ಹಬ್ಬಗಳ ಆಚರಣೆಗೆ ಸರ್ಕಾರದಿಂದ ಮಾರ್ಗಸೂಚಿ..! ಈ ಯೋಚನೆ ವರ್ಕೌಟ್​ ಆಗುತ್ತಾ..?

ಕೊರೊನಾ ಸಂಕಷ್ಟ ಕಾಲ ಸನಿಹ ಆಗುತ್ತಿದ್ಯಾ ಎನ್ನುವ ಲೆಕ್ಕಾಚಾರ ಶುರುವಾಗುತ್ತಿದೆ. ಸರ್ಕಾರ ಒಂದರ ಮೇಲೆ ಒಂದರಂತೆ ನಿರ್ಬಂಧ ವಿಧಿಸಿಕೊಂಡು ಬರುತ್ತಿದೆ. ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಲಾಕ್​ಡೌನ್​ ಘೋಷಣೆ ಮಾಡಿದ ಬಳಿಕ ಬೆಂಗಳೂರು ಸೇರಿದಂತೆ ಬಹುತೇಕ ರಾಜ್ಯಾದ್ಯಂತ ಪ್ರವಾಸಿ ಸ್ಥಳಗಳು ಹಾಗೂ ದೇವಸ್ಥಾನಗಳಿಗೆ ಜನರು ಬಾರದಂತೆ ನಿಷೇಧ ಹೇರಲಾಗಿತ್ತು. ಇದೀಗ ಹಬ್ಬ ಹರಿದಿನಗಳನ್ನು ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಹಬ್ಬದ ಸಂಭ್ರಮಕ್ಕೆ ಕೊರೊನಾ ಬ್ರೇಕ್​..!

ಹಬ್ಬಹರಿದಿನಗಳಿಗೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಪ್ರಕಾರ ದೇಗುಲಗಳಲ್ಲಿ ಕನಿಷ್ಟ 6 ಅಡಿ ಅಂತರ ಕಡ್ಡಾಯ, ಹೊರಾಂಗಣದಲ್ಲಿ ಚಪ್ಪರ, ಪೆಂಡಾಲ್​ ನಿರ್ಮಾಣ ನಿರ್ಬಂಧ, ಗಣೇಶೋತ್ಸವ ಪೆಂಡಾಲ್​, ಮೆರವಣಿಗೆ ಇರಲ್ಲ ಎನ್ನಲಾಗಿದೆ. ಆಗಸ್ಟ್​, ಸೆಪ್ಟೆಂಬರ್​ನಲ್ಲಿ ಆಚರಿಸುವ ಗಣೇಶ ಹಬ್ಬ, ಮೊಹರಂಗೆ ಹೊಸ ಗೈಡ್​ಲೈನ್ಸ್​ ಅನ್ವಯ ಆಗಲಿದೆ. ಹಬ್ಬಗಳಲ್ಲಿ ಕೊರೊನಾ ನಿಯಮ ಜಾರಿ ಕಡ್ಡಾಯ ಜಾರಿಯಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ ಮಾಡುವಂತಿಲ್ಲ. ಗಣೇಶೋತ್ಸವ ವಿಸರ್ಜನೆಗೂ ಮೆರವಣಿಗೆ ಇರಲ್ಲ ಎಂದಿದ್ದಾರೆ. ಪೆಂಡಾಲ್​ನಲ್ಲೂ ಗಣೇಶ ಪ್ರತಿಷ್ಠೆ ಮಾಡುವಂತಿಲ್ಲ. ನಿಗದಿಪಡಿಸಿದ ಸ್ಥಳದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಮನೋರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮಸೀದಿಗಳಲ್ಲಿ 2 ಪಾಳಿಯಲ್ಲಿ ಪ್ರಾರ್ಥನೆ ಮಾಡುವಂತೆ ಸೂಚನೆ ಕೊಡಲಾಗಿದೆ.

