ಸುಮಲತಾ – ರಾಕ್​ಲೈನ್​ ವೆಂಕಟೇಶ್​, ಕೆಟ್ಟ ವಿಡಿಯೋ

ಮಂಡ್ಯ ಜಿಲ್ಲಾ ಸಂಸದೆ ಆಗಿರುವ ಸುಮಲತಾ ಅವರು ಜೆಡಿಎಸ್​ ಭದ್ರಕೋಟೆಯಲ್ಲಿ ಗೆದ್ದು ಬೀಗಿದ್ದಾರೆ. ಅಂದಿನಿಂದಲೂ ಜೆಡಿಎಸ್​​ ನಾಯಕ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ. ಈ ನಡುವೆ ಮಂಡ್ಯದ ಕೆಆರ್​ಎಸ್​ ಅಣೆಕಟ್ಟು ಹಾಗೂ ಅಕ್ರಮ ಗಣಿಗಾರಿಕೆ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು ಅಂಬರೀಶ್​ ಹೆಸರು ಬಳಸಲು ಯೋಗ್ಯತೆಯಿಲ್ಲ ಅಂಬಿ ಸ್ಮಾರಕ ಮಾಡುವ ವಿಚಾರದಲ್ಲಿ ಅಂದಿನ ಸಿಎಂ ಆಗಿದ್ದ ಕುಮಾಸ್ವಾಮಿ ಹೇಗೆ ನಡೆದುಕೊಂಡಿದ್ದಾರೆ ಎನ್ನುವ ಬಗ್ಗೆ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ಮಾಡಿದ್ದಾರೆ. ಈ ನಡುವೆ ರಾಕ್​ಲೈನ್​ ವೆಂಕಟೇಶ್​ ಕೊಟ್ಟಿರುವ ಒಂದು ಹೇಳಿಕೆ ಅಚ್ಚರಿ ಮೂಡಿಸಿದೆ.

ಚುನಾವಣೆ ಸಮಯದಲ್ಲೇ ರೆಡಿಯಾಗಿತ್ತು ವಿಡಿಯೋ..?

ಕುಮಾರಸ್ವಾಮಿ ಹೇಳಿವ ಅಡಿಯೋ, ವಿಡಿಯೋ ಬಾಂಬ್ ಇದು ಹೊಸದಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ವಿಡಿಯೋ ಒಂದನ್ನು ರೆಡಿ ಮಾಡಿಸಿದ್ದರು. ಚುನಾವಣೆ ನಡೆಯೋ ಸಮಯದಲ್ಲಿ ನಾನು, ಅಂಬರೀಶ್ ಸ್ನೇಹಿತರು ಹೋಟೇಲ್​ನಲ್ಲಿ ಇದ್ದಾಗ ಗಿಮಿಕ್ ಮಾಡಿದ್ರು. ನಾನು, ಸುಮಲತಾ ಹೋಟೆಲ್​ಗೆ ಹೋಗುವ ದೃಶ್ಯವನ್ನು ಹೋಟೇಲ್ ಸಿಸಿಟಿವಿ ಪಡೆದು ಕೆಟ್ಟದಾಗಿ ವಿಡಿಯೋ ಮಾಡೋಕೆ ಹೊರಟಿದ್ರು. ಅವರ ಚಾನಲ್ ಅವರೇ ಈ ಸುದ್ದಿಯನ್ನು ನಮಗೆ ಹೇಳಿದ್ರು ಎಂದಿದ್ದಾರೆ. ಅಂಬರೀಶ್ ಬಗ್ಗೆ ಮಾತಾಡೋರು 10 ಬಾರಿ ಯೋಚನೆ ಮಾಡಿ ಮಾತಾಡಿ ಎಂದು ಎಚ್ಚರಿಸಿದ್ದಾರೆ.

ಚುನಾವಣೆ ವೇಳೆಯೇ ಸದ್ದು ಮಾಡಿತ್ತು ಸಿ.ಡಿ..!

