RSS ಮಾಡುತ್ತಿರುವ ಕೆಲಸ ಉಳಿದವರಿಗೂ ಮಾದರಿ ಆಗಬಹುದೇ..?

ದೇಶದಲ್ಲಿ ಕೊರೊನಾ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾಗಿದ್ದು, ಸರ್ಕಾರಗಳು ಜನರ ಸಂಕಷ್ಟವನ್ನು ದೂರ ಮಾಡಲು ಪರದಾಡುತ್ತಿವೆ. ಈ ವೇಳೆಯಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈ ಜೋಡಿಸಿದ್ದಾರೆ. ಅದರಲ್ಲಿ ಬಿಜೆಪಿ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (RSS) ಕೂಡ ಜನರ ಸೇವೆ ಮಾಡಲು ಮುಂದಾಗಿದೆ. ಬೆಂಗಳೂರಿನಲ್ಲಿ ತನ್ನ ಸದಸ್ಯರ ಮೂಲಕ ಜನಸೇವೆಗೆ ದಾಪುಗಾಲು ಇಟ್ಟಿರುವುದು ಉಳಿದವರಿಗೆ ಮಾದರಿ ಕೆಲಸ ಎನ್ನುವಂತಿದೆ. 

ಇಡೀ ಭಾರತ ದೇಶದಲ್ಲಿ ಕರ್ನಾಟಕ ಸಹ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ಮಹಾಮಾರಿಯ ಅಟ್ಟಹಾಸಕ್ಕೆ ಪ್ರತಿದಿನ ನೂರಾರು ಜನ ಪ್ರಾಣ ಕಳೆದುಕೊಳ್ತಿದ್ದಾರೆ. ರಾಜ್ಯ ಸರ್ಕಾರದ ಜೊತೆಗೆ ಸಾರ್ವಜನಿಕರು ಹಾಗೂ ಹಲವು ಸಂಘಟನೆಗಳ ಜೊತೆಗೆ RSR ಸಂಘ ಸಂಸ್ಥೆ ಸಹ ಕೈಜೋಡಿಸಿದ್ದು, ಬೆಂಗಳೂರಿನ ಐದು ಕಡೆಗಳಲ್ಲಿ ಆರ್‌ಎಸ್‌ಎಸ್ ಸೇವಾ ಭಾರತಿ ಕೊರೊನಾ ಸೋಂಕಿತರಿಗೆ ಉಚಿತ ಐಸೊಲೇಷನ್ ಕೇಂದ್ರಗಳನ್ನು  ಪ್ರಾರಂಭಿಸಿದೆ. ಚನ್ನೇನಹಳ್ಳಿಯ ಜನಸೇವಾ ಕೇಂದ್ರದಲ್ಲಿ 125 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 100 ಬೆಡ್‌ಗಳು ಲಭ್ಯವಿದೆ.  ರಾಮಮೂರ್ತಿನಗರದಲ್ಲಿ 60 ಬೆಡ್ ಸೌಲಭ್ಯವಿದೆ ಹಾಗೂ ಯಲಹಂಕ ಮತ್ತು ಸಂಜಯನಗರದ ಕೋವಿಡ್ ಸೆಂಟರ್‌ಲ್ಲಿ ತಲಾ 50 ಬೆಡ್‌ಗಳ ಐಸೊಲೇಷನ್ ಸೆಂಟರ್​ ಪ್ರಾರಂಭಿಸಲಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಕೆಲವೆಡೆ ತುರ್ತು ಪರಿಸ್ಥಿತಿ ಎದುರಿಸಲು ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನೂ ಅಳವಡಿಸಲಾಗಿದೆ. ದಿನದಲ್ಲಿ ನಾಲ್ಕು ಶಿಫ್ಟ್​ ಮಾಡಿದ್ದು ದಿನದ 24 ಗಂಟೆ ಕಾಲ ನುರಿತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೋಂಕಿತರ ಉಪಚಾರ ಮಾಡ್ತಾರೆ. 

RSS ನ ಸೇವಾ ಭಾರತಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೇವಲ ಚಿಕಿತ್ಸೆ ಮಾತ್ರವಲ್ಲದೆ, ಉನ್ನತಿ ಹೀಲಿಂಗ್ ಫೌಂಡೇಷನ್‌ ಯೋಗ ಮತ್ತು ಧ್ಯಾನ ಕಲಿಸಿಕೊಡ್ತಾರೆ. ಸೋಂಕಿತರ ಕುಟುಂಬಸ್ಥರರಿಗೆ ಕೌನ್ಸೆಲಿಂಗ್ ಕೂಡ  ಮಾಡಲಾಗುತ್ತದೆ. ಇದೊಂದು ಸಂಘಟನೆಯ ಮಾದರಿ ಕೆಲಸ ಆಗಿದೆ. 