ಇದನ್ನೂ ಓದಿ:

ಗಣೇಶ ಹಬ್ಬಕ್ಕೆ ಸರ್ಕಾರದ ಮಾರ್ಗಸೂಚಿಗಳು

ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕು. ದೇವಸ್ಥಾನದೊಳಗೆ ಹಾಗೂ ಮನೆಗಳಲ್ಲಿ ಆಚರಿಸಲು ಸೂಚನೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಹೊರಾಂಗಣಗಳಲ್ಲಿ ಚಪ್ಪರ, ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಅನುಮತಿ ಇಲ್ಲ. ಗಣೇಶ ಮೂರ್ತಿ ತರುವಾಗ, ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಮೂರ್ತಿಗಳನ್ನ ಮನೆಯಲ್ಲಿಯೇ ವಿಸರ್ಜಿಸಲು ಸೂಚನೆ ಕೊಡಲಾಗಿದೆ. ಸಾಧ್ಯವಿಲ್ಲ ಎನ್ನುವುದಾದರೆ ಸ್ಥಳೀಯ ಸಂಸ್ಥೆಗಳು ನಿರ್ಮಿಸಿದ ಹೊಂಡ, ಕಲ್ಯಾಣಿ, ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು. ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನನಿತ್ಯ ಸಾನಿಟೈಸೇಷನ್ ಮಾಡಬೇಕು. ಭಕ್ತರಿಗೂ ಸ್ಯಾನಿಟೈಸರ್‌ ಹಾಗೂ ಥರ್ಮಲ್​ ಸ್ಕ್ರೀನಿಂಗ್​ ಕಡ್ಡಾಯ ಮಾಡಲಾಗಿದೆ.

ಸರ್ಕಾರದ ಅಧಿಸೂಚನೆ

ಮೊಹರಂ ಹಬ್ಬ ಆಚರಿಸುವ ಬಗ್ಗೆ ಮಾರ್ಗಸೂಚಿಗಳು

ಸಾರ್ವಜನಿಕ ಸ್ಥಳಗಳಲ್ಲಿ ಅಲಂಗಳನ್ನು ಪಂಜಾವನ್ನು ಸ್ಥಾಪಿಸುವುದು ಹಾಗೂ ತಾಜಿಯಾವನ್ನು ನಿರ್ಬಂಧಿಸಲಾಗಿದೆ. ಆಗಸ್ಟ್​ 12 ರಿಂದ 20ರ ತನಕ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆ ನಿಷೇಧ ಮಾಡಲಾಗಿದೆ. ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವ ಜನರು ಸೂಕ್ತ ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪಂಜ, ಆಲಂ ಮತ್ತು ತಾಜಿಯಗಳನ್ನು ಸಾರ್ವಜನಿಕರು ಮುಟ್ಟದೆ ದೂರದಿಂದಲೇ ನೋಡಬೇಕು. ಖಬರಸ್ಕಾನ್ ಒಳಗೊಂಡಂತೆ ಯಾವುದೇ ಖಾಲಿ ಜಾಗಗಳಲ್ಲಿ ಯಾವುದೇ ತರಹದ ಸಭೆ ಏರ್ಪಡಿಸುವುದನ್ನು ನಿರ್ಬಂಧಿಸಲಾಗಿದೆ. ಖಬರಸ್ಥಾನಗಳಿಗೆ ಕೇವಲ ದವನ ನೀಡಲು ಮಾತ್ರ ಅನುಮತಿ ನೀಡಿದ್ದು, ಮೊಹರಂಗೆ ಸಂಬಂಧಿಸಿದ ಆಚರಣೆಗಳಿಗೆ ಅನುಮತಿ ಇರುವುದಿಲ್ಲ. 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ:

ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಸಾಲದು..!