ಮಂಡ್ಯ ಲೋಕಸಭಾ ಚುನಾವಣಾ ವೇಳೆಯಲ್ಲೇ ಸಿ.ಡಿ ಬಗ್ಗೆ ಭಾರೀ ಚರ್ಚೆಯಾಗಿತ್ತು. ಆ ಬಳಿಕ ಅದ್ಯಾವ ಸಿಡಿ ಅನ್ನೋದು ಮರೆತು ಹೋಯ್ತು. ಮೊನ್ನೆಯಷ್ಟೆ ಸುಮಲತಾ ವಿರುದ್ಧ ವಾಗ್ದಾಳಿ ಮಾಡಿದ್ದ ಶ್ರೀರಂಗಪಟ್ಟಣ ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಅಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಶುರು ಮಾಡಿದ್ದು ಅಂಬರೀಶ್​ ಬೆಂಬಲಿಗರು. ಸ್ವತಃ ಅಂಬರೀಶ್​ ಅವರೇ ಭೇಟಿ ನೀಡಿ ಹಳ್ಳಕೊಳ್ಳಗಳ ಪರಿಶೀಲನೆ ನಡೆಸಿದ ವಿಡಿಯೋ ನನ್ನ ಬಳಿ ಇವೆ. ಸಂಸದೆ ಸುಮಲತಾ ಕೂಡ ಯಾವ ವಿಚಾರವಾಗಿ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಗಳೂರಿನ ಸ್ಟಾರ್​ ಹೋಟೆಲ್​ಗೆ ಎಡಬಲ ಇದ್ದವರನ್ನು ಕಳುಹಿಸಿದ್ದು ಯಾಕೆ..? ಈ ಬಗ್ಗೆಯೂ ನನ್ನ ಬಳಿ ದಾಖಲೆಗಳು ಇವೆ ಎಂದಿದ್ದರು. ಆದರೆ ರಾಕ್​ಲೈನ್​ ವೆಂಕಟೇಶ್​ ಹೇಳಿರುವ ಕೆಟ್ಟ ದೃಶ್ಯದ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಿಲ್ಲ.

ಆಡಿಯೋ ವಿಡಿಯೋಗೆ ರಾಕ್​ಲೈನ್​ ಕೌಂಟರ್​..!

ಸಂಸದೆ ಸುಮಲತಾ ಅವರ ಅಧಿಕೃತ ಕೆಲಸಗಳನ್ನು ಮಧು ನೋಡಿಕೊಳ್ತಾರೆ. ದೆಹಲಿಗೆ ಹೋದಾಗ ನಾನು, ದೊಡ್ಡಣ್ಣ, ಮಧು ಯಾರಾದ್ರು ಒಬ್ಬರು ಹೋಗ್ತೀವಿ. ಎಸ್.ಎಂ ಕೃಷ್ಣ ಮಾರ್ಗದಲ್ಲಿ ನೀವು ಇದ್ದರೆ ಮಂತ್ರಿ ಆಗ್ತೀರಾ. ಇಲ್ಲ ಅಂದ್ರೆ ಶಾಸಕನು ಆಗೊದಿಲ್ಲ. ಸುಮಲತಾ ಟ್ರಾಪ್ ಮಾಡೋಕೆ ಯಾರು ಯಾರನ್ನ ಕಳಿಸಿದ್ರು ಅಂತ ನಮಗೆ ಗೊತ್ತಿದೆ. ಒಂದು ಸಂಸ್ಥೆಯಿಂದ ಒಬ್ಬ ವ್ಯಕ್ತಿಯನ್ನ ಸುಮಲತಾ ಆಫೀಸ್​ಗೆ ಕಳಿಸಿದ್ರು. ಅಕ್ರಮ ಗಣಿಗಾರಿಕೆ ಮೆಟಿರಿಯಲ್ ಬೇಡ ಅಂತ ನಾನೇ ಹೇಳಿದೆ. ಇದನ್ನ ಹೇಳೋಕೆ ಭಯ ಯಾಕೆ ಅವರಿಗೆ ಅಂತಾ ಪ್ರಶ್ನಿಸಿದ್ದಾರೆ. ಇದು ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂಠಯ್ಯ ಮಾಡಿರೋ ಪ್ಲ್ಯಾನ್. ಕುಮಾರಸ್ವಾಮಿ ಕಡೆಯಿಂದ ಬಂದವರು ಸುಮಲತಾ ಟ್ರಾಪ್ ಮಾಡೋಕೆ ಪ್ಲ್ಯಾನ್ ಮಾಡಿದ್ರು. ಆದ್ರೆ ಸಂಸದರು ನಾವು ಮೀಟ್ ಆಗೊಲ್ಲ ಅಂದ್ರು. ನಂತರ ದೊಡ್ಡ ಸಂಸ್ಥೆ ಮಾತಾಡದೇ ಸರಿ ಹೋಗೊಲ್ಲ ಅಂತ ಮಧು ಮಾತಾಡಿದ್ರು. ಅವನು ಎಲ್ಲಾ ರೆಕಾರ್ಡ್ ‌ಮಾಡುತ್ತಿದ್ದ. ಅವತ್ತು ನಾನು ವಿಡಿಯೋ, ಆಡಿಯೋ ಮಾಡಿದ್ದೇನೆ. ಇವ್ರು ಯಾಕೆ ಆಡಿಯೋ ಬಿಡ್ತಿಲ್ಲ ಅಂದ್ರೆ ಕುಮಾರಸ್ವಾಮಿ ಹೆಸರು ಅದರಲ್ಲಿ ಇದೆ ಅದಕ್ಕೆ ಬಿಡ್ತಿಲ್ಲ ಎಂದಿದ್ದಾರೆ. ನೀವೇ ಆಡಿಯೋ ವಿಡಿಯೋ ಮಾಡಿದ್ಮೇಲೆ ಬಿಡುಗಡೆ ಮಾಡಿ ಎಂದಿದ್ದಕ್ಕೆ ಮೊದಲು ಅವರು ಬಿಡಲಿ ಕೌಂಟರ್​ ಆಗಿ ನಾನು ಬಿಡ್ತೇನೆ ಎಂದಿದ್ದಾರೆ.

