ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ತಡ ಆಗ್ತಿದೆ..!! ಕಾರಣ ಏನು..?

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ನಾಗರಿಕರು ತಮ್ಮ ಪ್ರಾಣ ಕಳೆದುಕೊಳ್ತಿದ್ದಾರೆ. ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಯುದ್ಧ ಭೀಕರತೆಯನ್ನು ಎದುರಿಸಬೇಕಾಗಿದೆ. ಭಾರತ ಸರ್ಕಾರ ಎಲ್ಲರನ್ನೂ ವಾಪಸ್ ಕರೆತರಲಾಗುವುದು ಯಾವುದೇ ಭಯ ಬೇಡ ಎಂದು ವಿಶ್ವಾಸದ ಆಶ್ವಾಸನೆ ನೀಡುತ್ತಿದೆ. ಆದರೆ ದಿನವೊಂದಕ್ಕೆ ಕರೆತರಲು ಸಾಧ್ಯವಾಗುತ್ತಿರೋದು ಕೇವಲ ಒಂದು ಸಾವಿರ ಭಾರತೀಯರನ್ನು ಮಾತ್ರ. ಅದೂ ಕೂಡ ಯುದ್ಧ ನಡೆಯದೇ ಇರುವ ಪ್ರಾಂತ್ಯಗಳಿಂದ ಮಾತ್ರ. ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಸಿಲುಕಿದವರನ್ನು ಸರ್ಕಾರ ಅಥವಾ ಸರ್ಕಾರದ ಭಾಗವಾಗಿರುವ ರಾಯಭಾರಿ ಅಧಿಕಾರಿಗಳು ರಕ್ಷಣೆ ಮಾಡಲು ಸಾಧ್ಯವಾಗ್ತಿಲ್ಲ ಎನ್ನುವುದು ಸತ್ಯ.

ಭಾರತೀಯರ ರಕ್ಷಣೆಗೆ ತೊಡಕಾಗಿರುವುದು ಏನು..?

ಉಕ್ರೇನ್‌ನಿಂದ ಆಗಮಿಸಿರುವ ವಿದ್ಯಾರ್ಥಿಗಳು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ನಮಗೆ ಯಾವುದೇ ತೊಂದರೆ ಆಗಿರಲಿಲ್ಲ. ನಾವು ಓದುತ್ತಿದ್ದ ಉಕ್ರೇನ್ ಗಡಿ ಭಾಗದಲ್ಲಿ ಯಾವುದೇ ಯುದ್ಧ ಭೀತಿ ಇರಲಿಲ್ಲ. ನಾವು ಯಾವುದೇ ಸಮಸ್ಯೆಗೆ ಒಳಗಾಗಿಲ್ಲ ಎಂದಿದ್ದಾರೆ. ಆದರೆ ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಕನ್ನಡಿಗರೂ ಸೇರಿದಂತೆ ಸಾವಿರಾರು ಮಂದಿ ಭಾರತೀಯರು ಉಕ್ರೇನ್ ಗಡಿಭಾಗದಲ್ಲಿ ಬೀಡುಬಿಟ್ಟಿದ್ದಾರೆ. ಇನ್ನೂ ಕೆಲವರು ಬಂಕರ್‌ಗಳಲ್ಲೇ ವಾಸ ಮಾಡುತ್ತಿದ್ದಾರೆ. ಅನ್ನ, ನೀರು ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ನಮ್ಮನ್ನು ವಾಪಸ್ ಭಾರತಕ್ಕೆ ಕರೆಸಿಕೊಳ್ಳಿ, ನಮಗೆ ಸಮಸ್ಯೆ ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕಷ್ಟವನ್ನು ಹೇಳಿದರೂ ಸ್ಪಂದನೆ ಸಿಗ್ತಿಲ್ಲ ಎಂದು ದೂರಿದ್ದಾರೆ.

ಬೆಲಾರಸ್‌ನಲ್ಲಿ ಸಂಧಾನ ಬೆನ್ನಲ್ಲೇ ಉಕ್ರೇನ್‌ನಲ್ಲಿ ಕರ್ಫ್ಯೂ ತೆರವು..!

ರಷ್ಯಾ ಹಾಗೂ ಉಕ್ರೇನ್ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ.‌ ರಷ್ಯಾ ಜೊತೆಗೆ ಸಂಧಾನಕ್ಕೆ ಬರುವ ಮುನ್ನ ಯುದ್ಧ ನಿಲ್ಲಿಸಿದರೆ ಮಾತ್ರ ಮಾತುಕತೆ ಎಂದು ಉಕ್ರೇನ್ ಪಟ್ಟು ಹಿಡಿದಿತ್ತು. ಈ ನಡುವೆ ಸಂಧಾನ ಮಾತುಕತೆ ನಡೆಯುತ್ತಿರುವ ಕಾರಣ ತಾತ್ಕಾಲಿಕ ಯುದ್ಧ ವಿರಾಮ ಕೊಡಲಾಗಿದ್ದು, 144 ಸೆಕ್ಷನ್ ತೆರವು ಮಾಡಲಾಗಿದ್ದು, ರೈಲು ಸಂಚಾರ ಸೇರಿದಂತೆ ಬಸ್ ಸೇವೆಗಳನ್ನು ಆರಂಭ ಮಾಡಿದೆ. ಇದೇ ಅವಕಾಶವನ್ನು ಬಳಸಿಕೊಂಡು ಭಾರತೀಯರನ್ನು ವಾಪಸ್ ಕರೆತರುವ ಪ್ರಯತ್ನ ಮಟಡಲಾಗ್ತಿದೆ. ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಬಂಕರ್‌ನಲ್ಲಿ ರಕ್ಷಣೆ ಪಡೆದಿದ್ದಾರೆ. ಇದೀಗ ಯುದ್ಧ ವಿರಾಮದ ನಡುವೆ ತನ್ನ ದೇಶದ ಜನರನ್ನು ವಾಪಸ್ ಕರೆತರಲು ನಾಲ್ವುರು ಕೇಂದ್ರ ಸಚಿವರಾದ ಕಿರಣ್ ರಿಜೀಜ್, ಜೋತಿರಾಧಿತ್ಯ ಸಿಂಧಿಯಾ, ವಿ.ಕೆ ಸಿಂಗ್, ಹರ್‌ದೀಪ್ ಸಿಂಗ್ ಪೂರಿ ಅವರನ್ನು ಕಳುಹಿಸಿ ಕೊಡಲಾಗಿದೆ. ಜೊತೆಗೆ ಉಕ್ರೇನ್‌ನಿಂದ ಆಗಮಿಸುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರಿಗೆ ಕೊರೊನಾ ಲಸಿಕೆ ಹಾಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಅಲ್ಲ ಎಂದು ಹೊಸ ಮಾರ್ಗಸೂಚಿ ಹೊರಡಿಸಿದೆ.

