ಇಹಲೋಕ ತ್ಯಜಿಸಿದ ಹಿರಿಯ ನಟ ರಾಜೇಶ್, ಚಿತ್ರರಂಗ ಕಂಬನಿ..

ಕನ್ನಡ ಚಿತ್ರರಂಗದ ಹಿರಿಯ ನಟ ಕಲಾತಪಸ್ವಿ ರಾಜೇಶ್ ತಮ್ಮ 87ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಕಿಡ್ನಿ ವೈಫಲ್ಯ ಸೇರಿದಂತೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ರಾಜೇಶ್, ಕಳೆದ ಒಂದು ವಾರದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರಾಜೇಶ್, ಇಂದು ಮುಂಜಾನೆ ವಿಧಿವಶರಾದರು. ರಂಗಭೂಮಿಯಿಂದ ಬಂದ ರಾಜೇಶ್​, ಸ್ಯಾಂಡಲ್​ವುಡ್​​ನಲ್ಲಿ ತನ್ನದೇ ಛಾಪು ಮೂಡಿಸಿದ್ದ ವಿಶೇಷ ನಟ ರಾಜೇಶ್ ಅವರಿಗೆ ಒಟ್ಟು ಐವರು ಮಕ್ಕಳು, ನೀವೇದಿತಾ ಅರ್ಜುನ್, ಪ್ರಿಯ ದರ್ಶಿನಿ, ರಾಜು, ರಘು, ರೇಣು. ಅದರಲ್ಲಿ ಹಿರಿಯ ಮಗಳನ್ನು​ ಬಹುಭಾಷಾ ನಟ ಅರ್ಜುನ್​ ಸರ್ಜಾ ಅವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಹಿರಿಯ ಮಗ ರಾಜು ಅವರು ಕುರುಬ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ಪೂರೈಸಲಾಗಿದೆ.

ರಂಗಭೂಮಿಯಿಂದ ಬೆಳ್ಳಿ ತೆರೆ ಮೇಲೆ ರಾಜೇಶ್​​ ಮಿಂಚಿಂಗ್..!

ಮುನಿ ಚೌಡಪ್ಪ ಎಂಬ ಹೆಸರಿನ ರಾಜೇಶ್ ರಂಗಭೂಮಿಯಲ್ಲಿ ವಿದ್ಯಾ ಸಾಗರ್ ಎಂದು ಗುರುತಿಸಿಕೊಂಡಿದ್ದರು. ಶಕ್ತಿ ನಾಟಕ‌ ಮಂಡಳಿ‌ ಕಟ್ಟಿದ್ದ ರಂಗಕರ್ಮಿ, ನಿರುದ್ಯೋಗಿ ಬಾಳು, ಬಡವನ‌ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹತ್ತು ಹಲವು ನಾಟಕಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡ ರಾಜೇಶ್​, 60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. 1968ರ ನಮ್ಮ ಊರು ಚಿತ್ರದಲ್ಲಿ ರಾಜೇಶ್ ಅಂತ ಹೆಸರು ಬದಲಿಸಿಕೊಂಡ ವಿದ್ಯಾ ಸಾಗರ್​, ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ ಬರೋಬ್ಬರಿ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿ ಬಹುಬೇಡಿಕೆಯ ನಟ ಎನಿಸಿಕೊಂಡವರು. ಶ್ರೀನಿ ನಟನೆಯ ಓಲ್ಡ್ ಮಾಂಕ್ ಚಿತ್ರದಲ್ಲಿ ನಟಿಸಿದ್ದು ಕೊನೆಯ ಸಿನಿಮಾ. ರಾಜೇಶ್​ ಅವರ ಕಲಾ ಸೇವೆ ಗುರುತಿಸಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಅಂತ್ಯಕ್ರಿಯೆ ಮೂಲಕ ಅಭಿಮಾನಿ ಆಸೆ ಪೂರೈಸಿದ ನಟ..!

