ಭ್ರಷ್ಟಾಚಾರದಲ್ಲಿ ಖಾವಿ – ಖಾದಿ ಬಣ್ಣ ಬಯಲು..! ಬಿಜೆಪಿ ಸೋಲಿಗೆ ಕಾಂಗ್ರೆಸ್​ ತಂತ್ರಗಾರಿಕೆ ಶಂಕೆ..!?

ರಾಜ್ಯದಲ್ಲಿ ಗುತ್ತಿಗೆದಾರರಿಂದ ಶೇಕಡ 40 ರಷ್ಟು ಕಮಿಷನ್​ ಪಡೆಯುತ್ತಾರೆ ಎನ್ನುವ ವಿಚಾರ ಬಿರುಗಾಳಿಯನ್ನೇ ಸೃಷ್ಟಿಸಿದೆ. ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಉಡುಪಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಬಳಿಕ ಕೆ.ಎಸ್​ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರ ಮಠಗಳ ಅನುದಾನದಲ್ಲೂ ಕಮಿಷನ್​ ಪಡೆಯುತ್ತಾರೆ ಎನ್ನುವುದು ಬಹಿರಂಗ ಆಗಿದೆ. ಅದರೆ ಒಂದು ಸಮಾಧಾನಕರ ವಿಚಾರ ಅಂದ್ರೆ ಕಾಂಟ್ರ್ಯಾಕ್ಟರ್​ ಬಳಿ ​ 40 ಪರ್ಸೆಂಟ್​ ಪಡೆಯುತ್ತಾರೆ. ಆದರೆ ಮಠಗಳ ಬಳಿ 30 ಪರ್ಸೆಂಟ್​ ಪಡೆಯುತ್ತಾರೆ. ಈ ವಿಚಾರವನ್ನು ಸ್ವತಃ ಸ್ವಾಮೀಜಿಯೇ ಬಹಿರಂಗ ಮಾಡಿದ್ದಾರೆ. ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಮಠಗಳಿಗೆ ಬರುವ ಅನುದಾನದಲ್ಲೂ ಸರ್ಕಾರ 30 ಪರ್ಸೆಂಟ್​ ಕಮಿಷನ್​ ಪಡೆಯುತ್ತಿದ್ದಾರೆ. ಕಮಿಷನ್ ಕೊಟ್ಟರಷ್ಟೇ ಮಠಗಳಿಗೆ ಅನುದಾನ ಬರುತ್ತೆ ಎಂದು ಹೇಳಿಕೆ ನೀಡಿದ್ದಾರೆ. ಈ ಸುದ್ಧಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಬೇರೆ ಸ್ವಾಮೀಜಿಗಳೂ ಒಪ್ಪಿಕೊಂಡಿದ್ದಾರೆ.

ಮಠಗಳಿಂದ ಸರ್ಕಾರ ಕಮಿಷನ್​ ಪಡೆಯೋದು ಸತ್ಯ..!

