ಶಿಕ್ಷಣ ಸಂಸ್ಥೆಗಳು ಕೊಟ್ಟಿದ್ದ ಗಡುವು ಅಂತ್ಯ..! ಸಿಎಂ ಕೈಯ್ಯಲ್ಲಿ ಶಾಲಾ ಮಕ್ಕಳ ಭವಿಷ್ಯ..!

ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಕ್​ಡೌನ್​ ಜಾರಿ ಮಾಡಿದ್ದ ಕಾರಣ ಶಾಲಾ ಕಾಲೇಜುಗಳನ್ನು ಬಂದ್​ ಮಾಡಲಾಗಿತ್ತು. ಆ ಬಳಿಕ ಹಂತ ಹಂತವಾಗಿ ಅನ್​ಲಾಕ್​ ಜಾರಿ ಮಾಡಲಾಗಿದೆ. ಪದವಿ ಮೇಲ್ಪಟ್ಟ ತರಗತಿಗಳನ್ನೂ ಕಳೆದ ವಾರದಿಂದ ಆರಂಭ ಮಾಡಲಾಗಿದೆ. ಆದರೆ ಪ್ರೌಢಶಾಲೆ, ಪದವಿ ಪೂರ್ವ ತರಗತಿಗಳ ಆರಂಭಕ್ಕೆ ಸರ್ಕಾರ ಇನ್ನೂ ಗ್ರೀನ್​ ಸಿಗ್ನಲ್​ ಕೊಟ್ಟಿಲ್ಲ. ಜುಲೈ ಅಂತ್ಯದೊಳಗೆ ಸರ್ಕಾರ ತರಗತಿ ಆರಂಭದ ಬಗ್ಗೆ ನಿರ್ಧಾರ ಪ್ರಕಟಿಸಬೇಕು, ಇಲ್ಲದಿದ್ದರೆ ಆಗಸ್ಟ್​ನಿಂದ ತರಗತಿ ಆರಂಭ ಮಾಡುತ್ತೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸರ್ಕಾರಕ್ಕೆ ಗಡುವು ನೀಡಿತ್ತು. ಇದೀಗ ಗಡುವು ಮುಕ್ತಾಯವಾಗಿದ್ದು ಸರ್ಕಾರ ನಿರ್ಧಾರೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಮೂರು ತಿಂಗಳಿನಿಂದ ಶಾಲೆ ಪ್ರಾರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ 40 ಲಕ್ಷ ಮಕ್ಕಳು ಓದುತ್ತಿದ್ದಾರೆ. ಆದ್ರೆ ಗ್ರಾಮೀಣ ಭಾಗದ ಮಕ್ಕಳಿಗೆ ಇದುವರೆಗೂ ಶಿಕ್ಷಣ ಸಿಕ್ಕಿಲ್ಲ, ಹೀಗೆ ಮುಂದುವರಿದರೆ ಶಿಕ್ಷಣ ವ್ಯವಸ್ಥೆ ಶೋಚನೀಯ ಮಟ್ಟ ತಲುಪುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲ್ಲದೆ ಏನಾಗಿದೆ ಗೊತ್ತಾ..?

ಶೈಕ್ಷಣಿಕ ವರ್ಷ ಆರಂಭ ಮಾಡದೆ 2,660 ವಿದ್ಯಾರ್ಥಿನಿಯರ ಬಾಲ್ಯ ವಿವಾಹ ಮಾಡಲಾಗಿದೆ. ಮಕ್ಕಳಿಗೆ ಪೌಷ್ಟಿಕಾಹಾರದ ಕೊರತೆ ಎದುರಾಗಿದೆ. ಶೇಕಡ 40 ರಷ್ಟು ಮಕ್ಕಳು ಬಡತನ ರೇಖೆಗಿಂತ ಕೆಳಗಡೆ ಇದ್ದಾರೆ. ಗ್ರಾಮೀಣ ಭಾಗದ ಮಕ್ಕಳ ಬಳಿ ಮೊಬೈಲ್ ಪೋನ್ ಇರಲ್ಲ. ಆನ್​ಲೈನ್ ಶಿಕ್ಷಣ ಮಕ್ಕಳಿಗೆ ಹೇಗೆ ತಲುಪುತ್ತಿದೆ ಅನ್ನೋದು ಗೋತ್ತಾಗ್ತಿಲ್ಲ. ಈ ಹಿಂದೆ ಹಲವು ಶಿಕ್ಷಣ ತಜ್ಞರು ಶಾಲೆ ತೆರೆಯುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೂ ಶಾಲೆ ಪ್ರಾರಂಭ ಮಾಡುವ ನಿರ್ಧಾರ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.