ಸಿ.ಡಿ ತೋರಿಸಿ ಬೆದರಿಕೆ ಯಾಕೆ..? ಬಿಡುಗಡೆ ಮಾಡಿ..


ಯಾರ ಬಳಿ ಯಾರದ್ದೇ ವಿಡಿಯೋ ಆಗಿರಲಿ ರಾಜ್ಯದ ಜನರ ಮುಂದೆ ಇಡಬೇಕಾದ ಕೆಲಸ ಮಾಡಬೇಕು. ವೈಯಕ್ತಿಕ ತೇಜೋವಧೆ ಮಾಡುವ ದೃಶ್ಯಗಳು ಸಿ.ಡಿಗಳು ಇದ್ದರೆ ಅವನ್ನು ಜನರ ಮುಂದೆ ಬಿಡುಗಡೆ ಮಾಡಿ ಮನರಂಜನೆ ನೀಡುವ ಬದಲು ಯಾರಾದರೂ ಹಣಕ್ಕಾಗಿ ಡಿಮ್ಯಾಂಡ್​ ಮಾಡಿದ್ದರೆ, ಗಣಿಗಾರಿಕೆ ಮಾಡುವವರ ಜೊರೆ ಡೀಲಿಂಗ್​ ಮಾಡಲು ಮುಂದಾಗಿದ್ದರೆ ಬಿಡುಗಡೆ ಮಾಡುವುದು ಸೂಕ್ತ. ಶ್ರೀರಂಗಪಟ್ಟಣ ಶಾಸಕ ಸ್ಟಾರ್​ ಹೋಟೆಲ್​ಗೆ ಹೋಗಿದ್ದು ಯಾರು..? ಸಂಸದರ ಎಡಬಲ ಇದ್ದವರು ಏನ್​ ಮಾತನಾಡಿದ್ದಾರೆ ಎಲ್ಲಾ ದಾಖಲೆ ಇದೆ ಸಮಯ ಬಂದಾಗ ಬಿಡುಗಡೆ ಮಾಡ್ತೇನೆ ಎಂದಿದ್ದಾರೆ. ಈಗ ಕುಮಾರಸ್ವಾಮಿ ಕಡೆಯವರು ಬಂದಿದ್ದರು ನಾನು ಹಾಗೂ ಮಧು ಮಾತನಾಡಿದ್ದೇವೆ ಎಂದು ರಾಕ್​ಲೈನ್​ ವೆಂಕಟೇಶ್​ ಒಪ್ಪಿಕೊಂಡಿದ್ದಾರೆ. ಜೊತೆಗೆ ನನ್ನ ಬಳಿಯೂ ವಿಡಿಯೋ ಇದೆ ಎಂದಿದ್ದಾರೆ. ಇಬ್ಬರಲ್ಲಿ ಯಾರಾದರೂ ಬಹಿರಂಗ ಮಾಡಬೇಕಿದೆ.

Related Posts

Don't Miss it !