲ್ಲಿ..! ಆದ್ರೆ ಕ್ರಾಸ್​ ಓಟ್​ ಭೀತಿ..!

ಬಿಜೆಪಿಯಲ್ಲಿ ನಿರ್ಮಲಾ ಸೀತಾರಾಮನ್​ ಹಾಗೂ ನಟ ಜಗ್ಗೇಶ್​ ಅವರನ್ನು ಆಯ್ಕೆ ಮಾಡಿದ ಬಳಿಕ ಉಳಿಯೋದು 32 ಮತಗಳು. ಪ್ರಮುಖ ಅಭ್ಯರ್ಥಿಗಳಿಗೆ ಒಂದೊಂದು ಮತ ಹೆಚ್ಚಾಗಿ ಹಾಕಿದರೆ ಉಳಿಯೋದು 30 ಮಾತ್ರ. ಇನ್ನೂ ಕಾಂಗ್ರೆಸ್​ನಲ್ಲಿ ಮೊದಲ ಅಭ್ಯರ್ಥಿ ಜೈರಾಮ್​ ರಮೇಶ್​ಗೆ 45 ಮತಗಳು ಬಿದ್ದ ಬಳಿಕ ಉಳಿಯುವುದು 26 ಮತಗಳು. ಹೀಗಿರುವಾಗ ಜೆಡಿಎಸ್​ನ ಕುಪೇಂದ್ರ ರೆಡ್ಡಿ 32 ಮತಗಳನ್ನು ಪಡೆದು ಜಯಶೀಲರಾಗಬಹುದು. ಆದರೆ ಜೆಡಿಎಸ್​ನ ಐವರು ಶಾಸಕರು ರೆಸಾರ್ಟ್​ಗೆ ಬಂದಿಲ್ಲ. ನೇರವಾಗಿ ಮತದಾನ ಕೇಂದ್ರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಅವರು ನೇರವಾಗಿ ಜೆಡಿಎಸ್​ ಅಭ್ಯರ್ಥಿಗೆ ಮತ ಚಲಾಯಿಸಿದರೆ ಅಥವಾ ಬಿಜೆಪಿಯ ಯಾವುದಾದರೂ ಓರ್ವ ಶಾಸಕ ಮತದಾನಕ್ಕೆ ಗೈರಾದರೂ ಜೆಡಿಎಸ್​ ಗೆಲುವುದು ಸುಲಭ.

ಇದನ್ನೂ ಓದಿ: ಹೆಂಡತಿ ಮೇಲೆ ಅನುಮಾನ ಕೈ ಕತ್ತರಿಸಿದ ಕಿರಾತಕ..!

ಡಿಕೆಶಿ, ಸಿ.ಟಿ ರವಿ, ಹೆಚ್​.ಡಿ ರೇವಣ್ಣ ಬೂತ್​ ಏಜೆಂಟ್​..!

ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೊದಲು ಪಕ್ಷ ಆಯ್ಕೆ ಮಾಡಿರುವ ಏಜೆಂಟ್​ಗೆ ತೋರಿಸಿ ಮತ ಚಲಾವಣೆ ಮಾಡಬೇಕು. ಒಂದು ವೇಳೆ ಮತವನ್ನು ತೋರಿಸದೆ ಬೂತ್​ಗೆ ಹಾಕಿದರೆ ಆ ಮತ ತಿರಸ್ಕೃತ ಆಗಲಿದೆ. ಹೀಗಾಗಿ ಮೂರೂ ಪಕ್ಷಗಳಿಂದಲೂ ಪ್ರಭಾವಿ ನಾಯಕರನ್ನೇ ಬೂತ್​ ಏಜೆಂಟ್​ ಆಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್​ನಿಂದ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಏಜೆಂಟ್​ ಆಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಿ.ಟಿ ರವಿ ಅವರನ್ನು ಬಿಜೆಪಿ ಸೂಚಿಸಿದೆ. ಇನ್ನೂ ಜೆಡಿಎಸ್​ನಿಂದ ಪ್ರಭಾವಿ ನಾಯಕ ಹೆಚ್​.ಡಿ ರೇವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಇಂದು ಪಕ್ಷ ಬದಲಾವಣೆಗೆ ಮಾನಸಿಕವಾಗಿ ಸಿದ್ಧವಾಗಿರುವ ಶಾಸಕರು ಬೇರೆ ಪಕ್ಷಗಳ ಅಭ್ಯರ್ಥಿಗೆ ಮತ ಹಾಕಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಗುಬ್ಬಿ ಜೆಡಿಎಸ್​ ಜೆಡಿಎಸ್​ ಶಾಸಕ ಶ್ರೀನಿವಾಸ್​ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕ್ರಾಸ್​ ಓಟಿಂಗ್​ ಭೀತಿ ಹೆಚ್ಚಾಗುವಂತೆ ಮಾಡಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಡಿ.ಕೆ ಶಿವಕುಮಾರ್ ಕೌಂಟರ್ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್​-ಜೆಡಿಎಸ್​ ಹೊಂದಾಣಿಕೆ ಆಗದಿದ್ದರೆ ಬಿಜೆಪಿ ವಿನ್​..!

