ವೀರ ಸಾವರ್ಕರ್​ ಅವರನ್ನ ಸಿದ್ದರಾಮಯ್ಯ ಒಪ್ಪಿಕೊಂಡಿದ್ರಾ..? ಹೌದು ಎನ್ನುತ್ತಿದೆ ಈ ಸಾಕ್ಷಿ..

ವೀರ ಸಾವರ್ಕರ್​ ವಿಒಚಾರವಾಗಿ ಗಲಾಟೆ ಗದ್ದಲಗಳು ನಡೆಯುತ್ತಿವೆ. ಸಿದ್ದರಾಮಯ್ಯ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​​ ಫೋಟೋ ಯಾಕೆ ಹಾಕಬೇಕಿತ್ತು ಎನ್ನುವ ಹೇಳಿಕೆ ಬಳಿಕ ಶುರುವಾದ ಹಿಂದೂ ಕಾರ್ಯಕರ್ತರ ಆಕ್ರೋಶ, ಮಡಿಕೇರಿ ಹಾಗು ಹಾಸನ, ಚಿಕ್ಕಮಗಳೂರಿನಲ್ಲಿ ಪುನರಾವರ್ತನೆ ಆಗಿದೆ. ಈ ನಡುವೆ ಕಾಂಗ್ರೆಸ್​ ಕೂಡ ವೀರ ಸಾವರ್ಕರ್​​ ಎಂದು ಒಪ್ಪಿಕೊಂಡಿದೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿಯೊಂದು ಓಡಾಡುತ್ತಿದೆ. ಈಗ ವಿರೋಧಕ್ಕೆ ಒಳಗಾಗುತ್ತಿರುವ ಇದೇ ಸಾವರ್ಕರ್​ ಅವರನ್ನು ಈ ಹಿಂದೆ ವೀರ ಸಾವರ್ಕರ್​ ಎಂದು ಇದೇ ಸಿದ್ದರಾಮಯ್ಯ ಹಾಗು ಸರ್ಕಾರ ಒಪ್ಪಿಕೊಂಡಿದೆ. ತುಮಕೂರಿನ ವಾರ್ಡ್​ 15ರಲ್ಲಿ ವೀರ ಸಾವರ್ಕರ್​ ಉದ್ಯಾನವನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ರೋಷನ್​ ಬೇಗ್​ ಉದ್ಘಾಟಿಸಿದ್ದಾರೆ.

2016ರ ಈಚೆಗೆ ಸಾವರ್ಕರ್​ ದೇಶಭಕ್ತಿ, ವೀರತ್ವ ಕಡಿಮೆ ಆಗಿದ್ಯಾಕೆ..?

ತುಮಕೂರಿನ ಪಾರ್ಕ್​ ಒಂದಕ್ಕೆ ವೀರ ಸಾವರ್ಕರ್​ ಉದ್ಯಾನವನ ಎಂದು ನಾಮಕರಣ ಮಾಡಲಾಗಿದೆ. ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಮಕರಣ ಮಾಡಿ, ಅಂದಿನ ಕಾನೂನು ಸಚಿವರಾಗಿದ್ದ ಟಿ.ಬಿ ಜಯಚಂದ್ರ, ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್​, ನಗರಾಭಿವೃದ್ಧಿ ಸಚಿವ ರೋಷನ್​ ಬೇಗ್​, ತುಮಕೂರು ಅಂದಿನ ಶಾಸಕ ರಫೀಕ್​ ಅಹ್ಮದ್, ಅಂದಿನ ತುಮಕೂರು ಸಂಸದ ಮುದ್ದಹನುಮೇಗೌಡ ಕೂಡ​ ಹಾಜರಾಗಿದ್ದರು. ಈ ಬಗ್ಗೆ 2016ರಲ್ಲಿ ಹಾಕಿರುವ ನಾಮ ಫಲಕ ಕೂಡ ವೈರಲ್​ ಆಗಿದೆ. ಈ ಬಗ್ಗೆ ಜೆಡಿಎಸ್​ ಐಟಿ ಸೆಲ್​ನ ಮುಖ್ಯಸ್ಥ ಪ್ರತಾಪ್​ ಕಣಗಾಲ್​ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2016ರಿಂದ ಈಚೆಗೆ ಸಾವರ್ಕರ್​ ಏನಾದ್ರು ಮಾಡಿದ್ದಾರಾ..? ಎಂದು ಪ್ರಶ್ನೆ ಹಾಕಿದ್ದಾರೆ. ಅಂದರೆ ಸಿದ್ದರಾಮಯ್ಯ ಸರ್ಕಾರವೇ ವೀರ ಸಾವರ್ಕರ್​ ಎಂದು ಒಪ್ಪಿಕೊಂಡು ಇದೀಗ ವೀರ ಸಾವರ್ಕರ್​ ಎನ್ನುವುದನ್ನು ವಿರೋಧಿಸುತ್ತಿದೆ. ಇದಕ್ಕೆ ಕಾರಣ ಏನು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

