ಡೆಲಿವರಿ ಬಾಯ್​​ ಕೆಲಸ.. ಕಂಡ ಕಂಡವರ ಸೊಂಟಕ್ಕೆ ಕೈ ಹಾಕೋ ಚಪಲ..!?

ಬೆಂಗಳೂರಿನಲ್ಲಿ ಡೆಲಿವರಿ ಬಾಯ್​ ಅನ್ನೋದು ಒಂದು ವೃತ್ತಿ ಎನ್ನುವಂತಾಗಿದೆ. ಅದರಲ್ಲೂ ಬೇರೆ ಬೇರೆ ಕೆಲಸ ಮಾಡಿಕೊಂಡು ಉಳಿದ ಸಮಯದಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುವ ಅದೆಷ್ಟೋ ಜನರು ಬೆಂಗಳೂರಿನಲ್ಲಿ ಸಿಗುತ್ತಾರೆ. ಇನ್ನು ಅದನ್ನೇ ವೃತ್ತಿ ಮಾಡಿಕೊಂಡು ಶಿಸ್ತಿನಿಂದ ಗ್ರಾಹಕರ ಜೊತೆಗೆ ವ್ಯವಹರಿಸುವ ಸಾಕಷ್ಟು ಉತ್ತಮ ನಡೆತೆಯುಳ್ಳ ಯುವಕರು ಬೆಂಗಳೂರಿನಲ್ಲಿ ಕಾಣಸಿಗುತ್ತಾರೆ. ಆದರೆ ಇಲ್ಲೊಬ್ಬ ಯುವಕ ಡೆಲಿವರಿ ಬಾಯ್​​ ಆಗಿ ಕೆಲಸ ಮಾಡುತ್ತಲೇ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನಿರ್ಜನ ಪ್ರದೇಶದಲ್ಲಿ ಯಾರು ಕಾಣಿಸುವುದಿಲ್ಲ ಎಂದುಕೊಂಡು ಮಾಡಿದ ಕಿರಾತಕ ಕೃತ್ಯದಿಂದ ತಾನೇ ತೋಡಿದ್ದ ಬಾವಿಗೆ ತಾನೇ ಬಿದ್ದಿದ್ದಾನೆ. ಅಷ್ಕ್ಕೂ ಈತ ಮಾಡುತ್ತಿದ್ದದ್ದು ಒಂಟಿ ಮಹಿಳೆಯರ ಟಾರ್ಗೆಟ್​. ಆದರೆ ಕಳ್ಳನಲ್ಲ.

ಆರೋಪಿ ಗಂಗಾಧರ

ಬೆಂಗಳೂರಿನಲ್ಲಿ ವಾಕ್​ ಮಾಡುವ ಮಹಿಳೆಯರೇ ಅಚ್ಚುಮೆಚ್ಚು​.. !

ಬೆಂಗಳೂರಿನಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಕ್​ ಮಾಡುವುದು ಕಾಮನ್​. ಅದರಲ್ಲೂ ಐಶಾರಾಮಿ ಜನರು ವಾಸ ಮಾಡುವ ಏರಿಯಾಗಳಲ್ಲಿ ವಾಕ್​ ಮಾಡುವುದು ಜನರೇ ಹಾಕಿಕೊಂಡ ನಿಯಮಗಳಲ್ಲಿ ಒಂದು. ಬೆಳಗ್ಗೆ ಇನ್ನೂ ಸೂರ್ಯ ಹುಟ್ಟುವ ಮುಂಚೆ ವಾಕ್​ ಮಾಡುವ ಮಹಿಳೆಯರನ್ನು ಟಾರ್ಗೆಟ್​ ಮಾಡ್ತಿದ್ದ ಆರೋಪಿ, ಅವರ ಬಳಿಗೆ ಹೋಗಿ ಸೊಂಟ ಮುಟ್ಟುವುದು, ಮೈಕೈ ಮುಟ್ಟಿ ಮಜಾ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಜುಲೈ 3ನೇ ತಾರೀಕು, ಸದಾಶಿವನಗರದಲ್ಲಿ ವಾಕ್​ ಮಾಡ್ತಿದ್ದ ಇಬ್ಬರ ಸೊಂಟ ಮುಟ್ಟಿ ಅಲ್ಲಿಂದ ಎಸ್ಕೇಪ್​ ಆಗಿದ್ದ. ಅದೇ ದಿನ ವೈಯಾಲಿ ಕಾವಲ್​ನಲ್ಲೂ ಓರ್ವ ಮಹಿಳೆಯ ದೇಹ ಮುಟ್ಟಿ ನಾಪತ್ತೆಯಾಗಿದ್ದ. ಆದರೆ ಇದೀಗ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಕೊಟ್ಟ ಸುಳಿವು ಆರೋಪಿಯ ಜಾಡು ಹಿಡಿದು ಮನೆಗೆ ಬಂದಿದ್ದರು ಪೊಲೀಸರು.

