ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ರಾ ಸಿದ್ದರಾಮಯ್ಯ..?

ಸಿದ್ದರಾಮಯ್ಯ ಎಂದರೆ ಮಾತುಗಾರ ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತಿರುವ ಸಂಗತಿ. ಆದರೆ ಅದೇ ಮಾತು ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿಯಲ್ಲಿ ಇದ್ದಾರೆ ಎನ್ನುವ ಹೇಳಿಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ದಲಿತರು ಕಾಂಗ್ರೆಸ್‌ಗೆ ಮೀಸಲು ಎನ್ನುವಂತೆ ಸಿದ್ದರಾಮಯ್ಯ ಮಾತನಾಡಿರುವುದು ಸರಿಯಲ್ಲ. ದಲಿತರಿಗಾಗಿ ಸಿದ್ದರಾಮಯ್ಯ ಏನು ಮಾಡಿದ್ದಾರೆ..? ಎಷ್ಟು ದಲಿತ ನಾಯಕರನ್ನು ಸಿದ್ದರಾಮಯ್ಯ ಬೆಳೆಸಿದ್ದಾರೆ ಎಂದೆಲ್ಲಾ ಪ್ರಶ್ನೆ ಮಾಡಿದ್ದರು. ಟ್ವೀಟ್ ಮೂಲಕ ದಲಿತ ಸಮುದಾಯಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ದಲಿತರು ಸಿಎಂ ಆದರೆ ನಾನು ಖುಷಿ ಪಡ್ತೇನೆ..!

ದಲಿತ ವಿರೋಧಿ ಎನ್ನುವ ಬಿಜೆಪಿ ಆರೋಪಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ, ನಾನೂ ಕೂಡ ದಲಿತ, ನನ್ನ ಭಾಷಣವನ್ನು ತಿರುಚುವ ಕೆಲಸ ಮಾಡಬೇಡಿ. ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆದರೆ ನಾನು ಮೊದಲು ಸಂತೋಷ ಪಡುತ್ತೇನೆ ಎಂದಿದ್ದಾರೆ. ಸಿಂದಗಿ ಉಪಚುನಾವಣೆ ವೇಳೆ ದಲಿತ ಎಡಗೈ ಸಮುದಾಯದ ಸಭೆಯಲ್ಲಿ ನಾನು ಮಾತನಾಡಿದ್ದೆ. ಈ ಸಮಾಜದ
ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿ ಹೋಗಿದ್ದಾರೆ ಎಂದು ಹೇಳಿದ್ದೆ. ಆದರೆ ಆರ್‌ಎಸ್‌ಎಸ್ ಗಿರಾಕಿಗಳು ಭಾಷಣ ತಿರುಚಿ ಗದ್ದಲ‌ ಎಬ್ಬಿಸಿದರು. ದಲಿತರು ಎಂದರೆ ಕೇವಲ ಪರಿಶಿಷ್ಟ ಜಾತಿಗೆ ಸೇರಿದವರು ಮಾತ್ರವಲ್ಲ, ನಾನು ಕೂಡ ದಲಿತನೆ, ಅವಕಾಶ ವಂಚಿತರೆಲ್ಲರೂ ದಲಿತರು ಎಂದು ಹೊಸ ವ್ಯಾಖ್ಯಾನ ಮಾಡಿದ್ದಾರೆ.

ಹೈಕಮಾಂಡ್ ಹೇಳಿದವರು ಮುಂದಿನ ಬಾರಿ ಸಿಎಂ..!

