‘ಮೋದಿ ಡೌನ್ ಡೌನ್’ ಎಂದಾಕೆ ಬಂಧನ..! ಕಾರಣ ಮಾತ್ರ ಮೋದಿ ಅಲ್ಲ..

ರೈತ ಕಿಸಾನ್ ಸಂಘಟನೆ ನಾಯಕ ರಾಕೇಶ್‌ಗೆ ಬೆಂಗಳೂರಿನಲ್ಲಿ ಮಸಿ ಬಳಿದಿದ್ದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಶಿವಕುಮಾರ್‌ನನ್ನು ಕೃತ್ಯಕ್ಕೆ ಪ್ರಚೋದಿಸಿ ಕರೆತಂದಿದ್ದ ಉಮಾದೇವಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಸಿ ಬಳಿದುಯ ಹಲ್ಲೆ ಮಾಡಿದ್ದ ವಿಚಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸರು ಶಿವಕುಮಾರ್​ ಎಂಬಾತನನ್ನು ಅರೆಸ್ಟ್​ ಮಾಡಿದ್ದರು. ಆರೋಪಿ ನಂಬರ್​ 2 ಆಗಿದ್ದ ಶಿವಕುಮಾರ್​ನನ್ನು ಕೃತ್ಯ ಎಸಗಲು ಕರೆತಂದಿದ್ದು ಉಮಾದೇವಿ ಎನ್ನುವ ಮಾಹಿತಿ ಸಿಗ್ತಿದ್ದ ಹಾಗೆ ಹೈಗ್ರೌಂಡ್ಸ್​ ಪೊಲೀಸ್ರು ಬಲೆ ಬೀಸಿದ್ರು. ಈ ಉಮಾದೇವಿ ಮಸಿ ಬಳಿದ ಬಳಿಕ ಮೋದಿ ಡೌನ್​ಡೌನ್​ ಎಂದು ವೈರಲ್​ ಆಗಿದ್ದಾಕೆ ಎನ್ನುವುದು ಗೊತ್ತಾಗಿ ಪೊಲೀಸರೇ ಕಕ್ಕಾಬಿಕ್ಕಿ ಆಗಿದ್ದಾರೆ.

ಮೋದಿ ಡೌನ್​ ಡೌನ್​ ಅಂದಿದ್ದು ಯಾಕೆ ಉಮಾದೇವಿ..?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ ಸಂಘಟಿಸಿದ್ದ ರಾಕೇಶ್​ ಟಿಕಾಯತ್​ಗೆ ಮಸಿ ಬಳಿಯುವುದು ಉದ್ದೇಶ ಆಗಿತ್ತು. ಶಿವ ಶಕ್ತಿ ಮಹಿಳಾ ಸಂಘಟನೆ ನಡೆಸುತ್ತಿದ್ದ ಉಮಾದೇವಿ, ತನ್ನ ಸಂಘಟನೆ ಬಗ್ಗೆಯೂ ಪ್ರಚಾರ ಮಾಡಲು ಬಯಸಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ಮೋದಿ ಪರವಾಗಿ ಮಸಿ ಬಳಿದು ಸುದ್ದಿಯಾಗುವ ಆತುರಲ್ಲಿ ಜೈಕಾರ ಯಾವುದು..? ಧಿಕ್ಕಾರ ಯಾವುದು ಎನ್ನುವುದು ಗೊತ್ತಾಗದೆ ತಡಬಡಾಯಿಸಿ ಮೋದಿ ಮೋದಿ ಅಂತಾ ಆರೋಪಿ ಶಿವಕುಮಾರ್​ ಕೂಗಿದ್ರೆ ಈಕೆ ಪಕ್ಕದಲ್ಲಿ ನಿಂತು ಡೌನ್​ ಡೌನ್​ ಎನ್ನುತ್ತಿದ್ದಳು. ಆ ಬಳಿಕ ಡೌನ್​ ಡೌನ್​ ಅಲ್ಲ, ಜಿಂದಾಬಾದ್ ಎನ್ನುವುದನ್ನು ಹೇಳಿಕೊಟ್ಟಿದ್ದ. ಈ ವಿಚಾರ ಕೂಡ ವೈರಲ್​ ಆಗಿತ್ತು. ಇದೀಗ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್​ ಬುಕ್​ ಮಾಡಿದ್ದಾರೆ.

