Intsagram Love.. ಕಾಲೇಜಲ್ಲಿ ಱಗಿಂಗ್..! ಯುವಕ ಸಾವು..!

ಬೆಂಗಳೂರಿನಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ. ಸಾಕಷ್ಟು ಕಾಲೇಜುಗಳಲ್ಲಿ ಗಾಂಜಾ ಗಮ್ಮತ್ತು ಜೋರಾಗಿದ್ರೆ, ಇನ್ನೂ ಕೆಲವು ಕಾಲೇಜುಗಳಲ್ಲಿ ಱಗಿಂಗ್​ ಭೂತ ಮನೆ ಮಾಡಿದೆ. ಇದೀಗ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಆದರೆ ಯಾರಾದರೂ ಕೊಲೆ ಮಾಡಿ ಹೆಣವನ್ನು ಎಂ ಸ್ಯಾಂಡ್​ ತುಂಬಿದ್ದ ಲಾರಿಯಲ್ಲಿ ಹಾಕಿದ್ರಾ..? ಅಥವಾ ಮಾಡದೆ ಇರುವ ಕೃತ್ಯಕ್ಕೆ ತಾನು ಹೊಣೆಯಾಗ್ತಿದ್ದೇನೆ ಎನ್ನುವ ಭೀತಿಯಲ್ಲಿ ತಾನೇ ಆತ್ಮಹತ್ಯೆ ಮಾಡಿಕೊಂಡನಾ..? ಎನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಓದಿನಲ್ಲಿ ಸಾಕಷ್ಟು ಮುಂದಿದ್ದ ಯುವಕ ಸೋಮನಾಥ್​, ಹೆಣವಾಗಿ ಲಾರಿ ಮೇಲೆ ಬಿದ್ದಿದ್ದಾನೆ.

ದ್ವಿತೀಯ ಪರೀಕ್ಷೆ ವಿದ್ಯಾರ್ಥಿ ಸತ್ತಿದ್ದು ಯಾಕೆ..?

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ಸಮೃದ್ಧಿ ಕಾಲೇಜಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಯುವಕ ಸೋಮನಾಥ್​, ಓದಿನಲ್ಲಿ ಸಾಕಷ್ಟು ಮುಂದಿದ್ದ ಸೋಮನಾಥ್​, ಕಾಲೇಜಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿ ಆಗಿದ್ದ. 5ನೇ ತಾರೀಕು ಸ್ನೇಹಿತರು ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಅವರು ಸಾಯಿಸುವ ಮೊದಲೇ ಸಾಯುತ್ತೇನೆ ಎಂದು ಡೆತ್ ನೋಟ್ ಬರೆದಿಟ್ಟು, ಮನೆಯಿಂದ ನಾಪತ್ತೆಯಾಗಿದ್ದ. ಮಗ ಸೋಮನಾಥ್ ನಾಪತ್ತೆ ಆಗಿದ್ದ ಬಗ್ಗೆ ಪೋಷಕರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಇದೀಗ ಮಾಸ್ಕ್​​ ನೋಡಿ ಶವ ಪತ್ತೆ ಆಗಿದೆ.

ಮುಖದಲ್ಲಿದ್ದ ಮಾಸ್ಕ್​​ ಹೇಳಿತ್ತು ಶವದ ಗುರುತು..!

