ಹೈಕೋರ್ಟ್​ ಹೇಳಿದರೂ ಬುದ್ಧಿ ಕಲಿಯದ ಸರ್ಕಾರ..! ಬಡವರ ಸಾವಿಗೆ ಸರ್ಕಾರಿ ಬೆಲೆ..

ಬೆಂಗಳೂರಿನಲ್ಲಿ ರಸ್ತೆಗುಂಡಿ ಅನಾಹುತದ ಬಗ್ಗೆ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಮುಖ್ಯ ಎಂಜಿನಿಯರ್​ ಅವರನ್ನು ಅರೆಸ್ಟ್​ ಮಾಡಿ ಕರೆದುಕೊಂಡು ಬರುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು. ಹೈಕೋರ್ಟ್​ ಎದುರು ಮಂಡಿಯೂರಿದ್ದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಶೀಘ್ರವೇ ಗುಂಡಿ ಮುಚ್ಚುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಅದೇ ರಸ್ತೆ ಗುಂಡಿಗೆ ಬಿದ್ದು 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಎಂ.ಎಸ್ ಪಾಳ್ಯ ರಸ್ತೆಯಲ್ಲಿ ಜಲಮಂಡಳಿ ತೆಗೆದಿದ್ದ ಗುಂಡಿಗೆ ಬಿದ್ದು ಅಶ್ವಿನ್ ಸಾವು ಸಂಭವಿಸಿದೆ. ಗುಂಡಿ ತೆಗೆದಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಮೃತ ಅಶ್ವಿನ್​​ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿ ಮೂಲದ ಅಶ್ವಿನ್​​ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಗುಂಡಿ ಕಾಣದೆ ಬಿದ್ದು ಸ್ಥಳದಲ್ಲೇ ಒದ್ದಾಡಿದರೂ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಲಿಲ್ಲ. ಆಂಬ್ಯುಲೆನ್ಸ್​ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ.

ತಾಯಿಗೆ ಊಟ ತರುವುದಕ್ಕೆ ಹೋದವನು ಹೆಣವಾದ..!

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನ್​​, ತಾಯಿ ಜೊತೆಗೆ ವಾಸವಾಗಿದ್ದನು. ಆದರೆ ಭಾನುವಾರ ಆಗಿದ್ದರಿಂದ ತಾಯಿಗೆ ಊಟ ತರುವುದಕ್ಕೆ ಎಂದು ಮನೆಯಿಂದ ಹೊರ ಬಂದಿದ್ದನು. ಹೆತ್ತವಳ ಹಸಿವು ನೀಗಿಸಲು ಹೋದವನು ಜೀವನ ಪೂರ್ತಿ ಹಸಿವು ಇರುವಂತೆ ಮಾಡಿ ಹೋಗಿದ್ದಾನೆ. ಎಮ್.ಎಸ್ ಪಾಳ್ಯದ ಹೋಟೆಲ್ ಒಂದರಲ್ಲಿ ಆಹಾರ ಕಟ್ಟಿಸಿಕೊಂಡು ವಾಪಸ್ ಬರುವಾಗ ಬೀದಿ ದೀಪ ಇಲ್ಲದ ಕಾರಣ ರಸ್ತೆಯಲ್ಲಿ ತೆಗೆದಿದ್ದ ಗುಂಡಿ ಕಾಣಿಸಿಲ್ಲ. ಗುಂಡಿಗೆ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ಸಾಕಷ್ಟು ಸಮಯದ ಬಳಿಕ ಅಪಘಾತ ನಡೆದಿರುವುದನ್ನು ಗಮನಿಸಿದ ಸ್ಥಳೀಯರು ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದರು. ಆಂಬ್ಯುಲೆನ್ಸ್​ ಬಾರದಿದ್ದರಿಂದ ಕಾರಿನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಏಕಾಂಗಿಯಾಗಿ ಮಗನನ್ನು ಸಾಕಿದ್ದ ತಾಯಿಗೆ ಮಗನ ಸಾವು ಆಘಾತ ತಂದಿದೆ. ಎಮ್.ಎಸ್ ಪಾಳ್ಯದ ಅವೇಕ್ಷ ಆಸ್ಪತ್ರೆಯಲ್ಲಿ ಅಶ್ವಿನ್ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದೆ, ನನಗೆ ಅವನು, ಅವನಿಗೆ ನಾನು ಅನ್ನೋ ರೀತಿ ಬದುಕಿದ್ವಿ. ಎರಡು ದಿನ‌ದ ಹಿಂದೆಯಷ್ಟೇ ನೀನಿದ್ರೆ ನಾನು ಅಂತ ಹೇಳಿದ್ದೆ. ಗುಂಡಿ ಇದೆ ಜೋಪಾನ ಅಂತಾನೂ ಹೇಳಿದ್ದೆ. ಇದೀಗ ಅದೇ ಗುಂಡಿಗೆ ಬಿದ್ದು ಹೋರಟು ಹೋಗಿದ್ದಾನೆ. ಅವನು ದುಡಿಮೆಯಿಂದಲೇ ನಮ್ಮ ಮನೆ ನಡೀತಿತ್ತು. ನಾನು ಈಗ ಯಾರಿಗೋಸ್ಕರ ಬದುಕಬೇಕು ಎಂದಿದ್ದಾರೆ.