ರಸ್ತೆಯಲ್ಲಿ ಹಾಕಿದ್ದ ಸಿಸಿಟಿವಿಯಲ್ಲಿ ಡೆಲಿವರಿ ಬಾಯ್​​ ಸೆರೆ..!

ಮಹಿಳೆಯರ ಮೈಕೈ ಮುಟ್ಟಿದ್ದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಯಾವುದೂ ಇರಲಿಲ್ಲ. ಆದರೆ ಮಹಿಳೆಯರು ಠಾಣೆಗೆ ದೂರು ನೀಡಿದ್ದ ಬಳಿಕ ಸದಾಶಿವನಗರ ಪೊಲೀಸರು ರಸ್ತೆಗಳಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಸಿಸಿಟಿವಿಯಲ್ಲಿ ಬೈಕ್​ ಮೇಲೆ ಹೋಗುತ್ತಿದ್ದ ಯುವಕ ಪತ್ತೆಯಾಗಿದ್ದ. ಆತ ಡೆಲಿವರಿ ಬಾಯ್​ ಅನ್ನೋದು ಖಚಿತ ಆಗ್ತಿದ್ದ ಹಾಗೆ ಕಂಪನಿಯನ್ನು ಸಂಪರ್ಕಿಸಿದ ಪೊಲೀಸರು, ಆ ಸಮಯದಲ್ಲಿ ಆ ರಸ್ತೆಯಲ್ಲಿ ಓಡಾಡಿದ ಡೆಲಿವರಿ ಬಾಯ್​ ವೀಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದರು. ಅದಕ್ಕೂ ಮುನ್ನ ವೈಯಾಲಿ ಕಾವಲ್​ನಲ್ಲೂ ಇದೇ ರೀತಿಯ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿತ್ತು. ಎರಡು ಪ್ರತ್ಯೇಕ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಖಾಕಿಪಡೆ ಡೆಲಿವರಿ ಬಾಯ್​ ವಿಳಾಸ ಸಿಗುತ್ತಿದ್ದ ಹಾಗೆ ಮನೆ ಬಾಗಿಲಲ್ಲಿ ನಿಂತಿದ್ದರು. ಆಗಲೇ ಎದುರಾಗಿದ್ದು ಅಚ್ಚರಿಯ ವಿಚಾರ.

ಮದುವೆಯಾಗಿದ್ದ ಗಂಗಾಧರ, ಹೆಂಡ್ತಿ ಮಕ್ಕಳ ಜೊತೆಗೆ ಸಿಕ್ಕಿಬಿದ್ದ..!

ರಾಯಚೂರು ಮೂಲದ ಆರೋಪಿ ಗಂಗಾಧರ, ಪೀಣ್ಯಾದಲ್ಲಿ ಮನೆ ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆಗೆ ವಾಸವಾಗಿದ್ದನು ಎನ್ನುವುದು ಪೊಲೀಸ್​ ಮೂಲಗಳ ಮಾಹಿತಿ. ಮದುವೆ ಆದವನು ಈ ರೀತಿ ಮಹಿಳೆಯರ ಸೊಂಟ ಮುಟ್ಟುವುದು, ಮೈಕೈ ಮುಟ್ಟವ ಕೆಟ್ಟ ಚಟಕ್ಕೆ ಯಾಕೆ ಒಳಗಾಗಿದ್ದನು ಎನ್ನುವುದು ಇದೀಗ ಎದುರಾಗಿರುವ ಪ್ರಶ್ನೆ. ಆತ ಮಾನಸಿಕವಾಗಿ ಏನಾದರೂ ಸಮಸ್ಯೆ ಎದುರಿಸುತ್ತಿದ್ದಾನೋ..? ಅಥವಾ ಆತನಲ್ಲಿ ವಿಕೃತ ಮನಸ್ಸು ಆ ರೀತಿ ಮಾಡಿಸುತ್ತಿದೆಯೋ ಅನ್ನೋ ಬಗ್ಗೆ ಪೊಲೀಸರೇ ತನಿಖೆ ಮಾಡಬೇಕಿದೆ. ಜೊತೆಗೆ ಆತ ನಿಜವಾಗಿಯೂ ಆ ರೀತಿ ಸ್ತ್ರೀಯರಿಗೆ ಸೊಂಟ ಮುಟ್ಟಿದ್ದಾನೋ ಅಥವಾ ಬೇರೆ ಯಾವುದೋ ವಿಚಾರದಲ್ಲಿ ಜಗಳ ಮಾಡಿಕೊಂಡು ಈ ರೀತಿ ಪ್ರಕರಣ ದಾಖಲಿಸಿ ಸೇಡು ತೀರಿಸಿಕೊಳ್ಳುತ್ತಾ ಇದ್ದಾರೋ..? ಎನ್ನುವ ಬಗ್ಗೆಯೂ ಪೊಲೀಸರೇ ಸೂಕ್ತ ತನಿಖೆ ನಡೆಸಿ ಮಾಹಿತಿ ನೀಡಬೇಕಿದೆ.

Related Posts

Don't Miss it !