ಬಂಡಾಯಕ್ಕೆ ಬಂಡೆಯಾಗಿದ್ದ ರೇಣುಕಾಚಾರ್ಯಗೆ ಬಂಪರ್ ಗಿಫ್ಟ್..?

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಉದ್ಬವ ಆಗಿದ್ದ ನಾಯಕತ್ವ ಬದಲಾವಣೆ ಕೂಗು ಕೇಳಿಬಂದಿತ್ತು. ಬಿ.ಎಸ್ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡಿ ಬೇರೊಬ್ಬರಿಗೆ ನಾಯಕತ್ವ ವಹಿಸಬೇಕು. ಮುಂದಿನ ಚುನಾವಣೆಗೆ ಸಜ್ಜಾಗಲು ಹೊಸ ನಾಯಕತ್ವದ ಅವಶ್ಯಕತೆ ಇದೆ ಎನ್ನುವ ಕೂಗು ದೆಹಲಿಯನ್ನು ತಲುಪಿತ್ತು. ದೆಹಲಿಯಿಂದ ಹೈಕಮಾಂಡ್ ನಾಯಕರು ಶಾಸಕರ ಸಮಸ್ಯೆ ಆಲಿಸಿ ವರದಿ ಸಲ್ಲಿಸುವಂತೆ ಸೂಚಿಸಿ ಅರುಣ್ ಸಿಂಗ್ ಅವರನ್ನು ಕಳುಹಿಸಿತ್ತು. ಆ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಪರವಾಗಿ ಶಾಸಕರನ್ನು ಒಟ್ಟುಗೂಡಿಸಲು  ಟೊಂಕಕಟ್ಟಿ ನಿಂತಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ. ಇದು ಮತ್ತಷ್ಟು‌ ಬಂಡಾಯದ ಭೀತಿಯನ್ನೂ ಹುಟ್ಟಿಸಿದೆ.


ರೇಣುಕಾಚಾರ್ಯ ಕ್ಷೇತ್ರಕ್ಕೆ 500 ಕೋಟಿ ಅನುದಾನ..!!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುವುದಕ್ಕೆ ಪ್ರಮುಖ ಕಾರಣ ಆಡಳಿತ ತಾರತಮ್ಯ. ತಮಗೆ ಬೇಕಾದವರಿಗೆ ಹೆಚ್ಚು ಅನುದಾನ ಕೊಡ್ತಾರೆ. ವರ್ಗಾವಣೆಯಲ್ಲಿ ಸಿಎಂ ಬದಲು ಅವರ ಪುತ್ರ ಬಿ.ವೈ ವಿಜಯೇಂದ್ರ ಮೂಗು ತೂರಿಸುತ್ತಾರೆ. ಸಚಿವರಿಗೆ ಗೊತ್ತಿಲ್ಲದೆ ಕೆಲವೊಂದು ಇಲಾಖೆಯಲ್ಲಿ ಕೆಲಸಗಳು ಆಗುತ್ತವೆ. ಪಕ್ಷ ನಿಷ್ಠರನ್ನು ಕನಿಷ್ಟವಾಗಿ ಕಾಣಲಾಗುತ್ತದೆ ಎನ್ನುವುದೇ ಆಗಿತ್ತು. ಇದೀಗ ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಂಡಾಯಕ್ಕೆ ಬಂಡೆಯಾಗಿ‌ ನಿಂತು ಸಿಎಂ ಯಡಿಯೂರಪ್ಪ ಪರವಾಗಿ ಶಾಸಕರ ಗುಂಪು ಕಟ್ಟಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಕ್ಷೇತ್ರಕ್ಕೆ ಬರೋಬ್ಬರಿ 509 ಕೋಟಿ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದು..!

ಅರಸೀಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 307ಕೋಟಿ ರೂಪಾಯಿ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಶಾಸಕ ರೇಣುಕಾಚಾರ್ಯ ಪ್ರತಿನಿಧಿಸುವ ಹೊನ್ನಾಳಿ ತಾಲೂಕಿನ ಗೋವಿನಕೋಯಿ, ಹನುಮಸಾಗರ ಏತನೀರಾವರಿಗೆ 415 ಕೋಟಿ ರೂಪಾಯಿ ಹಾಗೂ ಹೊನ್ನಾಳಿ ತಾಲೂಕಿನ 94 ಕೆರೆ ತುಂಬಿಸುವ  ಸಾಸಿವೆಹಳ್ಳಿ ಏತನೀರಾವರಿಗೆ ಹೆಚ್ಚುವರಿಯಾಗಿ 167 ಕೋಟಿ ರೂಪಾಯಿ ಹಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲೇ ಕೊಂಕು ಕೂಡ ಕೇಳಿಬಂದಿದೆ.