ಸುಡು ಬಿಸಿಲಲ್ಲೇ ರಸ್ತೆ ಮೇಲೆ ಕುಳಿತ ಆಮ್​​ ಆದ್ಮಿ ಪ್ರೊಟೆಸ್ಟ್​..!

ಅಶ್ವಿನ್​​ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಸುಡು ಬಿಸಿಲಿನಲ್ಲೂ ರಸ್ತೆ ಮೇಲೆ ಕುಳಿತ ಕಾರ್ಯಕರ್ತರು, ಪ್ರತಿಭಟನೆ ನಡೆಸಿದ್ರು. ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ರು. ಘಟನಾ ಸ್ಥಳದಲ್ಲಿ ಅಶ್ವಿನ್​ ಮೃತದೇಹವಿಟ್ಟು ಪ್ರತಿಭಟನೆ ಮಾಡಲು ಸ್ನೇಹಿತರು ಪಟ್ಟು ಹಿಡಿದಿದ್ದರು. ಪ್ರತಿಭಟನೆ ಬಿಸಿ ಜೋರಾಗ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ಕೂಡಲೇ ಕೆಲಸಗಾರರನ್ನು ಕರೆಸಿ ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಮಾಡಿದ್ರು. ಆದ್ರೆ ರಸ್ತೆ ಗುಂಡಿ ಮುಚ್ಚಲು ಸ್ಥಳೀಯರು ಅಡ್ಡಿ ಮಾಡಿದ್ರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರೋವರೆಗೂ ರಸ್ತೆ ಗುಂಡಿ ಮುಚ್ಚಲು ಬಿಡಲ್ಲ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಪೊಲೀಸರು ಮನವೊಲಿಕೆ ಮಾಡಿ ರಸ್ತೆ ಗುಂಡಿಗೆ ಡಾಂಬಾರು ಹಾಕಿ ಸರಿಪಡಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

‘ಸತ್ತವರ ಹೆಣಕ್ಕೆ ಸರ್ಕಾರದ ಪರಿಹಾರ’ ಇದು ಎಷ್ಟು ಸರಿ..?

