ಸಿದ್ದರಾಮಯ್ಯ ಸ್ಪರ್ಧೆಗೆ ಕ್ಷೇತ್ರ ಫಿಕ್ಸ್​..! ಮಹತ್ವದ ನಿರ್ಧಾರ ಘೋಷಣೆ..!

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯಗೆ ಸೋಲಿನ ಭೀತಿ ಕಾಣಿಸಿತ್ತು. ಅದೇ ಕಾರಣಕ್ಕೆ ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು. ಆ ಬಳಿಕ ಮಾಜಿ ಸಿಎಂ ನಿರೀಕ್ಷೆ ಮಾಡಿದ್ದಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದಿಂದ ಜಿ.ಟಿ ದೇವೇಗೌಡ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರು. ಆದರೆ ಬಾದಾಮಿ ಜನರು ಕೆಲವೇ ಸಾವಿರ ಮತಗಳ ಅಂತರದಿಂದ ವಿಧಾನಸೌಧಕ್ಕೆ ಪ್ರವೇಶ ಕೊಡಿಸಿದ್ದರು. ವಿರೋಧ ಪಕ್ಷದ ನಾಯಕನ ಪಟ್ಟವೂ ಸಿಗುವಂತೆ ಮಾಡಿದರು. ಆದರೆ ಈ ಬಾರಿ ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಗೆಲ್ಲುವುದು ಕಷ್ಟ ಎನ್ನುವ ಮಾತುಗಳು ಕೇಳಿ ಬಂದಿದ್ದು, ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಕ್ಷೇತ್ರದ ಆಯ್ಕೆ ಅಂತಿಮ ಘಟ್ಟಕ್ಕೆ ಬಂದಿದೆ.

ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಲ್ಲ ಸಿದ್ದರಾಮಯ್ಯ..!

ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ಆಗಿ ಜಮೀರ್​ ಅಹ್ಮದ್​ ಖಾನ್​ ಜಯಭೇರಿ ಬಾರಿಸಿದ್ದು, ಕ್ಷೇತ್ರದ ಮೇಲೆ ಜಮೀರ್​ ಹಿಡಿತ ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿದ್ದು, ಗೆಲ್ಲುವುದು ಸುಲಭ ಎನ್ನುವ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಕೆಲವು ದಿನಗಳಿಂದ ಜಮೀರ್​ ಅಹ್ಮದ್​ ಖಾನ್​ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದು ಕೊಳ್ಳುತ್ತಿದ್ದಾರೆ. ಇದೀಗ ಕ್ಷೇತ್ರ ಹುಡುಕಾಟದಲ್ಲಿದ್ದ ಸಿದ್ದರಾಮಯ್ಯ ಕೋಲಾರದ ಕಡೆಗೆ ಹೊರಟಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ. ಕೋಲಾರ ಕ್ಷೇತ್ರದ ಜೆಡಿಎಸ್​ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್​ ಸೇರುತ್ತಿದ್ದು, ಕ್ಷೇತ್ರ ಬಿಟ್ಟುಕೊಡುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ರಾಮಸೇನೆ ಜಿಲ್ಲಾಧ್ಯಕ್ಷನ ಎಡವಟ್ಟು, ಜಾಲತಾಣದ ಕಮೆಂಟ್​ ಕೊಲೆಯಲ್ಲಿ ಅಂತ್ಯ..!?

ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಮಯ್ಯ ಸಿದ್ಧತೆ ಶುರು..!