ಆಗಸ್ಟ್​ 2 ರಿಂದ ಆರಂಭವಾಗುತ್ತಾ ಶಾಲೆ..?

ಸರ್ಕಾರ ಒಪ್ಪಲಿ ಒಪ್ಪದೆ ಇರಲಿ ಆಗಸ್ಟ್ 2 ರಂದು ಶಾಲೆ ಆರಂಭ ಮಾಡಲು ನಿರ್ಧಾರ ಮಾಡಿದ್ದ ರುಪ್ಸಾ ಕರ್ನಾಟಕ ಸಂಘಟನೆ, ಇದೀಗ ನಿರ್ಧಾರ ಬದಲಾವಣೆ ಮಾಡಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಕಾಣುತ್ತಿದೆ. ಪಾಸಿಟಿವಿಟಿ ರೇಟ್ ಕೂಡ ಹೆಚ್ಚಾಗ್ತಿದೆ. ಈಗ ಕೊರೊನಾ ಮೂರನೇ ಅಲೆ ಮನೆ ಬಾಗಿಲ ಬಳಿ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಆರಂಭ ಮಾಡಲು ಸಾಧ್ಯವಿಲ್ಲ. ಶಾಲೆ ತೆರೆಯುವ ಬಗ್ಗೆ ಮುಖ್ಯಮಂತ್ರಿಗಳೂ ಕೂಡ ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ.

ಸರ್ಕಾರಕ್ಕೆ ರುಪ್ಸಾ ಒಕ್ಕೂಟ ಸಲಹೆ..!

ರಾಜ್ಯಸರ್ಕಾರಕ್ಕೆ ರುಪ್ಸಾ ಒಕ್ಕೂಟ ಸಲಹೆ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಭೌತಿಕ ತರಗತಿ ಪ್ರಾರಂಭ ಮಾಡಲು ಸಾಧ್ಯವಿಲ್ಲ. ಆದರೆ ವಿದ್ಯಾಗಮ ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ವಾರದಲ್ಲಿ ಎರಡು ದಿನ ತರಗತಿ ನಡೆಸಲಾಗುತ್ತಿತ್ತು. ಈಗಲೂ ಕನಿಷ್ಠ ಎರಡು‌ ದಿನ‌ ಮಕ್ಕಳು ಶಾಲೆ ಮುಖ ನೋಡುವಂತೆ ಮಾಡಿ, ಇಲ್ಲದಿದ್ರೆ ಮಕ್ಕಳು ಓದುವುದರ ಕಡೆಗೆ ನಿರ್ಲಕ್ಷ್ಯ ವಹಿಸುತ್ತಾರೆ. ವರ್ಷ ಕಳೆದ 2 ವರ್ಷಗಳಿಂದಲೂ ಶೈಕ್ಷಣಿಕ ವರ್ಷ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ತೀರ್ಮಾನ..!

ಶಾಲೆ ಪ್ರಾರಂಭ ಮಾಡುವಂತೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಒತ್ತಡ ಹಾಕುತ್ತಿರುವ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಾನು ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಮಾತಾಡಿದ್ದೇನೆ. ದೆಹಲಿಯಿಂದ ಬಂದ ನಂತರ ಮತ್ತೊಮ್ಮೆ ಅವರ ಜೊತೆಗೆ ಮಾತಾಡುತ್ತೇನೆ. ಬೇರೆ ರಾಜ್ಯಗಳ ಸ್ಥಿತಿ-ಗತಿ, ಲಸಿಕೆ ಪೂರೈಕೆ ಸೇರಿದಂತೆ ಎಲ್ಲಾ ವಿಚಾರವಾಗಿ ದೆಹಲಿಯಿಂದ ಬಂದ ಬಳಿಕ ಅವರ ಜೊತೆ ಮಾತಾಡುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿ ಸಚಿವ ಸಂಪುಟ ವಿಸ್ತರಣೆ ಗುಂಗಿನಲ್ಲಿದ್ದು, ಆ ಬಳಿಕ ಅಷ್ಟೇ ಶಾಲೆಗಳ ಬಗ್ಗೆ ಗಮನಹರಿಸಲಾಗುತ್ತದೆ.

Related Posts

Don't Miss it !