ವಿಶ್ವದ ಸರ್ವನಾಶಕ್ಕೆ ಸಕಲ ತಯಾರಿ, ಅಣುಬಾಂಬ್ ದಾಳಿಗೆ ರಷ್ಯಾ ಸಿದ್ಧತೆ.. ವರ್ಲ್ಡ್ ವಾರ್ 3..

ರಷ್ಯಾ ಹಾಗೂ ಉಕ್ರೇನ್​ ನಡುವೆ ಶುರುವಾದ ಯುದ್ಧ ನಾಲ್ಕು ದಿನಗಳು ಮುಗಿಯುವ ಹೊತ್ತಿಗೆ ಅಣುಬಾಂಬ್​ ಯುದ್ಧ ನಡೆಯುವ ಸುಳಿವು ನೀಡಿದೆ. ಈ ಬಗ್ಗೆ ಅಧಿಕೃತ ಆದೇಶ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪರಮಾಣು ಬಾಂಬ್ ಘಟಕ ಯಾವುದೇ ಕ್ಷಣದಲ್ಲಿ ಸಿದ್ಧ ಇರಬೇಕು ಎಂದು ರಕ್ಷಣಾ ಪಡೆಗಳಿಗೆ ತಾಕೀತು ಮಾಡಿದ್ದಾರೆ. ಒಂದು ಕಡೆ ಉಕ್ರೇನ್ ಜೊತೆಗೆ ಸಂಧಾನದ ಪ್ರಸ್ತಾಪವನ್ನು ಇಟ್ಟಿರುವ ರಷ್ಯಾ, ಮತ್ತೊಂದು ಕಡೆಯಿಂದ ಅಣು ಬಾಂಬ್ ಸಿಡಿಸುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಇಡೀ ವಿಶ್ವವೇ ಆತಂಕದಲ್ಲಿ ನೋಡುವಂತೆ ಮಾಡಿದೆ.

ಯೋರೋಪ್ ಒಕ್ಕೂಟಗಳ ಕಠಿಣ ನಿರ್ಧಾರಕ್ಕೆ ರಷ್ಯಾ ಕಂಗಾಲು..!!

ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದಾಗಿನಿಂದಲೂ ಇಡೀ ವಿಶ್ವವೇ ಯುದ್ಧ ನಿಲ್ಲಿಸುವಂತೆ ಒತ್ತಾಯ ಮಾಡುತ್ತಿವೆ. ಆದರೂ ಪಟ್ಟು ಬಿಡದೆ ಯುದ್ಧ ಮುಂದುವರಿಸಿದ್ದು ಇತರೆ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ನ್ಯಾಟೋ ರಾಷ್ಟ್ರಗಳ ಒಕ್ಕೂಟ ಬಹಿರಂಗವಾಗಿ ಉಕ್ರೇನ್ ನೆರವಿಗೆ ನಿಲ್ಲುವುದಾಗಿ ಘೋಷಣೆ ಮಾಡಿದ ಬಳಿಕ ನಾಲ್ಕನೇ ದಿನ ರಷ್ಯಾ ಪಡೆಗಳಿಗೆ ಹಿನ್ನಡೆಯಾಗಿದೆ. ಖಾರ್ಕೀವ್ ನಗರವನ್ನು ಆಕ್ರಮಣ ಮಾಡಿದ್ದ ರಷ್ಯಾ ಸೇನೆಯಿಂದ ಉಕ್ರೇನ್ ಸೇನೆ ವಾಪಸ್ ಕಿತ್ತುಕೊಂಡಿದೆ. ಇನ್ನೂ ಯೂರೋಪಿಯನ್ ಒಕ್ಕೂಟ ಉಕ್ರೇನ್ ಬೆಂಬಲಿಸುವ ಮಾಹಿತಿ ನೀಡಿ, ಯೂರೋಪಿಯನ್ ಒಕ್ಕೂಟದ ವಾಯುಮಾರ್ಗವನ್ನು ರಷ್ಯಾ ಬಳಸಿಕೊಳ್ಳುವಂತಿಲ್ಲ ಎಂದು ಘೋಷಣೆ ಮಾಡಿದೆ. ಇದು ರಷ್ಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸೋಲು ಒಪ್ಪಿಕೊಳ್ಳಲು ರಷ್ಯಾ ಸಿದ್ಧವಿಲ್ಲ, ಉಕ್ರೇನ್ ಕೂಡ..!!

