ಕೋಲು ಕೊಟ್ಟು ಪೆಟ್ಟು ತಿನ್ನುವ ಕೆಲಸ ಮಾಡಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ..!?

ವಿಜಯಪುರದ ಸಿಂಧಗಿ ಹಾಗೂ ಹಾವೇರಿಯ ಹಾನಗಲ್​ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಆದ ಬಳಿಕ ಸಿದ್ದರಾಮಯ್ಯ ಜೆಡಿಎಸ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಎರಡೂ ಕ್ಷೇತ್ರದಲ್ಲೂ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ ಬಳಿಕ ಸಿದ್ದರಾಮಯ್ಯ ಕೋಪ ಹೆಚ್ಚಾಗಿದ್ದು, ಜೆಡಿಎಸ್​ ವಿರುದ್ಧ ಕೊತಕೊತನೆ ಕುದಿಯುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್​ ಅಭ್ಯರ್ಥಿಯನ್ನು ಸೋಲಿಸಲು ಈ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದರು. ನಾವು ಬಿಜೆಪಿ ಗೆಲ್ಲಿಸಲು ಅಥವಾ ಕಾಂಗ್ರೆಸ್​ ಸೋಲಿಸಲು ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಕಾಂಗ್ರೆಸ್​, ಬಿಜೆಪಿ ಇಬ್ಬರನ್ನೂ ಸೋಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕೆ ಇಳಿಸಿದ್ದೇವೆ ಎಂದು ಜೆಡಿಎಸ್​ ಸ್ಪಷ್ಟಪಡಿಸಿದ ಬಳಿಕವೂ ಸುಮ್ಮನಾಗ ಸಿದ್ದರಾಮಯ್ಯ, ಜೆಡಿಎಸ್​ ಪಕ್ಷಕ್ಕೆ ಗೆಲ್ಲುವ ಶಕ್ತಿಯಿಲ್ಲ. ಶಕ್ತಿ ಇದ್ದರೆ ಮಂಡ್ಯದಲ್ಲಿ ಗೆಲ್ಲಬೇಕಿತ್ತಲ್ಲವೇ..? ಎಂದು ಪ್ರಶ್ನಿಸಿದ್ದರು. ಸಿದ್ದರಾಮಯ್ಯ ನಿರಂತರ ವಾಗ್ದಾಳಿಗೆ ಕುಮಾರಸ್ವಾಮಿ ಅಸಲು ಬಡ್ಡಿ ಎಲ್ಲವನ್ನೂ ಒಟ್ಟಿಗೆ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್​ ಸೋತಿದ್ದು, ಕಾಂಗ್ರೆಸ್​ಗೂ ಸೋಲಲ್ಲವೇ..?

ಮಂಡ್ಯ ಜಿಲ್ಲೆಯಲ್ಲಿ ಆರು ಜನ ಶಾಸಕರಿರುವ ಜೆಡಿಎಸ್​ಗೆ ಶಕ್ತಿ ಇಲ್ಲ ಎನ್ನುವುದಾದರೆ ಕಾಂಗ್ರೆಸ್​ ಒಬ್ಬರೇ ಒಬ್ಬರೂ ಶಾಸಕರಿಲ್ಲ. ಹಾಗಿದ್ದರೂ ಕಾಂಗ್ರೆಸ್​ ಪಕ್ಷ ಬಲಾಢ್ಯ ಆಗಿದೆ ಎಂದಿದ್ದಾರೆ. ಸಿದ್ದರಾಮಯ್ಯ ಕೊಟ್ಟಿರುವ ಹೋಲಿಕೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸೋಲು. ಆದರೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಎರಡೂ ಪಕ್ಷಗಳು ಒಟ್ಟಿಗೆ ಸ್ಪರ್ಧೆ ಮಾಡಿದ್ದವು. ಆಗಿದ್ದ ಮೇಲೆ ಮಂಡ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನೂ ಜನರು ಬೆಂಬಲಿಸಲಿಲ್ಲ ಎಂದ ಮೇಲೆ ಕಾಂಗ್ರೆಸ್​ಗೆ ಕೂಡ ಶಕ್ತಿ ಇಲ್ಲ ಎಂದೇ ಅರ್ಥವಲ್ಲವೇ..? ಅದೇನೇ ಇರಲಿ ಕಾಂಗ್ರೆಸ್​ ಪಕ್ಷ ಹಾಗೂ ರೈತ ಸಂಘಟನೆ ಸೇರಿಕೊಂಡು ಚಕ್ರವ್ಯೂಹ ರಚಿಸಿ ಸೋಲಿಸಲಾಯ್ತು. ಸಿದ್ದರಾಮಯ್ಯಗೆ ನನ್ನ ಬಗ್ಗೆ ನಮ್ಮ ಜೆಡಿಎಸ್​ ಪಕ್ಷದ ಬಗ್ಗೆ ಮಾತನಾಡದಿದ್ದರೆ ತಿನ್ನುವ ಅನ್ನ ಜೀರ್ಣ ಆಗುವುದಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

Read this also;

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಏನು ಬೇಕಿದ್ದರೂ ಮಾಡ್ತಾರೆ..!

