ವಲಸಿಗರಲ್ಲಿ ಯಾರೆಲ್ಲಾ ಮಂತ್ರಿ ಸ್ಥಾನ ಕಳೆದುಕೊಳ್ತಾರೆ!? ಇಲ್ಲಿದೆ ಲಿಸ್ಟ್​..

ಕಾಂಗ್ರೆಸ್​ನಿಂದ ಅಧಿಕಾರಕ್ಕಾಗಿ ವಲಸೆ ಬಂದಿದ್ದ ಬಹುತೇಕ ಮಂದಿ ಮತ್ತೆ ಕಾಂಗ್ರೆಸ್​ ಗೂಡು ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್​ ಗಮನಕ್ಕೂ ಬಂದಿದ್ದು, ಚುನಾವಣೆಗೂ ಮುನ್ನವೇ ಕೆಲವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪಕ್ಷ ನಿಷ್ಠರಿಗೆ ಮಣೆ ಹಾಕುವ ಪೂರ್ವ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಜೆಟ್​ಗೂ ಮುನ್ನ ಸಂಪುಟ ವಿಸ್ತರಣೆ ಆದರೆ ಕೆಲವು ಯೋಜನೆಗಳನ್ನು ತಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗುವ ಹುಮ್ಮಸ್ಸಿನಲ್ಲಿದ್ದಾರೆ ಮೂಲ ಬಿಜೆಪಿ ನಾಯಕರು. ವಲಸಿಗರ ಬಗ್ಗೆ ನೇರವಾಗಿಯೇ ಬಸನಗೌಡ ಪಾಟೀಲ್​ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಬಿಟ್ಟು ಹಾರಲು ತಯಾರಿ ನಡೆಸಿದ್ದಾರೆ. ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್​ ಬುಕ್​ ಮಾಡಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ. ಹಾಗಿದ್ದರೆ ಯಾವ ಸಚಿವರಿಗೆ ಸೋಡಾ ಚೀಟಿ ಸಿಗಲಿದೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲೇ ಸಿಎಂ ಸುಳಿವು..!

ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಬಾರಿ ಜೆಡಿಎಸ್​ಗೆ ಸೋಲುಣಿಸುವ ಮಾತನಾಡುತ್ತಿದ್ದ ಕೆ,ಸಿ ನಾರಾಯಣಗೌಡ ಅವರನ್ನು ಶಿವಮೊಗ್ಗ ಜಿಲ್ಲಾ ಮಂತ್ರಿಯನ್ನಾಗಿ ಸಿಎಂ ನೇಮಕ ಮಾಡಿದ್ದಾರೆ. ಕಳೆದ ವಿಧಾನ ಪರಿಷತ್​ ಚುನಾವಣೆಯಲ್ಲಿ ಅಧಿಕೃತ ಬಿಜೆಪಿ ಅಭ್ಯರ್ಥಿಯನ್ನು ಕೊನೇ ಕ್ಷಣದಲ್ಲಿ ನಿವೃತ್ತಗೊಳಿಸಿ ಕಾಂಗ್ರೆಸ್​ ಪರವಾಗಿ ಮತ ಹಾಕುವಂತೆ ಸೂಚಿಸಿದ ಆರೋಪ ನಾರಾಯಣಗೌಡರ ಮೇಲಿದೆ. ಮಂಡ್ಯ ಜಿಲ್ಲೆಯ ಪ್ರಬಲ ಕಾಂಗ್ರೆಸ್​ ನಾಯಕ ಎನ್​ ಚಲುವರಾಯಸ್ವಾಮಿ ಜೊತೆಗೆ ಈಗಾಗಲೆ ಕಾಂಗ್ರೆಸ್​ ಸೇರುವ ಬಗ್ಗೆ ಪೂರ್ವಭಾವಿ ಸಭೆ ನಡೆದಿದ್ದು, ಸದ್ಯದಲ್ಲೇ ಬಿಜೆಪಿ ಬಿಟ್ಟು ಹೊರ ಬರಲಿದ್ದಾರೆ ಎನ್ನಲಾಗ್ತಿದೆ. ಇನ್ನೂ ಆನಂದ್​ ಸಿಂಗ್​ ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬೆಂಬಲಿಗರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸಿ ಶಕ್ತಿ ಪ್ರದರ್ಶನ ಮಾಡಿದ್ದ ಕಾರಣದಿಂದಲೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಕೊಟ್ಟು ಸಚಿವ ಸ್ಥಾನದಿಂದ ಕೆಳಕ್ಕಿಳಿಸುವ ಚಿಂತನೆ ನಡೆದಿದೆ ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ; ಗೆಲುವಿನ ಕನಸಿನಲ್ಲಿ ಸೋಲುವ ಆತಂಕ..! ಕಾಂಗ್ರೆಸ್​ನಲ್ಲಿ ಗೆದ್ದವರು ಸಿಎಂ..!

ಹೆಬ್ಬಾರ್​, ಎಂಟಿಬಿ, ಸುಧಾಕರ್​ ಮೇಲೂ ಡೌಟ್​..!