ಕೇಸ್​ ಮಾಡಿದ್ದು ಒಂದು ಈಗ ಆಗಿದ್ದು ಮತ್ತೊಂದು..!

ರಾಕೇಶ್​ ಟಿಕಾಯತ್​ ಮೇಲೆ ಮಸಿ ಬಳಿದು ಹಲ್ಲೆ ಮಾಡಲು ಶಿವಕುಮಾರ್​ನನ್ನು ಕರೆತಂದ ಆರೋಪದಲ್ಲಿ ಬಂಧಿಸಲು ತೆರಳಿದ್ದ ಪೊಲೀಸರಿಗೆ ಉಮಾವತಿ ಅಸಲಿಯತ್ತು ಗೊತ್ತಾಗಿದೆ. ಉಮಾದೇವಿ ಬಂಧನ‌ ಬಳಿಕ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಮನೆಯಲ್ಲಿ ಲಾಂಗು ಮಚ್ಚುಗಳು ಪತ್ತೆ ಆಗಿವೆ. ಲಾಂಗು, ‌ಮಚ್ಚುಗಳನ್ನು ವಶಕ್ಕೆ ಪಡೆದಿರುವ ಹೈಗ್ರೌಂಡ್ಸ್​ ಪೊಲೀಸರು ತನಿಖೆ ಮಾಡ್ತಿದ್ದಾರೆ. ಉಮಾದೇವಿ ಬಂಧನದ ಬಳಿಕ ಮಾತನಾಡಿರುವ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ, ಈಗಾಗಲೇ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ. ಮೂರನೇ ಆರೋಪಿ ಶಿವಕುಮಾರ್​ನನ್ನ ಉಮಾದೇವಿ ಕರೆತಂದಿದ್ರು. ಗಾಂಧಿಭವನಕ್ಕೆ ಬರುವಂತೆ ಉಮಾದೇವಿ ಹೇಳಿದ್ರು ಅಂತ ಆರೋಪಿ ಹೇಳಿದ್ದಾನೆ ಎಂದಿದ್ದಾರೆ.

ಮಸಿ ಬಳಿಕ ಪ್ರಕರಣದಲ್ಲಿ ಬಂಧಿತಳಾಗಿರುವ ಉಮಾದೇವಿ ಹೆಬ್ಬಾಳದ ಮನೆಯಲ್ಲಿ ಸರ್ಚ್ ಮಾಡಿದ್ದೇವೆ. ಉಮಾದೇವಿ ಮನೆಯಲ್ಲಿ 7 ಮಚ್ಚು ಪತ್ತೆಯಾಗಿವೆ. ಉಮಾದೇವಿಯನ್ನ ನ್ಯಾಯಾಲಯದ ಎದುರು ಹಾಜರು ಪಡಿಸಿ ಪುನಃ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಆರ್ಮ್ಸ್ ಅಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಒಟ್ಟಾರೆ ಮಸಿ ಬಳಿದು ಪ್ರಖ್ಯಾತಿ ಹೊಂದುವ ಉದ್ದೇಶದಿಂದ ಮೋದಿ ಡೌನ್​ ಡೌನ್​ ಎಂದಿದ್ದ ಉಮಾದೇವಿಯನ್ನು ಬಂಧಿಸಲಾಗಿದೆ. ಮಸಿ ಬಳಿಯಲು ಮೋದಿಯೇ ಪ್ರೇರಣೆ ಎನ್ನುವ ಸುಳ್ಳು ಸಂದೇಶ ಹೋಗುವಂತೆ ಮಾಡಿದ್ದ ಉಮಾದೇವಿ ವಿರುದ್ಧ ಬಿಜೆಪಿ ನಾಯಕರೂ ಕೂಡ ಪ್ರಕರಣ ದಾಖಲಿಸಬೇಕಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತವರನ್ನು ಬಂಧನದಲ್ಲೇ ಇಡಬೇಕಿದೆ.

Related Posts

Don't Miss it !