ಉಪಚುನಾವಣೆಗೂ ಮೊದಲು ನಾನೇ ಮುಖ್ಯಮಂತ್ರಿ ಆಗ್ತೀನಿ, ಹತ್ತು ಕೆಜಿ ಅಕ್ಕಿ ಕೊಡ್ತೇನೆ ಎಂದು ಭಾಷಣ ಮಾಡ್ತಿದ್ದ ಸಿದ್ದರಾಮಯ್ಯ, ಇದೀಗ ಸ್ವಲ್ಪ ಯೂಟರ್ನ್ ಮಾಡಿದ್ದಾರೆ. ಯಾರೇ ಮುಖ್ಯಮಂತ್ರಿ ಆದರೂ ನಾನು ಖುಷಿ ಪಡುತ್ತೇನೆ. ಹೈಕಮಾಂಡ್ ನಾಯಕರು ದಲಿತ ಸಮುದಾಯದವರು ಸಿಎಂ ಆಗಲಿ ಎಂದು ಹೇಳಿದರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ ಎಂದು ಷರಾ ಬರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆಗೆ ಶಾಸಕರ ಅಭಿಪ್ರಾಯ, ಹೈಕಮಾಂಡ್ ತೀರ್ಮಾನ‌ ಮುಖ್ಯ ಆಗುತ್ತದೆ. ಎಲ್ಲರಿಗೂ ಸಿಎಂ ಆಗುವ ಅವಕಾಶ ಸಿಗಬೇಕು. ಹೈಕಮಾಂಡ್ ದಲಿತ ಸಿಎಂ ಎಂದು ತೀರ್ಮಾನ ಮಾಡಿದರೆ ನಾನೇ ಮೊದಲು ಸ್ವಾಗತಿಸುತ್ತೇನೆ ಎಂದು ಹೊಸ ದಾಳ ಉರುಳಿಸಿದ್ದಾರೆ.

ಸಿದ್ದರಾಮಯ್ಯ ಅಸ್ತ್ರ; ದಲಿತರಿಗೋ..? ಎದುರಾಳಿಗಳಿಗೋ..?

ಮಾಜಿ ಸಿಎಂ ಸಿದ್ದರಾಮಯ್ಯ ಅಂತಿಮ ಚುನಾವಣೆ ಎಂದು ಈ ಮೊದಲೇ ಘೋಷಣೆ ಮಾಡಿದ್ದರು. ಆದರೂ ಬಿಜೆಪಿ ವಿರುದ್ಧ ಜನ ರೊಚ್ಚಿಗೇಳುತ್ತಿದ್ದಾರೆ, ಇದರ ಸದುಪಯೋಗದಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶವಿದೆ ಎನ್ನುವ ಕಾರಣಕ್ಕೆ ಚುನಾವಣೆಗೆ ಅಣಿಯಾಗ್ತಿದ್ದಾರೆ. ಆದರೆ ಇದೀಗ ದಲಿತರು ಸಿಎಂ ಆದರೆ ನಾನೇ ಮೊದಲು ಖುಷಿ ಪಡ್ತೇನೆ ಎಂದಿರುವುದು ಕೋಪಗೊಂಡಿದ್ದ ದಲಿತ ಸಮುದಾಯವನ್ನು ಮನವೊಲಿಸಲು ಕೊಟ್ಟ ಹೇಳಿಕೆಯೋ..? ಅಥವಾ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿರುವ ಡಿ.ಕೆ ಶಿವಕುಮಾರ್ ಜೊತೆಗಿರುವ ದಲಿತ ಸಮುದಾಯದ ನಾಯಕರನ್ನು ಸೆಳೆದು ಶಿವಕುಮಾರ್ ಅವರ ಶಕ್ತಿ ಕಡಿಮೆ ಮಾಡುವ ಉದ್ದೇಶ ಅಡಿಗಿದೆಯೋ..? ಎನ್ನುವ ಚರ್ಚೆಗಳು ಶುರುವಾಗಿವೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಅವಕಾಶ ಇದ್ದಾಗ ಸಿದ್ದರಾಮಯ್ಯ ಅಡ್ಡಿ ಮಾಡಿದ್ದರು ಎನ್ನುವ ಆರೋಪವೂ ಇದೆ. ಇದೀಗ ದಲಿತರು ಸಿಎಂ ಆದರೆ ಖುಷಿ ಪಡ್ತೇನೆ ಎಂದಿರುವ ಹೇಳಿಕೆಯ ಹಿಂದಿನ ಅಸಲಿ ಸತ್ಯ ಏನು ಎಂಬುದು ಬಯಲಾಗಬೇಕಿದೆ.

Related Posts

Don't Miss it !