Son Murder: ಒಂದೂವರೆ ಕೋಟಿಗಾಗಿ ಜನ್ಮಕೊಟ್ಟ ಕಂದನನ್ನೇ ಕೊಂದನಾ ಅಪ್ಪ..?

ಬೆಂಗಳೂರಿನಲ್ಲಿ ಭೀಕರ ಕೃತ್ಯವೊಂದು ನಡೆದಿದೆ. ಜನ್ಮ ಕೊಟ್ಟ ತಂದೆಯೇ ಎದೆ ಮಟ್ಟಕ್ಕೆ ಬೆಳೆದುನಿಂತ ಮಗನನ್ನು ಬೆಂಕಿಯಿಟ್ಟು ಕೊಂದಿರುವ ಘಟನೆ ನಡೆದಿದೆ. ಅದಕ್ಕೆ ಕಾರಣ ಮಗ ಓದಲಿಲ್ಲ ಎನ್ನುವ ಕೋಪ ಒಂದು ಕಡೆಯಾದರೆ, ತಾನು ಕಟ್ಟಿ ಬೆಳೆಸಿದ್ದ ವ್ಯವಹಾರದಲ್ಲೂ ಮಗ ಜಾಣನಾಗದೆ ನಷ್ಟ ಅನುಭವಿಸಿದ್ದು ತಂದೆಯ ಕೋಪಕ್ಕೆ ಕಾರಣವಾಗಿದೆ. ‘ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರಲ್ಲ’ ಎನ್ನುವ ಗಾಧೆ ಮಾತಿನಂತೆ ಕೋಪದಲ್ಲಿ ಮಗನ ಮಾತಿನಿಂದ ಸಿಟ್ಟಿಗೆದ್ದ ತಂದೆ ಬೆಂಕಿ ಹಚ್ಚಿದ ಬಳಿಕ ತನ್ನ ಕೃತ್ಯಕ್ಕೆ ತಾನೇ ಪಶ್ಚತ್ತಾಪ ಅನುಭವಿಸುವ ಸ್ಥಿತಿ ಎದುರಾಗಿದೆ. ಅಪ್ಪ ಎಂದರೆ ಕೈ ಹಿಡಿದು ನಡೆಸಿ, ಜವಾಬ್ದಾರಿ ವಹಿಸಿ ಮಕ್ಕಳ ಕೋಪತಾಪವನ್ನೂ ಸಹಿಸುವ ಸಹನಾ ಮೂರ್ತಿ ಎನ್ನುವ ಮಾತಿದ್ದರೂ ಈ ಘಟನೆಯಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ತಂದೆ ಕಂಬಿ ಎಣಿಸುವಂತ ದುಸ್ಥಿತಿ ಬಂದಿದೆ.

ವ್ಯಾಪಾರ ನಷ್ಟ, ಅಪ್ಪ ಮಗನ ನಡುವೆ ಕಲಹ..!

ಬೆಂಗಳೂರಿನ ಚಾಮರಾಪೇಟೆ ವ್ಯಾಪ್ತಿಯ ಆಜಾದ್ ನಗರದಲ್ಲಿ ಸುರೇಂದ್ರ ಹಾಗೂ ಆತನ ಕುಟುಂಬಸ್ಥರು ವಾಸವಿದ್ದರು. ರಾಜಸ್ಥಾನ ಮೂಲದ ಸುರೇಂದ್ರ ತನ್ನ ಪತ್ನಿ ಹಾಗೂ ಮಗ ಮತ್ತು ಮಗಳ ಜೊತೆಗೆ ವಾಸವಾಗಿದ್ದರು. ಬಿಲ್ಡಿಂಗ್ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ ಸುರೇಂದ್ರ, ಕುಟುಂಬವನ್ನು ಉತ್ತಮವಾಗಿಯೇ ನಿರ್ವಹಿಸಿದ್ದರು. ಮಗ ಚಾರ್ಟೆಡ್​​ ಅಕೌಂಟೆಂಟ್​ ಆಗ್ತಾನೆ ಎನ್ನುವ ತಂದೆ ಕನಸಿಗೆ ಮಗ ತಣ್ಣೀರು ಎರೆಚಿ ಆಗಿತ್ತು. ಮಗನ ವ್ಯಾಸಂಗ ಅರ್ಧಕ್ಕೆ ಸ್ಥಗಿತವಾದ ಬಳಿಕ ಮಗ ಅರ್ಪಿತ್ ಮೇಲೆ ಸುರೇಂದ್ರಗೆ ಸಿಟ್ಟು ಉಮ್ಮಳಿಸಿ ಬಂದಿತ್ತು. ಆದರೂ ಭವಿಷ್ಯದ ಹಿತ ದೃಷ್ಟಿಯಿಂದ ತನ್ನ ವ್ಯವಹಾರ ನೋಡಿಕೊಂಡು ಮುಂದಿನ ಬದುಕು ರೂಪಿಸಿಕೊಳ್ಳುವಂತೆ ಮಗನಿಗೆ ಜವಾಬ್ದಾರಿ ವಹಿಸಿದ್ದನು. ಆದರೆ ಮಗ ಅರ್ಪಿತ್ ಜವಾಬ್ಧಾರಿ ತೆಗೆದುಕೊಂಡ ಕೆಲವೇ ದಿನದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಲೆಕ್ಕಾಚಾರ ವ್ಯತ್ಯಾಸ ಆಗಿತ್ತು. ಇದೇ ವಿಚಾರವಾಗಿ ಏಪ್ರಿಲ್ 1ರಂದು ಮನೆಯಲ್ಲಿ ಅಪ್ಪ ಮಗನ ನಡುವೆ ಜಗಳ ಸಂಭವಿಸಿತ್ತು.