ಸಚಿವರಿಂದ ಸ್ವಾಗತ

ಸಂಧಾನ ಸಭೆ, ಕಠಿಣ ಸವಾಲು ಮುಂದಿಟ್ಟ ಉಕ್ರೇನ್..!!

ಉಕ್ರೇನ್ ಸರ್ಕಾರ ರಷ್ಯಾ ವಿರುದ್ಧ ಹೋರಾಟ ನಡೆಸುವುದಕ್ಕೆ ಸಾಮರ್ಥ್ಯ ಇಲ್ಲದಿದ್ದರೂ ಮಾಡು ಇಲ್ಲವೇ ಮಡಿ ಹೋರಾಟ ನಡೆಸುತ್ತಿದೆ. ಇದೇ ವೇಳೆ ಯೂರೋಪ್ ಒಕ್ಕೂಟ, ನ್ಯಾಟೋ ಪಡೆ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಬೆಂಬಲಕ್ಕೆ ನಿಂತಿವೆ. ಜಪಾನ್ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿಕೆ ಮಾಡಿದೆ. ಯೋರೋಪ್ ರಾಷ್ಟ್ರಗಳು ವಾಯುಮಾರ್ಗ ನಿರ್ಬಂಧಿಸಿದ ಬೆನ್ನಲ್ಲೇ ರಷ್ಯಾ ಕೂಡ 27 ರಾಷ್ಟ್ರಗಳಿಗೆ ವಾಯುನೆಲೆ ಮುಚ್ಚಿದೆ. ಅಮೆರಿಕ ಬೆಲಾರಸ್ ಹಾಗೂ ರಷ್ಯಾ ರಾಜಧಾನಿ ಮಾಸ್ಕೋ ನಗರದಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿದೆ. ಅಂದರೆ ಬೆಲಾರಸ್‌ನಲ್ಲಿ ನಡೆಯುತ್ತಿರುವ ಸಂಧಾನ ಸಭೆ ಯಶಸ್ವಿಯಾಗುವುದಿಲ್ಲ ಎನ್ನುವುದು ಮೊದಲೇ ನಿಶ್ಚಯವಾದಂತೆ ಕಾಣುತ್ತಿದೆ. ಇದೇ ಕಾರಣದಿಂದ ರಷ್ಯಾ ಒಪ್ಪಿಕೊಳ್ಳಲು ಸಾಧ್ಯವಾಗದೆ ಇರುವಂತಹ ಅಂಶಗಳನ್ನು ಉಕ್ರೇನ್ ಸಂಧಾನ ಸಭೆಯಲ್ಲಿ ಮಂಡಿಸಿದೆ. ಇಡೀ ರಷ್ಯಾ ಸೇನೆ ಉಕ್ರೇನ್ ತೊರೆಯುವುದಾದರೆ ನಾವು ಯುದ್ಧ ನಿಲ್ಲಿಸಲು ಸಿದ್ಧರಿದ್ದೇವೆ ಎಂದು ಉಕ್ರೇನ್ ಹೇಳಿದೆ ಎನ್ನಲಾಗ್ತಿದೆ. ಆದರೆ ಇದನ್ನು ರಷ್ಯಾ ಒಪ್ಪಲಿದೆ ಎಂದು ಹೇಳುವುದು ಮೂರ್ಖತನವಾದಿತು. ಕಾರಣವೇನೆಂದರೆ ರಷ್ಯಾ ಯುದ್ಧ ಮಾಡಿದ್ದೇ ಉಕ್ರೇನ್‌ನ ಆ ಎರಡು ನಗರಗಳ ಮೇಲಿನ ಮೋಹದಿಂದ. ಇದೀಗ ಸಂಧಾನ ಸಭೆ ಯಶಸ್ಸು ಕಾಣುವುದು ಅಸಾಧ್ಯ ಎನ್ನಲಾಗ್ತಿದ್ದು, ಅಷ್ಟರೊಳಗಾಗಿ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವುದು ಸೂಕ್ತ. ಇದೇ ಕಾರಣಕ್ಕಾಗಿ ಪ್ರಧಾನಿ‌ ನರೇಂದ್ರ ಮೋದಿ ಕೂಡ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಮಕ್ಕಳು ಸುರಕ್ಷಿತವಾಗಿ ಬಂದೇ ಬರ್ತಾರೆ ಎಂದು ಆಸೆಗಣ್ಣುಗಳಿಂದ ಪೋಷಕರು ಕಾಯುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೂ ಸಹ ಭಾರತೀಯರನ್ನು ಕರೆತರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

Related Posts

Don't Miss it !