ತಮಿಳುನಾಡಿನಿಂದ ಎಂ ಸ್ಯಾಂಡ್​ ತುಂಬಿಕೊಂಡು ಮಾರತಹಳ್ಳಿ ತಲುಪಿದ್ದ ಲಾರಿ ಮೇಲೆ ಯುವಕನ ಶವವೊಂದು ಪತ್ತೆಯಾಗಿತ್ತು. ಲಾರಿ ಚಾಲಕ ಸೇರಿದಂತೆ ಎಲ್ಲರೂ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಜೊತೆಗೆ ಐಡಿ ಕಾರ್ಡ್​ ಕೂಡ ಇರಲಿಲ್ಲ. ಆದರೆ ಮುಖಕ್ಕೆ ಹಾಕಿಕೊಂಡಿದ್ದ ಮಾಸ್ಕ್​ ಮೇಲೆ ಹೆಸರು ಪತ್ತೆಯಾಗಿತ್ತು. ಆ ಹೆಸರನ್ನು ಹಿಡಿದು ಹುಡುಕಾಡಿದ ಪೊಲೀಸರಿಗೆ ಹೊಸಕೋಟೆಯ ಭಾಗದ ಯುವಕ ಅನ್ನೋದು ತಿಳಿಯಿತು. ಎಲ್ಲಾ ಪೊಲೀಸರಿಗೂ ಮಾಹಿತಿ ರವಾನೆ ಮಾಡಿ ಬಳಿಕ ಸೋಮನಾಥ್​ ನಾಪತ್ತೆ ಕೇಸ್​ ಕೂಡ ಬಹಿರಂಗ ಆಗಿತ್ತು. ಆ ಬಳಿಕ ಸಿವಿ ರಾಮನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವ ಹಸ್ತಾಂತರ ಮಾಡಲಾಗಿದೆ. ಆದರೆ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.

ಇನ್​​ಸ್ಟಾಗ್ರಾಂನಲ್ಲಿ ಯುವತಿ ಜೊತೆಗೆ ಚಾಟಿಂಗ್​..!

ಸೋಮನಾಥ್​, ಇನ್​ಸ್ಟಾಗ್ರಾಂನಲ್ಲಿ ಯಾವುದೋ ಅಪರಿಚಿತ ಯುವತಿ ಜೊತೆಗೆ ಚಾಟ್ ಮಾಡಿದ್ದು ಗೊತ್ತಾಗಿದೆ. ಅದೇ ಚಾಟ್ ಸ್ಕ್ರೀನ್​ ಶಾಟ್ ತೆಗೆದುಕೊಂಡಿದ್ದ ಸ್ನೇಹಿತರು ವಾಟ್ಸಾಪ್​ ಗ್ರೂಪಿನಲ್ಲಿ ಹಾಕಿಕೊಂಡು ರೇಗಿಸಿದ್ದರು ಎನ್ನಲಾಗಿದೆ. ಅದೇ ಬೇಸರದಲ್ಲಿ ಗ್ರೂಪಿನಿಂದ ಸೋಮನಾಥ್​ ಎಕ್ಸಿಟ್​ (Exit) ಆಗಿದ್ದನು. ಆದರೆ ಇಷ್ಟಕ್ಕೆ ಸಾಯಿಸುವ ಬೆದರಿಕೆ ಹಾಕಿದ್ದು ಯಾರು..? ನಾನೇ ಸಾಯುತ್ತೇನೆ ಎಂದು ಡೆತ್​ನೋಟ್​ ಬರೆದಿಟ್ಟು ಯಾಕೆ..? ಎನ್ನುವ ಬಗ್ಗೆ ಪೊಲೀಸರಿಗೆ ಸಾಕಷ್ಟು ಅನುಮಾನಗಳು ಶುರುವಾಗಿದೆ. ಯುವಕನ ಬಾಡಿ ಮೇಲೆ ಯಾವುದೇ ಗಾಯಗಳೂ ಇಲ್ಲ, ವಿಷ ಸೇವಿಸಿರುವ ಬಗ್ಗೆಯೂ ಯಾವುದೇ ಸಾಕ್ಷ್ಯ ಲಭ್ಯವಿಲ್ಲ. ಹಾಗಿದ್ದ ಮೇಲೆ ಉಸಿರುಗಟ್ಟಿಸಿ ಯಾರಾದರೂ ಕೊಲೆ ಮಾಡಿ, ಹೀಗೆ ಲಾರಿ ಮೇಲೆ ಬಿಸಾಕಿದ್ದಾರಾ..? ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ Instagram love ಯುವಕನ ಪ್ರಾಣವನ್ನು ತೆಗೆದುಕೊಂಡಿದೆ.

Related Posts

Don't Miss it !