ಡಿಕೆಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ಜಾರಕಿಹೊಳಿ ಫ್ಯಾಮಿಲಿ ತಂತ್ರ..!?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲು ಪ್ರಮುಖ ಕಾರಣ ಡಿಕೆ ಶಿವಕುಮಾರ್ ವಿರುದ್ಧದ ದ್ವೇಷ. ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ನಿರ್ಧಾರಗಳಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದೆ ಎನ್ನುವ ಕಾರಣಕ್ಕೆ ಇಬ್ಬರ ನಡುವೆ ಸಮರವೇ ನಡೆದಿತ್ತು. ಪಕ್ಷದೊಳಗಿನ ಸಮರ ಸ್ಫೋಟವಾಗಿ ಕಾಂಗ್ರೆಸ್ ಪಕ್ಷದಿಂದ ಹೊರಹೋಗಿದ್ದು ಮಾತ್ರವಲ್ಲದೆ ತನ್ನ ಜೊತೆಗೆ ಇನ್ನೂ 12 ಜನ ಶಾಸಕರನ್ನು ಒಟ್ಟುಗೂಡಿಸಿಕೊಂಡು ಬಿಜೆಪಿ ಸೇರಿದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು ಎಲ್ಲವೂ ಇತಿಹಾಸ.

ಡಿ.ಕೆ ಶಿವಕುಮಾರ್ ವಿರುದ್ಧ ಸೇಡು ತೀರಿತು.. ಮತ್ತೆ ಸೃಷ್ಟಿಯಾಯ್ತು..!

ಡಿಕೆ ಶಿವಕುಮಾರ್ ಆಪ್ತ ಬಳಗದ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಸಿಗ್ತಿದೆ ಎನ್ನುವ ಕಾರಣಕ್ಕೆ ರಮೇಶ್ ಜಾರಕಿಹೊಳಿ ಸರ್ಕಾರ ಉರುಳಿಸಿದ್ದೂ ಆಯ್ತು, ಡಿ.ಕೆ ಶಿವಕುಮಾರ್ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆಯನ್ನು ಪಡೆದು ಮಂತ್ರಿಯಾಗುವ ಮೂಲಕ ಸೇಡು ತೀರಿಸಿಕೊಂಡಿದ್ದೂ ಆಯ್ತು. ಆದರೆ ಇದೀಗ ಮತ್ತೊಂದು ಹೊಸ ಸೇಡು ರಮೇಶ್ ಜಾರಕಿಹೊಳಿಯನ್ನು ಕಾಡುತ್ತಿದೆ. ಹಠಕ್ಕಾಗಿ ಸರ್ಕಾರ ಉರುಳಿಸಿ ಹೊಸ ಸರ್ಕಾರವೇನೋ ಸ್ಥಾಪನೆಯಾಯ್ತು. ಹಠಕ್ಕಾಗಿಯೇ ಪಟ್ಟು ಹಿಡಿದು ಜಲಸಂಪನ್ಮೂಲ ಖಾತೆಯನ್ನೂ ಪಡೆದಿದ್ದರು. ಅಧಿಕಾರ ಅನುಭವಿಸಲು ಸಾಧ್ಯವಾಗಲಿಲ್ಲ. ರಮೇಶ್ ಜಾರಕಿಹೊಳಿ ಇರುವಂತಹ ಸಿ.ಡಿ ಬಿಡುಗಡೆಯಾಯ್ತು. ಮಂತ್ರಿ ಸ್ಥಾನವೂ ಹೋಯ್ತು, ಕ್ಷೇತ್ರದ ಜನರ ಎದುರು ಮುಖ ತೋರಿಸಲು ಇರುಸುಮುರುಸು ಆಗುವಂತಾಯ್ತು. ಈ ಸಂಕಷ್ಟಕ್ಕೆ ಸ್ವತಃ ಡಿ.ಕೆ ಶಿವಕುಮಾರ್ ಅವರೇ ಕಾರಣ ಎನ್ನುವುದು ರಮೇಶ್ ಜಾರಕಿಹೊಳಿ ಸೇರಿದಂತೆ ಆಪ್ತ ಬಳಗದ ಗುಮಾನಿ. ಇದೇ ಕಾರಣಕ್ಕೆ ಸೇಡು ಮತ್ತಷ್ಟು ಹೆಚ್ಚಾಗಿದೆ. ಈಗ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಅಣ್ಣತಮ್ಮಂದಿರು ಒಂದಾಗಿದ್ದಾರೆ.

Read this;

ಬೆಳಗಾವಿ ಪರಿಷತ್ ಚುನಾವಣೆ, ಕಾಂಗ್ರೆಸ್, ಬಿಜೆಪಿ ಫ್ರೆಂಡ್ಲಿ ಫೈಟ್..!