ಗೌಪ್ಯ ಅನುದಾನಕ್ಕೆ‌ ಯೋಗೇಶ್ವರ್ ಪ್ರಶ್ನೆ..!?

ಸಿಎಂ ಬಿ.ಎಸ್ ಯಡಿಯೂರಪ್ಪ ನಾಯಕತ್ವ ಬದಲಿಸಬೇಕು ಅನ್ನೋ ಕೂಗಿಗೆ ಮೊದಲಿನಿಂದಲೂ‌ ಸಾಥ್ ಕೊಟ್ಟ ಯೋಗೆರಶ್ವರ್ ಇನ್ನೂ ತಣಿದಿಲ್ಲ. ಶಾಸಕ ರೇಣುಕಾಚಾರ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ವಿಚಾರವಾಗಿಯೂ ಸಚಿವ ಯೋಗೇಶ್ವರ್ ಗರಂ ಆಗಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ತಾಲೂಕಿನ ಹೆಸರು ಹಾಕದೇ ಗೌಪ್ಯತೆ ಕಾಯ್ದುಕೊಂಡು ಅನುದಾನ ಹಂಚಿಕೆಗೆ ಒಪ್ಪಿಗೆ ಸೂಚಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಕೇವಲ ಸಾಸಿವೆಹಳ್ಳಿ ಎಂದು ಮಾತ್ರ ನಮೂದಿಸಲಾಗಿದೆ. ತಾಲೂಕಿನ ಹೆಸರು ಹೇಳಿ ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ. ಬಳಿಕ ಹೊನ್ನಾಳಿ ತಾಲೂಕು ಎಂದು ಪ್ರದಾನ ಕಾರ್ಯದರ್ಶಿ ರವಿಕುಮಾರ್ ಉತ್ತರಿಸಿದ್ದಾರೆ. ಹೊನ್ನಾಳಿ‌ ಎಂದ ತಕ್ಷಣ ಸಚಿವರು ವ್ಯಂಗ್ಯವಾಗಿ ನಗೆ ಬೀರಿದರು‌ ಎನ್ನಲಾಗಿದೆ.

ಮತ್ತೆ ಸ್ಫೋಟ ಆಗುತ್ತಾ ಬಂಡಾಯ..?

ಅನುದಾನ ತಾರತಮ್ಯ ಮಾಡ್ತಾನೆ ಎನ್ನುವುದು ಬಹುತೇಕ ಶಾಸಕರ ಆರೋಪ. ಇದೀಗ ಸಿಎಂ ಬಣದಲ್ಲಿ ಗುರುತಿಸಿಕೊಂಡು ಬಂಡಾಯದ ವಿರುದ್ಧ ನಿಂತರು ಎನ್ನುವ ಕಾರಣಕ್ಕೆ 500 ಕೋಟಿ ರೂಪಾಯಿ ಅನುದಾನ ನೀಡಿರುವುದು ಹಲವರ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೀಗ ಈ ವಿಚಾರವಾಗಿಯೂ ಮತ್ತೆ ಹೈಕಮಾಂಡ್‌ಗೆ ದೂರು ಹೋಗುವುದು ನಿಶ್ಚಿತ ಎನ್ನಲಾಗ್ತಿದೆ. ಅದೇನೇ ಇರಲಿ ಸಿಎಂ ಪರವಾಗಿ ದನಿ ಎತ್ತಿದ್ದ ರೇಣುಕಾಚಾರ್ಯ ಭರ್ಜರಿ‌ ಕೊಡುಗೆ ಪಡೆದು ಮುಸಿಮುಸಿ ನಕ್ಕಿದ್ದಾರೆ ಅನ್ನೋದು ಸತ್ಯ.

Related Posts

Don't Miss it !