ಜೆಡಿಎಸ್​ ಪಕ್ಷದಲ್ಲಿ ಬೆಳೆದ ಸಿದ್ದರಾಮಯ್ಯ ಅಧಿಕಾರ ದಾಹದಿಂದ ಕಾಂಗ್ರೆಸ್​ಗೆ ಸೇರ್ಪಡೆ ಆಗಿ ಮುಖ್ಯಮಂತ್ರಿ ಆದರು. ಅದೇ ರೀತಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆದುಕೊಳ್ಳಲು ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರವನ್ನೇ ಬೀಳಿಸಿದ್ರು. ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಸಿದ್ದರಾಮಯ್ಯ ಏನು ಬೇಕಾದರೂ ಮಾಡ್ತಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಇದೀಗ ಸೋನಿಯಾ ಗಾಂಧಿ ಭೇಟಿ ಮಾಡಿ ಬೆಂಗಳೂರಿಗೆ ವಾಪಸ್​ ಆದ ಬಳಿಕ ಅಧಿಕಾರಕ್ಕಾಗಿ ಮತ್ತೊಂದು ತಂತ್ರಗಾರಿಕೆ ಮಾಡಿದ್ದಾರೆ. ಬಿ.ಎಸ್​ ಯಡಿಯೂರಪ್ಪ ಅವರನ್ನು ಮಧ್ಯರಾತ್ರಿ ಭೇಟಿ ಮಾಡಿದ್ದು ಯಾಕೆ..? ಈ ವಿಚಾರ ಬಿಜೆಪಿ ಹೈಕಮಾಂಡ್​ಗೆ ಗೊತ್ತಾದ ಬಳಿಕವೇ ಐಟಿ ರೇಡ್​ ಆಗಿದ್ದು, ಯಡಿಯೂರಪ್ಪರನ್ನು ನಿಯಂತ್ರಣ ಮಾಡುವ ನಿರ್ಧಾರ ಮಾಡಿದ್ದು ಎಂದು ವಾಗ್ದಾಳಿ ಮಾಡಿದ್ದಾರೆ.

Read this also;

ಡಿಕೆಶಿ ನಿರಾಕರಿಸಲಿಲ್ಲ, ಮುಗಿದು ಹೋದ ಅಧ್ಯಾಯ..!

ತಮ್ಮದೇ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳುಹಿಸಿ ಬಿಎಸ್​ ಯಡಿಯೂರಪ್ಪ ಸರ್ಕಾರ ಹುಟ್ಟು ಹಾಕಿದರು. ತಮ್ಮದೇ ಪಕ್ಷದ 23 ಮಂತ್ರಿಗಳನ್ನು ಬೀದಿಯಲ್ಲಿ ನಿಲ್ಲಿಸಿದ್ರು ಎಂದು ಕುಮಾರಸ್ವಾಮಿ ಟೀಕಿಸಿದ್ದರು. ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಟುಸತ್ಯಗಳನ್ನು ಬಹಿರಂಗ ಮಾಡಿ ವಾಗ್ದಾಳಿ ಮಾಡಿದ್ರೆ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮಾತ್ರ ಯಾವುದನ್ನೂ ಅಲ್ಲಗಳೆದಿಲ್ಲ. ಆದರೆ ಮುಗಿದ ಅಧ್ಯಾಯದ ಬಗ್ಗೆ ಈ ಚರ್ಚೆ ಬೇಕಿಲ್ಲ ಎಂದು ನಾಜೂಕಿನ ಉತ್ತರ ಕೊಟ್ಟಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಬಳಿಕ ಸಿದ್ದರಾಮಯ್ಯ ನೋ ಕಾಮೆಂಟ್ಸ್​ ಎಂದು ಹೇಳುವ ಮೂಲಕ ಮೌನಕ್ಕೆ ಶರಣಾಗಿದ್ದಾರೆ. ಸುಮ್ಮನಿದ್ದ ಜೆಡಿಎಸ್​ ನಾಯಕರನ್ನು ಕೆಣಕಿ ತಾವೇ ಟೀಕೆಗೆ ಗುರಿಯಾಗಿದ್ದಾರೆ. ಸ್ವತಃ ಕಾಂಗ್ರೆಸ್​ ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸಿದ್ರು ಎನ್ನುವುದನ್ನು ಬಹಿರಂಗ ಆಗುವಂತೆ ಮಾಡಿದ್ದಾರೆ.

Related Posts

Don't Miss it !