ಕಾಂಗ್ರೆಸ್​-ಜೆಡಿಎಸ್​ ಹೊಂದಾಣಿಕೆ ಸಾಧ್ಯವಾದರೆ ಯಾವುದೇ ಕಾರಣಕ್ಕೂ ಬಿಜೆಪಿ ಗೆಲುವು ಸಾಧ್ಯವಿಲ್ಲ. ಕೊನೆ ಹಂತದ ತನಕ ಜೆಡಿಎಸ್​ ಕಾದು ನೋಡುವ ತಂತ್ರಗಾರಿಕೆ ಮಾಡಿದೆ. ಇದೇ ಕಾರಣಕ್ಕೆ ರೆಸಾರ್ಟ್​ನಲ್ಲೂ ಶಾಸಕರನ್ನು ಹಿಡಿದಿಟ್ಟುಕೊಂಡಿದೆ. ಇನ್ನೂ ಕಾಂಗ್ರೆಸ್​ನಿಂದ 2ನೇ ಅಭ್ಯರ್ಥಿ ಆಗಿರುವ ಮನ್ಸೂರ್​ ಅಲಿಖಾನ್​ ಸಿದ್ದರಾಮಯ್ಯ ಉರುಳಿಸಿರುವ ದಾಳ ಎನ್ನಲಾಗ್ತಿದೆ. ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆಗೂ ಮೊದಲೇ ಡಿ.ಕೆ ಶಿವಕುಮಾರ್​ ಜೊತೆಗೆ ಚರ್ಚೆ ನಡೆಸಿದ್ದು, ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ರಾಜಕೀಯ ಹಿತಕ್ಕಾಗಿ ಕಾಂಗ್ರೆಸ್​ ಪಕ್ಷ ಜೆಡಿಎಸ್​ ಬೆಂಬಲಿಸಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಡಿಕೆಶಿ ಸೂಚಿಸಿದ ಕೆಲವರು ಜೆಡಿಎಸ್​ ಅಭ್ಯರ್ಥಿ ಬೆಂಬಲಿಸಿದರೆ, ಸಿದ್ದರಾಮಯ್ಯ ಸೂಚಿಸುವ ಕೆಲವರು ಬಿಜೆಪಿ ಬೆಂಬಲಿಸಲು ತಯಾರಿ ಮಾಡಿದ್ದಾರೆ ಎನ್ನಲಾಗ್ತಿದೆ. ಬಿಎಸ್​ ಯಡಿಯೂರಪ್ಪ ಆಪ್ತರಾಗಿರುವ ಲೆಹರ್​ ಸಿಂಗ್​ ಗೆಲ್ಲಿಸಲು ಸಿದ್ದರಾಮಯ್ಯ- ಯಡಿಯೂರಪ್ಪ ಭೇಟಿ ಮಾಡಿದ್ದರು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅನ್ನೋದನ್ನು ಕಡಿಮೆ ಮತ ಹೊಂದಿರುವ ಕಾಂಗ್ರೆಸ್​ ನಿರ್ಧಾರ ಮಾಡಲಿದೆ. ಒಂದು ವೇಳೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಸಾಧ್ಯವಾದರೆ ಮುಂದಿನ ದಿನಗಳಲ್ಲಿ ಅತಂತ್ರ ಪರಿಸ್ಥಿತಿ ಎದುರಾದರೆ ಸರ್ಕಾರ ರಚನೆಯೇ ಕಷ್ಟಕರ ಆಗಲಿದೆ.

Related Posts

Don't Miss it !