ರಾಜ್ಯ ಸರ್ಕಾರ ಮಠಗಳಿಂದ ಕಮಿಷನ್​ ಪಡೆಯುವ ಬಗ್ಗೆ ಬಾಗಲಕೋಟೆ ಜಿಲ್ಲೆ ಬಾಡಗಂಡಿ ಗ್ರಾಮದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿರುವ ಮಾತು ಸತ್ಯ ಎಂದಿದ್ದಾರೆ. ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಬೆಂಗಳೂರಲ್ಲಿ ಐಸ್​​​ಕ್ರೀಂ ಕೊಟ್ರೆ ನಮಗೆ ಸಿಗೋದು ಕಡ್ಡಿ ಮಾತ್ರ ಎಂದಿರುವ ಮಾತನ್ನು ನಾನು ಒಪ್ಪಿಕೊಳ್ತೇನೆ ಎಂದಿದ್ದಾರೆ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ. ಮಠಗಳಿಂದ 30 ಪರ್ಸೆಂಟ್​ ಕಮಿಷನ್ ಪಡೆಯುವುದು ನಿಜ. ಆದರೆ ಈ ಕಮಿಷನ್​ ವ್ಯವಹಾರ ಆರಂಭವಾಗಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಎಂದಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ವ್ಯವಹಾರ ಆರಂಭವಾಗಿದೆ. ಸರ್ಕಾರದಿಂದ 50 ಲಕ್ಷ ರೂಪಾಯಿ ಅನುದಾನ ಪಡೆಯಲು ನಾನೇ 15 ಲಕ್ಷ ರೂಪಾಯಿ ಕಮಿಷನ್ ಕೊಟ್ಟಿದ್ದೆ ಎಂದು ಬಹಿರಂಗ ಮಾಡಿದ್ದಾರೆ. ನಾನು ಈ ವಿಚಾರವನ್ನು ಆಗಲೇ ಬಹಿರಂಗ ಮಾಡಲು ಮುಂದಾಗಿದ್ದೆ. ಆದರೆ ಉಳಿದ ಸ್ವಾಮೀಜಿಗಳು ಅದಕ್ಕೆ ತಡೆ ಒಡ್ಡಿದ್ದರು ಎಂದು ಬಹಿರಂಗ ಮಾಡಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಿದ್ರೆ ಮಾತ್ರ ಈ ವಿಚಾರ ಬೆಳಕಿಗೆ ಬರುತ್ತದೆ ಎಂದಿದ್ದಾರೆ. ಈ ನಡುವೆ ಮುಂದಿನ ಚುನಾವಣೆಯಲ್ಲಿ ಸ್ವಾಮೀಜಿಗಳೇ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ಮಠಗಳಲ್ಲಿ ಕಮಿಷನ್​ ಪಡೆಯುವ ಬಗ್ಗೆ ಭಾರೀ ಟೀಕೆ..!

ಮಠಗಳಿಂದ ಕಮಿಷನ್​ ಪಡೆಯುವ ಬಗ್ಗೆ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಅದೇ ಸಮಯದಲ್ಲಿ ಕಾಂಗ್ರೆಸ್​ ಕೂಡ ಕಮಿಷನ್​ ಪಡೆದಿತ್ತು ಎನ್ನುವ ಹೇಳಿಕೆಗೆ ಕಾಂಗ್ರೆಸ್​ ನಾಯಕರ ಬಾಯಿ ಮುಚ್ಚಿಸಿದೆ. ಈ ನಡುವೆ ಶ್ರೀಗಳು ಮಾಹಿತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ಇನ್ನುಳಿದ ನಾಯಕರು ಮಾತ್ರ ಸ್ವಾಮೀಜಿ ವಿರುದ್ಧ ಗುಡುಗಿದ್ದಾರೆ. ಸ್ವಾಮೀಜಿ ಮಾಹಿತಿ ನೀಡಬೇಕು ಎನ್ನುವುದು ಮೂರ್ಖತನ. ಸ್ವಾಮೀಜಿ ಹೇಳಿದ ಮೇಲೆ ತಮ್ಮ ಮಾತಿಗೆ ಬದ್ಧ.‌ಸರ್ಕಾರ ತಮಿಖೆ ಮಾಡಿಸುವುದು‌ ಸೂಕ್ತ. ಆದರೆ ಕೆಲವರು ಸ್ವಾಮೀಜಿ ಅವರನ್ನು ಕಾಂಗ್ರೆಸ್​ ಏಜೆಂಟ್​ ಎಂದು ಹೇಳಿದ್ರೆ, ಇನ್ನೂ ಕೆಲವರು ಸ್ವಾಮೀಜಿ ಸಮಯಕ್ಕೆ ತಕ್ಕಂತೆ ಮನಸೋ ಇಚ್ಛೆ ಮಾತನಾಡುತ್ತಾರೆ. ಅವರ ಮಾತಿಗೆ ಬೆಲೆ ಇಲ್ಲ ಎನ್ನುವ ಹಾಗೆ ಮಾತನಾಡಿದ್ದಾರೆ. ಈ ನಡುವೆ ಕಾವಿಗೂ ಹಣದ ಮೇಲಿನ ವ್ಯಾಮೋಹ ಹೆಚ್ಚಾಗಿದ್ದು, ಚುನಾವಣಾ ಅಖಾಡಕ್ಕೆ ಇಳಿಯುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಭಟ್ಕಳದಲ್ಲಿ ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದ್ದಾರೆ. ಕರ್ನಾಟಕ 50 ವಿಧಾನಸಭಾ ಕ್ಷೇತ್ರದಿಂದ ಸಂತರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.

ಬಿಜೆಪಿಗೆ ಸೋಲುಣಿಸುವ ತಂತ್ರಗಾರಿಕೆಯ ಭಾಗವೇ..?

ಕಾಂಗ್ರೆಸ್​ ಪಕ್ಷವನ್ನು ಬಿಜೆಪಿ ಸೋಲುಣಿಸುವ ಪ್ರಮುಖ ಅಸ್ತ್ರವೇ ಮತಗಳನ್ನು ಛಿದ್ರ ಮಾಡಿದ್ದು. ಕಾಂಗ್ರೆಸ್​ ಪಕ್ಷದ ಮತಬ್ಯಾಂಕ್​ಗೆ ಕೈ ಹಾಕಿದ್ದು, ಮುಸ್ಲಿಂ ಮತಗಳನ್ನು ತುಂಬಾ ಜಾಗರೂಕತೆಯಿಂದ ಹೋಳು ಮಾಡಿದ್ದು, ಕಾಂಗ್ರೆಸ್​ ಪಕ್ಷ ಸಾಕಷ್ಟು ಕ್ಷೇತ್ರಗಳಲ್ಲಿ ಸುಲಭವಾಗಿ ಸೋಲುಣ್ಣುವಂತಾಗ್ತಿದೆ. ಈ ನಡುವೆ ಭಟ್ಕಳದಿಂದ ನಾನೇ ಸ್ಪರ್ಧೆ ಮಾಡುವ ಮೂಲಕ ರಾಜಕೀಯ ಪ್ರಯೋಗ ಮಾಡುತ್ತೇವೆ. ನನಗೆ ರಾಜಕೀಯ ಕ್ಷೇತ್ರದಲ್ಲಿ ಯಾವ ಆಸೆಯೂ ಇಲ್ಲ. ಆದರೂ ಭಟ್ಕಳ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ. ನಾನು ಸ್ಪರ್ಧೆ ಮಾಡಲು ಮುಂದಾದರೆ ಉಳಿದವರೆಲ್ಲಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ. ರಾಮರಾಜ್ಯದ ಪರಿಕಲ್ಪನೆಯಲ್ಲಿ ಹೊಸ ಸಂಸ್ಥೆಯೊಂದನ್ನ ಹುಟ್ಟು ಹಾಕುತ್ತೇವೆ. ನಾವು ಸನ್ಯಾಸಿಗಳು ತಯಾರಾಗಿದ್ದೇವೆ,‌ ನಮಗೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್​ ಅವರ ಪ್ರೇರಣೆ ಇದೆ ಎಂದಿದ್ದಾರೆ. ಈ ಹೇಳಿಕೆ ನೀಡುವಾಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳ ಶಾಸಕ‌ ಸುನೀಲ್ ನಾಯ್ಕ್​, ಮಾಜಿ ಶಾಸಕ ಜೆ ಡಿ ನಾಯ್ಕ್​ ಕೂಡ ಉಪಸ್ಥಿತರಿದ್ದರು. ಆದರೆ ಬಿಜೆಪಿ ಆರ್ಭಟಕ್ಕೆ ಕೊಕ್ಕೆ ಹಾಕಲು ಕಾಂಗ್ರೆಸ್​ ಯೋಜನೆ ರೂಪಿಸಿದ್ಯ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

Related Posts

Don't Miss it !