‘ವೀರ ಸಾವರ್ಕರ್​’ ಕಾಂಗ್ರೆಸ್​ ವಿರೋಧದ ಮಾತುಗಳು..!

1910ರಲ್ಲಿ ನಾಸಿಕ್​ನಲ್ಲಿ ಕಲೆಕ್ಟರ್​ ಕೊಲೆ ಮಾಡಿದ ಆರೋಪದಲ್ಲಿ ಲಂಡನ್​ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಆ ಬಳಿಕ 25 ವರ್ಷದಂತೆ 2 ಬಾರಿ ಶಿಕ್ಷೆ ವಿಧಿಸಿ ಬ್ರಿಟೀಷ್​ ನ್ಯಾಯಾಲಯ ಆದೇಶ ಮಾಡಿತ್ತು. 1911ರಲ್ಲಿ ಅಂಡಮಾನ್​ ಜೈಲು ಸೇರಿದ ಸಾವರ್ಕರ್​, ತನ್ನ ಜೈಲುವಾಸವನ್ನು ರದ್ದು ಮಾಡುವಂತೆ ಬರೋಬ್ಬರಿ 6 ಬಾರಿ ಕ್ಷಮಾಪಣ ಪತ್ರ ಬರೆದಿದ್ದರು. ಆ ಪತ್ರದಲ್ಲಿ ನಾನು ನಿಮ್ಮಲ್ಲಿ ಬೇಡಿಕೊಳ್ತೇನೆ, ನಿಮ್ಮ ( Servant ) ಸೇವಕನಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಬಿಡುಗಡೆ ಮಾಡಿ ಎಂದು ಬರೆದಿದ್ದ ಪತ್ರವನ್ನು ಹಿಡಿದುಕೊಂಡು ಕಾಂಗ್ರೆಸ್​ ವಿರೋಧ ಮಾಡುತ್ತಿದೆ. ಜೈಲಿನಿಂದ ಬಂದ ಬಳಿಕ ದಾಮೋಧರ ಸಾವರ್ಕರ್​ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ. ಕೇವಲ ಹಿಂದೂ ಸಂಘಟನೆ ಸ್ಥಾಪಿಸಿಕೊಂಡು, ಬ್ರಿಟೀಷರಿಂದ ಮಾಸಿಕ 60 ರೂಪಾಯಿ ನಿವೃತ್ತಿ ವೇತನ ಪಡೆದುಕೊಂಡು ಬದುಕು ಸಾಗಿಸಿದರು ಎನ್ನುವುದು ಕಾಂಗ್ರೆಸ್​ ಟೀಕೆಗೆ ಕಾರಣವಾಗಿದೆ. ಆದರೆ ಇಂದಿರಾಗಾಂಧಿಯವರೇ ವೀರ ಸಾವರ್ಕರ್​ ಅವರನ್ನು ಹೊಗಳಿ, ಪೋಸ್ಟ್​ ಸ್ಟಾಂಪ್​ ಬಿಡುಗಡೆ ಮಾಡಿದ್ದರು, ಪತ್ರ ಕೂಡ ಬರೆದಿದ್ದರು. ಕಾಲಪಾನಿ ಜೈಲಿನಲ್ಲಿ ಶಿಕ್ಷೆ ಅನುಭವಿಸುವುದು ಸುಲಭದ ಮಾತಲ್ಲ. ಅಲ್ಲಿಂದ ಹೊರ ಬಂದರೆ ಸಾಕು ಎನ್ನುವ ಕಾರಣಕ್ಕೆ ಕ್ಷಮಾಪಣೆ ಬರೆದಿರಬಹುದು ಎನ್ನುವುದು ಬಿಜೆಪಿ ಅಥವಾ ಹಿಂದುತ್ವವಾದಿಗಳ ತಿರುಗೇಟು.