ರಷ್ಯಾ ಪ್ರಬಲ ರಾಷ್ಟ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ಪುಟ್ಟ ರಾಷ್ಟ್ರ ಉಕ್ರೇನ್ ನೆರವಿಗೆ ಇತರೆ ರಾಷ್ಟ್ರಗಳು ನಿಲ್ಲುತ್ತಿರುವ ಕಾರಣ ಅಂದುಕೊಂಡಷ್ಟು ಸುಲಭವಾಗಿ ಗೆಲುವು ದಕ್ಕುತ್ತಿಲ್ಲ. ಸಂಧಾನ ಮಾಡಿಕೊಂಡು ಬೇಕಿರುವುದನ್ನು ಪಡೆದು ಯುದ್ಧ ನಿಲ್ಲಿಸೋಣ ಎಂದರೂ ಉಕ್ರೇನ್ ಸಂಧಾನಕ್ಕೂ ಬರುತ್ತಿಲ್ಲ. ಈ ನಡುವೆ ಯೂರೋಪಿಯನ್ ರಾಷ್ಟ್ರಗಳು ಉಕ್ರೇನ್‌ಗೆ ಸಹಾಯ ಮಾಡುವ ಜೊತೆಗೆ ಆರ್ಥಿಕವಾಗಿ ರಷ್ಯಾ ವಿರುದ್ಧ ಸಮರ ಸಾರಿವೆ ಹಾಗೂ ಬಹಿರಂಗವಾಗಿ ರಷ್ಯಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದು ರಷ್ಯಾ ಅಣುಬಾಂಬ್ ನಿರ್ಧಾರಕ್ಕೆ ಕಾರಣ ಎಂದು ವ್ಲಾಡಿಮಿರ್ ಪುಟಿನ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ವಿಶ್ವಕ್ಕೆ ರಷ್ಯಾ ಭಯ..‌ಬೇಜವಾಬ್ದಾರಿ ಎಂದು ಕಟು ಟೀಕೆ..!

ವ್ಲಾಡಿಮಿರ್ ಪುಟಿನ್​ ನ್ಯೂಕ್ಲಿಯರ್​ ಬಾಂಬ್ ಹೇಳಿಕೆಗೆ ಪ್ರಮುಖ ರಾಷ್ಟ್ರಗಳ ಆಕ್ರೋಶ ವ್ಯಕ್ತಪಡಿಸಿದ್ದು, ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಕೂಡ ಬೇಸರ ವ್ಯಕ್ತಪಡಿಸಿದೆ. ಜಪಾನ್‌ನ ಹಿರೋಶಿಮಾ, ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆದ ಬಳಿಕ ಇದೀಗ ಮತ್ತೆ ಅಣುಬಾಂಬ್ ದಾಳಿ ಬಗ್ಗೆ ಚರ್ಚೆ ಶುರುವಾಗುತ್ತಿದೆ. ಇದು 3ನೇ ಮಹಾಯುದ್ಧದ ಆರಂಭ ಎನ್ನುವುದು ಕೆಲವು ವಿಶ್ಲೇಷಕರ ಮಾತು. ಇನ್ನೂ ಅಣುಬಾಂಬ್ ತೋರಿಸಿ ಉಕ್ರೇನ್ ಸರ್ಕಾರವನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ದೊಡ್ಡಣ್ಣ ಅಮೆರಿಕ ಇದು ಜಗತ್ತಿಗೆ ಮಾರಕವಾದ ಆಲೋಚನೆ ಎಂದು ಪ್ರತಿಕ್ರಿಯಿಸಿವೆ. ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ಎಚ್ಚರಿಕೆ ಒಳ್ಳೆಯದಲ್ಲ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ

Related Posts

Don't Miss it !