ಕೆಲವು ದಿನಗಳ ಹಿಂದೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ನೇತೃತ್ವದಲ್ಲಿ​ ಕಾಂಗ್ರೆಸ್​ನ ಶಾಸಕರು ಹಾಗು ಮಾಜಿ ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಗೆಲ್ಲಿಸಿಕೊಂಡು ಬರುವ ಭರವಸೆಯನ್ನೂ ನೀಡಿದ್ದರು. ಸಿದ್ದರಾಮಯ್ಯ ಒಪ್ಪಿಗೆ ಸಿಕ್ಕ ಬಳಿಕ ಬುಧವಾರ ಕೋಲಾರ ಕ್ಷೇತ್ರದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಬಹುತೇಕ ಎಲ್ಲಾ ಸಣ್ಣಪುಟ್ಟ ಲೀಡರ್​​ಗಳನ್ನು ಕರೆದು ನಿವಾಸದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ನಾನು ಸ್ಪರ್ಧೆ ಮಾಡುತ್ತೇನೆ. ಗೆಲ್ಲಿಸುವ ಭರವಸೆ ನೀಡಿದರೆ ಮಾತ್ರ ಎನ್ನುವ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲುವುದು ಶತಸಿದ್ಧ, ನೀವು ಗೆಲುವು ಕೊಟ್ಟರೆ ನಾನು ಮುಖ್ಯಮಂತ್ರಿ ಆಗ್ತೇನೆ. ನಿಮಗೂ ಉತ್ತಮ ಸ್ಥಾನಮಾನ ನೀಡಲಾಗುವುದು ಎನ್ನುವ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ. ಆದರೆ ಏಕಾಏಕಿ ಬಾದಾಮಿ ಬಿಟ್ಟು ಓಡಿ ಹೋದರು ಎನ್ನುವ ಅಪವಾದ ಬಾರದಂತೆ ರಾಜಕೀಯ ದಿಕ್ಕು ಬದಲಿಸಲು ನಿರ್ಧರಿಸಿರುವ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದ ಜನರನ್ನು ಸಮಾಧಾನ ಮಾಡಿದ ಬಳಿಕ ಅಂತಿಮ ನಿರ್ಧಾರ ಪ್ರಕಟ ಮಾಡ್ತೇನೆ ಎಂದು ಸಭೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಹಾಲಿ MLA ಶ್ರೀನಿವಾಸಗೌಡ ಸ್ಪರ್ಧೆ ಮಾಡಿದ್ರೆ ಸೋಲ್ತಾರಾ..?

ಕೋಲಾರದಲ್ಲಿ JDS ಪಕ್ಷ ಕೂಡ ಪ್ರಬಲವಾಗಿದ್ದು, ಹಾಲಿ ಶಾಸಕ ಶ್ರೀನಿವಾಸಗೌಡ, ಕಾಂಗ್ರೆಸ್​ ಸೇರುವುದು ಖಚಿತವಾಗಿದೆ. ಇದೇ ಕಾರಣದಿಂದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕಿದ ಬಳಿಕ ಜೆಡಿಎಸ್​​ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇನ್ನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದರೂ ಸೋಲಿಸುವುದಕ್ಕೆ ಜೆಡಿಎಸ್​ ಹೊಂಚು ಹಾಕಿ ಕುಳಿತಿದೆ. ಇದೇ ಕಾರಣದಿಂದ ಕೋಲಾರ ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ನಿವೃತ್ತ ಅಬಕಾರಿ ಇಲಾಖೆ ಹಿರಿಯ ಅಧಿಕಾರಿ ಎಲ್. ಎ ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸೇರಿದಂತೆ ಬೇರೆ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಇದೀಗ ಸಿದ್ದರಾಮಯ್ಯ ಅವರನ್ನೇ ಜಿಲ್ಲೆಗೆ ಕರೆದುಕೊಂಡು ಬರುವುದಕ್ಕೆ ರಮೇಶ್​ ಕುಮಾರ್​ ತಂತ್ರಗಾರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಬರುತ್ತಾರೆ ಎನ್ನುವ ಕಾರಣಕ್ಕೆ ಎಲ್ಲಾ ಆಕಾಂಕ್ಷಿಗಳು ಹಿಂದೆ ಸರಿಯುವ ಮನಸ್ಸು ಮಾಡಿದ್ದಾರೆ. ಚಾಮುಂಡೇಶ್ವರಿ ರೀತಿಯಲ್ಲೇ ಜೆಡಿಎಸ್​ ಸೋಲಿನ ಕಹಿ ಉಣಿಸುತ್ತಾ ಎನ್ನುವ ಆತಂಕವೂ ಸಿದ್ದರಾಮಯ್ಯ ಅವರನ್ನ ಕಾಡುತ್ತಿದೆ ಎನ್ನಬಹುದು.

Related Posts

Don't Miss it !