ನಟ ರಾಜೇಶ್​​ ಸಾವಿನಲ್ಲೂ ಅಭಿಮಾನಿ ಆಸೆಯನ್ನೂ ಪೂರೈಸಿದ್ದಾರೆ. ರಾಜೇಶ್ ಅವರ ಅಪ್ಪಟ್ಟ ಅಭಿಮಾನಿ ಸಿದ್ದಲಿಂಗಯ್ಯ ಅವರ ಆಸೆಯಂತೆ ರಾಜೇಶ್ ಅವರ ಪಾರ್ಥಿವ ಶರೀರವನ್ನು ಸಿದ್ದಲಿಂಗಯ್ಯ ಅವರ ನೆಲಮಂಗಲದ ಬಳಿಯ ಗೋವಿಂದಪುರದ  ತೋಟದಲ್ಲಿ ನೆರವೇರಿಸಲಾಗಿದೆ. ಇದಕ್ಕೂ ಮೊದಲು ರಾಜೇಶ್ ಅವರ ಮೃತದೇಹವನ್ನು ಮೇಡಿ ಅಗ್ರಹಾರದ ಚಿತಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ಆದರೆ ತಮ್ಮ ನೆಚ್ಚಿನ ನಟ ರಾಜೇಶ್​ ಅವರನ್ನು ನಮ್ಮದೇ ತೋಟದಲ್ಲಿ ಅಂತ್ಯಕ್ರಿಯೆ ಮಾಡಬೇಕು ಎನ್ನುವ ಉದ್ದೇಶದಿಂದ 10 ಗುಂಟೆ ಜಮೀನನ್ನು ಉಚಿತವಾಗಿ ನೀಡಿದ್ದಾರೆ. ನನ್ನದೇ ಜಮೀನಿನಲ್ಲಿ ರಾಜೇಶ್ ಅವರ ಸ್ಮಾರಕ ನಿರ್ಮಾಣ ಮಾಡುವಂತೆಯೂ  ರಾಜೇಶ್ ಕುಟುಂಬಸ್ಥರಲ್ಲಿ ಮನವಿ ಮಾಡಿದ್ದಾರೆ. ಆ ಬಳಿಕ ಅಭಿಮಾನಿ ಆಸೆಯಂತೆ ನೆಲಮಂಗಲ ಬಳಿಕ ಗೋವಿಂದಪುರದ ತೋಟದಲ್ಲಿ  ಕಲಾತಪಸ್ವಿಗೆ ಅಂತಿಮ ವಿದಾಯ ಹೇಳಲಾಯ್ತು.

ಕಂಬನಿ ಮಿಡಿದ ಗಣ್ಯರು, ಸಕಲ ಸರ್ಕಾರಿ ಗೌರವ ಸಲ್ಲಿಕೆ..!

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೂ ಸಾರ್ವಜನಿಕ ದರ್ಶನದ ಬಳಿಕ ಸಂಜೆ ವೇಳೆಗೆ ಅಂತಿಮ ವಿಧಿವಿಧಾನ ನೆರವೇರಿಸಲಾಯ್ತು. ರಾಜೇಶ್​​ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜೇಶ್​​ಗೆ ನಮನ ಸಲ್ಲಿಸಿದ್ದಾರೆ. ನಟ ಶಿವರಾಜ್ ಕುಮಾರ್, ಯುವರಾಜ್, ತಾರಾ, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಚಿತ್ರರಂಗದ ನಟ, ನಟಿಯರು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದ್ರು. ಸತತ 5 ದಶಕಗಳ ಕಾಲ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿದ ರಾಜ್ಯ ಸರ್ಕಾರ, ರಾಜೇಶ್ ಅವರಿಗೆ ಪೊಲೀಸ್ ಗೌರವ ಸಲ್ಲಿಸುವ ಮೂಲಕ ಹಿರಿಯ ನಟನಿಗೆ ಗೌರವ ಸಲ್ಲಿಸಿದೆ. 1935ರ ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಜನಿಸಿದ್ದ ಮುನಿ ಚೌಡಪ್ಪ, ತನ್ನ ತಂದೆ-ತಾಯಿಗೆ ತಿಳಿಸದೆ ನಾಟಕ ತಂಡವನ್ನು ಸೇರಿ ನಟನೆಯ ಜೊತೆ ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚು ಗಾರರಾಗಿ ಕೆಲಸ ಮಾಡುತ್ತಿದ್ದರು.

Related Posts

Don't Miss it !