ನಡು ರಸ್ತೆಯಲ್ಲಿ ಗುಂಡಿ ಬಿದ್ದು ಯುವಕ ಸಾವನ್ನಪ್ಪಿದ್ದರ ಬಗ್ಗೆ ಮಾತನಾಡಿರುವ ಬಿಡಿಎ ಅಧ್ಯಕ್ಷ ಎಸ್,.ಆರ್ ವಿಶ್ವನಾಥ್, ರಸ್ತೆ ಚೆನ್ನಾಗಿದೆ.‌ ಮ್ಯಾನ್ ಹೋಲ್​​ನಿಂದ ಅಪಘಾತವಾಗಿದೆ. ಅಲ್ಲಿ‌ ನೀರು ಹರಿಯುವ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ಕೊಟ್ಟಿದ್ರು. ಅದು ಅನಧಿಕೃತ ಕನೆಕ್ಷನ್ ಆಗಿತ್ತು. ಮೃತ ಯುವಕ ಕುಟುಂಬಸ್ಥರಿಗೆ ಪರಿಹಾರ ನೀಡುವ ಬಗ್ಗೆ ಗೌರವ್ ಗುಪ್ತ ಜೊತೆ ಮಾತನಾಡಿದ್ದೇನೆ. ಸಿಎಂ‌ ಗಮನಕ್ಕೆ ತಂದು ಪರಿಹಾರ ಘೋಷಿಸ್ತೇವೆ. ಉಚಿತವಾಗಿ ಸರ್ಕಾರದಿಂದ‌ ಮೃತನ ತಾಯಿಗೆ ಮನೆ ಕೊಡಿಸುವ ಕೆಲಸ ಮಾಡ್ತೇನೆ. ಕ್ಷೇತ್ರದ ಶಾಸಕರಾಗಿ‌ ನಾನು ವೈಯಕ್ತಿಕವಾಗಿ 20 x 30 ನಿವೇಶನ ಕೊಡ್ತೇನೆ ಎಂದಿದ್ದಾರೆ. ಇನ್ನೂ BBMP ಮುಖ್ಯ ಆಯುಕ್ತ ಗೌರವ್ ಗುಪ್ತ ಈ ಬಗ್ಗೆ ಮಾತನಾಡಿ, ಜಲಮಂಡಳಿ ತಪ್ಪಿನಿಂದ ಈ ಅನಾಹುತ ಆಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಲಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದಿದ್ದಾರೆ. ಬಿಬಿಎಂಪಿಗೆ ಮಾಹಿತಿ ನೀಡದೆ ರಸ್ತೆ ಅಗೆದಿದ್ದಾರೆ. ಈಗಾಗಲೇ 5 ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದ ಸಂಸ್ಥೆಗಳ ನಡುವೆ ಇಲ್ಲ ಹೊಂದಾಣಿಕೆ..!

ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಎಲ್ಲವೂ ರಾಜ್ಯ ಸರ್ಕಾರದ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತವೆ. ಸರ್ಕಾರದ ಅನುದಾನದಲ್ಲೇ ರಸ್ತೆ ನಿರ್ಮಾಣ ಕೆಲಸ ಮಾಡಲಾಗುತ್ತದೆ. ಆದರೆ ಕಾಮಗಾರಿಗೂ ಮುನ್ನ ಬೆಸ್ಕಾಂ ಹಾಗೂ ಜಲಮಂಡಳಿ ಸೇರಿದಂತೆ ಬೇರೆ ಸಂಬಂಧಪಟ್ಟ ಸಂಸ್ಥೆಗಳಿಗೆ ಮಾಹಿತಿ ನೀಡಿ, ಅವರ ಕೆಲಸಗಳನ್ನು ಪೂರೈಸಲು ಅವಕಾಶ ಕೊಡಬೇಕು. ಗುತ್ತಿಗೆದಾರನ ಅವಸರಕ್ಕೆ ಬೇಕಾಬಿಟ್ಟಿ ಕೆಲಸ ಮಾಡಲು ಅವಕಾಶ ನೀಡುವುದೇ ಈ ರೀತಿಯ ಅನಾಹುತಗಳಿಗೆ ಪ್ರಮುಖ ಕಾರಣ ಎನ್ನಬಹುದು. ಇದರಲ್ಲಿ ಜನಪ್ರತಿನಿಧಿಗಳ ಪಾತ್ರವೂ ಇರುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈ ರೀತಿಯ ಘಟನೆಗಳು ನಡೆದಾಗ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳಬಹುದು. ಆದರೆ ಈ ರೀತಿಯ ಕಾಮಗಾರಿ ಮಾಡಿಸುವಾಗ ಕಮಿಷನ್​ಗೆ ಕೈಚಾಚುವ ನಾಯಕರೇ ಇದಕ್ಕೆ ಕಾರಣ. ಬೆಸ್ಕಾಂ ಸೇರಿದಂತೆ ಜಲಮಂಡಳಿ ತನ್ನ ಕೆಲಸವನ್ನು ಮುಗಿಸಲು ಕಾಲಮಿತಿ ನಿಗದಿ ಮಾಡಿ, ಆ ಬಳಿಕ ರಸ್ತೆ ಕಾಮಗಾರಿ ಮಾಡಿದರೆ ಈ ರೀತಿಯ ಅನಾಹುತಗಳನ್ನು ತಡೆಯಬಹುದು ಅಲ್ಲವೇ..? ಈ ಸಣ್ಣ ವಿಚಾರ ಬಿಬಿಎಂಪಿ ಅಥವಾ ಜನಪ್ರತಿನಿಧಿಗಳಿಗೆ ಅರ್ಥವಾಗದ ವಿಚಾರವೇನಲ್ಲ ಅಲ್ಲವೇ..?

Related Posts

Don't Miss it !