ಶಿರಾಡಿ ಘಾಟ್​ ರಸ್ತೆ ಬಂದ್​ ಆದ್ರೆ ಬೇರೆ ಬದಲಿ ಮಾರ್ಗ ಯಾವುದು..?

ಕರಾವಳಿ ಕರ್ನಾಟಕ ಹಾಗು ಹಳೇ ಮೈಸೂರು ಭಾಗಕ್ಕೆ ಅಂದರೆ ಪಶ್ಚಿಮಘಟ್ಟ ಇಳಿಯಲು ಹಾಗು ಘಟ್ಟವನ್ನು ಏರುವುದಕ್ಕೆ ಇರುವ ಪ್ರಮುಖ ಮಾರ್ಗ ಶಿರಾಡಿಘಾಟ್. ಪ್ರತಿ ಮಳೆಗಾಲದಲ್ಲೂ ಈ ಮಾರ್ಗದಲ್ಲಿ ಗುಡ್ಡ ಕುಸಿತ, ರಸ್ತೆ ಕುಸಿತ ಹಲವಾರು ಸಂಕಷ್ಟಗಳನ್ನು ಜನರಿಗೆ ತಂದೊಡ್ಡುತ್ತದೆ. ಶಿರಾಡಿ ಮಾರ್ಗದಲ್ಲಿ ಒಮ್ಮೆ ಸಂಪರ್ಕ ಕಡಿತ ಆದರೆ ಜನರು ಬದಲಿ ಮಾರ್ಗವಾಗಿ ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್​ ಮೂಲಕ ಮಂಗಳೂರಿಗೆ ಪ್ರವೇಶ ಪಡೆಯುತ್ತಾರೆ. ಅದೇ ರೀತಿ ಘಟ್ಟವನ್ನು ಏರುವುದಕ್ಕೂ ಅದೇ ಮಾರ್ಗಗಳು ಜನರಿಗೆ ಕಾಣಿಸುತ್ತವೆ. ಆದರೆ ಬಹುತೇಕ ಘಟ್ಟದ ಮೇಲಿನ ಆಸುಪಾಸಿನ ಜಿಲ್ಲೆಯ ಜನರಿಗೆ ಬದಲಿ ಮಾರ್ಗಗಳ ಪ್ರಯಾಣ ತುಸು ಹೆಚ್ಚಾಗುವ ಕಾರಣಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಆದರೆ ಇದೀಗ ಸರ್ಕಾರ ಬದಲಿ ಮಾರ್ಗವನ್ನು ಗುರುತು ಮಾಡಿದ್ದು, ಈ ಮಾರ್ಗಗಳಲ್ಲಿ ಸಂಚಾರ ಮಾಡಿ ಎಂದು ಅಧಿಕೃತವಾಗಿ ಸೂಚಿಸಿದೆ.

ಶಿರಾಡಿಯಲ್ಲಿ ರಸ್ತೆ ಕುಸಿತ, ಬದಲಿ ಮಾರ್ಗಕ್ಕೆ ಸೂಚನೆ..!

ಬೆಂಗಳೂರಿನಿಂದ ಹಾಸನ ಮೂಲಕ ಮಂಗಳೂರು ಪ್ರವೇಶ ಮಾಡುವುದಕ್ಕೆ ಇರುವುದು ಶಿರಾಡಿ ರಸ್ತೆಯೇ ಪ್ರಮುಖ. ಹಾಸನ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಮಿ ಕುಸಿಸಿದಿದೆ. ಶಿರಾಡಿ ಘಾಟ್​ನಲ್ಲಿ ರಸ್ತೆ ಕುಸಿತ ಆಗಿರುವ ಕಾರಣ ವಾಹನ ಸಂಚಾರಕ್ಕೆ ಸರ್ಕಾರ ನಿಷೇಧ ಹೇರಿತ್ತು. ನಾಗರಿಕರ ಸಮಸ್ಯೆಯನ್ನು ಮನಗಂಡು ಪಱಯ ಮಾರ್ಗದಲ್ಲಿ ಸಂಚಾರ ಮಾಡುವಂತೆ ಸೂಚನೆ ಕೊಟ್ಟು ಜನರಿಗೆ ಅನುಕೂಲ ಮಾಡಿಕೊಡುವ ನಿರ್ಧಾರ ಕೈಗೊಂಡಿದೆ. ಸಕಲೇಶಪುರದಿಂದ ಆನೆಮಹಲ್, ಕ್ಯಾನಹಳ್ಳಿ, ಚಿನ್ನಳ್ಳಿ, ಕಡಗರಹಳ್ಳಿ ಮಾರ್ಗವಾಗಿ ಮಾರನಹಳ್ಳಿ ತಲುಪಿ ಅಲ್ಲಿಂದ ಮಂಗಳೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮಂಗಳೂರು ಕಡೆಯಿಂದ ಹಾಸನ ಮೂಲಕ ಬೆಂಗಳೂರಿಗೆ ಬರುವ ವಾಹನಗಳಿಗೆ ಮಾರನಹಳ್ಳಿಯಿಂದ‌ ಕಾಡುಮನೆ ಮೂಲಕ ಕಾರ್ಲೆಕೂಡಿಗೆ, ಆನೆಮಹಲ್ ಮಾರ್ಗದಲ್ಲಿ ಸಕಲೇಶಪುರ ತಲುಪಿ ಅಲ್ಲಿಂದ ಬೆಂಗಳೂರಿಗೆ ಹೋಗಲು ಸರ್ಕಾರ ಸೂಚನೆ ಕೊಟ್ಟಿದೆ. ಆದರೆ ಕೆಲವು ನಿಯಮಗಳನ್ನು ಪಾಲಿಸಬೇಕು.

