ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಅಚ್ಚರಿಯ ಔಟ್..!

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆಗಳು, ದಾಖಲೆಗಳು ಸೃಷ್ಟಿಯಾಗುತ್ತವೆ. ಆದರೆ ಶ್ರೀಲಂಕಾ ಆಟಗಾರ ಏಂಜೆಲೋ ಮ್ಯಾಥ್ಯೂಸ್, ಒಂದೇ ಒಂದು ಎಸೆತವನ್ನೂ ಎದುರಿಸದೆ ಔಟ್‌ ಆಗಿರುವ ಅಚ್ಚರಿಯ ಘಟನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ನಡೆದಿದೆ. ಬಾಂಗ್ಲಾದೇಶ ಹಾಗು ಶ್ರೀಲಂಕಾ ನಡುವೆ ದೆಹಲಿಯಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ 6ನೇ ಆಟಗಾರನಾಗಿ ಫೀಲ್ಡ್‌ಗೆ ಬರಬೇಕಿದ್ದ ಏಂಜೆಲೋ ಮ್ಯಾಥ್ಯೂಸ್ ತಡವಾದ ಕೂಡಲೇ ಬಾಂಗ್ಲಾದೇಶದ ವಿಕೆಟ್‌ ಕೀಪರ್‌ ಶಕೀಬ್‌ ಅಲ್‌ ಅಸನ್‌ ಟೈಮ್‌ ಔಟ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಔಟ್‌ಗೆ ಮನವಿ ಮಾಡಿದ್ರು. ಮನವಿ ಒಪ್ಪಿಕೊಂಡ ಅಂಪೈರ್‌ ಔಟ್‌ ಎಂದು ತೀರ್ಮಾನ ಘೋಷಣೆ ಮಾಡಿದರು. ಹೀಗಾಗಿ ಒಂದೇ ಒಂದು ಎಸೆತವನ್ನೂ ಎದುರಿಸದೆ ಏಂಜೆಲೋ ಮ್ಯಾಥ್ಯೂಸ್ ಔಟ್‌ ಆಗಿ ಪೆವಿಲಿಯನ್‌ ಸೇರುವಂತಾಯ್ತು.

ಏನಿದು ಕ್ರಿಕೆಟ್‌ನಲ್ಲಿ ಟೈಂ ಔಟ್‌ ನಿಯಮ..?

ಕ್ರಿಕೆಟ್‌ ಪಂದ್ಯ ನಡೆಯುವಾಗ ಯಾವುದೇ ಆಟಗಾರ ಔಟ್‌ ಆದ ಬಳಿಕ ಮತ್ತೋರ್ವ ಆಟಗಾರ ಬ್ಯಾಟಿಂಗ್‌ಗೆ ಎಂಟ್ರಿ ಕೊಡಬೇಕು. ಸಾಮಾನ್ಯವಾಗಿ ಆಟಗಾರರು ಬದಲಾಗಲು 3 ನಿಮಿಷಗಳ ಕಾಲ ಸಮಯಾವಕಾಶ (ವಿಶ್ವಕಪ್‌ನಲ್ಲಿ 2 ನಿಮಿಷಗಳ ಅವಕಾಶ) ಇರುತ್ತದೆ. ಈ ಸಮಯದಲ್ಲಿ ಮತ್ತೋರ್ವ ಆಟಗಾರ ಪಿಚ್‌ಗೆ ಬಂದು ಎಸೆತವನ್ನು ಎದುರಿಸಬೇಕು. ಆದರೆ ಏಂಜೆಲೋ ಮ್ಯಾಥ್ಯೂಸ್ ಬರುವುದು ತಡವಾಯ್ತು. ಈ ರೀತಿ ಘಟನೆ ನಡೆದಾಗ ನಿಯಮ 40.1.1 ಪ್ರಕಾರ ಬ್ಯಾಟ್ಸ್‌ಮನ್‌ ಬಂದು ಎಸೆತವನ್ನು ಎದುರಿಸಿಲ್ಲ ಎಂದರೆ ಅಂಪೈರ್‌ ನಿರ್ಧಾರ ಮಾಡಲು ಅವಕಾಶವಿದೆ. ನಿಯಮ 16.3ರ ಔಟ್‌ ಎಂದು ನಿರ್ಧಾರ ಮಾಡಬಹುದು. ಆದರೆ ಈ ಔಟ್ ಬೌಲರ್‌ಗೆ ಸೇರ್ಪಡೆ ಆಗಲ್ಲ, ರನ್‌‌ ಔಟ್‌ ರೀತಿ ಪರಿಗಣಿಸಲಾಗುತ್ತದೆ.

ಏಂಜೆಲೋ ಮ್ಯಾಥ್ಯೂಸ್ ಬರುವುದು ತಡ ಆಗಿದ್ಯಾಕೆ..?

25ನೇ ಓವರ್‌ನ 2ನೇ ಬಾಲ್‌ನಲ್ಲಿ ಸಮರ ವಿಕ್ರಮ ಕ್ಯಾಚ್‌ ಕೊಟ್ಟು ನಿರ್ಗಮಿಸಿದ ಕೂಡಲೇ ಬ್ಯಾಟಿಂಗ್‌‌ಗೆ ಬರಲು ಸಜ್ಜಾದ ಏಂಜೆಲೋ ಮ್ಯಾಥ್ಯೂಸ್‌, ಹೆಲ್ಮೆಟ್‌ ಮಿಸ್‌ ಆಗಿ ತೆಗೆದುಕೊಂಡು ಬಂದಿದ್ರಿಂದ ಬೇರೆ ಹೆಲ್ಮೆಟ್‌ ಪಡೆದುಕೊಳ್ಳಲು ಕೆಲವು ಸಮಯ ತಡವಾಯ್ತು. ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಪಿಚ್‌ಗೆ ಬಂದರಾದರೂ ಅಷ್ಟರಲ್ಲಿ ಬಾಂಗ್ಲಾ ಆಟಗಾರರು ಔಟ್‌ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಔಟ್‌ ನೀಡಿದ್ರಿಂದ ಕ್ಷಣಕಾಲ ಕಂಗಾಲಾದ ಏಂಜೆಲೋ ಮ್ಯಾಥ್ಯೂಸ್‌, ಅಂಪೈರ್‌ ಜೊತೆಗೆ ಸಮಾಲೋಚನೆಯನ್ನು ನಡೆಸಿದ್ರು. ಬಳಿಕ ಅಂಪೈರ್‌ ನಿರ್ಧಾರ ಬದಲಾಗದ ಕಾರಣಕ್ಕೆ ಅಲ್ಲಿಂದ ತೆರಳಿದ್ರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ. ಇನ್ಮುಂದೆ ಇದೇ ರೀತಿ ಮತ್ತಷ್ಟು ಜನರು ಔಟ್‌ ಆದರೂ ಅಚ್ಚರಿಯೇನಿಲ್ಲ.

Related Posts

Don't Miss it !