ಬೆಳಗಾವಿ, ಧಾರವಾಡ ಸೇರಿದಂತೆ ಎರಡು ಸ್ಥಾನಗಳು ಇರುವ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಪರೋಕ್ಷವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಎರಡೂ ಸ್ಥಾನಗಳಿಗೂ ಸ್ಪರ್ಧೆ ಮಾಡದೆ ಒಂದೊಂದು ಸ್ಥಾನಗಳಿಗೆ ಮಾತ್ರ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದಾರೆ. ಬೆಳಗಾವಿಯಲ್ಲೂ ಬಿಜೆಪಿ ಒಬ್ಬರನ್ನೇ ಕಣಕ್ಕಿಳಿಸಿದ್ದು, ಮಹಾಂತೇಶ್ ಕವಟಗಿಮಠ ಭವಿಷ್ಯದ ಜೊತೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳೆ ಭವಿಷ್ಯ ಕೂಡ ಡೋಲಾಯಮಾನವಾಗಿದೆ. ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಕಾಂಗ್ರೆಸ್ ಸೋಲಿಸಲು ಎರಡನೇ ಮತ ಚಲಾಯಿಸಿ ಎನ್ನುವುದು ರಮೇಶ್ ಜಾರಕಿಹೊಳಿ ಭಾಷಣ. ಆದರೆ ಪಕ್ಷೇತರ ಅಭ್ಯರ್ಥಿ ಆಗಿರುವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾತಕಿಹೊಳಿ, ಮೊದಲ ಪ್ರಾಶಸ್ತ್ಯದ ಮತ ನನಗೆ ನೀಡಿ, ಎರಡನೇ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಸೋಲಿಸಲು ಹಾಕಿ ಎನ್ನುತ್ತಿದ್ದಾರೆ. ಅದೂ ಕೂಡ ಒಂದೇ ವೇದಿಕೆಯಲ್ಲಿ ಇಬ್ಬರ ಪ್ರಚಾರ ಕಾರ್ಯ ಬೇರೆ ಬೇರೆ ಸಮಯದಲ್ಲಿ ನಡೆಯುತ್ತಿದೆ. ನಿನ್ನೆ ಬಾಲಚಂದ್ರ ಜಾರಕಿಹೊಳಿ ಹೇಳಿರುವ ಮಾತು ಕಾಂಗ್ರೆಸ್‌ಗೆ ಶಾಕ್ ಕೊಡುವಂತಿದೆ

ರಾಜಕಾರಣ ಬೇರೆ ಇರಬಹುದು ಫ್ಯಾಮಿಲಿ ವಿಚಾರದಲ್ಲಿ ಒಂದೇ..!!

ಒಂದೇ ವೇದಿಕೆಯ ಮೇಲೆ ಬೆಳಗ್ಗೆ ಅಣ್ಣ ಒಂದು ರೀತಿ ಪ್ರಚಾರ ಮಾಡಿದ್ರೆ ಮಧ್ಯಾಹ್ನ ತಮ್ಮ ಇನ್ನೊಂದು ರೀತಿಯಲ್ಲಿ ಪ್ರಚಾರ ಮಾಡ್ತಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗಲೂ ಪಕ್ಷಕ್ಕೆ ಮೋಸ ಮಾಡಿದ್ರು, ಈಗ ಬಿಜೆಪಿಗೆ ಹೋದ ಮೇಲೂ ಪಕ್ಷದ ಅಭ್ಯರ್ಥಿಯಾಗಿರುವ ಮಹಾಂತೇಶ್ ಕವಟಗಿಮಠ ಅವರಿಗೆ ಮೋಸ ಮಾಡಲಾಗ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಟೀಕೆ ಮಾಡಿದ್ದರು. ಆ ಮಾತಿಗೆ ತಿರುಗೇಟು ನೀಡಿರುವ ಬಾಲಚಂದ್ರ ಜಾರಕಿಹೊಳಿ, ನಾವು ಬೇರೆ ಬೇರೆ ಪಕ್ಷದಲ್ಲಿ ರಾಜಕಾರಣ ಮಾಡುತ್ತಿರಬಹುದು, ಆದರೆ ಕುಟುಂಬದ ವಿಚಾರ ಬಂದಾಗ ನಾವೆಲ್ಲರೂ ಒಂದೇ ಎಂದಿದ್ದಾರೆ. ಅಂದರೆ ಲಖನ್ ಗೆಲ್ಲಿಸೋಕೆ ನಾವೆಲ್ಲರೂ ಒಟ್ಟಾಗುತ್ತೇವೆ ಎನ್ನುವ ಸುಳಿವು ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಒಟ್ಟುಗೂಡಿ ಲಖನ್ ಗೆಲ್ಲಿಸಿಕೊಳ್ಳುವುದು ಶತಸಿದ್ಧ ಎನ್ನಲಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಒಬ್ಬರು ಮಾತ್ರ ಗೆಲ್ಲಲಿದ್ದಾರೆ. ಯಾರು ಪಕ್ಷದ್ರೋಹ ಮಾಡಲಿದ್ದಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರ ಆಗಲಿದರ. ಸತೀಶ್ ಜಾರಕಿಹೊಳಿ ಮಾತ್ರ ಕುಟುಂಬಕ್ಕಿಂತ ಪಕ್ಷದ ನಿರ್ಧಾರ ಮುಖ್ಯ ಎಂದಿದ್ದಾರೆ. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಎಲ್ಲವೂ ಬಯಲಾಗಲಿದೆ.

Related Posts

Don't Miss it !