ಸಿದ್ದರಾಮಯ್ಯ ಮಾಡಿದ್ದು ಗಿಮಿಕ್ ಘೋಷಣೆನಾ..?

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದು ಘೋಷಣೆ ಮಾಡಿದ್ರು. ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಎಂಎಲ್‌ಸಿಗಳೂ ಸೇರಿಕೊಂಡು 100 ಕೋಟಿ ಹಣವನ್ನು ಕೊಡ್ತೀವಿ. ಸರ್ಕಾರ ಅದೇ ಹಣದಲ್ಲಿ ಲಸಿಕೆ ಖರೀದಿಸಿ ರಾಜ್ಯದ ಜನರಿಗೆ ಹಂಚಿಕೆ ಮಾಡಿ ಎಂದಿದ್ದರು. ಕಾಂಗ್ರೆಸ್ ನಾಯಕರು ನೂರು ಕೋಟಿ ಕೊಟ್ಟಿದ್ದಾರೆ ಎಂದು ಶಹಬ್ಬಾಸ್‌ಗಿರಿ ಕೊಟ್ಟರು. ಆದ್ರೆ ಕಾಂಗ್ರೆಸ್ ನಾಯಕರು ಕೊಟ್ಟಿದ್ದು ಸ್ವಂತ ಹಣವಲ್ಲ, ಬದಲಿಗೆ ಸರ್ಕಾರ ಕೊಡುವ ಅನುದಾನದಲ್ಲಿ ಒಂದು ಕೋಟಿ ಕೊಡ್ತೇವೆ ಎಂದಿದ್ದಾರೆ. ಸ್ವಂತ ಹಣ ಕೊಡುವ ಮನಸ್ಸು ಮಾಡಿಲ್ಲ. 

ಕಾಂಗ್ರೆಸ್ ಪಕ್ಷ ಕೂಡ ನಾವು ಜನರಿಗೆ ಹೆಲ್ಪ್‌ಲೈನ್ ಆರಂಭ ಮಾಡಿದ್ದೇವೆ. ಆಂಬ್ಯುಲೆನ್ಸ್ ಸೇವೆ ಕೊಡ್ತೇವೆ. ಎಲ್ಲಾ ಜಿಲ್ಲಾ ಕೇಂದ್ರಲ್ಲೂ ಆರಂಭ ಮಾಡಲು ಸೂಚನೆ ಕೊಡ್ತೇವೆ ಅಂತಾ ಸ್ವತಃ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು. ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಸಹಾಯ ಮಾಡಿದ್ದು ಅಷ್ಟಕಷ್ಟೆ ಎನ್ನುವಂತಿದೆ. ಕಾಂಗ್ರೆಸ್ ಶಾಸಕರು ಸರ್ಕಾರಕ್ಕೆ ಒಂದೊಂದು ಕೋಟಿ ಕೊಡುವುದು ಅವಶ್ಯಕತೆಯಿಲ್ಲ. ಆದ್ರೆ ತನ್ನ ಕ್ಷೇತ್ರದ ಜನರಿಗೆ ಲಸಿಕೆ ಖರೀದಿ ಮಾಡಬಹುದಲ್ಲವೇ..? ಇದನ್ನು ತಾನೇ ಕೊಡಿಸುತ್ತಿದ್ದೇನೆ ಎಂದು ಇಡೀ ಕ್ಷೇತ್ರದಲ್ಲಿ ಪ್ರಚಾರಕ್ಕೂ ಬಳಸಿಕೊಳ್ಳಲು ಅಡ್ಡಿಯೂ ಇಲ್ಲ. 

ಜೆಡಿಎಸ್ ಶಾಸಕ‌ ಸಾರಾ ಮಹೇಶ್ ಕೋವಿಡ್ ಕೇರ್..!