ಕಾಂಗ್ರೆಸ್​- ಬಿಜೆಪಿ ಕೇವಲ ರಾಜಕೀಯ ವಾದಕ್ಕೆ ಗಲಾಟೆ..!

ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಸರ್ಕಾರವೇ ಜಾರಿ ಮಾಡಿದ್ದರೂ ಬಿಜೆಪಿಯ ಪ್ರಮುಖ ನಾಯಕರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿ ಟೋಪಿ ಹಾಕಿಕೊಂಡು ಖಡ್ಗ ಹಿಡಿದುಕೊಂಡು ಪೋಸ್​ ಕೊಟ್ಟಿದ್ದರು. ಆ ಬಳಿಕ ರಾಜಕೀಯ ಮತ ದೃವೀಕರಣಕ್ಕಾಗಿ ಟಿಪ್ಪುವನ್ನು ವಿರೋಧಿಸಲು ಶುರು ಮಾಡಿದ್ದರು. ಇದೀಗ 2016ರಲ್ಲಿ ವೀರ ಸಾವರ್ಕರ್​ ಎಂದು ಉದ್ಯಾನವನಕ್ಕೆ ಹೆಸರಿಟ್ಟಿದ್ದ ಕಾಂಗ್ರೆಸ್​ ಸರ್ಕಾರ ಇದೀಗ ಸಾವರ್ಕರ್​ ಓರ್ವ ಹೇಡಿ, ಬ್ರಿಟೀಷರಿಗೆ ಕ್ಷಮಾಪಣೆ ಬರೆದುಕೊಟ್ಟು, ನಿಮ್ಮ ಗುಲಾಮ ಆಗಿರುತ್ತೇನೆ ಎಂದಿದ್ದವರು ಹೇಗೆ ಸ್ವಾತಂತ್ರ್ಯ ಹೋರಾಟಗಾರ ಆಗಲು ಸಾಧ್ಯ ಎಂದು ವಾದ ಮಂಡಿಸುತ್ತಿದೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್​ – ಬಿಜೆಪಿ ತಯಾರಿ ಮಾಡಿಕೊಳ್ತಿದ್ದು, ಇದೆಲ್ಲಾ ಚುನಾವಣಾ ಅಜೆಂಡಾ ಎನ್ನುತ್ತಾರೆ ರಾಜಕೀಯ ಪರಿಣಿತರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಹಾಗು ಬಿಜೆಪಿ ಧರ್ಮ ಹಾಗು ವ್ಯಕ್ತಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದ ಜನರಲ್ಲಿ ಹೇಸಿಗೆ ಹುಟ್ಟುವಂತೆ ಮಾಡಿದೆ. ಜೆಡಿಎಸ್​ ಮಾತ್ರ ತಾಳ್ಮೆಯಿಂದ ದಾಳ ಉರುಳಿಸುತ್ತಿದೆ.

Related Posts

Don't Miss it !