ಸಚಿವರಾದ ಶಿವರಾಮ್​ ಹೆಬ್ಬಾರ್​, ಡಾ. ಸುಧಾಕರ್​, ಎಂಟಿಬಿ ನಾಗರಾಜ್​ ಮೇಲೂ ಬಿಜೆಪಿಗೆ ಅನುಮಾನ ಮೂಡಿದ್ದು, ಚುನಾವಣೆ ಘೋಷಣೆ ಆದ ಬಳಿಕ ಯಾವುದೇ ಕ್ಷಣದಲ್ಲಿ ಕಾಂಗ್ರೆಸ್​ ಬೆಂಬಲಿಸುವ ಅನುಮಾನವಿದೆ. ಈ ಕಾರಣದಿಂದ ಉತ್ತರ ಕನ್ನಡದ ಶಿವರಾಮ್​ ಹೆಬ್ಬಾರ್​ ಅವರಿಗೆ ಹಾವೇರಿ, ಚಿಕ್ಕಬಳ್ಳಾಪರದಲ್ಲಿ ಕಾರುಬಾರು ನಡೆಸಲು ಹಣಿಯಾಗಿದ್ದ ಸುಧಾಕರ್​ಗೆ ಬೆಂಗಳೂರು ಗ್ರಾಮಾಂತರ, ಇನ್ನೂ ಬೆಂಗಳೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವಾದ ಹೊಸಕೋಟೆಯಲ್ಲಿ ಹಿಡಿತ ಸಾಧಿಸಲು ರಣತಂತ್ರ ರೂಪಿಸಿದ್ದ ಎಂಟಿಬಿ ನಾಗರಾಜ್​ಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ. ಇನ್ನೂ ಎಸ್​.ಟಿ ಸೋಮಶೇಖರ್​, ಮುನಿರತ್ನ, ಗೋಪಾಲಯ್ಯ, ಭೈರತಿ ಬಸವರಾಜ್​ ಪಕ್ಷ ಬಿಡುವ ಬಗ್ಗೆ ಸದ್ಯಕ್ಕೆ ಯಾವುದೇ ಸಂದೇಹ ಇಲ್ಲದ ಕಾರಣದಿಂದ ಅವರು ಕೋವಿಡ್​ ಉಸ್ತುವಾರಿಗಳಾಗಿದ್ದ ಜಿಲ್ಲೆಗಳನ್ನೇ ನೀಡಲಾಗಿದೆ. ಹಾವೇರಿ ಜಿಲ್ಲೆ ಮೇಲೆ ಬಿ.ಸಿ ಪಾಟೀಲ್​ ಹಿಡಿತ ತಪ್ಪಿಸುವ ಉದ್ದೇಶದಿಂದ ಚಿತ್ರದುರ್ಗ ಹಾಗೂ ಗದಗ ಜಿಲ್ಲಾ ಉಸ್ತುವಾರಿಯಾಗಿ ಪ್ರಮೋಷನ್​ ಕೊಟ್ಟು ದೂರ ಇಡಲಾಗಿದೆ ಎನ್ನುವ ಮಾಹಿತಿ ಸಿಗ್ತಿದೆ.

ಇದನ್ನೂಓದಿ: ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಉಸ್ತುವಾರಿ ಗೊಂದಲ..! ಸಿಎಂ ರಾಜಕೀಯ ಲೆಕ್ಕಾಚಾರ

ಬಿಜೆಪಿಯಲ್ಲೂ ಮಹತ್ತರ ಬದಲಾವಣೆ ಮುನ್ಸೂಚನೆ..!

ಬಿಜೆಪಿ ಈಗ ಯಾರಿಗೆಲ್ಲಾ ಜಿಲ್ಲಾ ಉಸ್ತುವಾರಿ ಪಟ್ಟ ಅದಲು ಬದಲಾಗಿಯೋ ಅವರಿಗೆಲ್ಲಾ ಸಚಿವ ಸ್ಥಾನ ತೂಗುಗತ್ತಿಯಲ್ಲಿದೆ ಎನ್ನುವ ಮಾತುಗಳು ಅಲ್ಲಲ್ಲಿ ಹೊರಸೂಸುತ್ತಿವೆ. ಕೆಲವೊಂದು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಹಾಗೂ ವಲಸಿಗರ ಹಿಡಿತದಿಂದ ತಪ್ಪಿಸಲು ಉಸ್ತುವಾರಿ ನೀಡಲಾಗಿದೆ. ಇನ್ನುಳಿದ ಬಹುತೇಕ ಹಿರಿಯರು ಹಾಗೂ ಖಾತೆ ನಿರ್ವಹಣೆಯಲ್ಲಿ ವಿಫಲರಾಗಿರುವ ಬಹುತೇಕ ಮಂದಿಗೆ ಸಂಪುಟದಿಂದ ಕೊಕ್​ ನೀಡಲು ಸಂಪೂರ್ಣ ತಯಾರಿ ಮಾಡಲಾಗ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಇದೇ ತಂಡವೂ ಮುಂದಿನ 1 ವರ್ಷ ಅಧಿಕಾರದಲ್ಲಿ ಇದ್ದು, ಚುನಾವಣೆ ಎದುರಿಸುವುದು ಕಷ್ಟಕರ ಎನ್ನುವ ಅಭಿಪ್ರಾಯಕ್ಕೆ ಬಿಜೆಪಿ ಹೈಕಮಾಂಡ್​ ನಾಯಕರು ಬಂದಿದ್ದು, ಹೊಸ ತಂಡವನ್ನು ಕಟ್ಟವು ಎಲ್ಲಾ ತಯಾರಿಗಳು ನಡೆದಿವೆ ಎನ್ನಲಾಗ್ತಿದೆ. ಒಟ್ಟಾರೆ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿಗಳ ನೇಮಕದಲ್ಲೇ ಭಾರೀ ಲೆಕ್ಕಾಚಾರದ ಆಟವಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಾಗುತ್ತಾ ಸಾಗಬೇಕಿದೆ ಅಷ್ಟೆ.

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !