ರಾಮನಗರ: ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಾರಾಮಾರಿ..! ಡಿಕೆ.. ಡಿಕೆ ಜೈಕಾರ..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಾರಾಮಾರಿ ನಡೆದಿದೆ. ಸಚಿವ ಅಶ್ವತ್ಥ ನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್​ ವೇದಿಕೆ ಮೇಲೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ವೇದಿಕೆ ಮೇಲಿದ್ದರೂ ಏನನ್ನೂ ಮಾಡಲಾಗದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷರಾಗಿದ್ದರು. ಆ ಬಳಿಕ ಪೊಲೀಸ್​ ಹಿರಿಯ ಅಧಿಕಾರಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವೇದಿಕೆಯಿಂದ ಕೆಳಕ್ಕೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದ್ದಾರೆ.

ಬಿಜೆಪಿ ಬಿತ್ತುವ ಕೆಲಸ ಮಾಡಲು ಕಾಂಗ್ರೆಸ್​ ಅಡ್ಡಿ..!

ರಾಮನಗರದಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಅಸ್ತಿತ್ವ ಇಲ್ಲದಿರುವಾಗ ಪಕ್ಷದ ನೆಲೆ ಭದ್ರ ಮಾಡಲು ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಸಚಿವ ಅಶ್ವತ್ಥ ನಾರಾಯಣ ಹಾಗೂ ಸಿ.ಪಿ ಯೋಗೇಶ್ವರ್​​ ನೇತೃತ್ವದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡ್ತಿದ್ದಾರೆ. ಇದರ ಭಾಗವಾಗಿಯೇ ಇಂದು ರಾಮನಗರದಲ್ಲಿ ಸಿಎಂ ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಾಮನಗರ ಹಾಗೂ ಮಾಗಡಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಇದೇ ಮೊದಲ ಬಾರಿಗೆ ಸಿಎಂ ಆಗಮಿಸಿದ್ದರು. 300 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಜೊತೆಗೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಂಪೇಗೌಡ ಹಾಗೂ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯ್ತು.

Read this:

ಆರಂಭದಲ್ಲೇ ಸಿಎಂಗೆ ಡಿಕೆ.. ಡಿಕೆ ಘೋಷಣೆ ಮುಜುಗರ..!

ಬೆಳಗ್ಗೆ ರಾಮನಗರ, ಮಧ್ಯಾಹ್ನದ ಬಳಿಕ ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳ ಕೆಂಪಾಪುರಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ರಾಮನಗರದಲ್ಲಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲೇ ಗಲಾಟೆ ಚಿಗುರುಡೆದಿತ್ತು. ಸಂಸದ ಡಿ.ಕೆ.ಸುರೇಶ್, ಸಚಿವ ಭೈರತಿ ಬಸವರಾಜು ಹಾಗೂ ರಾಮನಗರ ಶಾಸಕಿ ಅನಿತಾಕುಮಾರಸ್ವಾಮಿ, ಮಾಗಡಿ ಶಾಸಕ ಎ.ಮಂಜು ಸೇರಿ ಹಲವರು ಭಾಗಿಯಾಗಿದ್ದರು. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ವೇಳೆ ಡಿ.ಕೆ.ಸುರೇಶ್​ಗೆ ಅವಕಾಶ ಕಲ್ಪಿಸದೆ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕಿ ಅನಿತಾಕುಮಾರಸ್ವಾಮಿ, ಸಚಿವ ಅಶ್ವತ್ಥ ನಾರಾಯಣ ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಕೆರಳಿದ ಕಾಂಗ್ರೆಸ್​ ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಸಿಎಂ ವೇದಿಕೆಗೆ ಬರುತ್ತಿದ್ದಂತೆ ಡಿಕೆ ಡಿಕೆ ಡಿಕೆ ಘೋಷಣೆ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್​ಗೆ ಜೈಕಾರ ಹಾಕಿದ್ರು. ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ರು.

Also Read;

ಸಿಎಂಗೆ ಕಪ್ಪು ಪಟ್ಟಿ ತೋರಿಸಿದ್ದಕ್ಕೆ ಸಚಿವರ ಆವೇಶ..!

ಕ್ರೇನ್​ನಲ್ಲಿ ಡಿ.ಕೆ.ಸುರೇಶ್​ಗೆ ಅವಕಾಶ ನೀಡದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಕೆಂಡವಾಗಿದ್ರು. ಆದ್ರೆ ಡಿಕೆ ಸುರೇಶ್​ ಆಗಮನ ತಡವಾಗಿತ್ತು ಎನ್ನುವ ಸಬೂಬನ್ನು ಬಿಜೆಪಿ ಕೊಟ್ಟಿತ್ತು. ಆ ಬಳಿಕ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ವೇಳೆ ಅಶ್ವತ್ಥ ನಾರಾಯಣ್​ ಅವರನ್ನು ಕೆಳಕ್ಕಿಳಿಸಿ ಸುರೇಶ್​ ಹತ್ತಿಸಿಕೊಳ್ಳಲಾಯ್ತು. ಆದ್ರೆ ಕಾಂಗ್ರೆಸ್​ ಕಾರ್ಯಕರ್ತರು ಮಾತ್ರ ಸಿಎಂ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಡಿಕೆ ಘೋಷಣೆ ಕೂಗಿದ್ರು. ಇದ್ರಿಂದ ಕೋಪಕೊಂಡ ಆಶ್ವತ್ಥ ನಾರಾಯಣ, ವೇದಿಕೆ ಮೇಲೆ ಕೋಪತಾಪ ಪ್ರದರ್ಶನ ಮಾಡಿದ್ರು. ಅಭಿವೃದ್ಧಿ ಅಂದ್ರೆ ಬಿಜೆಪಿ, ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಅಂದ್ರೆ ಬಿಜೆಪಿ ಗೆಲ್ಲಿಸಬೇಕು. ಒಬ್ಬ ಪ್ರತಿನಿಧಿಯೂ ಇಲ್ಲದಿದ್ದರೂ ನಾವು ಅಭಿವೃದ್ಧಿ ಮಾಡ್ತಿದ್ದೇವೆ ಎಂದು ಅಬ್ಬರಿಸಿದ್ರು. ಈಗ ಕಿರುಚಾಡೋದು ಯಾಕೆ..? ಏನಾಗಿದೆ ಎಂದು ಕೂಗಾಡ್ತಿದ್ದೀರಿ..? ನಿಮ್ಮ ತಾಕತ್ತನ್ನು ಕೆಲಸ ಮಾಡೋದ್ರಲ್ಲಿ ತೋರಿಸ್ರೋ..! ಜೀವನ ಪೂರ್ತಿ ಅಧಿಕಾರದಲ್ಲಿ ಇರೋದು, ಗೆದ್ದ ಬಳಿಕ ಕೆಲಸ ಮಾಡದೆ ಸ್ವಂತ ಅಭಿವೃದ್ದಿ ಮಾಡೋದಲ್ಲ ಎಂದು ಕೆಣಕಿದ್ರು. ಇನ್ನೂ ಡಿಕೆಶಿ ಸಹೋದರರನ್ನು ನೇರವಾಗಿ ಕೆಣಕಿದ ಅಶ್ವತ್ಥ ನಾರಾಯಣ, ನಾವು ಯಾರ ಜಮೀನಿನ ಮೇಲೂ ಕಣ್ಣು ಹಾಕಲ್ಲ, ಸಿಎಂ ಬಂದಾಗ ಅವಮಾನ ಮಾಡೋದಾ..? ಯಾರಪ್ಪ ಗಂಡು ಕೆಲಸದಲ್ಲಿ ತೋರಿಸ್ರಲೋ ಎಂದು ಕಿಚಾಯಿಸಿದ್ರು. ಇದು ಸಂಪೂರ್ಣ ಘಟನೆಗೆ ಕಾರಣವಾದ ಅಂಶ. ಡಿ.ಕೆ ಸುರೇಶ್ ಪ್ರತಿಭಟನೆ ಕೂಡ ನಡೆಸಿದ್ರು.

ಗಲಾಟೆ ಬಳಿಕ ನಾಯಕರು ಏನೇನು ಹೇಳಿದ್ರು..?

ರಾಮನಗರ ಗಲಾಟೆ ಬಳಿಕ ಸಾಕಷ್ಟು ನಾಯಕರು ಪ್ರತಿಕ್ರಿಯೆ ನೀಡಿದ್ದು, ರಾಮನಗರ ಅಭಿವೃದ್ಧಿ ಮಾಡಿದ್ದು, ಆದ್ರೆ ಬಿಜೆಪಿ ಕಾಂಗ್ರೆಸ್​ ಕಿತ್ತಾಡುತ್ತಿರೋದು ಯಾಕೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​, ರಾಮನಗರ ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ, ಅಭಿವೃದ್ಧಿ ಮಾಡಿದ್ದು ಕುಮಾರಸ್ವಾಮಿ, ಆದ್ರೆ ಸಚಿವ ಅಶ್ವತ್ಥ ನಾರಾಯಣ ಮಾಡಿದ್ದು ಏನು..? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ವೇದಿಕೆಯಲ್ಲಿ ನಡೆದಿದ್ದು ದುರಾದೃಷ್ಟಕರ ಘಟನೆ ಎಂದಿದ್ದಾರೆ. ಆರ್​. ಅಶೋಕ್​, ಸಿ.ಟಿ ರವಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್​ ನಾಯಕರ ತಾಲೀಬಾನಿ ಸಂಸ್ಕೃತಿ, ಗೂಂಡಾ ಸಂಸ್ಕೃತಿಎನ್ನು ತೋರಿಸುತ್ತದೆ ಎಂದರು. ಇನ್ನೂ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಮಾತನಾಡಿದ್ದರ ಬಗ್ಗೆ ಯಾರೊಬ್ಬರೂ ಉತ್ತರ ನೀಡಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರು ಕೆಣಕಿ ಮಾನ ಕಳೆದುಕೊಂಡರು ಎನ್ನಬಹುದು.

Related Posts

Don't Miss it !