20 ನಿಮಿಷದ ಜಗಳ, ಅಪ್ಪ ಆದನು ಕೊಲೆಗಾರ..!

ಯಾವುದೇ ಮನೆಯಲ್ಲಿ ಅಪ್ಪ – ಮಕ್ಕಳ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಅದೇ ರೀತಿ ಕಂಪನಿ ಅಕೌಂಟ್​ ಪರಿಶೀಲಿಸಿದ ಸುರೇಂದ್ರ ಅವರಿಗೆ ಒಂದೂವರೆ ಕೋಟಿ ರೂಪಾಯಿ ಲೆಕ್ಕ ಸಿಕ್ಕಿರಲಿಲ್ಲ. ಈ ಬಗ್ಗೆ ಮಗನ ಬಳಿ ಕೇಳಿದಾಗ ಸೂಕ್ತ ಉತ್ತರವೂ ಬಂದಿರಲಿಲ್ಲ. ನೀನು ಸರಿಯಾದ ಉತ್ತರ ಕೊಡದಿದ್ದರೆ ಕೊಂದು ಹಾಕ್ತೇವೆ ಎಂದ ಅಪ್ಪನ ಕೋಪಕ್ಕೆ ಮಗ ತುಪ್ಪ ಸುರಿದಿದ್ದ. ನಾನು ಲೆಕ್ಕ ಕೊಟ್ಟರೂ ಕೊಲ್ಲುತ್ತೀಯಾ..! ಕೊಡದಿದ್ದರೂ ಕೊಲ್ಲುತ್ತೀಯಾ.. ಅದೇನು ಮಾಡ್ತೀಯೋ ಮಾಡ್ಕೊ ಎನ್ನುವ ಮೂಲಕ ವ್ಯಂಗ್ಯದ ಮಾತನ್ನಾಡಿದ್ದ. ಅಪ್ಪ ಕೇಳಿದ ಪ್ರಶ್ನೆಗೆ ಮಗ ಸಮಾಧಾನದ ಉತ್ತರ ನೀಡಿದ್ದರೂ ಕೋಪ ಸಾವನ್ನು ಆಸ್ವಾಧಿಸುತ್ತಿರಲಿಲ್ಲ. ಆದರೆ ಮಗ ಹಾಗೆ ಹೇಳುತ್ತಿದ್ದ ಹಾಗೆ ಅಲ್ಲೇ ಇದ್ದ ಥಿನ್ನರ್​​​ ಎರಚಿ ಬೆಂಕಿ ಹಚ್ಚಿಬಿಟ್ಟಿದ್ದಾರೆ ಸುರೇಂದ್ರ.

ಮದುವೆ ಮಾಡಲು ತಯಾರಿ ಮಾಡಿ ಸ್ಮಶಾನಕ್ಕೆ ರವಾನೆ..!

ಅಯ್ಯಯ್ಯೋ ನನ್ನನ್ನು ಕಾಪಾಡಿ ಎಂದು ರಸ್ತೆಯಲ್ಲಿ ಓಡುತ್ತಿದ್ದರೂ ಕಲ್ಲು ಗುಂಡಿನಂತೆ ನಿಂತಿದ್ದ ಸುರೇಂದ್ರ, ಕೋಪ ಕಡಿಮೆ ಆಗುತ್ತಿದ್ದ ಹಾಗೆ ಮಗನ ರಕ್ಷಣೆಗೆ ಧಾವಿಸಿದ್ದಾರೆ. ಮಗನಿಗೆ ಬೆಂಕಿ ಹಚ್ಚಿದ ಬಳಿಕ ತಾನು ಮಾಡಿದ ಅಪರಾಧದ ಅರಿವಾಗಿದೆ. ಮಗನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ದಾರೆ. ಆದ್ರೆ ಅಷ್ಟರಲ್ಲಿ ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಮಗ ಅರ್ಪಿತ್​ರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಘಟನೆಯನ್ನ ಕಣ್ಣಾರೆ ಕಂಡವರು ಯುವಕನ ಸಾವಿಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಸಂಭಾವಿತನಾಗಿದ್ದ ಅರ್ಪಿತ್​, ತಂದೆಯ ಮಾತನ್ನು ಮೀರುತ್ತಿರಲಿಲ್ಲ. ಇತ್ತೀಚಿಗೆ ಮದುವೆ ಮಾಡುವ ನಿರ್ಧಾರ ಮಾಡಿದ್ದರಿಂದ ಶನಿವಾರ ಹುಡುಗನನ್ನು ನೋಡಲು ಹುಡುಗಿ ಮನೆಯವರು ಬರುವ ಕಾರ್ಯವಿತ್ತು. ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದರಿಂದ ಆಗಬಾರದ ಘಟನೆ ನಡೆದು ಹೋಗಿದೆ. ಚಾಮರಾಜಪೇಟೆ ಪೊಲೀಸರು ಆರೋಪಿ ಸುರೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Related Posts

Don't Miss it !