Eshwarappa; ಸಚಿವ ಈಶ್ವರಪ್ಪ ರಾಜೀನಾಮೆ ನೀಡುವುದು ಒಳ್ಳೆಯದು.. ಯಾಕೆ ಗೊತ್ತಾ..?

ಬೆಳಗಾವಿ ಮೂಲದ ಕಂಟ್ರಾಕ್ಟರ್ ಸಂತೋಷ್ ಪಾಟೀಲ್‌ ಸಾವನ್ನಪ್ಪಿದ್ದು, ಸಚಿವ ಈಶ್ವರಪ್ಪ ಅವರೇ ಈ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಸಾವಿಗೂ ಮುನ್ನ ಸಂತೋಷ್ ಕಳುಹಿಸಿದ್ದಾರೆ ಎನ್ನಲಾಗುತ್ತಿರುವ ವಾಟ್ಸ್ ಆ್ಯಪ್ ಸಂದೇಶದಲ್ಲೂ ಈಶ್ವರಪ್ಪ ಅವರಿಂದಲೇ ನಾನು ಆತ್ಮಹತ್ಯೆ ಮಾಡಿಕೊಳ್ತಿದ್ದೇನೆ ಎಂದು ಬರೆಯಲಾಗಿದೆ. ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 108 ಕಾಮಗಾರಿಗಳನ್ನು ನಡೆಸಲು‌ ಸಚಿವ ಈಶ್ವರಪ್ಪ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದರು. ಆದರೆ ವರ್ಕ್ ಆರ್ಡರ್ ನೀಡುವುದಕ್ಕೆ ಶೇಕಡಾ 40 ರಷ್ಟು ಕಮಿಷನ್ ಕೇಳಿದರು ಎಂದು ದೂರಿದ್ದರು. ಆದರೆ ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡುವುದು‌ ಕಾನೂನು ಬಾಹಿರ. ಆ ರೀತಿ ಗುತ್ತಿಗೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನೀಡುವುದಿಲ್ಲ ಎಂದು ಈಶ್ವರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ‌ ಸೇರಿದಂತೆ ಮುಖ್ಯಮಂತ್ರಿಗಳಿಗೂ ಈ ಪ್ರಕರಣದ ಬಗ್ಗೆ ದೂರು ಸಲ್ಲಿಕೆ ಆಗಿದ್ದು, ಎಲ್ಲೂ ಪರಿಹಾರ ಸಿಗುವ ಲಕ್ಷಣ ಕಾಣದಿದ್ದಾಗ ಅಂತಿಮವಾಗಿ‌ ಸಾವಿನ ಕದ ತಟ್ಟಿದ್ದಾರೆ ಎನ್ನಲಾಗ್ತಿದೆ.

ಈಶ್ವರಪ್ಪ ರಾಜೀನಾಮೆಯಿಂದ ಸಾವಿಗೆ ಸಿಗಲ್ಲ ಯಾವುದೇ ನ್ಯಾಯ..!!

ಸಚಿವ ಈಶ್ಬರಪ್ಪ ಕಾಮಗಾರಿ‌ ನಡೆಸಲು‌ ಮೌಖಿಕವಾಗಿ ಸೂಚನೆ ನೀಡಿದ್ದರು ಎನ್ನುವುದು ಬೆಳಗಾವಿ ಕಡೆಯ ಬಿಜೆಪಿ ನಾಯಕರ ಮಾತು. ಆದರೆ ಈಶ್ವರಪ್ಪ ನನಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದಿದ್ದಾರೆ. ಆದರೂ ಕೆ.ಎಸ್ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ. ಈಶ್ವರಪ್ಪ ಅವರು ಮೌಖಿಕವಾಗಿ ಹೇಳಿರುವ ಮಾಹಿತಿಯನ್ನು ಪೊಲೀಸರು ಸಾಬೀತು ಮಾಡಬೇಕಿದೆ. ಸಂಬಂಧಪಟ್ಟ ಸಾಕ್ಷಿಗಳನ್ನು ಕಲೆ ಹಾಕುವ ಕೆಲಸ ಮಾಡಿದರೆ ಮಾತ್ರ ಈಶ್ವರಪ್ಪ ಸಿಕ್ಕಿ ಬೀಳುತ್ತಾರೆ. ಇಲ್ಲದಿದ್ದರೆ ಈಶ್ವರಪ್ಪ ಆರೋಪಿ ಸ್ಥಾನದಿಂದ ಖುಲಾಸೆ ಆಗುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಸ್ವತಃ ಸಚಿವ ಸ್ಥಾನದಲ್ಲಿ ಇರುವ ನಾಯಕನ ವಿರುದ್ಧ ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆ ಎನ್ನುವುದನ್ನು ನಂಬಲು ಸಾಧ್ಯವೇ..? ಹಾಗಾಗಿ ನ್ಯಾಯ ಸಿಗುವುದು ಅನುಮಾನ. ಆದರೆ ನೈತಿಕತೆಯ ವಿಚಾರವನ್ನು ಪಾಲಿಸುವುದು ಸೂಕ್ತ.

ರಾಜೀನಾಮೆ ಕೊಡದಿದ್ದರೆ ಕಾಂಗ್ರೆಸ್‌ ಹೋರಾಟಕ್ಕೆ ಪ್ರಬಲ ಅಸ್ತ್ರ..!!