ಮೈಸೂರು ಜಿಲ್ಲೆ ಕೆ.ಆರ್. ನಗರ‌ ಕ್ಷೇತ್ರದ ಜೆಡಿಎಸ್ ಶಾಸಕ ಮೂರು ಜನ ವೈದ್ಯರನ್ನು ನಿಯೋಜನೆ ಮಾಡಿಕೊಂಡು ಕೆ‌.ಆರ್. ನಗರದಲ್ಲಿ

ಕೋವಿಡ್ ಕೇರ್ ಸೆಂಟರ್ ಮಾಡಿದ್ದಾರೆ. ಪ್ರತಿಯೊಬ್ಬ ವೈದ್ಯರಿಗೂ  ತಲಾ ಒಂದು ಲಕ್ಷ ರೂಪಾಯಿ ವೇತನ ನಿಗದಿ‌ ಮಾಡಲಾಗಿದೆ. ಸಾರಾ ಸ್ನೇಹ ಬಳಗ ಹೆಸರಿನಲ್ಲಿ ಈ ಸೇವೆ ನೀಡಲಾಗ್ತಿದೆ. 200 ಬೆಡ್‌ಗಳ ಸುಸಜ್ಜಿತ ಕೋವಿಡ್ ಕೇಂದ್ರವನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದಾರೆ. 

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ‌ ಸೋಂಕು ಹೆಚ್ಚಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ ಮಾಡಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ ಚಿತ್ರದುರ್ಗ DHO ಡಾ. ಪಾಲಾಕ್ಣ ವಿರುದ್ಧ ಬಿಜೆಪಿ ಶಾಸಕ ಎಂ ಚಂದ್ರಪ್ಪ ಗರಂ ಆಗಿದ್ದರು. ನನಗೆ ಅದು ಬೇಕಾಗಿಲ್ಲ, ಇಲ್ಲಿ ಆಸ್ಪತ್ರೆ ಮಾಡೋ ಅವಶ್ಯಕತೆ ಇಲ್ಲ. ನಾನು ಇಲ್ಲಿ ಆಸ್ಪತ್ರೆ ಮಾಡುವುದಿಲ್ಲ, ಸಾಯುವವರು ಎಲ್ಲಾದರೂ ಸಾಯಲಿ ಎಂದು ಗುಡುಗಿದ್ರು. ಹಾಲಿ ಸಚಿವ ಉಮೇಶ್ ಕತ್ತಿ‌ ಕೂಡ ಸಾಯುವರನ್ನು ತಡೆಯಲು ಸಾಧ್ಯವೇ ಎಂದಿದ್ದರು. ಸಚಿವ ಮಾಧುಸ್ವಾಮಿ ಅವರನ್ನು ಆಕ್ಸಿಜನ್ ಕೇಳಿದ್ರೆ ಸರ್ಕಾರ ಕೇಳಿ‌ ಅಂದಿದ್ರು. 

ಚುನಾವಣೆ ಬಂದಾಗ ಕೋಟಿ ಕೋಟಿ ಹಣ ಖರ್ಚು ಮಾಡ್ತಾರೆ. ಆದ್ರೆ ಜನರು ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಸಹಾಯ ಮಾಡಲು ಯಾಕೆ ಆಗ್ತಿಲ್ಲ. ಒಂದೊಂದು ಕೋಟಿ ರೂಪಾಯಿ ಯಾವುದಾದರೂ ಶಾಸಕರಿಗೆ ಸಮಸ್ಯೆ ಆಗುತ್ತದೆಯೇ..? ಅಥವಾ ಶಾಸಕರಿಗೆ ಒಂದು ಕೋಟಿ ರೂಪಾಯಿ‌ ಕೊಡಲು ಸಾಧ್ಯವಾಗದಷ್ಟು ಬಡತನದಲ್ಲಿ ಇದ್ದಾರೆಯೇ..? ಒಳ್ಳೆಯ ಕೆಲಸ ಮಾಡಲು ಒಳ್ಳೆಯ ಮನಸ್ಸಿರಬೇಕು. ಇಚ್ಛಾಶಕ್ತಿ ಇದ್ದರೆ ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಬೇಕು. ಜನರು ಸತ್ತರೆ ಚುನಾವಣೆಯಲ್ಲಿ ಹಣ ಕೊಡುವುದು ಉಳಿಯುತ್ತದೆ ಎನ್ನುವ ಆಲೋಚನೆ ಇದ್ದರೆ ಒಳ್ಳೆಯ ಕೆಲಸ ಮಾಡಲು ಆಗುವುದಿಲ್ಲ ಅಷ್ಟೆ.

Related Posts

Don't Miss it !