ಭಾರತೀಯರ ಇಷ್ಟೊಂದು ಸಂಭ್ರಮಕ್ಕೆ ಅರ್ಹವೇ ಬ್ರಿಟನ್​ ಪ್ರಧಾನಿ ಹುದ್ದೆ..?

ಬ್ರಿಟನ್​​ ಪ್ರಧಾನಿಯಾಗಿ ರಿಷಿ ಸುನಕ್​ ಆಯ್ಕೆ ಆಗಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್​ ಆಯ್ಕೆಯಾಗುತ್ತಿದ್ದ ಹಾಗೆ ಭಾರತೀಯ ಮೂಲದ ವ್ಯಕ್ತಿ ಬ್ರಿಟೀಷ್​ ಪ್ರಜೆಗಳ ಪ್ರಧಾನಿ ಎಂದು ಭಾರತೀಯರು ಹಿರಿಹಿರಿ ಹಿಗ್ಗಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಇನ್ಫೋಸಿಸ್​ ಸಂಸ್ಥಾಪಕರಾದ ನಾರಾಯಣಮೂರ್ತಿ ಹಾಗು ಸುಧಾ ನಾರಾಯಣ ಮೂರ್ತಿ ಅವರ ಅಳಿಯ ಅನ್ನೋ ಕಾರಣಕ್ಕೆ ಕರ್ನಾಟಕದ ಅಳಿಯ ಬ್ರಿಟೀಷ್​ ಪ್ರಧಾನಿ ಎಂದು ಹೆಮ್ಮೆಯ ವಿಚಾರಗಳು ಕಾಣಿಸಿಕೊಂಡವು. ಆದರೆ ಈ ಬ್ರಿಟನ್​ ಪ್ರಧಾನಿ ಹುದ್ದೆ, ಭಾರತೀಯರ ಸಂಭ್ರಮಕ್ಕೆ ಅರ್ಹವೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಬ್ರಿಟೀಷರು ಭಾರತವನ್ನು ಬರೊಬ್ಬರಿ 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದರು. ಇದೀಗ ಭಾರತೀಯ ಮೂಲದ ಸಂಜಾತನೋರ್ವ ಬ್ರಿಟೀಷರನ್ನೇ ಆಳುತ್ತಿದ್ದಾನೆ ಎನ್ನುವುದು ಸಮಾಧಾನಕರ ಸಂಗತಿ ಅಷ್ಟೆ. ಆದರೆ ರಿಷಿ ಸುನಕ್​ಗೆ ಭಾರತದ ನಂಟಿದೆ. ರಿಷಿ ಸುನಕ್​ ಬಹುಸಂಖ್ಯಾತ ಭಾರತೀಯರ ಹಿಂದೂ ಧರ್ಮವನ್ನೇ ಆಚರಣೆ ಮಾಡುತ್ತಿದ್ದಾರೆ ಎನ್ನುವುದು ಸಂತಸದ ವಿಚಾರ. ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗುವ ಕೆಲವೇ ಸಮಯಕ್ಕೂ ಮುನ್ನ ಗೋವಿನ ಪೂಜೆ ಮಾಡಿದ್ದರು ರಿಷಿ ಸುನಕ್​. ಇಷ್ಟನ್ನು ಹೊರತುಪಡಿಸಿ ಭಾರತ ಹಾಗು ಬ್ರಿಟನ್​ ನಡುವೆ ಅಗಾಧ ಬದಲಾವಣೆ ಆಗುತ್ತದೆ ಎನ್ನುವುದೆಲ್ಲವೂ ಶುದ್ಧ ಸುಳ್ಳು.

ಅಮೆರಿಕದಲ್ಲಿ ಅಧ್ಯಕ್ಷ ಜೋ ಬಿಡನ್​ ಜೊತೆಗೆ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಮಲಾ ಹ್ಯಾರಿಸ್​ ಕೂಡ ಭಾರತೀಯ ಮೂಲದವರು. ತಮಿಳುನಾಡಿನ ಚೆನ್ನೈನಲ್ಲಿ ಅವರ ತಾಯಿ ಹುಟ್ಟಿ ಬೆಳೆದು ಅಮೆರಿಕದಲ್ಲಿ ಓದಲು ಹೋದಾಗ ಆಫ್ರಿಕಾ ಮೂಲದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಭಾರತೀಯತೆಯ ಟಚ್​ ಇದೆ ಎನ್ನುವ ಕಾರಣಕ್ಕೆ ಕಮಲಾ ಹ್ಯಾರಿಸ್​ ಆಯ್ಕೆ ವೇಳೆಯಲ್ಲೂ ನಾವು ಭಾರತೀಯರು ಸಂಭ್ರಮಿಸಿದ್ದೆವು. ಆದರೆ ಕಮಲಾ ಹ್ಯಾರಿಸ್​ ಆಯ್ಕೆ ಆದ ಬಳಿಕ ಒಂದೇ ಒಂದು ಮಾತನ್ನೂ ಭಾರತದ ಪರವಾಗಿ ಹೇಳಿಲ್ಲ ಎನ್ನುವುದು ಸತ್ಯ.

ಬ್ರಿಟನ್​ ಪ್ರಧಾನಿ ಆಗಿ ರಿಷಿ ಸುನಕ್​ ಆಯ್ಕೆ ಆಗಿದ್ದಾರೆ. ಅಂದ ಮಾತ್ರಕ್ಕೆ ಬ್ರಿಟೀಷರ ಮೇಲೆ ಭಾರತೀಯ ಮೂಲದ ಪ್ರಧಾನಿ ಸೇಡು ತೀರಿಸಿಕೊಳ್ಳುತ್ತಾರೆ ಎನ್ನುವುದು ನಮ್ಮ ಮೂರ್ಖತನ ಮಾತ್ರ. ಬ್ರಿಟೀಷ್​ ಸರ್ಕಾರದಲ್ಲಿ ಪ್ರಧಾನಿ ಆಗಿರುವ ರಿಷಿ ಸುನಕ್​, ಬ್ರಿಟೀಷ್​ ಪ್ರಜೆಗಳ ಏಳ್ಗೆಗಾಗಿ ಕೆಲಸ ಮಾಡಬೇಕೇ ಹೊರತು, ಭಾರತೀಯ ಇಚ್ಛೆಗೆ ಅನುಸಾರವಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಅದೂ ಅಲ್ಲದೆ ಬ್ರಿಟನ್​ನಲ್ಲಿ ಭಾರತದ ರೀತಿ ಒಮ್ಮೆ ಆಯ್ಕೆ ಆದರೆ ಮುಗೀತು ಎನ್ನುವ ಪರಿಪಾಠವಿಲ್ಲ, ಪ್ರಧಾನಿ ಸರಿಯಿಲ್ಲ ಎಂದರೆ ಪಕ್ಷದವರೇ ಕೆಳಕ್ಕೆ ಇಳಿಸಿ ಬೇರೊಬ್ಬರಬ್ಬನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ಭಾರತದ ವಿಚಾರ ಬಂದರೆ ಎರಡು ಬಾರಿ ಯೋಚಿಸಿಯೇ ಕೆಲಸ ಮಾಡಬೇಕಿದೆ. ಒಂದೇ ಒಂದು ಹೇಳಿಕೆ ಭಾರತದ ಪರವಾಗಿ ಬಂದರೂ ರಿಷಿ ಸುನಕ್​ ಅಧಿಕಾರ ಕಳೆದುಕೊಂಡಂತೆಯೇ ಲೆಕ್ಕ.

Related Posts

Don't Miss it !