ರಾಜ್ಯ ಸರ್ಕಾರ 3ನೇ ಅಲೆ ತಡೆಯುವ ಉದ್ದೇಶದಿಂದ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಕಳೆದ ಬಾರಿಯೂ ಬಿ.ಎಸ್​ ಯಡಿಯೂರಪ್ಪ ಸರ್ಕಾರದಲ್ಲಿ ಮಾರ್ಗಸೂಚಿಗಳು ನಿರಂತರವಾಗಿ ಬಿಡುಗಡೆ ಆಗುತ್ತಿದ್ದವು. ಆದರೆ ಅದನ್ನು ಪಾಲಿಸಲು ಅಧಿಕಾರಿಗಳು ಮುಂದಾಗಬೇಕಿದೆ. ಸರ್ಕಾರ ಕೊರೊನಾ ವಿಚಾರದಲ್ಲಿ ಯಾವುದೇ ಕೆಲಸ ಮಾಡಲಿಲ್ಲ ಎನ್ನುವ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ಟೀಕೆಯಿಂದ ತಪ್ಪಿಸಿಕೊಳ್ಳಲು ಮಾರ್ಗಸೂಚಿ ಹೊರಡಿಸಬಾರದು. ಮಾರ್ಗಸೂಚಿ ನೋಡಿಕೊಂಡು ಯಾರೊಬ್ಬರು ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಜೊತೆಗೆ ಯಾವುದೇ ಕಾರ್ಯಕ್ರಮ ಇರಬಹುದು ಇಂತಿಷ್ಟೇ ಜನರು ಎಂದು ನಿಗದಿ ಮಾಡಿದ್ದರೂ ನಡೆಯಬೇಕಿದ್ದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇದನ್ನು ನಿಯಂತ್ರಣ ಮಾಡುವ ಬಗ್ಗೆ ಸರ್ಕಾರ ಕಠಿಣ ಕ್ರಮಗಳನ್ನು ಜಾರಿ ಮಾಡಬೇಕಿದೆ. ಸದ್ಯ ಈಗಾಗಲೇ ಚಾಲ್ತಿಯಲ್ಲಿರುವ ವೀಕೆಂಡ್​ ಕರ್ಫ್ಯೂ, ನೈಟ್​ ಕರ್ಫ್ಯೂ ಸೂಕ್ತವಾಗಿ ಜಾರಿಯಾಗಿದೆಯಾ ಎನ್ನುವುದನ್ನ ಮೊದಲು ಅಧಿಕಾರಿಗಳು ಮನನ ಮಾಡಿಕೊಳ್ಳಬೇಕಿದೆ.

ಹೇಳುವ ಮುನ್ನ ತಾವು ಪಾಲನೆ ಮಾಡಬೇಕು ಅಲ್ಲವೇ..!?

ನಾವು ಯಾರಿಗಾದರೂ ಬುದ್ಧಿ ಹೇಳುವ ಮುನ್ನ ನಾವು ಆ ಕೆಟ್ಟ ಕೆಲಸವನ್ನು ಮಾಡಬಾರದು ಎನ್ನುವುದು ಸ್ವಾಮಿ ವಿವೇಕಾನಂದರ ಆಶಯ. ಇದೀಗ ಸ್ವಾಮಿ ವಿವೇಕಾನಂದರನ್ನು ರಾಜಕಾರಣಿಗಳು ಪಾಲಿಸಬೇಕಿದೆ. ಜನರಿಗೆ ಗುಂಪುಗೂಡಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುವ ರಾಜಕಾರಣೀಗಳೂ ಹಾಗೂ ಅಧಿಕಾರಿಗಳು ಅದನ್ನು ಪಾಲಿಸಬೇಕಿದೆ. ಜನರಿಗೆ ಹೇಳುತ್ತಾ ತಾವೇ ರಾಜಕೀಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು. ಸ್ವಾಗತ ಮೆರವಣಿಗೆ, ಸಂಭ್ರಮಾಚರಣೆ ಮಾಡುವುದು. ಇದೇನಾ ಸಾರ್​ ಕೊರೊನಾ ಮಾರ್ಗಸೂಚಿ ಎಂದಾಗ ಕಾರ್ಯಕರ್ತರು ಮಾಡಿದ್ರೆ ಏನ್ರಿ ಮಾಡೋಕೆ ಸಾಧ್ಯ ಎಂದು ಉತ್ತರ ಕೊಡೋದು ಮಾಡಿದಾಗ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡ್ತಾರೆ ಎನ್ನುವುದು ಸರ್ಕಾರದ ಮೂರ್ಖತನವಾದಿತು.

Related Posts

Don't Miss it !