ಈಶ್ವರಪ್ಪಗೆ ಶಿಕ್ಷೆ ಆಗುವುದಿಲ್ಲ ಎನ್ನುವುದನ್ನು ಯಾರು ಬೇಕಾದರೂ ಹೇಳುತ್ತಾರೆ. ಆದರೆ ಈಗ ಆರೋಪ‌ ಬಂದಿರುವ ಕಾರಣದಿಂದ ರಾಜೀನಾಮೆ ನೀಡುವುದು ಸೂಕ್ತ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಕಾಂಗ್ರೆಸ್ ಜನರ ಬಳಿಗೆ ಹೋಗಿ ಹೋರಾಟ ರೂಪಿಸಲು ಅವಕಾಶ ಕೊಟ್ಟಂತೆ ಆಗುತ್ತದೆ. ರಾಜ್ಯದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಮುಸಲ್ಮಾನ ವಿವಾದದ ಕಿಚ್ಚು ಅಲ್ಪ ಪ್ರಮಾಣದ ಹಿನ್ನಡೆ ಸೃಷ್ಟಿಸಿತ್ತು. ಇದೀಗ ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವು ಕಾಂಗ್ರೆಸ್ ಪಾಲಿಗೆ ಟಾನಿಕ್ ಸಿಕ್ಕಂತಾಗಿದೆ. ಈಶ್ವರಪ್ಪ ರಾಜೀನಾಮೆ ನೀಡುವ ತನಕವೂ ಈ ಪ್ರಕರಣ ಜೀವಂತವಾಗಿ ಉಳಿದುಕೊಳ್ಳಲಿದೆ. ಸಂತೋಷ್ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುತ್ತೆ‌ ಎಂದು ಹೇಳಲು ಸಾಧ್ಯವಿಲ್ಲ. ತಮಗೆ ಲಾಭ ಆಗುವಂತೆ ಹೋರಾಟ ರೂಪಿಸುತ್ತಾರೆ ಎನ್ನುವುದು ಮಾತ್ರ ಸತ್ಯ.

ತಹಶಿಲ್ದಾರ್ ಶಾಸಕರು, ಜಿಲ್ಲಾಧಿಕಾರಿಗಳು ಹೊಣೆ ಅಲ್ಲವೇ..!?

ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 108 ಕಾಮಗಾರಿಗಳನ್ನು ಸಂತೋಷ್ ಪಾಟೀಲ್ ಮಾಡಿಸಿದ್ದಾರೆ ಎನ್ನಲಾಗಿದೆ. ಅಂಗೈ ಉಣ್ಣಿಗೆ ಕನ್ನಡಿ ಬೇಕೆ..? ಎನ್ನುವ ಮಾತಿನಂತೆ ಕಾಮಗಾರಿ ಆಗಿದ್ದರೆ ಅದನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಇಲ್ಲ. ಕಾಮಗಾರಿ ನಡೆದಿದೆ ಎನ್ನುವುದನ್ನು ಗ್ರಾಮಸ್ಥರು ಒಪ್ಪಿಕೊಳ್ತಾರೆ. ಆಗಿದ್ದ ಮೇಲೆ ಒಂದು ರಸ್ತೆಯೇ ಆಗಲಿ, ಸರ್ಕಾರದಿಂದ ಟೆಂಡರ್ ಪಡೆಯದೆ ಕಾಮಗಾರಿ ಮಾಡಲು ಅನುವು ಮಾಡಿಕೊಟ್ಟಿದ್ದು ಎಷ್ಟು ಸರಿ..? ಯಾರೋ ಒಬ್ಬ ಅನಾಮಿಕ ವ್ಯಕ್ತಿ ಕಾಮಗಾರಿ ನೆಪದಲ್ಲಿ ರಸ್ತೆಯನ್ನು ಕಿತ್ತರೆ ಯಾರೂ ಕೇಳುವುದಿಲ್ಲವೇ..? ಅಲ್ಲಿನ ಸ್ಥಳೀಯ ತಹಶೀಲ್ದಾರ್, ಶಾಸಕರು ಹಾಗೂ ಜಿಲ್ಲಾಧಿಕಾರಿ ಈ ಬಗ್ಗೆ ಏನು ಹೇಳ್ತಾರೆ..? ಅನುಮತಿ ಇಲ್ಲದೆ 4 ಕೋಟಿ ರೂಪಾಯಿ‌ ವೆಚ್ಚದ ಕಾಮಗಾರಿ ನಡೆದರೂ ಕಣ್ಮುಚ್ಚಿ ಕುಳಿತ ಇವರಿಗೆ ಕಾನೂನು ಯಾವ ಶಿಕ್ಷೆ ನೀಡುತ್ತದೆ..? ಸ್ಥಳೀಯ ಪಿಡಿಓ ಮಟ್ಟದ ಅಧಿಕಾರಿಯಿಂದ ಪ್ರತಿಯೊಬ್ಬ ಎಂಜಿನಿಯರ್ ಕೂಡ ಈ ಪ್ರಕರಣದಲ್ಲಿ ತಪ್ಪಿತಸ್ಥನಾಗುತ್ತಾನೆ. ಕೂಡಲೇ ಎಲ್ಲರಿಗೂ ಕಾನೂನಿನ ಬಿಸಿ ಮುಟ್ಟಿಸಬೇಕಿದೆ.

Related Posts

Don't Miss it !