ಸರ್ಕಾರದ ಪ್ರತ್ಯೇಕ ಮಾರ್ಗ ಲಘು ವಾಹನಗಳಿಗೆ ಮಾತ್ರ ಮೀಸಲು..!

ಶಿರಾಡಿಘಾಟ್‌ ಮೂಲ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಇಡೀ ಮಾರ್ಗವನ್ನೇ ಬಂದ್​ ಮಾಡಿದರೆ ಮಡಿಕೇರಿ ಹಾಗು ಚಾರ್ಮಾಡಿ ರಸ್ತೆಯಲ್ಲೂ ವಾಹನ ದಟ್ಟಣೆ ಹೆಚ್ಚಾಗಿ ಬೇರೊಂದು ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಅದೇ ಕಾರಣದಿಂದ ರಾಜ್ಯ ಸರ್ಕಾರ ಶಿರಾಡಿ ಘಾಟ್​ ರಸ್ತೆ ಸರಿಯಾಗುವ ತನಕ ಲಘು ವಾಹನಗಳು ಸಂಚರಿಸಲು ಪರ್ಯಾಯ ಮಾರ್ಗದಲ್ಲಿ ಅವಕಾಶ ನೀಡಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೋ, ಮಿನಿ ವ್ಯಾನ್, ಆಂಬುಲೆನ್ಸ್‌ಗಳು ಏಕಮುಖವಾಗಿ ಸಂಚರಿಸಲು ಒಂದು ರಸ್ತೆಯನ್ನು ಸೂಚಿಸಿದ್ದು, ಮತ್ತೊಂದು ಪ್ರತ್ಯೇಕ ರಸ್ತೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೋ, ಮಿನಿ ವ್ಯಾನ್‌ಗಳಿಗೆ ಮಾರ್ಗ ಸೂಚನೆ ಕೊಡಲಾಗಿದೆ. ಆದರೆ ಏಕಮುಖ ಸಂಚಾರ ಮಾಡಿ ಆದೇಶ ಹೊರಡಿಸಿದ ಬಳಿಕ ದ್ವಿಮುಖ ಸಂಚಾರ ಮಾಡಿದ್ರೆ ಟ್ರಾಫಿಕ್ ಹಾಗೂ ಅಪಘಾತ ಆಗುವ ಸಾಧ್ಯತೆ ಹೆಚ್ಚು.

ಇದನ್ನು ಓದಿ: ಮಾವುತನನ್ನು ಕೊಂದ ಅನೆಗೂ ಜೈಲು ಶಿಕ್ಷೆ..! ತಾಯಿ ಕೊಂದ ನಾಯಿಗೂ ಶಿಕ್ಷೆ..!

ಮಳೆಗಾಲದಲ್ಲಿ ಮಲೆನಾಡ ಪ್ರವಾಸ ಮುಂದೂಡುವುದು ಒಳಿತು..!

ಮಳೆಗಾಲದಲ್ಲಿ ಪ್ರವಾಸ ಮಾಡುವುದು ಜನರಿಗೆ ಅಚ್ಚುಮೆಚ್ಚು. ಆದರೆ ಮಲೆನಾಡು ಭಾಗದ ಪ್ರವಾಸವನ್ನು ಮುಂದೂಡುವುದು ಒಳಿತು. ಕಾರಣ, ಇದೀಗ ಎಲ್ಲಾ ಭಾಗದಲ್ಲೂ ಉತ್ತಮ ಮಳೆಯಾಗುವ ಕಾರಣ, ಬೇರೆ ಬೇರೆ ಸ್ಥಳಗಳಲ್ಲೂ ಮಲೆನಾಡಿನ ಸೌಂದರ್ಯವನ್ನೇ ಆಸ್ವಾಧಿಸಬಹುದು. ಹಾಗಾಗಿ ಮಳೆ ಪ್ರಮಾಣ ಕಡಿಮೆ ಆದ ಬಳಿಕ ಮಲೆನಾಡಿಗೆ ಭೇಟಿ ಕೊಟ್ಟರೆ, ಪ್ರವಾಸಿಗರು ಹಾಗು ಜಿಲ್ಲಾಡಳಿತಗಳಿಗೂ ನೆಮ್ಮದಿ. ಮಳೆ ಬೀಳುವಾಗ ಮಲೆನಾಡಿನಲ್ಲಿ ಪ್ರವಾಸ ಮಾಡು ಹುಮ್ಮಸ್ಸಿನಿಂದ ಹೋದರೆ ಮುಂದಾಗುವ ಅನಾಹುತಗಳಿಗೂ ತಾವೇ ಜವಾಬ್ದಾರರು. ಜನರು ಸಂಕಷ್ಟಕ್ಕೆ ಸಿಲುಕಿ ಸರ್ಕಾರವನ್ನು ದೂರುವ ಬದಲು ಆ ಕಡೆಗೆ ಹೋಗಿ ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರ ವಹಿಸುವುದೇ ಸೂಕ್ತ ಎನ್ನಬಹುದು. ಜುಲೈ 15 ರಿಂದ ಶಿರಾಡಿ ಘಾಟ್​ ರಸ್ತೆಯನ್ನು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್, ನಿಷೇಧ ಹೇರಿದ್ದರು. ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಜನರು ಸದುಪಯೋಗ ಮಾಡಿಕೊಳ್ಳಬೇಕೇ ಹೊರತು, ದುರುಪಯೋಗ ಮಾಡಿಕೊಂಡರೆ ಸಂಕಷ್ಟ ಕಟ್ಟಿಟ್ಟಬುತ್ತಿ.

Related Posts

Don't Miss it !